ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕುಮಾರ್‌ಗೆ ವಿಷ್ಣು ಬಡಿಸಿದ ಊಟ

ನೂರೊಂದು ನೆನಪು, ಸರಣಿ–21
Last Updated 23 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ವಿಷ್ಣುವಿಗೆ ರಾಜಕುಮಾರ್ ಅವರನ್ನು ಕಂಡರೆ ಬಹಳ ಗೌರವ. ಅವರ ವ್ಯಕ್ತಿತ್ವದ ಬಗೆಗೆ ಮಾತನಾಡಿದಾಗಲೆಲ್ಲಾ ನಾವು ಹ್ಯಾಟ್ಸಾಫ್ ಎಂದೇ ಹೇಳುತ್ತಿದ್ದೆವು. ನೂರಾರು ಸಲ ಅವರಿಬ್ಬರೂ ಭೇಟಿ ಮಾಡಿದ್ದರು. ಅಂಥ ಅನೇಕ ಸಂದರ್ಭಗಳಿಗೆ ನಾನೂ ಸಾಕ್ಷಿಯಾಗಿದ್ದೆ. ರಾಜಕುಮಾರ್ ಮೊದಲು ವಿಷ್ಣುವನ್ನು ತಬ್ಬಿಕೊಂಡು ಆಮೇಲೆ ಮಾತಿಗೆ ತೊಡಗುತ್ತಿದ್ದರು.

ಚಿತ್ರರಂಗದ ಸಮಸ್ಯೆಗಳ ಚರ್ಚೆ, ಚಳವಳಿ, ಚಿತ್ರರಂಗದ ಆಗುಹೋಗುಗಳು ಏನೇ ಇದ್ದರೂ ಬೆಂಗಳೂರಿನ ಸದಾಶಿವನಗರದಲ್ಲಿನ ರಾಜಕುಮಾರ್ ಅವರ ಮನೆಯಲ್ಲಿಯೇ ಸಂವಾದ ನಡೆಯುತ್ತಿತ್ತು. ಅಲ್ಲಿ ಚರ್ಚೆಯಾದ ನಂತರ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುವುದು ವಾಡಿಕೆ. ರಾಜಕುಮಾರ್ ಅವರನ್ನು ಭೇಟಿ ಮಾಡಬೇಕು ಎನಿಸಿದಾಗಲೆಲ್ಲಾ ವಿಷ್ಣುವನ್ನು ನಾನೇ ಕರೆದುಕೊಂಡು ಹೋಗುತ್ತಿದ್ದದ್ದು. ಮೊದಲು ಜಯನಗರದ ಅವನ ಮನೆಗೆ ಹೋಗಿ, ಅಲ್ಲಿಂದ ಸದಾಶಿವನಗರದ ರಾಜಕುಮಾರ್ ಮನೆಗೆ ಕರೆದುಕೊಂಡು ಬರುತ್ತಿದ್ದೆ. ವಿಷ್ಣು ಮನೆಗೆ ಹೋದಾಗಲೆಲ್ಲಾ ರಾಜಕುಮಾರ್ ಎದ್ದುಬಂದು ಅವನನ್ನು ಬಾಚಿ ತಬ್ಬಿಕೊಳ್ಳುತ್ತಿದ್ದರು. ಇಬ್ಬರು ಉತ್ತಮ ನಟರು ಹಾಗೆ ಬೆಚ್ಚಗಿನ ಭಾವವನ್ನು ಹಂಚಿಕೊಳ್ಳುತ್ತಿದ್ದ ಸಂದರ್ಭವನ್ನು ಕಣ್ತುಂಬಿಕೊಳ್ಳುವುದೇ ನನಗೆ ಆನಂದವಾಗಿತ್ತು.

ಅವರಿಬ್ಬರ ಸಂಬಂಧ ತುಂಬಾ ಚೆನ್ನಾಗಿತ್ತು. ಕೆಲವರು ಸುಮ್ಮನೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ, ಅವರ ಸಂಬಂಧಕ್ಕೆ ಕಪ್ಪು ಚುಕ್ಕೆ ಇಡುತ್ತಾ ಇದ್ದರು. ನಾನು ಕಂಡಂತೆ ರಾಜಕುಮಾರ್ ಅವರಿಗೆ ವಿಷ್ಣುವನ್ನು ಕಂಡರೆ ಪ್ರೀತಿ, ಗೌರವ ಎರಡೂ ಇದ್ದವು. ಪ್ರಮುಖ ಸಮಸ್ಯೆಯ ಚರ್ಚೆ ನಡೆಯಬೇಕಾದ ಸಂದರ್ಭಗಳಲ್ಲೆಲ್ಲಾ ವಿಷ್ಣುವರ್ಧನ್ ಅವರನ್ನು ಕರೆದುಕೊಂಡು ಬನ್ನಿ ಎಂದು ಅವರು ನನಗೆ ಹೇಳುತ್ತಿದ್ದರು. ಪಾರ್ವತಮ್ಮ ರಾಜಕುಮಾರ್ ಸಹ ಅನೇಕ ಸಲ ದೂರವಾಣಿ ಮೂಲಕ ನನಗೆ ವಿಷ್ಣುವನ್ನು ಕರೆದುಕೊಂಡು ಬರುವಂತೆ ತಿಳಿಸಿದ್ದರು.

ವಿಷ್ಣು ಅಣ್ಣ ರವಿ ಮದುವೆ ನಿಶ್ಚಯವಾಯಿತು. ಆಹ್ವಾನ ಪತ್ರಿಕೆ ನೀಡಲು ವಿಷ್ಣು, ನಾನು ಹೋದೆವು. ಅವತ್ತು ರಾಜಕುಮಾರ್, ಪಾರ್ವತಮ್ಮ ರಾಜಕುಮಾರ್ ಇಬ್ಬರೂ ಮನೆಯಲ್ಲಿ ಇದ್ದರು. ನಾನು ಫೋನ್ ಮಾಡಿ, ಆಹ್ವಾನ ಪತ್ರಿಕೆ ಕೊಡಲು ಬರಬೇಕು. ಇರುತ್ತೀರಾ ಎಂದು ಕೇಳಿದೆ. ಅವರು ಕರೆದುಕೊಂಡು ಬಾರಪ್ಪಾ ಎಂದು ಆತ್ಮೀಯವಾಗಿ ಹೇಳಿದರು. ನಾನು, ವಿಷ್ಣು ಸದಾಶಿವನಗರದ ಮನೆಗೆ ಹೋಗಿ ಮದುವೆಗೆ ಆಮಂತ್ರಿಸಿದೆವು. ತಪ್ಪದೇ ಬಂದು, ವಧೂ ವರರಿಗೆ ಆಶೀರ್ವಾದ ಮಾಡಿ ಎಂದು ಕೇಳಿಕೊಂಡೆವು. ಅವರು ಖಂಡಿತ ಬರುವುದಾಗಿ ತಿಳಿಸಿ, ನಗುನಗುತ್ತಾ ನಮ್ಮನ್ನು ಬೀಳ್ಕೊಟ್ಟರು.

ಮದುವೆಯ ದಿನ ಬಂದ ಚಿತ್ರರಂಗದ ಅತಿಥಿಗಳಿಗೆ ಊಟೋಪಚಾರ ಮಾಡಿಸಿ, ತಾಂಬೂಲ ನೀಡುವ ಜವಾಬ್ದಾರಿ ನನ್ನ ಮೇಲೆ ಇತ್ತು. ಸಮಯ ಮಧ್ಯಾಹ್ನ ೧೨.೩೦ ಆಯಿತು. ಮುಹೂರ್ತ ಮುಗಿದು ಸ್ವಲ್ಪ ಹೊತ್ತಷ್ಟೇ ಆಗಿತ್ತು. ಅಣ್ಣ ಎಲ್ಲೋ ಇನ್ನೂ ಬರಲಿಲ್ಲ ಎಂದು ವಿಷ್ಣು ರಾಜಕುಮಾರ್ ಇನ್ನೂ ಬರಲಿಲ್ಲ ಎಂದು ಬೇಸರ ಪಟ್ಟುಕೊಳ್ಳಲು ಆರಂಭಿಸಿದ. ಅವನು ಚಡಪಡಿಸಿದ ಅದೇ ಕ್ಷಣ ರಾಜಕುಮಾರ್ ಬಂದೇಬಿಟ್ಟರು. ನಾನು, ವಿಷ್ಣು ಅವರನ್ನು ಛತ್ರದ ಒಳಗೆ ಕರೆದುಕೊಂಡು ಹೋಗಿ, ರವಿಗೆ ಆಶೀರ್ವಾದ ಮಾಡಿಸಿದೆವು. ಅವರ ಜೊತೆ ತೆಗೆಸಿಕೊಂಡ ಫೋಟೊಗಳಿಗಂತೂ ಲೆಕ್ಕವೇ ಇಲ್ಲ. ಊಟ ಮಾಡಿಕೊಂಡೇ ಹೋಗಬೇಕು ಎಂದು ವಿಷ್ಣು ಕೇಳಿಕೊಂಡಾಗ, ರಾಜಕುಮಾರ್ ನಗುನಗುತ್ತಲೇ ಒಪ್ಪಿದರು. ಅವರನ್ನು ಡೈನಿಂಗ್ ರೂಮ್‌ಗೆ ಕರೆದುಕೊಂಡು ಹೋದೆವು.

‘ಇದು ವೆಜ್ ಊಟ ಅಣ್ಣ’ ಎಂದು ವಿಷ್ಣು ಹೇಳಿದಾಗ, ‘ನನಗೆ ವೆಜ್ ಊಟವೂ ತುಂಬಾ ಇಷ್ಟ’ ಎಂದರು ರಾಜಕುಮಾರ್. ಅವರನ್ನು ಊಟಕ್ಕೆ ಕೂರಿಸಿದ ವಿಷ್ಣು, ತಾನೇ ಬಡಿಸಲು ಮುಂದಾದ. ಕೋಸಂಬರಿ, ಬೇಳೆ ಸಾರು ಅಣ್ಣಾವ್ರಿಗೆ ತುಂಬಾ ಇಷ್ಟ. ಅದನ್ನು ಅವರು ಹೇಳಿದ್ದೇ, ವಿಷ್ಣು ಕೋಸಂಬರಿ, ಬೇಳೆಸಾರನ್ನು ಎರಡೆರಡು ಸಲ ಬಡಿಸಿದ. ಅಣ್ಣಾವ್ರು ಆಸ್ವಾದಿಸಿಕೊಂಡು ಊಟ ಮಾಡಿದರು. ಊಟವಾದ ಬಳಿಕ, ‘ಬಹಳ ಚೆನ್ನಾಗಿತ್ತು. ವಿಷ್ಣು ಅವರೇ ಸ್ವಲ್ಪ ಜಾಸ್ತಿನೇ ಊಟ ಮಾಡಿಬಿಟ್ಟೆ’ ಎಂದರು. ಡೈನಿಂಗ್ ಹಾಲ್‌ನಿಂದ ಮೇಲೆ ಬಂದು, ಎಲೆ ಅಡಿಕೆ ಹಾಕಿಕೊಂಡರು. ಸುಮಾರು ಎರಡು ಗಂಟೆ ನಮ್ಮ ಜೊತೆಯಲ್ಲೇ ಇದ್ದರು. ಇದು ರಾಜಕುಮಾರ್ ಅವರ ಗ್ರೇಟ್ ಕ್ಯಾರೆಕ್ಟರ್. ವಿಷ್ಣು ಹಾಗೂ ಅವರ ನಡುವೆ ಒಂದು ಅಪೂರ್ವವಾದ ಸಂಬಂಧವಿತ್ತು. ಇದನ್ನು ನಾನು ಕಂಡಿದ್ದೇನೆ. ವಿಷ್ಣು ಎಷ್ಟೋ ಸಲ ರಾಜಕುಮಾರ್ ವ್ಯಕ್ತಿತ್ವವನ್ನು ಕೊಂಡಾಡಿದ್ದ. ‘ಗಂಧದ ಗುಡಿ’ಯ ನಂತರ ಇನ್ನೊಂದು ಸಿನಿಮಾದಲ್ಲಾದರೂ ಅಣ್ಣಾವ್ರ ಜೊತೆ ನಟಿಸಬೇಕು ಎಂಬ ಬಯಕೆ ಅವನಿಗೆ ಇತ್ತು.

ಒಮ್ಮೆ ಮದ್ರಾಸಿನಲ್ಲಿ ನಾನು, ವಿಷ್ಣು ಮಾತನಾಡುತ್ತಾ ‘ಶೋಲೆ’ ಹಿಂದಿ ಸಿನಿಮಾ ತರಹದ ಒಂದು ಚಿತ್ರವನ್ನು ನಾವೂ ಮಾಡಿದರೆ ಹೇಗಿರುತ್ತದೆ ಎಂದು ಪರಸ್ಪರ ಅಂದುಕೊಂಡೆವು. ಆಗ ಮದ್ರಾಸ್‌ನಲ್ಲೇ ರಾಜಕುಮಾರ್ ‘ಬಬ್ರುವಾಹನ’ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿದ್ದರು. ಅಂಥದೊಂದು ಸಿನಿಮಾಗೆ ಕಥೆ ಮಾಡುವ ಮೊದಲು ಅಣ್ಣಾವ್ರ ಅನುಮತಿ ಪಡೆದರೆ ಚೆನ್ನಾಗಿರುತ್ತದೆ ಎಂದುಕೊಂಡು ಅವರು ಇದ್ದಲ್ಲಿಗೆ ಹೊರಟೆವು. ವಿಷ್ಣು ಬಳಿ ಆ ದಿನ ಕಾರ್ ಇರಲಿಲ್ಲ. ಅವನ ವೆಸ್ಪಾ ಸ್ಕೂಟರ್ ಏರಿಯೇ ಇಬ್ಬರೂ ಫಿಲ್ಮ್ ಸೆಂಟರ್ ಸ್ಟುಡಿಯೊಗೆ ಹೋದೆವು. ಹುಣಸೂರು ಕೃಷ್ಣಮೂರ್ತಿ ಚಿತ್ರದ ನಿರ್ದೇಶಕರು.

ನಮ್ಮ ತಂದೆಯವರ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದ ಅವರಿಗೆ ನಮ್ಮ ಕುಟುಂಬದ ಮೇಲೆ ಗೌರವ. ನನಗೂ ನಿರ್ದೇಶನದ ವರಸೆಗಳನ್ನು ಕಲಿಸಲು ತಂದೆಯವರು ಅವರ ಜೊತೆ ಕೆಲಸ ಮಾಡುವ ಅವಕಾಶ ಕೊಟ್ಟಿದ್ದರು. ನನ್ನನ್ನು ಕಂಡವರೇ ಹುಣಸೂರರು ಬರಮಾಡಿಕೊಂಡರು. ಅದ್ಭುತವಾದ ಸೆಟ್ ಹಾಕಲಾಗಿತ್ತು. ನಟಿ ಕಾಂಚನಾ ಅಲ್ಲಿದ್ದರು. ರಾಜಕುಮಾರ್ ಕಣ್ಣಿಗೆ ಬೀಳಲಿಲ್ಲ. ಶೂಟಿಂಗ್ ಮುಗಿಸಿ ಅವರು ಹೊರಟುಬಿಟ್ಟಿದ್ದಾರೋ ಏನೋ ಎಂದುಕೊಂಡೆವು. ಸ್ವಲ್ಪ ದೂರದಲ್ಲೇ ಸಹಾಯಕ ನಿರ್ದೇಶಕ ಭಾರ್ಗವ ಯಾವುದೋ ಕೆಲಸದಲ್ಲಿ ತನ್ಮಯರಾಗಿದ್ದರು. ಕೆಲವೇ ನಿಮಿಷಗಳಲ್ಲಿ ರಾಜಕುಮಾರ್ ಅರ್ಜುನನ ಕಾಸ್ಟ್ಯೂಮ್ ಧರಿಸಿ ಬಂದರು. ನೇರ ಚಿತ್ರೀಕರಣದ ಸ್ಥಳಕ್ಕೆ ಹೋದರು. ಅವರ ದೇಹಭಾಷೆ, ಕಂಚಿನ ಕಂಠ, ಗಂಡು ಸಂಭಾಷಣೆ ಕೇಳಿ ನನ್ನ, ವಿಷ್ಣು ಮೈ ಜುಮ್ಮೆಂದಿತು. ಸಾಕ್ಷಾತ್ ಅರ್ಜುನನೇ ಧರೆಗೆ ಬಂದಿದ್ದಾನೆ ಎನ್ನುವಷ್ಟು ಅವರ ಅಭಿನಯ ತೀವ್ರವಾಗಿತ್ತು.

ಆ ಶಾಟ್‌ನ ಚಿತ್ರೀಕರಣ ಮುಗಿದದ್ದೇ ರಾಜಕುಮಾರ್‌ ನನ್ನನ್ನು ನೋಡಿದರು. ಹತ್ತಿರ ಕರೆದು ಮಾತನಾಡಿಸಿದರು. ನಮ್ಮ ತಂದೆಯವರ ‘ಭಕ್ತ ಚೇತ’ ಚಿತ್ರದಲ್ಲಿ ಅವರ ಜೊತೆಗೆ ನಾನು ಒಂದು ಪಾತ್ರ ಮಾಡಿದ್ದೆ. ಅದನ್ನು ಅವರು ಯಾವಾಗ ಸಿಕ್ಕರೂ ನೆನಪಿಸಿಕೊಳ್ಳುತ್ತಾ ಇದ್ದರು. ಆಗ ಅವರು ನನಗೆ ಹೋಟೆಲ್‌ನಲ್ಲಿ ಊಟ ಕೂಡ ಕೊಡಿಸಿದ್ದರು. ನಮ್ಮ ಕುಟುಂಬದ ಮಹಾತ್ಮಾ ಬ್ಯಾನರ್‌ನ ‘ಶ್ರೀನಿವಾಸ ಕಲ್ಯಾಣ’ ರಾಜಕುಮಾರ್‌ ಅವರು ಮೊದಲು ಬಣ್ಣಹಚ್ಚಿದ ಚಿತ್ರ. ಅದನ್ನೂ ಅವರು ಸ್ಮರಿಸಿಕೊಳ್ಳುತ್ತಾ ಇದ್ದರು. ಅದು ಅವರ ದೊಡ್ಡ ಗುಣ. ನನ್ನನ್ನು ಹಾಗೂ ವಿಷ್ಣುವನ್ನು ಕಂಡ ಅವರು ಸಂತೋಷದಿಂದ ಮಾತನಾಡಿದರು. ‘ನಾಗರಹೊಳೆ’, ‘ಕಿಲಾಡಿ ಜೋಡಿ’ ಚಿತ್ರಗಳನ್ನು ಅವರು ನೋಡಿದ್ದರು. ‘ಕಿಲಾಡಿ ಜೋಡಿ’ ಅವರಿಗೆ ತುಂಬಾ ಇಷ್ಟವಾಗಿತ್ತು. ಆ ಸಿನಿಮಾ ತಮಗೆ ಯಾಕೆ ಇಷ್ಟವಾಯಿತು ಎನ್ನುವುದನ್ನು ಬಿಡಿಸಿ ಹೇಳಿ, ಖುಷಿಪಟ್ಟರು. ವಿಷ್ಣು, ನನ್ನನ್ನು ಕುರ್ಚಿ ಹಾಕಿ ಕೂರಿಸಿದರು. ನಾನು, ವಿಷ್ಣು ಇಬ್ಬರೂ ‘ಶೋಲೆ’ ತರಹದ ಸಿನಿಮಾ ಕನಸನ್ನು ಅವರಲ್ಲಿ ಹೇಳುವುದು ಹೇಗೆ ಎಂದು ಯೋಚಿಸತೊಡಗಿದೆವು.

ಮುಂದಿನ ವಾರ: ಈಡೇರದ ರಾಜ್–ವಿಷ್ಣು ಕಾಂಬಿನೇಷನ್‌ನ ಸಿನಿಮಾ ಕನಸು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT