ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಧಾನಿ ರಸ್ತೆಗಳಲ್ಲೀಗ ಗುಂಡಿಗಳದ್ದೇ ರಾಜ್ಯಭಾರ!

‘ಅಂತರರಾಷ್ಟ್ರೀಯ ಗುಣಮಟ್ಟದ ರಸ್ತೆಗಳು’ ಎಂಬ ಜಾಹೀರಾತನ್ನೇ ಅಣಕಿಸುವ ಗುಂಡಿಗಳು
Last Updated 27 ಜುಲೈ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ತುಂಬಾ ಬಸ್‌ ಶೆಲ್ಟರ್‌ಗಳ ಮೇಲೆ ಈಗ ರಸ್ತೆಗಳ ಅಭಿವೃದ್ಧಿ ಕುರಿತ ಜಾಹೀರಾತುಗಳೇ ರಾರಾಜಿಸುತ್ತಿವೆ. ‘ಸಂಚಾರ ಸುಗಮಗೊಳಿಸಿದ ಅಂದದ ರಸ್ತೆಗಳು’, ‘ಬೆಂಗಳೂರಿನ ಅಂದ ಹೆಚ್ಚಿಸಿದ ಅಂತರರಾಷ್ಟ್ರೀಯ ಗುಣಮಟ್ಟದ ರಸ್ತೆಗಳು’ ಎಂಬ ಅಡಿಬರಹಗಳು ಕಣ್ಣಿಗೆ ಕುಕ್ಕುತ್ತವೆ. ಅದನ್ನು ನೋಡುತ್ತಾ ಹೋಗುವ ಸವಾರರಿಗೆ ಎದುರಿನಲ್ಲೇ ಗುಂಡಿ ಕಾದಿರುತ್ತದೆ!

‘ಅಂದದ, ಅಂತರರಾಷ್ಟ್ರೀಯ ರಸ್ತೆಗಳು ಒಂದೆಡೆ ಇರಲಿ, ಗುಂಡಿಯಿಲ್ಲದ ರಸ್ತೆಗಳನ್ನಾದರೂ ಬಿಬಿಎಂಪಿ ಕೊಟ್ಟರೆ ಸಾಕು’ ಎಂದು ವ್ಯಂಗ್ಯವಾಡುತ್ತಾರೆ ಸಿಟಿಜನ್‌ ಆ್ಯಕ್ಷನ್‌ ಫೋರಂ ಅಧ್ಯಕ್ಷ ಡಿ.ಎಸ್‌. ರಾಜಶೇಖರ್‌.

‘ಗುಂಡಿಗಳ ಲೆಕ್ಕ ಇಡುವುದು ಏನು ತರಕಾರಿ ವ್ಯಾಪಾರವೇ? ಪ್ರತಿ ರಸ್ತೆಯಲ್ಲೂ ಗುಂಡಿಗಳೇ ತುಂಬಿದ್ದರೂ ಬಿಬಿಎಂಪಿ ಕೇವಲ ನೂರರ ಲೆಕ್ಕದಲ್ಲಿ ಅವುಗಳ ಸಂಖ್ಯೆಯನ್ನು ನೀಡುತ್ತದೆ. ಅದರ ಈ ನಿಲುವು ನಾಚಿಕೆಗೇಡು’ ಎಂದು ಗೇಲಿ ಮಾಡುತ್ತಾರೆ.

ಕಳೆದ ಹಣಕಾಸು ವರ್ಷದಲ್ಲಿ ಬಿಬಿಎಂಪಿ ರಸ್ತೆ ಅಭಿವೃದ್ಧಿಗಾಗಿ ₹ 952 ಕೋಟಿ ವ್ಯಯಿಸಿದೆ.  ‘ದುರಸ್ತಿ ಮಾಡಲಾಗಿದೆ’ ಎಂದು ಪಾಲಿಕೆ ಕೊಡುವ ಪಟ್ಟಿಯಲ್ಲಿರುವ ರಸ್ತೆಗಳಲ್ಲೇ ಈಗ ಮತ್ತೆ ಗುಂಡಿಗಳು ಬಿದ್ದಿವೆ. ಮೊದಲೇ ಕಿಕ್ಕಿರಿದ ವಾಹನಗಳಿಂದ ಕಂಗೆಟ್ಟ ರಸ್ತೆಗಳು, ನಿರ್ವಹಣೆ ಕೊರತೆಯಿಂದ ಮೈಮೇಲೆಲ್ಲ ಗುಂಡಿಗಳ ‘ಗಾಯ’ ಮಾಡಿಕೊಂಡು ಒದ್ದಾಡುತ್ತಿವೆ.

ಒಂದೆಡೆ ಮೆಟ್ರೊ ಕಾಮಗಾರಿ, ಇನ್ನೊಂದೆಡೆ ಒಳಚರಂಡಿ ನಿರ್ಮಾಣ, ಮತ್ತೊಂದೆಡೆ ದೂರಸಂಪರ್ಕ ಹಾಗೂ ಅನಿಲ ಪೂರೈಕೆ ಜಾಲ ಅಳವಡಿಕೆ ಎಂದೆಲ್ಲ ಹಲವು ರಸ್ತೆಗಳು ಓಡಾಟಕ್ಕೆ ಆಸ್ಪದವೇ ಇಲ್ಲದಂತೆ ವಿರೂಪಗೊಂಡಿವೆ. ಹೊಸದಾಗಿ ಟಾರು ಹಾಕಲಾದ ರಸ್ತೆಗಳಲ್ಲೂ ಆಳವಾದ ಗುಂಡಿಗಳು ಬಾಯ್ದೆರೆದಿದ್ದು ಸಂಚಾರ ವ್ಯವಸ್ಥೆಗೆ ಸಂಚಕಾರ ತಂದಿವೆ.

ನಗರದ ರಸ್ತೆಗಳು ಎಷ್ಟೊಂದು ಹದಗೆಟ್ಟಿವೆ ಎಂಬುದನ್ನು ನೋಡಲು ಶೇಷಾದ್ರಿಪುರ ಇಲ್ಲವೆ ಚಿಕ್ಕಪೇಟೆ ರಸ್ತೆಗಳಿಗೆ ಬರಬೇಕು. ಒಂದಕ್ಕಿಂತ ಒಂದು ಆಳವಾದ ಗುಂಡಿಗಳು ಇಲ್ಲಿದ್ದು, ಒಂದೆಡೆ ತಪ್ಪಿಸಿಕೊಂಡರೂ ಇನ್ನೊಂದೆಡೆ ಸವಾರರನ್ನು ‘ಖೆಡ್ಡಾ’ಕ್ಕೆ ಕೆಡವಲು ಅವು ಸಜ್ಜಾಗಿ ನಿಂತಿರುತ್ತವೆ. ಬಿಬಿಎಂಪಿಯ ಕೇಂದ್ರ ಕಚೇರಿಯಿರುವ ಎನ್‌.ಆರ್‌. ವೃತ್ತದ ಸುತ್ತಲಿನ ರಸ್ತೆಗಳ ಸ್ಥಿತಿಯೂ ಇದಕ್ಕೆ ಹೊರತಲ್ಲ.

ಪಂಪಮಹಾಕವಿ ರಸ್ತೆ, ಆಡಗೋಡಿ ರಸ್ತೆ, ಬನ್ನೇರುಘಟ್ಟ ರಸ್ತೆ, ಬಸವನಗುಡಿ ರಸ್ತೆ, ಮೈಸೂರು ರಸ್ತೆ, ನೃಪತುಂಗ ರಸ್ತೆ, ಶೇಷಾದ್ರಿ ರಸ್ತೆ, ತುಮಕೂರು ರಸ್ತೆ, ಗೂಡ್ಸ್ ಶೆಡ್ ರಸ್ತೆ, ವಸಂತನಗರ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳ ದುಸ್ಥಿತಿ ಬಗೆಗೂ ಸಾಕಷ್ಟು ದೂರುಗಳಿವೆ.

‘2006ರಿಂದ 2015ರವರೆಗೆ ಬಿಬಿಎಂಪಿ 9,923 ರಸ್ತೆ ಕಾಮಗಾರಿಗಳನ್ನು ನಡೆಸಿದ್ದು, ಈ ಉದ್ದೇಶಕ್ಕಾಗಿ ₹ 17,832 ಕೋಟಿ ವ್ಯಯಿಸಿದೆ. ಇಷ್ಟೊಂದು ದುಡ್ಡು ಸದ್ವಿನಿಯೋಗ ಆಗಿದ್ದರೆ ನಗರದ 14 ಸಾವಿರ ಕಿ.ಮೀ. ಉದ್ದದ ರಸ್ತೆ ಜಾಲವೆಲ್ಲ ನುಣುಪಾದ ಮೇಲ್ಮೈನಿಂದ ನಳನಳಿಸಬೇಕಿತ್ತು’ ಎಂದು ಹಿಂದಿನ ಆಡಳಿತ ಪಕ್ಷದ ನಾಯಕ ಎನ್‌.ಆರ್‌. ರಮೇಶ್‌ ಕೌನ್ಸಿಲ್‌ ಸಭೆಯಲ್ಲೇ ಹೇಳಿದ್ದರು. ಈ ವಿವರ ರಸ್ತೆ ಕಾಮಗಾರಿಗಳ ಎಲ್ಲ ಕಥೆಯನ್ನೂ ಹೇಳುತ್ತದೆ.

‘ಗುಂಡಿಗಳು ಇದ್ದ ಸ್ಥಿತಿಗಿಂತ ಮುಚ್ಚಿದ ವಾತಾವರಣ ಇನ್ನೂ ಭಯಾನಕವಾಗಿದೆ. ರಸ್ತೆಯ ಮೇಲ್ಮೈಗೂ ಮೀರಿದ ಎತ್ತರದಲ್ಲಿ ಮನಬಂದಂತೆ ಟಾರು ಹಾಕಿದ್ದರಿಂದ ಸಣ್ಣ-ಸಣ್ಣ ದಿನ್ನೆಗಳು ನಿರ್ಮಾಣವಾಗಿವೆ. ಅವುಗಳನ್ನು ತಪ್ಪಿಸಿ ಓಡಾಡುವುದು ಕಷ್ಟವಾಗಿದೆ’ ಎನ್ನುತ್ತಾರೆ ಕೇಂದ್ರ ವಾಣಿಜ್ಯ ಪ್ರದೇಶದಲ್ಲಿ ನಿತ್ಯವೂ ಓಡಾಡುವ ವಿ.ಎಂ. ನಾಗೇಶ್‌.

‘ಪ್ರತಿವರ್ಷ ಮಳೆಗಾಲದಲ್ಲಿ ರಸ್ತೆಗಳು ಶೇ 18ರಿಂದ 20ರಷ್ಟು ಹಾಳಾಗುವುದು ಸಾಮಾನ್ಯ. ಆದರೆ, ಹಲವು ವರ್ಷಗಳಿಂದ ರಸ್ತೆಗಳು ದುರಸ್ತಿಯನ್ನೇ ಕಂಡಿಲ್ಲ’ ಎಂದು ಅವರು ದೂರುತ್ತಾರೆ.

‘ರಸ್ತೆ ಗುಂಡಿಗಳನ್ನು ಬೇಕಾಬಿಟ್ಟಿ ಮುಚ್ಚದೆ ರಾಷ್ಟ್ರೀಯ ರಸ್ತೆ ಕಾಂಗ್ರೆಸ್ ಮಾರ್ಗಸೂಚಿ ಅನುಸಾರ ದುರಸ್ತಿ ಮಾಡಬೇಕು. ಗುಂಡಿಯ ಸುತ್ತ ಚೌಕಾಕಾರವಾಗಿ ಕೊರೆಯಬೇಕು. ಅದರ ದೂಳು ತೆಗೆಯಬೇಕು.

ಟಾರು ಹಾಕಿದ ಮೇಲೆ ಚೆನ್ನಾಗಿ ರೋಲ್
ಮಾಡಬೇಕು. ಇಲ್ಲದಿದ್ದರೆ ಗುಂಡಿ ಮುಚ್ಚಿ ಪ್ರಯೋಜನ ಇಲ್ಲ’ ಎನ್ನುತ್ತಾರೆ ನಗರಯೋಜನಾ ತಜ್ಞ ಲೋಕೇಶ್‌ ಹೆಬ್ಬಾನಿ.
‘ಗುತ್ತಿಗೆದಾರರ ನಿರ್ವಹಣೆ ಅವಧಿ ಮುಗಿಯದ ರಸ್ತೆಗಳಲ್ಲಿ ಗುತ್ತಿಗೆದಾರರೇ ಗುಂಡಿ ಮುಚ್ಚಬೇಕು. ಆದರೆ, ಬಿಬಿಎಂಪಿಯಿಂದಲೇ ಅವುಗಳನ್ನು ಮುಚ್ಚಲಾಗುತ್ತಿದೆ’ ಎಂಬ ದೂರು ಸಹ ಕೇಳಿಬಂದಿದೆ.

‘ಮೊದಲು ಎಲ್ಲ ಗುಂಡಿಗಳನ್ನು ಮುಚ್ಚಿ. ಗುತ್ತಿಗೆದಾರರ ನಿರ್ವಹಣೆ ಅವಧಿ ಬಾಕಿಯಿದ್ದರೆ ಅವರಿಂದಲೇ ಕೆಲಸ ಮಾಡಿಸಿ. ಬಳಿಕ ಜಾಹೀರಾತು ಹಾಕಿ. ಮುಖ್ಯಮಂತ್ರಿ ಅವರಿಗೆ ನಗರದಲ್ಲಿ ಗುಂಡಿಗಳು ಕಾಣುವುದೇ ಇಲ್ಲವೆ’ ಎಂದು ರಾಜಶೇಖರ್‌ ಪ್ರಶ್ನಿಸುತ್ತಾರೆ.

ಬರಲಿಲ್ಲ ಟಾರು ಘಟಕ: ‘ನಗರದ ರಸ್ತೆಗಳನ್ನು ಗುಂಡಿಗಳೇ ಇಲ್ಲದಂತೆ ನಿರ್ವಹಣೆ ಮಾಡಲು ನಾಲ್ಕು ಟಾರು ಘಟಕ ಸ್ಥಾಪಿಸಲಾಗುವುದು’ ಎಂದು ಮೇಯರ್‌ ಬಿ.ಎನ್‌. ಮಂಜುನಾಥ್‌ ರೆಡ್ಡಿ ಅವರು ಕಳೆದ ವರ್ಷವೇ ಪ್ರಕಟಿಸಿದ್ದರು.

‘ನಗರದ ನಾಲ್ಕೂ ದಿಕ್ಕಿನಲ್ಲಿ ಒಂದೊಂದು ಘಟಕ ಇರುವಂತೆ ನೋಡಿಕೊಳ್ಳಲಾಗುತ್ತಿದೆ. ಕಣ್ಣೂರು (ಮಹದೇವಪುರ), ಮಲ್ಲಸಂದ್ರ (ದಾಸರಹಳ್ಳಿ), ಆನೇಕಲ್‌ (ದಕ್ಷಿಣ) ಹಾಗೂ ಗೊಲ್ಲಹಳ್ಳಿಯಲ್ಲಿ (ಆರ್‌.ಆರ್‌. ನಗರ) ಘಟಕಗಳಿಗೆ ಸ್ಥಳ ಗುರುತಿಸಲಾಗಿದೆ’ ಎಂದೂ ವಿವರಿಸಿದ್ದರು. ಆದರೆ, ಈ ಘಟಕಗಳು ಇದುವರೆಗೆ ಸ್ಥಾಪನೆಯಾಗಿಲ್ಲ.

‘ಗುಂಡಿಗಳನ್ನು ಮುಚ್ಚಿದ ಕೆಲವೇ ದಿನಗಳಲ್ಲಿ ಅವುಗಳು ಮತ್ತೆ ಬಾಯ್ದೆರೆದಿವೆ. ಕೆಲವೆಡೆ ಮೇಲ್ಪದರಿನ ಜಲ್ಲಿಕಲ್ಲು ಕಿತ್ತು ಚೆಲ್ಲಾಪಿಲ್ಲಿಯಾಗಿ ಹರಡಿದೆ. ಕಾಮಗಾರಿಗೆ ಬಳಸಿದ ಸಾಮಗ್ರಿ ಕಳಪೆ ಆಗಿರುವುದು ಇದಕ್ಕೆ ಕಾರಣವೇ ಎಂಬುದನ್ನು ಪರಿಶೀಲಿಸಲು ತಜ್ಞರಿಗೆ ಕೋರಲಾಗಿದೆ’ ಎಂದು ಹಿಂದಿನ ಆಯುಕ್ತ ಜಿ.ಕುಮಾರ್‌ ನಾಯಕ್‌ ಹೇಳಿದ್ದರು.

‘ತಜ್ಞರ ವರದಿ ಬಂದಿದೆಯೇ’ ಎಂದು ಎಂಜಿನಿಯರ್‌ಗಳನ್ನು ಕೇಳಿದರೆ, ‘ಪರೀಕ್ಷೆ ಮಾಡಿಸಲಾಗಿಲ್ಲ’ ಎಂದು ಅವರು ಉತ್ತರಿಸುತ್ತಾರೆ. ಹಾಗೆಯೇ ಗುಂಡಿಗಳನ್ನು ಮುಚ್ಚಲು ಸಿಬ್ಬಂದಿಗೆ ವೈಜ್ಞಾನಿಕ ತರಬೇತಿಯನ್ನೂ ಕೊಟ್ಟಿಲ್ಲ ಎಂದು ಅವರು ಮಾಹಿತಿ ನೀಡುತ್ತಾರೆ.

ಕಳೆದ ವರ್ಷ 38 ಬಲಿ
ಕಳೆದ ವರ್ಷ ರಸ್ತೆಗುಂಡಿಗಳು ರಾಜ್ಯದಲ್ಲಿ 38 ಬಲಿ ಪಡೆದಿವೆ. ಅದರಲ್ಲಿ ರಾಜಧಾನಿಯದ್ದೇ ಸಿಂಹಪಾಲು. ಈಗ ನಗರದಲ್ಲಿ ಸುಮಾರು ಹತ್ತುಸಾವಿರ ರಸ್ತೆ ಗುಂಡಿಗಳಿವೆ ಎಂಬ ಅಂದಾಜಿದೆ.

‘ನಗರದ ರಸ್ತೆಗಳೆಲ್ಲ ಸುಧಾರಣೆ ಆಗುತ್ತಿವೆ. ಇರುವ ಗುಂಡಿಗಳನ್ನು ಮುಚ್ಚಲು ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ರಸ್ತೆ ಗುಂಡಿಗಳ ಚಿತ್ರಗಳನ್ನು ಆನ್‌ಲೈನ್‌ ಮೂಲಕ ನಾಗರಿಕರು ಕಳುಹಿಸಿಕೊಡಬಹುದು. ಅಂತಹ ತಾಣಗಳನ್ನು ತಕ್ಷಣ ದುರಸ್ತಿ ಮಾಡಲಾಗುವುದು’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ಹೇಳುತ್ತಾರೆ.

ಅಂಕಿ ಅಂಶಗಳು
14ಸಾವಿರ ಕಿ.ಮೀ.
-ನಗರದ ರಸ್ತೆಜಾಲ 

1,940
-ಮುಖ್ಯ ಹಾಗೂ ಉಪ ರಸ್ತೆಗಳ ಉದ್ದ

800
-ಚದರ ಕಿ.ಮೀ. ಬಿಬಿಎಂಪಿ ವ್ಯಾಪ್ತಿ

ನೀವೂ ಮಾಹಿತಿ ನೀಡಿ
ನಗರದ ರಸ್ತೆಗಳು ಗುಂಡಿಮಯ ಆಗಿದ್ದು ಸಂಚಾರಕ್ಕೆ ಅಯೋಗ್ಯ ಎನಿಸುವಷ್ಟು ಹದಗೆಟ್ಟಿವೆ ಎಂಬ ದೂರು ವ್ಯಾಪಕವಾಗಿ ಕೇಳಿ ಬರುತ್ತಿದೆ. ರಸ್ತೆಗಳ ವಾಸ್ತವ ಸ್ಥಿತಿಯನ್ನು ಆಡಳಿತದ ಗಮನಕ್ಕೆ ತರಲು ಬಿಬಿಎಂಪಿ ಮತ್ತು ಸಾರ್ವಜನಿಕರ ಮಧ್ಯೆ ಸಂಪರ್ಕ ಸೇತುವಾಗಿ ‘ಪ್ರಜಾವಾಣಿ’ ಕಾರ್ಯ ನಿರ್ವಹಿಸಲಿದೆ.

ನಿಮ್ಮ ಭಾಗದ ಹದಗೆಟ್ಟ ರಸ್ತೆಗಳ ಕುರಿತು ನೀವೂ ಮಾಹಿತಿ ನೀಡಬಹುದು. ರಸ್ತೆ ಗುಂಡಿಗಳ ಚಿತ್ರಗಳನ್ನು ಸಹ ಕಳುಹಿಸಬಹುದು. ಸಂಪರ್ಕ ಸಂಖ್ಯೆ: 95133 22930 (ವಾಟ್ಸ್‌ ಆ್ಯಪ್‌ ಮಾತ್ರ). ಇಮೇಲ್‌ ವಿಳಾಸ: bangalore@prajavani.co.in
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT