ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಾರೋಷವಾಗಿ ಕೆರೆ ಭೂಮಿ ಒತ್ತುವರಿ

ರಿಯಲ್‌ ಎಸ್ಟೇಟ್‌ ಸಂಸ್ಥೆಗಳ ವಿರುದ್ಧ ವಾಮನ ಆಚಾರ್ಯ ಆರೋಪ
Last Updated 23 ಜುಲೈ 2014, 19:31 IST
ಅಕ್ಷರ ಗಾತ್ರ

ಮಹದೇವಪುರ: ‘ರಾಜಕಾಲುವೆಗಳ ಒತ್ತುವರಿ ಹಾಗೂ ರಿಯಲ್‌ ಎಸ್ಟೇಟ್‌ ಸಂಸ್ಥೆಗಳು ರಾಜಾರೋಷ­ವಾಗಿ ಕೆರೆ ಭೂಮಿಯನ್ನು ಒತ್ತುವರಿ ಮಾಡಿ­ಕೊಂಡಿವೆ. ಹೀಗಾಗಿ ಬೆಂಗಳೂರಿ­ನಲ್ಲಿರುವ ಬಹುತೇಕ ಕೆರೆಗಳಿಗೆ ಶುದ್ಧ ನೀರು ಬರುವುದು ಅಸಾಧ್ಯ ಎನ್ನು­ವಂತಹ ಸ್ಥಿತಿ ನಿರ್ಮಾಣಗೊಂಡಿದೆ’ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ. ವಾಮನ ಆಚಾರ್ಯ ಹೇಳಿದರು.

ಸೀತಾರಾಂಪಾಳ್ಯ ಕೆರೆಯಲ್ಲಿ ಬುಧವಾರ ಟ್ರಾಪಿಕಲ್‌ ರಿಸರ್ಚ್‌ ಡೆವಲಪ್‌ಮೆಂಟ್‌ ಸೆಂಟರ್‌ ಸಂಸ್ಥೆ ಏರ್ಪಡಿಸಿದ್ದ ಗಿಡ ನೆಡುವ ಕಾರ್ಯ­­ಕ್ರಮದಲ್ಲಿ  ಅವರು ಮಾತನಾಡಿದರು.

‘ಮಳೆಗಾಲದಲ್ಲಿ ಮಳೆ ನೀರು ರಾಜ­ಕಾಲುವೆಗಳ ಮೂಲಕ ಸರಾಗವಾಗಿ ಹರಿದು ಹೋಗುವಂತೆ ಮಾಡ­ಬೇಕು. ಅದಕ್ಕಾಗಿ ಒತ್ತುವರಿಗೊಂಡ ರಾಜ­ಕಾಲುವೆ­­ಗಳನ್ನು ತೆರವು­ಗೊಳಿಸಬೇಕು. ಕೆರೆಗೆ ಘನತ್ಯಾಜ್ಯ ಬಂದು ಬೀಳುವು­ದನ್ನು ತಡೆಗಟ್ಟಬೇಕು’ ಎಂದು ಹೇಳಿದರು.

‘ಈ ಹಿಂದೆ ಬೆಂಗಳೂರಿನಲ್ಲಿ ನೂರಾರು ಕೆರೆಗಳು ಇದ್ದವು. ಆದರೆ, ಇಂದು ಕೇವಲ 85 ಕೆರೆಗಳು ಮಾತ್ರ ಲೆಕ್ಕಕ್ಕೆ ಸಿಗುತ್ತಿವೆ. ಅವೆಲ್ಲವೂ ಸಂಪೂರ್ಣ­ವಾಗಿ ಕಲುಷಿತ­ಗೊಂಡಿವೆ. ಅವುಗಳನ್ನು ಸಂರಕ್ಷಿಸಬೇಕೆಂದರೆ ಪ್ರತಿಯೊಂದು ಕೆರೆಯ ಬಳಿ ಕೊಳಚೆ ನೀರಿನ ಶುದ್ಧೀಕರಣ ಘಟಕಗಳನ್ನು ಸ್ಥಾಪಿಸ­ಬೇಕು. ಆಗ ಮಾತ್ರ ಕೆರೆಗಳಿಗೆ ಸೇರುವ ಕೊಳಕು ನೀರನ್ನು ತಡೆಗಟ್ಟ­ಬಹುದು’ ಎಂದು ಅವರು ತಿಳಿಸಿದರು.

‘ಕೆರೆಯಲ್ಲಿನ ಮಣ್ಣನ್ನು ಇಟ್ಟಿಗೆ ಕಾರ್ಖಾನೆ­ಗಳಿಗೆ ಬಳಸು­ವುದರಿಂದಲೂ ಕೆರೆಯ ಅಂತರ್ಜಲಕ್ಕೆ ಬಲ­ವಾದ ಪೆಟ್ಟು ಬೀಳುತ್ತಿದೆ. ಇದನ್ನು ತಪ್ಪಿಸಲು ಸರ್ಕಾರ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು. ಕೆರೆ ಅಭಿವೃದ್ಧಿ ಪ್ರಾಧಿಕಾರ ಹೆಚ್ಚು ಗಮನಹರಿಸಬೇಕು. ಮುಖ್ಯ­ವಾಗಿ ಸಾರ್ವಜನಿಕರು ಕೆರೆಯ ಸಂರಕ್ಷಣೆಗೆ ಕೈಜೋಡಿಸ­ಬೇಕು’ ಎಂದರು.

ಟ್ರಾಪಿಕಲ್‌ ರಿಸರ್ಚ್‌ ಡೆವಲಪ್‌­ಮೆಂಟ್‌ ಸೆಂಟರ್‌ನ ನಿರ್ದೇಶಕ ಡಾ.ಅನಿಲ್‌ ಅಭಿ ಮಾತನಾಡಿ, ‘ಕಳೆದ ಎರಡು ತಿಂಗಳಿನಿಂದ ಕೆರೆಯನ್ನು ಶುಚಿಗೊಳಿಸ­ಲಾಗುತ್ತಿದೆ. ಸದ್ಯಕ್ಕೆ ಸಾಂಕೇತಿಕವಾಗಿ ಇಪ್ಪತ್ತು ಗಿಡ­ಗಳನ್ನು ನೆಡಲಾಗಿದೆ. ಮುಂದಿನ ಒಂಬತ್ತು ತಿಂಗಳೊ­ಳಗಾಗಿ ಕೆರೆಯ ಸುತ್ತಮುತ್ತ 400 ಕ್ಕೂ ಹೆಚ್ಚು ಗಿಡಗಳನ್ನು ನೆಡಲಾಗುವುದು’ ಎಂದು ತಿಳಿಸಿದರು.

ಬ್ರಿಗೇಡ್‌ ಗ್ರೂಪ್‌ನ ಮುಖ್ಯ ಕಾರ್ಯ­ನಿರ್ವ­ಹಣಾಧಿಕಾರಿ ಮಂಜುನಾಥ ಪ್ರಸಾದ್‌ ಮಾತನಾಡಿ, ‘ಸೀತಾರಾಂಪಾಳ್ಯ ಕೆರೆಯನ್ನು ಅಭಿವೃದ್ಧಿ­ಪಡಿಸಿಲು ತಮ್ಮ ಸಂಸ್ಥೆ ಒಂದು ಕೋಟಿ ರೂಪಾಯಿ­ಯನ್ನು ಖರ್ಚು ಮಾಡಲಿದೆ’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಿವೃತ್ತ ಮುಖ್ಯ ಕಾರ್ಯದರ್ಶಿ ಡಾ. ಎ.ರವೀಂದ್ರ, ಎಂ.ಆರ್‌.ಜೈಶಂಕರ್ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT