ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಾ ಮನೆಯಲ್ಲೇ ರಾಡಿಯಾ ಭೇಟಿ

2ಜಿ ತರಂಗಾಂತರ ಹಂಚಿಕೆ ಹಗರಣ
Last Updated 7 ಜುಲೈ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): 2ಜಿ ತರಂಗಾಂತರ ಹಂಚಿಕೆ ಹಗರಣದ ಪ್ರಮುಖ ಆರೋಪಿಯಾದ ಮಾಜಿ ಸಚಿವ ಎ.ರಾಜಾ  ಕಾರ್ಪೊರೇಟ್‌ ಪರ ಲಾಬಿ ಮಾಡುತ್ತಿದ್ದ ನೀರಾ ರಾಡಿಯಾ ಅವರನ್ನು ತಮ್ಮ ನಿವಾಸದಲ್ಲಿಯೇ ಭೇಟಿಯಾಗಿದ್ದಾಗಿ ಕೋರ್ಟ್‌ನಲ್ಲಿ ಸೋಮವಾರ ಒಪ್ಪಿಕೊಂಡರು. 

ಆದರೆ, ರಾಡಿಯಾ ಜತೆಗಿನ  ದೂರವಾಣಿ ಸಂಭಾಷಣೆಯ ಆಪಾದನೆಯನ್ನು ಅಲ್ಲಗಳೆದರು.

ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದ ಅವರು, ‘ರಾಡಿಯಾ ಅವರನ್ನು ಒಂದು ಸಾರಿ ನನ್ನ ಮನೆಯಲ್ಲಿ ಭೇಟಿಯಾಗಿದ್ದೆ. ಆ ಸಂದರ್ಭದಲ್ಲಿ ಟಾಟಾ ಸಮೂಹದ ಆಗಿನ ಅಧ್ಯಕ್ಷ ರತನ್ ಟಾಟಾ ಅವರೂ ಇದ್ದರು. ನಂತರದಲ್ಲಿ ಕೆಲವು ಸಾರಿ ಪರಿಸರ ಮತ್ತು ಅರಣ್ಯ ಹಾಗೂ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಗಳಲ್ಲಿ ಅವರನ್ನು ಭೇಟಿಯಾಗಿದ್ದೆ’ ಎಂದು ಹೇಳಿದರು.

‘ಟಾಟಾ ಸಮೂಹಕ್ಕೆ ಸಂಬಂಧಿಸಿದ ಕೆಲಸದ ನಿಮಿತ್ತ ಅವರು ಈ ಎರಡೂ ಸಚಿವಾಲಯಗಳಿಗೆ ನನ್ನನ್ನು ಭೇಟಿ ಮಾಡಲು ಬಂದಿದ್ದರು. ಆದರೆ,  ರಾಡಿಯಾ ಅವರಿಗೆ ನಾನು ಯಾವತ್ತೂ ದೂರವಾಣಿ ಕರೆ ಮಾಡಿಲ್ಲ. ಹಾಗೆಯೇ ಅವರು ನನಗೆ ದೂರವಾಣಿ ಕರೆ ಮಾಡಿದ್ದ ನೆನಪೂ ಇಲ್ಲ’ ಎಂದು ಅವರು ಸರ್ಕಾರಿ ವಕೀಲ ಯು.ಯು.ಲಲಿತ್‌ ಅವರ ಪಾಟೀಸವಾಲಿಗೆ ಉತ್ತರಿಸಿದರು.

ಕಳೆದ ವರ್ಷ ಜುಲೈನಲ್ಲಿ ಸಾಕ್ಷ್ಯ ನುಡಿದಿದ್ದ ರಾಡಿಯಾ, ಸಂಪುಟ ರಚನೆ ಸಂಬಂಧ ತಾವು ರಾಜಾ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದಾಗಿ ಹೇಳಿದ್ದರು. ರಾಜಾ ಅವರ ನಿವಾಸದ ಕಚೇರಿಯಲ್ಲಿ 2008ರ ನವೆಂಬರ್‌ನಲ್ಲಿ ನಡೆದ ಸಭೆಯಲ್ಲಿ ಟಾಟಾ ಸಮೂಹದ ಪರವಾಗಿ ತಾವು ಭಾಗವಹಿಸಿದ್ದಾಗಿ ತಿಳಿಸಿದ್ದರು.

ಡಿಎಂಕೆ ಮುಖಂಡರ ಒಡೆತನದ ಕಲೈನಾರ್ ಟಿವಿ ಪರಿಚಯವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ರಾಜಾ, ‘ಈ ವಾಹಿನಿಯನ್ನು ವೀಕ್ಷಕನಾಗಿ ಬಲ್ಲೆ.  ಇದು 2007ರಲ್ಲಿ ಆರಂಭವಾಯಿತು. ಈ ವಾಹಿನಿಗೆ ಯಾರು ಚಾಲನೆ ನೀಡಿದರು ಎಂಬುದು ಈಗ ನೆನಪಿಲ್ಲ. ಅದರ ಷೇರುದಾರರ ವಿವರ ಮತ್ತು ಆಡಳಿತದ ಬಗ್ಗೆ ಏನೂ ಗೊತ್ತಿಲ್ಲ’ ಎಂದರು.

ಆರೋಗ್ಯ ಸರಿಯಲ್ಲ ಎಂದು ರಾಜಾ ಹೇಳಿದ ಕಾರಣ ಅವರ ಪಾಟೀಸವಾಲನ್ನು ಮಂಗಳವಾರಕ್ಕೆ (ಜುಲೈ 8) ಮುಂದೂಡಲಾಯಿತು.
2ಜಿ ಪ್ರಕರಣದಲ್ಲಿ ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು (ಆರೋಪ ನಿರಾಕರಣೆ) ಸಾಕ್ಷ್ಯ ನುಡಿಯುವುದಕ್ಕೆ ರಾಜಾ ಅವರಿಗೆ ನ್ಯಾಯಾಧೀಶರಾದ ಒ.ಪಿ.ಸೈನಿ ಅವರು ಅವಕಾಶ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT