ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಕ್ಕೆ ದಾಖಲೆ ನೆರವು

Last Updated 8 ಜುಲೈ 2014, 19:36 IST
ಅಕ್ಷರ ಗಾತ್ರ

ನವದೆಹಲಿ: ರಾಜ್ಯದ ರೈಲ್ವೆ ಯೋಜನೆಗಳಿಗೆ ರೂ. 1,500 ಕೋಟಿ ಕೊಡುವ ಮೂಲಕ ರೈಲ್ವೆ ಸಚಿವ ಡಿ.ವಿ. ಸದಾನಂದಗೌಡರು ಕನ್ನಡಿಗರ ಮುಖದ ಮೇಲೆ ಮಂದಹಾಸ ಅರಳಿಸಲು ಪ್ರಯತ್ನಿಸಿದ್ದಾರೆ. ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಮೊದಲ ಬಾರಿಗೆ ದೊಡ್ಡ ಪ್ರಮಾಣದ ಹಣವನ್ನು ಎನ್‌ಡಿಎ ಸರ್ಕಾರದ ರೈಲ್ವೆ ಸಚಿವರು ಉದಾರವಾಗಿ ನೀಡಿದ್ದಾರೆ.

ಬೀದರ್‌–ಮುಂಬೈ ಎಕ್ಸ್‌ಪ್ರೆಸ್‌ ರೈಲು ಸೇರಿದಂತೆ ಹನ್ನೊಂದು ಹೊಸ ರೈಲುಗಳನ್ನು ಸದಾನಂದಗೌಡರು ರಾಜ್ಯಕ್ಕೆ ನೀಡಿದ್ದಾರೆ. ಒಟ್ಟು 58 ಹೊಸ ರೈಲುಗಳನ್ನು ಅವರು ಪ್ರಕಟಿಸಿದ್ದಾರೆ. ಮೈಸೂರು– ಬೆಂಗಳೂರು ಹಾಗೂ ಚೆನ್ನೈ ನಡುವೆ ಗಂಟೆಗೆ 160 ರಿಂದ 200 ಕಿ.ಮೀ ವೇಗದಲ್ಲಿ (ಹೈಸ್ಪೀಡ್‌ ರೈಲು) ಚಲಿಸುವ ರೈಲು ಓಡಿಸುವುದಾಗಿ ಘೋಷಿಸಿದ್ದಾರೆ. ಸದ್ಯ ಈ ಮಾರ್ಗದಲ್ಲಿ 100ರಿಂದ 120 ಕಿ.ಮೀ ವೇಗದ ‘ಶತಾಬ್ದಿ ರೈಲು’ ಸಂಚರಿಸುತ್ತಿದೆ.

ರೈಲ್ವೆ ಸಚಿವರು ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿದ ರೈಲ್ವೆ ಬಜೆಟ್‌ನಲ್ಲಿ ಹೊಸ ಮಾರ್ಗಗಳಿಗೆ ರೂ. 517ಕೋಟಿ, ಜೋಡಿ ಮಾರ್ಗಕ್ಕೆ ರೂ. 759 ಕೋಟಿ, ಮೇಲ್ಸೆತುವೆ. ಸುರಂಗ ಮಾರ್ಗ ನಿರ್ಮಾಣಕ್ಕೆ ರೂ. 171 ಕೋಟಿ ನೀಡಿದ್ದಾರೆ. ವೆಚ್ಚ ಹಂಚಿಕೆ ಆಧಾರದ ಯೋಜನೆಗಳಿಗೆ ಬರುವ ರಾಜ್ಯದ ಪಾಲೂ ಸೇರಿಕೊಂಡರೆ ರೈಲ್ವೆ ಯೋಜನೆಗಳಿಗೆ ಒಟ್ಟು ರೂ. 2,100 ಕೋಟಿ ಸಿಕ್ಕಂತಾಗಲಿದೆ.

ಹಿಂದಿನ ಯುಪಿಎ ಸರ್ಕಾರದ ಕೊನೆಯ ಎಂಟು ತಿಂಗಳ ಅವಧಿಗೆ ರೈಲ್ವೆ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ತಮ್ಮ ಮಧ್ಯಂತರ ಬಜೆಟ್‌ನಲ್ಲಿ ರಾಜ್ಯದ ಯೋಜನೆಗಳಿಗೆ ರೂ. 1,500 ಕೋಟಿ ಕೊಟ್ಟಿದ್ದರು. ಇದರಲ್ಲಿ ರೂ. 600 ಕೋಟಿ ರಾಜ್ಯದ ಪಾಲೂ ಸೇರಿತ್ತು. ಖರ್ಗೆ ಅವರ ಪರಂಪರೆಯನ್ನು ಸದಾನಂದಗೌಡ ಮುಂದುವರಿಸಿದ್ದಾರೆ. ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ 2014–15ನೇ ಸಾಲಿಗೆ ಇನ್ನೂ ರೂ. 600 ಕೋಟಿಯನ್ನು ಹೆಚ್ಚುವರಿಯಾಗಿ ನೀಡಿದ್ದಾರೆ.

ಖರ್ಗೆ ಅವರಿಗಿಂತ ಮೊದಲು ರೈಲ್ವೆ ಖಾತೆ ನಿರ್ವ­ಹಿ­ಸಿದ್ದ ಸಚಿವರು ರಾಜ್ಯವನ್ನು ಕಡೆಗಣಿಸುತ್ತಲೇ ಬಂದಿ­ದ್ದರು. ಪ್ರತಿ ಸಲವೂ ಹೆಚ್ಚೆಂದರೆ ರೂ. 400– 500 ಕೋಟಿ ಮಾತ್ರ ನಿಗದಿಪಡಿಸುತ್ತಿದ್ದರು. ಆನಂತರದ ವರ್ಷ­ಗಳಲ್ಲಿ ರಾಜ್ಯ ಸರ್ಕಾರವೂ ರೈಲ್ವೆ ಯೋಜನೆ­ಗಳಿಗೆ ಉಚಿತವಾಗಿ ಭೂಮಿ ನೀಡುವುದರ ಜತೆಗೆ, ಯೋಜನಾ ವೆಚ್ಚದಲ್ಲಿ ಶೇಕಡಾ 50ರಷ್ಟನ್ನು ಭರಿಸಲು ಮುಂದೆ ಬಂದ ಬಳಿಕ ರೈಲ್ವೆ ಯೋಜನೆಗಳ ಪ್ರಗತಿ ವೇಗ ಹೆಚ್ಚಿದೆ.ರಾಜ್ಯದಲ್ಲಿ ಪ್ರಗತಿಯಲ್ಲಿರುವ ರೈಲ್ವೆ ಯೋಜನೆಗಳಿಗೆ ರೂ. 8000 ಕೋಟಿ ರೂಪಾಯಿ ಅಗತ್ಯವಿದೆ.

‘ನಾನು ಹೊಸ ಯೋಜನೆಗಳನ್ನು ಘೋಷಿಸುವ ಗೋಜಿಗೆ ಹೋಗಿಲ್ಲ. ಇದುವರೆಗೆ ಅಧಿಕಾರದಲ್ಲಿದ್ದ ಸರ್ಕಾರದ ಅವಧಿಯಲ್ಲಿ ಪ್ರಕಟವಾಗಿರುವ ಯೋಜನೆ­ಗಳನ್ನು ಆದ್ಯತೆ ಮೇಲೆ ಪೂರ್ಣಗೊಳಿಸುವ ಕಡೆ ಗಮನ ಹರಿಸಿದ್ದೇನೆ. ಕರ್ನಾಟಕಕ್ಕೂ ಇದು ಅನ್ವಯವಾಗಲಿದೆ. ಖರ್ಗೆ ಅವರೂ ರಾಜ್ಯಕ್ಕೆ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ. ಆ ಯೋಜನೆ­ಗಳೆಲ್ಲವೂ ಮುಂದುವ­ರಿ­ಯಲಿವೆ.

ಯಾವುದನ್ನೂ ರಾಜಕೀಯ ಉದ್ದೇಶ­ದಿಂದ ನೋಡಿಲ್ಲ’ ಎಂದು ರೈಲ್ವೆ ಸಚಿವರು ನಂತರ  ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಾಮಾಕ್ಯ– ಬೆಂಗಳೂರು ನಡುವೆ ವಾರಕ್ಕೊಮ್ಮೆ ಓಡಾಡುವ ಒಂದು ಪ್ರೀಮಿಯಂ ಟ್ರೇನ್‌, 4 ಎಕ್ಸ್‌ಪ್ರೆಸ್‌, ನಾಲ್ಕು ಪ್ಯಾಸೆಂಜರ್‌, ತಲಾ ಒಂದು ‘ಮೆಮು’ ಮತ್ತು ‘ಡೆಮು’ ಟ್ರೇನ್‌ಗಳು ರಾಜ್ಯಕ್ಕೆ ಸಿಗಲಿವೆ. ಫೆಬ್ರುವರಿಯ ಮಧ್ಯಾಂತರ ರೈಲ್ವೆ ಬಜೆಟ್‌ನಲ್ಲೂ ಇಷ್ಟೇ ಸಂಖ್ಯೆಯ ರೈಲುಗಳು ರಾಜ್ಯಕ್ಕೆ ಸಿಕ್ಕಿ­ದ್ದುವು. ಆಗ ಹುಬ್ಬಳ್ಳಿ– ಮುಂಬೈ ನಡುವೆ ಎಕ್ಸ್‌ಪ್ರೆಸ್‌ ರೈಲು ಪ್ರಕಟವಾಗಿತ್ತು. ಈಗ ಬೀದರ್‌– ಮುಂಬೈ ಎಕ್ಸ್‌ಪ್ರೆಸ್‌ ರೈಲು ಪ್ರಕಟಿಸಿ, ಸದಾನಂದಗೌಡರು ಹೈದರಾಬಾದ್– ಕರ್ನಾಟಕ ಭಾಗವನ್ನು ಕಡೆಗಣಿಸಿಲ್ಲ ಎನ್ನುವ ಸಂದೇಶ ಕಳುಹಿಸಿದ್ದಾರೆ.

ಜಾರ್ಖಂಡ್‌ನ ಟಾಟಾನಗರ– ಬೆಂಗಳೂರು (ವಾರ­ಕ್ಕೊಮ್ಮೆ) ಬೆಂಗಳೂರು– ಮಂಗಳೂರು (ಪ್ರತಿದಿನ) ಮತ್ತು ಬೆಂಗಳೂರು– ಶಿವಮೊಗ್ಗ (ವಾರಕ್ಕೆರಡು ಸಲ) ನಡುವೆ ಎಕ್ಸ್‌­ಪ್ರೆಸ್‌ ರೈಲುಗಳು ಓಡಾಡಲಿವೆ. ಬೆಂಗಳೂರು– ನೆಲಮಂಗಲ, ಅಳ್ನಾವರದ ಮೂಲಕ ಧಾರವಾಡ– ದಾಂಡೇಲಿ, ಯಶವಂತ­ಪುರ– ತುಮಕೂರು, ಬೈಂದೂರು– ಕಾಸರಗೋಡು ನಡುವೆ ಪ್ರತಿದಿನ ಪ್ಯಾಸೆಂಜರ್‌ ರೈಲುಗಳು ಓಡಾಡಲಿವೆ ಎಂದು ರೈಲ್ವೆ ಸಚಿವರು ವಿವರಿಸಿದರು. ಸದಾನಂದಗೌಡರು ಪ್ರಕಟಿಸಿರುವ ಹನ್ನೊಂದು ಹೊಸ ರೈಲುಗಳಲ್ಲಿ ಬಹುತೇಕ ರಾಜ್ಯದೊಳಗೆ ಸಂಚರಿಸಲಿವೆ.

ಗದಗ– ಪಂಡರಾಪುರ (ಬಾಗಲಕೋಟೆ, ವಿಜಾಪುರ ಮತ್ತು ಸೊಲ್ಲಾಪುರ ಮಾರ್ಗ), ರಾಮೇಶ್ವರ– ಹರಿದ್ವಾರ (ಬೆಂಗಳೂರು, ಚೆನ್ನೈ, ಅಯೋಧ್ಯೆ ಮತ್ತು ವಾರಾಣಸಿ ಮುಖಾಂತರ) ಪುಣ್ಯ ಸ್ಥಳಗಳಿಗೆ ಎರಡು ರೈಲುಗಳನ್ನು ಓಡಿಸುವುದಾಗಿ ರೈಲ್ವೆ ಸಚಿವರು ಪ್ರಕಟಿಸಿದರು. ಹಿಂದಿನ ಮಧ್ಯಾಂತರ ಬಜೆಟ್‌ನಲ್ಲೂ ಮೈಸೂರು– ವಾರಾಣಸಿ ಹಾಗೂ ಬೆಂಗಳೂರು– ವೈಷ್ಣೊದೇವಿಗೆ ರೈಲುಗಳನ್ನು ಘೋಷಿಸಲಾಗಿತ್ತು.

ಆಂಧ್ರದ ಗಬ್ಬೂರು– ಬಳ್ಳಾರಿ, ಶಿವಮೊಗ್ಗ– ಶೃಂಗೇರಿ– ಮಂಗಳೂರು, ತಾಳಗುಪ್ಪ– ಸಿದ್ದಾಪುರ, ಗದಗ– ಹರಪನಹಳ್ಳಿ, ಕುಶಾಲನಗರ– ಮಡಿಕೇರಿ, ಉಲ್ಲಾಳ– ಮಂಗಳೂರು–ಸೂರತ್ಕಲ್‌ (ಜೋಡಿ ಮಾರ್ಗ) ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಈಗಾಗಲೇ ಮೈಸೂರು–ಕುಶಾಲನಗರ–ಮಡಿಕೇರಿ ಮಾರ್ಗಕ್ಕೆ ಕುಶಾಲನಗರದ ವರೆಗೆ ಸಮೀಕ್ಷೆ ಮುಗಿದಿದೆ.

ಈ ಯೋಜನೆಯನ್ನು ರಾಜ್ಯ ಸರ್ಕಾರದ ಜತೆ ವೆಚ್ಚ ಹಂಚಿಕೆ ಆಧಾರದಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದರು. ಹಳಿ ತಪ್ಪಿರುವ ರೈಲ್ವೆಯನ್ನು ಹಳಿ ಮೇಲೆ ನಿಲ್ಲಿಸಲು ಪ್ರಯತ್ನ ಮಾಡಿದ್ದೇನೆ. ಸುಮ್ಮನೆ ಯೋಜನೆಗಳನ್ನು ಪ್ರಕಟಿಸಿ ಚಪ್ಪಾಳೆ ಗಿಟ್ಟಿಸುವ ಬದಲು ಇರುವ ಯೋಜನೆಗಳನ್ನು ಮುಗಿಸುವುದು ಲೇಸೆಂದು ಸದಾನಂದಗೌಡರು ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT