ಬೆಂಗಳೂರು: ‘ರಾಜ್ಯದಲ್ಲಿ ಶಾಂತಿ ಪಾಲನೆ ಮತ್ತು ಸುವ್ಯವಸ್ಥೆಯ ಸಮಸ್ಯೆ ತಲೆದೋರಿದೆ’ ಎಂದು ಹೈಕೋರ್ಟ್ ತೀವ್ರ ಆತಂಕ ವ್ಯಕ್ತಪಡಿಸಿದೆ.
ಮಂಡ್ಯದ ಡಾ.ವಿ.ಎಲ್.ನಂದೀಶ್ ವಿರುದ್ಧದ ಕ್ರಿಮಿನಲ್ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಆರೋಪ ಪಟ್ಟಿ ದಾಖಲಿಸಲು ವಿಳಂಬ ಮಾಡುತ್ತಿದ್ದಾರೆ ಎಂಬ ದೂರಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎ.ಎನ್.ವೇಣುಗೋಪಾಲಗೌಡ ಅವರಿದ್ದ ಏಕಸದಸ್ಯ ಪೀಠವು ಶುಕ್ರವಾರ ವಿಚಾರಣೆ ನಡೆಸಿತು.
ಈ ವೇಳೆ ನ್ಯಾಯಮೂರ್ತಿಗಳು, ‘ಗೃಹ ಇಲಾಖೆಯ ವಿವಿಧ ಹಂತಗಳಲ್ಲಿ 10 ಸಾವಿರ ಹುದ್ದೆಗಳು ಖಾಲಿ ಇವೆ. ಇವನ್ನು ಭರ್ತಿ ಮಾಡುವಲ್ಲಿ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ. ಇದು ಶಾಂತಿ ಪಾಲನೆ ಹಾಗೂ ಕಾನೂನು ಸುವ್ಯವಸ್ಥೆಯ ಮೇಲೆ ಗಾಢ ಪರಿಣಾಮ ಬೀರಿದೆ’ ಎಂದು ಕಳವಳ ವ್ಯಕ್ತಪಡಿಸಿದರು.