ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ದಾಖಲೆ ಶೇ 65 ಮತ

ದಕ್ಷಿಣ ಕನ್ನಡ ಅತಿ ಹೆಚ್ಚು ಶೇ 75 * ಗುಲ್ಬರ್ಗ ಕಡಿಮೆ ಶೇ 51 * ಬೆಂಗಳೂರಿನಲ್ಲಿ ಎಂದಿನಂತೆ ನಿರುತ್ಸಾಹ
Last Updated 17 ಏಪ್ರಿಲ್ 2014, 19:53 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಮತ­ದಾರರು ಉತ್ಸಾಹ ತೋರಿಸಿದ್ದು ಕಳೆದ ಸಲಕ್ಕಿಂತ ಹೆಚ್ಚಿನ ಮತದಾನವಾಗಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ ಸರಾಸರಿ  ಶೇ 65ರಷ್ಟು ಜನ ತಮ್ಮ ಹಕ್ಕು ಚಲಾಯಿಸಿದ್ದಾರೆ. 2009ರ  ಲೋಕ­ಸಭಾ ಚುನಾವಣೆಯಲ್ಲಿ ಶೇ 58.80 ರಷ್ಟು ಮತದಾನ ವಾಗಿತ್ತು.

ಗುರುವಾರ ಸಂಜೆ 5 ಗಂಟೆವರೆಗಿನ ಮತದಾನದ ಪ್ರಮಾಣ ಮಾತ್ರ ಸದ್ಯಕ್ಕೆ ಲಭ್ಯವಾಗಿದೆ. ಒಟ್ಟಾರೆ ಮತದಾನದ ಸ್ಪಷ್ಟ ಚಿತ್ರಣ ಶುಕ್ರವಾರ ದೊರೆಯಲಿದೆ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ ಶೇ 75ರಷ್ಟು ಮತದಾನವಾಗಿದ್ದರೆ, ಗುಲ್ಬರ್ಗ ಲೋಕ­ಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ ಶೇ 51ರಷ್ಟು ಮತದಾನ ವಾಗಿದೆ.

ರಾಜಧಾನಿಯ ಮೂರು ಕ್ಷೇತ್ರಗಳಲ್ಲಿ ಹೇಳಿಕೊಳ್ಳುವಂತಹ ಮತದಾನವಾಗಿಲ್ಲ. ಬೆಂಗಳೂರು ಉತ್ತರದಲ್ಲಿ ಶೇ 52, ಕೇಂದ್ರ ಮತ್ತು ದಕ್ಷಿಣ ಕ್ಷೇತ್ರದಲ್ಲಿ ತಲಾ ಶೇ 55ರಷ್ಟು ಮತದಾನವಾಗಿದೆ.

ಮತಯಂತ್ರಗಳ ಧ್ವಂಸ,  ಗುಂಪು ಘರ್ಷಣೆ, ಮತಯಂತ್ರಗಳಲ್ಲಿನ ತಾಂತ್ರಿಕ ದೋಷದಿಂದಾಗಿ ಕೆಲವು ಮತಗಟ್ಟೆಗಳಲ್ಲಿ ತಡವಾಗಿ ಮತದಾನ ಆರಂಭ,  ಸ್ಥಳೀಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಮತದಾನ ಬಹಿಷ್ಕಾರ ಸೇರಿದಂತೆ ಕೆಲವು ಅಹಿತಕರ ಘಟನೆಗಳು ನಡೆದಿವೆ.

ನಕಲಿ ಮತದಾನಕ್ಕೆ ಅವಕಾಶ ನೀಡದ ಕಾರಣ ಸಿಬ್ಬಂದಿಯನ್ನು ಅವಾಚ್ಯ ಶಬ್ದಗ­ಳಿಂದ ನಿಂದಿಸಿದ, ಹಲ್ಲೆಗೆ ಮುಂದಾದ ಪ್ರಕರಣಗಳು

ವರದಿಯಾಗಿವೆ.

ಕೇಂದ್ರ ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ಎಂ.ವೀರಪ್ಪ ಮೊಯಿಲಿ, ಕೆ.ಎಚ್‌.­ಮುನಿಯಪ್ಪ, ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಸೇರಿದಂತೆ ಕಣದಲ್ಲಿರುವ 434 ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳನ್ನು ಸೇರಿದ್ದು, ಲೋಕಸಭೆ ಪ್ರವೇಶಿಸುವ 28 ಮಂದಿ ಅದೃಷ್ಟಶಾಲಿಗಳು ಯಾರು ಎಂಬುದು ಮೇ 16ರಂದು ಗೊತ್ತಾಗಲಿದೆ.

ಬಹುತೇಕ ಶಾಂತಿಯುತ: ಮೊದಲ ಬಾರಿಗೆ ಎಲ್ಲ 28 ಕ್ಷೇತ್ರಗಳಿಗೆ ಏಕಕಾಲ­ದಲ್ಲಿ ಚುನಾವಣೆ ನಡೆದರೂ ಗಂಭೀರ ಸ್ವರೂಪದ ಅಹಿತಕರ ಘಟನೆಗಳು ಇರ­ಲಿಲ್ಲ.  ನೆತ್ತಿಯನ್ನು ಸುಡುವ ಉರಿಬಿಸಿ­ಲು ಲೆಕ್ಕಿಸದೆ ಮತ ಚಲಾಯಿಸಲು ಸಾಲಿನಲ್ಲಿ ನಿಂತಿದ್ದ ದೃಶ್ಯಗಳು ಅಲ್ಲಲ್ಲಿ ಕಂಡು­ಬಂದವು.

ಮೊದಲ ಬಾರಿಗೆ ಮತದಾನದ ಹಕ್ಕು ಪಡೆದ ಯುವಜನರ ಉತ್ಸಾಹ ಎದ್ದು ಕಾಣುತ್ತಿತ್ತು.  ವೃದ್ಧರು, ನಿವೃತ್ತ ನೌಕರರು  ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದರು. ತಮ್ಮ ಸರದಿಗಾಗಿ ಕಾಯುತ್ತಾ ಮತಗಟ್ಟೆಗಳ ಮುಂದೆ ನಿಂತಿದ್ದರು.

93 ಕಡೆ ಮತಯಂತ್ರಗಳ ಬದಲಾವಣೆ: ಎಲೆಕ್ಟ್ರಾನಿಕ್‌ ಮತಯಂತ್ರಗಳು ಕೈಕೊಟ್ಟ ಕಾರಣ 93 ಮತಗಟ್ಟೆಗಳಲ್ಲಿ ಅವುಗಳನ್ನು ಬದಲಾಯಿಸಲಾಯಿತು ಎಂದು ರಾಜ್ಯದ ಮುಖ್ಯಚುನಾವಣಾಧಿಕಾರಿ ಅನಿಲ್‌ಕುಮಾರ್‌ ಝಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.



ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಮತ ಚಲಾವಣೆ ದೃಢಪಡಿ­ಸುವ ವಿಶಿಷ್ಟ ಮಾದರಿಯ ಮತಯಂತ್ರ­ಗಳನ್ನು ಅಳವಡಿಸಲಾಗಿತ್ತು. ಅಲ್ಲೂ ದೋಷಗಳು ಕಂಡುಬಂದ ಕಾರಣ 55 ಯಂತ್ರಗಳನ್ನು ಬದಲಾಯಿಸಲಾಯಿತು.

ಬಹಿಷ್ಕಾರ: ತುರುವೇಕೆರೆ ತಾಲ್ಲೂಕಿನ ಹಳ್ಳದಾಸೋಹಳ್ಳಿ ಹಾಗೂ ದಬ್ಬೆಗಟ್ಟ­ಹಳ್ಳಿ, ಔರಾದ್‌ ತಾಲ್ಲೂಕಿನ ಮತಗಟ್ಟೆ ಸಂಖ್ಯೆ 204, ಭಾಲ್ಕಿ ತಾಲ್ಲೂಕಿನ ಮತ­ಗಟ್ಟೆ ಸಂಖ್ಯೆ 140, ಬೀದರ್‌ ತಾಲ್ಲೂಕಿನ ಮತಗಟ್ಟೆ ಸಂಖ್ಯೆ 12, ಚಾಮ­ರಾಜನಗರ ತಾಲ್ಲೂಕಿನ ಮತಗಟ್ಟೆ ಸಂಖ್ಯೆ 148, ಕಾರ­ವಾರ ಕ್ಷೇತ್ರದ ಮತಗಟ್ಟೆ ಸಂಖ್ಯೆ 4, 15, 22, 135ರಲ್ಲಿ ಮತದಾನ ಬಹಿಷ್ಕರಿಸಲಾಗಿತ್ತು.

ಘರ್ಷಣೆ: ಕನಕಪುರದ ಮೈದಾನಹಳ್ಳಿ­ಯಲ್ಲಿ ರಾಜಕೀಯ ಪಕ್ಷ­ಗಳ ಕಾರ್ಯ­ಕರ್ತರ ನಡುವೆ ಗುಂಪು­ಘರ್ಷಣೆ ನಡೆದಿದ್ದು, ನಾಲ್ವರನ್ನು ಬಂಧಿಸಲಾಗಿದೆ.

ಮರು ಮತದಾನ ಸಾಧ್ಯತೆ: ಶೃಂಗೇರಿ ಮತ್ತು ಗೋವಿಂದರಾಜನಗರ ವಿಧಾನ­ಸಭಾ ಕ್ಷೇತ್ರ ವ್ಯಾಪ್ತಿಯ ತಲಾ ಒಂದು ಮತಗಟ್ಟೆಯಲ್ಲಿ ಮರು ಮತದಾನ ನಡೆ­ಯುವ ಸಾಧ್ಯತೆ ಇದೆ. ತಾಂತ್ರಿಕ ದೋಷ­ದಿಂದಾಗಿ ಮತಯಂತ್ರ ಸರಿಯಾಗಿ ಹಿಂತಿ­ರುಗಿಸಿಲ್ಲ. ಈ ಬಗ್ಗೆ ಕೇಂದ್ರ ಚುನಾ­ವಣಾ ಆಯೋಗಕ್ಕೆ ಮಾಹಿತಿ ನೀಡಲಾಗು­ವುದು. ವರದಿ ನಂತರ ಮರು ಮತದಾ­ನದ ಬಗ್ಗೆ ತೀರ್ಮಾನಿಸಲಾಗುವುದು ಎಂದರು.

ಧ್ವಂಸ: ನೆಲಮಂಗಲ ತಾಲ್ಲೂಕಿನ ಮತಗಟ್ಟೆ ಸಂಖ್ಯೆ 94ರಲ್ಲಿ ಮತಯಂತ್ರ ಧ್ವಂಸ ಮಾಡಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ನಂತರ ಬೇರೆ ಮತಯಂತ್ರಗಳನ್ನು ಬಳಸಲಾಯಿತು. ಆನೇಕಲ್‌ನ ಮತಗಟ್ಟೆ ಸಂಖ್ಯೆ 38ರಲ್ಲಿ ಕಂಟ್ರೋಲ್‌ ಯೂನಿಟ್‌ ಧ್ವಂಸ ಮಾಡಲಾಗಿದೆ.
ಮತಯಂತ್ರ ತುಳಿದ ವ್ಯಕ್ತಿ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ  ಆನೆಕಲ್‌ ತಾಲ್ಲೂಕಿನ ಸರ್ಜಾಪುರ ಹೋಬಳಿಯ ಪಂಡಿತನ ಅಗ್ರಹಾರದಲ್ಲಿ ವ್ಯಕ್ತಿಯೊಬ್ಬ ಮತಯಂತ್ರವನ್ನು ತುಳಿದು ಹಾನಿ ಮಾಡಿದ ಘಟನೆ ನಡೆದಿದೆ.

ಅಂಧ ವ್ಯಕ್ತಿಯೊಬ್ಬರಿಗೆ ಮತದಾನ ಮಾಡಲು ಸಹಾಯಕರನ್ನು ನೀಡಿದ ಬಗ್ಗೆ ಸ್ಥಳದಲ್ಲಿದ್ದ ಕಾಂಗ್ರೆಸ್‌ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತು ಬೆಳೆಯಿತು. ಇದು ಕೈಕೈ ಮಿಲಾಯಿಸುವ ಹಂತಕ್ಕೂ ಹೋಯಿತು. ಆಗ ಮತಯಂತ್ರಕ್ಕೆ ಸಂಪರ್ಕ ಕಲ್ಪಿಸಲಾಗಿದ್ದ ವಿದ್ಯುತ್‌ ತಂತಿಯನ್ನು ವ್ಯಕ್ತಿಯೊಬ್ಬ ತುಳಿದ. ಇದರಿಂದ ಮತಯಂತ್ರ ಕೆಳಕ್ಕೆ ಬಿತ್ತು. ಇದರಿಂದ ಮತ್ತಷ್ಟು ಕೆರಳಿ ಮತಯಂತ್ರವನ್ನು ತುಳಿದು ಹಾಕಿದ.

ಈ ವೇಳೆಗಾಗಲೇ 69 ಮತಗಳು ಚಲಾವಣೆಯಾಗಿದ್ದವು. ಆದರೆ ಕಂಟ್ರೋಲ್‌ ಯೂನಿಟ್‌ಗೆ ಯಾವುದೇ ತೊಂದರೆಯಾಗದ ಹಿನ್ನೆಲೆಯಲ್ಲಿ ಮತಯಂತ್ರವನ್ನು ಮೊಹರು ಮಾಡಿ ಬದಲಿ ಮತಯಂತ್ರವನ್ನು ಬಳಸಲಾಯಿತು.

ಮತಗಟ್ಟೆ ಅಧಿಕಾರಿ ಹೇಮರಾಜ್‌ ನೀಡಿದ ದೂರಿನ ಹಿನ್ನೆಲೆಯಲ್ಲಿ ನಾಲ್ಕು ಮಂದಿಯನ್ನು ಸರ್ಜಾಪುರ ಪೊಲೀಸರು ಬಂಧಿಸಿ ಪ್ರಕರಣ ದಾಖಲು ಮಾಡಿದ್ದಾರೆ. ಆರೋಪಿಗಳನ್ನು ಅಶೋಕ್‌, ಪ್ರದೀಪ್‌, ಮುನಾವರ್‌, ಮತ್ತು ನಾಗರಾಜ್‌ ಎಂದು ಗುರುತಿಸಲಾಗಿದೆ ಎಂದು ಅತ್ತಿಬೆಲೆ ವೃತ್ತ ನಿರೀಕ್ಷಕ ಬಿ.ಕೆ.ಕಿಶೋರ್‌ಕುಮಾರ್‌ ತಿಳಿಸಿದ್ದಾರೆ.

ಗಜೇಂದ್ರಗಡದಲ್ಲಿ ನಕಲಿ ಮತದಾನಕ್ಕೆ ಯತ್ನಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ.

ಮತಗಟ್ಟೆ ಅಧಿಕಾರಿಗಳ ಬದಲಾವಣೆ: ಕೋಲಾರ ತಾಲ್ಲೂಕಿನ ಹಾರೋಹಳ್ಳಿಯ ಮತಗಟ್ಟೆ ಸಂಖ್ಯೆ 230ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕೆ.ಎಚ್‌.ಮುನಿಯಪ್ಪ ಸೂಚನೆಯಂತೆ ಮತಯಂತ್ರದ ದಿಕ್ಕು ಬದಲಾಯಿಸಿದ ಮತಗಟ್ಟೆ ಅಧಿಕಾರಿಯನ್ನು ಬದಲಾಯಿಸಲಾಯಿತು.
ಅದೇ ರೀತಿ ಬೆಳಗಾವಿಯಲ್ಲಿ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದ ಮತಗಟ್ಟೆ ಅಧಿಕಾರಿಯನ್ನು ಬಂಧಿಸಲಾಗಿದೆ ಎಂದು ಅನಿಲ್‌ ಕುಮಾರ್ ಝಾ ತಿಳಿಸಿದರು.

ಹಲ್ಲೆ: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ನಂದನ್‌ ನಿಲೇಕಣಿ ಅವರಿಗೆ ಹೆಬ್ಬೆರಳು ಬದಲು, ಬೇರೆ ಬೆರಳಿಗೆ ಶಾಯಿ ಹಾಕಿರುವ ಕುರಿತು ವರದಿ ತರಿಸಿಕೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಸುದ್ದಗುಂಟೆಪಾಳ್ಯದ ಮತಗಟ್ಟೆ ಸಂಖ್ಯೆ 86ರಲ್ಲಿ ಮತಯಂತ್ರ ದೋಷದಿಂದಾಗಿ ಬೆಳಿಗ್ಗೆ 8.15ಕ್ಕೆ ಮತದಾನ ಶುರುವಾಯಿತು.

ಮಳೆ: ಮತದಾನಕ್ಕೆ ಅಡ್ಡಿ
ಬೆಳಗಾವಿ, ಚಿಕ್ಕಮಗಳೂರು, ರಾಮನಗರ ಮುಂತಾದ ಕಡೆ ಬಿದ್ದ ಮಳೆಯಿಂದಾಗಿ ಮತದಾನಕ್ಕೆ ಅಡ್ಡಿಯಾಯಿತು.

ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಸವದತ್ತಿ ತಾಲ್ಲೂಕಿನ ಯರಗಟ್ಟಿ ಮತ್ತು ರಾಯಬಾಗ ಸುತ್ತಮುತ್ತ ಗುರುವಾರ ಮಧ್ಯಾಹ್ನ ಭಾರಿ ಮಳೆ–ಗಾಳಿಯಿಂದಾಗಿ ಕೆಲ ಕಾಲ ಮತದಾನ ಪ್ರಕ್ರಿಯೆಗೆ ಹಿನ್ನಡೆ­ಯಾಯಿತು. 

ಬಾಗಲಕೋಟೆ ನಗರ ಮತ್ತು ಜಿಲ್ಲೆಯ ಮಹಾಲಿಂಗಪುರ, ಬದಾಮಿ ಮತ್ತು ಜಮಖಂಡಿಯಲ್ಲಿ ಮಳೆ­ಯಿಂದಾಗಿ ಮತದಾನಕ್ಕೆ ಹಿನ್ನಡೆಯಾಯಿತು.

ಬಳ್ಳಾರಿ ನಗರ ಮತ್ತು ಸುತ್ತಮುತ್ತ ರಭಸದ ಮಳೆಯಾಗಿದ್ದರಿಂದ ಕೆಲ ಕಾಲ ಮತದಾನ ಪ್ರಕ್ರಿಯೆಗೆ ಅಡ್ಡಿ ಆಯಿತು.

ವಾಗ್ವಾದ: ಲಘು ಲಾಠಿ ಪ್ರಹಾರ
ನರಗುಂದ (ಗದಗ ಜಿಲ್ಲೆ):
ಪಟ್ಟಣದ 8ನೇ ವಾರ್ಡ್‌ಗೆ ಸಂಬಂಧಿಸಿದ ಮತದಾರರು ಮತಗಟ್ಟೆಗೆ ತೆರಳುವಾಗ ಟಿಎಂಸಿ ರಸ್ತೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕುವಂತೆ ಕಾರ್ಯಕರ್ತೆಯೊಬ್ಬರು ಹೇಳಿದ್ದಕ್ಕೆ ಬಿಜೆಪಿ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು. ಆಗ ಎರಡು ಗುಂಪುಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಜನರನ್ನು ಚದುರಿಸಿದರು. ಇದರಿಂದ ಕೆಲ ಕಾಲ ಬಿಗುವಿನ ವಾತಾವರಣ ಉಂಟಾಗಿತ್ತು.

ಕಮಲ ಕಾಣದಂತೆ ಸ್ಟಿಕ್ಕರ್‌!
ಹುಣಸೂರು (ಮೈಸೂರು ಜಿಲ್ಲೆ):
ತಾಲ್ಲೂಕಿನ ಹನಗೋಡು ಹೋಬಳಿ ಕೇಂದ್ರದ ಮತಗಟ್ಟೆ 194ರಲ್ಲಿ ಮಧ್ಯಾಹ್ನದ ಬಳಿಕ ಕಿಡಿಗೇಡಿಗಳು ಮತಯಂತ್ರದಲ್ಲಿ ಬಿಜೆಪಿ ಚಿಹ್ನೆ ಕಮಲದ ಗುರುತಿನ ಮೇಲೆ ಸ್ಟಿಕ್ಕರ್‌ ಅಂಟಿಸಿ ಮತದಾರರಿಗೆ ಪಕ್ಷದ ಗುರುತು ಕಾಣಿಸದ ರೀತಿ ಮಾಡಿದ್ದರು.

ಇದರಿಂದ ಬಿಜೆಪಿ ಕಾರ್ಯಕರ್ತರು ಮತಗಟ್ಟೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಹೀಗಾಗಿ ಕೆಲಕಾಲ ಮತದಾನಕ್ಕೆ ಅಡಚಣೆ ಉಂಟಾಗಿತ್ತು. ಸ್ಥಳಕ್ಕೆ ಕ್ಷೇತ್ರ ಸಹಾಯಕ ಚುನಾವಣಾಧಿಕಾರಿ ಹಾಗೂ ನೋಡಲ್‌ ಅಧಿಕಾರಿ ಭೇಟಿ ನೀಡಿದರು.

ಪ್ರತಿಭಟನೆ: 194ನೇ ಮತಗಟ್ಟೆಯಲ್ಲಿ ನಡೆದಿರುವ ಈ ಲೋಪಕ್ಕೆ ಅಧಿಕಾರಿಗಳು ಮೂಲ ಕಾರಣ. ಈ ಮತಗಟ್ಟೆಗೆ ಸೇರಿದಂತೆ ಪುನಃ ಚುನಾವಣೆ ನಡೆಸಬೇಕು ಎಂದು ಬಿಜೆಪಿ ಕಾರ್ಯಕರ್ತರು ಪಟ್ಟು ಹಿಡಿದ ಕಾರಣ ಮತದಾನಕ್ಕೆ ಅಡಚಣೆ ಉಂಟಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT