ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಮುಂಗಾರು ಚುರುಕು

ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ * ಲಿಂಗನಮಕ್ಕಿಗೆ ಒಳಹರಿವು ಹೆಚ್ಚಳ
Last Updated 28 ಜೂನ್ 2016, 23:30 IST
ಅಕ್ಷರ ಗಾತ್ರ

ಮಂಗಳೂರು/ಹುಬ್ಬಳ್ಳಿ/ದಾವಣಗೆರೆ/ಮೈಸೂರು: ಜುಲೈ ತಿಂಗಳು ಸಮೀಪಿಸುತ್ತಿರುವಂತೆಯೇ ರಾಜ್ಯದಲ್ಲಿ ಮುಂಗಾರು ಮಳೆ ಚುರುಕುಗೊಂಡಿದೆ. ಮಲೆನಾಡು, ಕರಾವಳಿ, ಬಯಲುಸೀಮೆ ಹಾಗೂ ಕಾವೇರಿಯ ಉಗಮಸ್ಥಾನ ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆ ಆಗಿದೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಜಾಲಿ ಪಂಚಾಯ್ತಿಯ ಕಾರಗದ್ದೆಯಲ್ಲಿ ಸುಮಾರು ಅರ್ಧ ಕಿ.ಮೀ ಉದ್ದದ ಟಾರ್ ರಸ್ತೆ ಮಂಗಳವಾರದ ಮಳೆಯ ಬಿರುಸಿಗೆ ಕೊಚ್ಚಿಹೋಗಿದೆ.

ಕೊಡಗಿನಲ್ಲಿ ಮಂಗಳವಾರ ದಿನವಿಡೀ ಮಳೆ ಸುರಿದಿದೆ. ತಲಕಾವೇರಿ ಸುತ್ತಮುತ್ತ ಉತ್ತಮವಾಗಿ ಮಳೆಯಾಗುತ್ತಿರುವ ಕಾರಣ, ಸಂಗಮದಲ್ಲಿ ನೀರಿನ ಮಟ್ಟ ಒಂದೇ ದಿನದಲ್ಲಿ ನಾಲ್ಕು ಅಡಿ ಹೆಚ್ಚಾಗಿದೆ. ಭಾಗಮಂಡಲ ಸಮೀಪ ಕಾವೇರಿ ಮೈದುಂಬಿ ಹರಿಯುತ್ತಿದ್ದಾಳೆ.

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಹಾಗೂ ಬಯಲು ಸೀಮೆ ಪ್ರದೇಶಗಳಲ್ಲಿ ಮುಂಗಾರು ಮಳೆ ಅಬ್ಬರಿಸಿದೆ. ಎರಡು, ಮೂರು ದಿನಗಳಿಂದ ಮಳೆಯ ಪ್ರಮಾಣ ಚುರುಕು ಪಡೆದಿದೆ. ಮಲೆನಾಡಿನ ತೀರ್ಥಹಳ್ಳಿ, ಸಾಗರ, ಹೊಸನಗರ, ಶಿರಸಿ, ಸಿದ್ದಾಪುರಗಳಲ್ಲಿ ಕೂಡ ಉತ್ತಮ ಮಳೆಯಾಗಿರುವ ವರದಿಯಾಗಿದೆ.

ಕರಾವಳಿಯಲ್ಲಿ ಮಳೆಯಿಂದಾಗಿ ಅಲ್ಲಲ್ಲಿ ಹಾನಿ ಸಂಭವಿಸಿದೆ. ಹಾವೇರಿ, ಬೆಳಗಾವಿ ಜಿಲ್ಲೆಗಳಲ್ಲಿ ಜಿಟಿಜಿಟಿ ಮಳೆ ದಿನವಿಡೀ ಸುರಿದಿದೆ. ಹುಬ್ಬಳ್ಳಿ–ಧಾರವಾಡ, ಚಿತ್ರದುರ್ಗ, ದಾವಣಗೆರೆಯಲ್ಲಿ ಉತ್ತಮ ಮಳೆಯಾದ ವರದಿಯಾಗಿದೆ.

ಮಡಿಕೇರಿ ವರದಿ: ನಾಪೋಕ್ಲು– ಅಯ್ಯಂಗೇರಿ ರಸ್ತೆಯ ಮೇಲೆ ಮಂಗಳವಾರ ಸಂಜೆಯಿಂದ ನೀರು ಹರಿಯಲು ಆರಂಭಿಸಿದೆ. ಇದರಿಂದ ಕೆಲ ಸಮಯ ಸಂಚಾರ ಅಸ್ತವ್ಯಸ್ತಗೊಂಡಿತ್ತು. ತಲಕಾವೇರಿ ಸುತ್ತಮುತ್ತ ಮಳೆ ಆರ್ಭಟ ಮುಂದುವರಿದರೆ ಮಡಿಕೇರಿ– ಭಾಗಮಂಡಲ ಸಂಪರ್ಕ ಇನ್ನೆರಡು ದಿನಗಳಲ್ಲಿ ಕಡಿತಗೊಳ್ಳುವ ಅಪಾಯವಿದೆ.

ಮಡಿಕೇರಿ ತಾಲ್ಲೂಕಿನಾದ್ಯಂತ ಧಾರಾಕಾರವಾಗಿ ಸುರಿದಿರುವ ಮಳೆಯಿಂದಾಗಿ ಅಬ್ಬಿಫಾಲ್ಸ್‌ನಲ್ಲಿ ನೀರಿನ ಪ್ರಮಾಣ ಏರಿದೆ. ಮಡಿಕೇರಿ ನಗರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆ ಸ್ಪಷ್ಟವಾಗಿ ಕಾಣದೆ ಕಲ್ಲಂಗಡಿ ತುಂಬಿದ  ಲಾರಿಯೊಂದು ಟೋಲ್‌ಗೇಟ್‌ ಸಮೀಪ  ವಿಭಜಕಕ್ಕೆ ಡಿಕ್ಕಿ ಹೊಡೆದಿದೆ.

ನಾಪೋಕ್ಲಿನಲ್ಲಿ 48 ಮಿ.ಮೀ, ಸಂಪಾಜೆಯಲ್ಲಿ 80 ಮಿ.ಮೀ, ಭಾಗಮಂಡಲದಲ್ಲಿ 80 ಮಿ.ಮೀ ಮಳೆ ಸುರಿದಿದೆ. ಕುಶಾಲನಗರ ಸಮೀಪದ ಹಾರಂಗಿ ಜಲಾಶಯದ ಒಳಹರಿವಿನಲ್ಲಿ ಏರಿಕೆಯಾಗಿದ್ದು, 24 ಗಂಟೆಯ ಅವಧಿಯಲ್ಲಿ ಮೂರು ಅಡಿಗಳಷ್ಟು ನೀರು ಹೆಚ್ಚಳವಾಗಿದೆ. ಜಲಾಶಯದ ಗರಿಷ್ಠಮಟ್ಟ 2,859 ಅಡಿಗಳಾಗಿದ್ದು, ಮಂಗಳವಾರ 2,818.79 ಅಡಿ ನೀರಿನ ಸಂಗ್ರಹವಿದೆ. 3,742 ಕ್ಯೂಸೆಕ್‌ ಒಳಹರಿವಿದೆ.

ಚಿಕ್ಕಮಗಳೂರು ವರದಿ: ಮೂಡಿಗೆರೆ, ಕೊಟ್ಟಿಗೆಹಾರ, ಜಾವಳಿ, ಕಳಸ, ಕುದುರೆಮುಖ, ಶೃಂಗೇರಿ, ಕೆರೆಕಟ್ಟೆ, ಕಿಗ್ಗ, ಕೊಪ್ಪ, ಬಾಳೆಹೊನ್ನೂರು, ಎನ್‌.ಆರ್‌.ಪುರ, ಜಯಪುರ ಹಾಗೂ ಚಿಕ್ಕಮಗಳೂರು ತಾಲ್ಲೂಕಿನ ವಸ್ತಾರೆ, ಆಲ್ದೂರು, ಆವತಿ, ಮಲ್ಲಂದೂರು ಭಾಗದಲ್ಲಿ ಮುಂಗಾರು ಮಳೆ ಧಾರಾಕಾರವಾಗಿ ಸುರಿಯುತ್ತಿದೆ.

ಕಡೂರು, ತರೀಕೆರೆ ತಾಲ್ಲೂಕಿನಾದ್ಯಂತ ಎಡೆಬಿಡದೆ ಮಳೆ ಸುರಿಯುತ್ತಿದೆ. ನಗರದಲ್ಲೂ ಆಗಾಗ ಬಿಡುವು ಪಡೆದು, ಜಿಟಿ ಜಿಟಿ ಮಳೆ ಸುರಿಯುತ್ತಿದೆ. ಇಲ್ಲಿನ ಕಾಫಿ ತೋಟ, ಭತ್ತದ ಗದ್ದೆಗಳಲ್ಲಿ ಕೃಷಿ ಚಟುವಟಿಕೆಗಳು ಭರದಿಂದ ನಡೆಯುತ್ತಿವೆ.

ಶಿವಮೊಗ್ಗ ವರದಿ: ಮಂಗಳವಾರ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ತುಂಗಾ ಜಲಾನಯದ ಪ್ರದೇಶದಲ್ಲಿ ಸಾಕಷ್ಟು ಮಳೆ ಸುರಿದಿದೆ. ತುಂಗಾ ಅಣೆಕಟ್ಟೆಯ ನೀರಿನ ಪ್ರಮಾಣ ಗರಿಷ್ಠ ಮಟ್ಟ 588.24 ಅಡಿ (ಸಮುದ್ರಮಟ್ಟದಿಂದ) ತಲುಪಿದೆ. ಮುಂಜಾಗ್ರತಾ ಕ್ರಮವಾಗಿ ಎರಡು ಕ್ರಸ್ಟ್ ಗೇಟ್‌ಗಳನ್ನು ತೆರೆದು 2 ಸಾವಿರ ಕ್ಯೂಸೆಕ್‌ ನೀರು ಹೊರಬಿಡಲಾಗಿದೆ.

ಜಲಾಶಯಕ್ಕೆ 4,109 ಕ್ಯೂಸೆಕ್ ನೀರು ಹರಿದು ಬಂದಿದೆ. ಶಿವಮೊಗ್ಗ, ಸೊರಬ, ಶಿಕಾರಿಪುರ, ಭದ್ರಾವತಿ, ಶಿರಾಳಕೊಪ್ಪ, ರಿಪ್ಪನ್‌ಪೇಟೆ, ಲಿಂಗನಮಕ್ಕಿ ಜಲಾನಯನ ಪ್ರದೇಶ, ಕಾರ್ಗಲ್ ಭಾಗಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಲಿಂಗನಮಕ್ಕಿ ಜಲಾಶಯದ ಒಳ ಹರಿವಿನಲ್ಲೂ ಭಾರಿ ಏರಿಕೆಯಾಗಿದೆ.

24 ಗಂಟೆಗಳ ಅವಧಿಯಲ್ಲಿ ಜಲಾಶಯಕ್ಕೆ 13,414 ಕ್ಯುಸೆಕ್‌ ನೀರು ಬಂದಿದೆ. 1,463 ಕ್ಯುಸೆಕ್ ನೀರು ಹೊರಬಿಡಲಾಗುತ್ತಿದೆ. ಭದ್ರಾ ಜಲಾಶಯದ ನೀರಿನಮಟ್ಟ 116.10 ಅಡಿಗೆ ಏರಿಕೆಯಾಗಿದ್ದು, 3,112 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಜಲಾಶಯದಿಂದ 92 ಕ್ಯುಸೆಕ್ ನೀರು ಹೊರಬಿಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT