ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ವಿದ್ಯುತ್‌ ಕಡಿತ ಈಗ ಅಧಿಕೃತ

40 ವರ್ಷಗಳಲ್ಲಿಯೇ ಸ್ಥಿತಿ ಶೋಚನೀಯ * 135 ತಾಲ್ಲೂಕುಗಳು ಬರಪೀಡಿತ
Last Updated 31 ಆಗಸ್ಟ್ 2015, 20:07 IST
ಅಕ್ಷರ ಗಾತ್ರ

ಬೆಂಗಳೂರು: ಜಲಾಶಯಗಳಲ್ಲಿ ನೀರಿನ ಪ್ರಮಾಣ  ಕಡಿಮೆ ಇರುವ ಕಾರಣ ಜಲವಿದ್ಯುತ್‌ ಉತ್ಪಾದನೆ ಕುಂಠಿತವಾಗಿರುವುದರಿಂದ, ರಾಜ್ಯದಾದ್ಯಂತ ವಿದ್ಯುತ್‌ ಕಡಿತಕ್ಕೆ (ಲೋಡ್‌ ಶೆಡ್ಡಿಂಗ್‌) ಸೋಮವಾರ ನಡೆದ ಸಚಿವ ಸಂಪುಟ ತೀರ್ಮಾನಿಸಿದೆ.

ಬೆಂಗಳೂರು ನಗರದಲ್ಲಿ ನಿತ್ಯ 2 ಗಂಟೆ  ವಿದ್ಯುತ್‌ ಕಡಿತ ಘೋಷಿಸಲಾಗಿದೆ. ಉಳಿದ ಕಡೆ ಸದ್ಯಕ್ಕೆ ನಾಲ್ಕರಿಂದ ಆರು ಗಂಟೆ ವಿದ್ಯುತ್‌ ಕಡಿತ ಮಾಡುತ್ತಿದ್ದು, ಅದರ ವೇಳಾಪಟ್ಟಿ ಬಗ್ಗೆ ಇಂಧನ ಇಲಾಖೆ ಪರಾಮರ್ಶೆ ನಡೆಸಲಿದೆ. ಈಗ ಎಲ್ಲೆಡೆ ಅನಿಯಮಿತ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಅದು ಇನ್ನು ಅಧಿಕೃತವಾಗಿಯೇ ಜಾರಿಗೆ ಬರಲಿದೆ.

ಜಲವಿದ್ಯುತ್‌ ಉತ್ಪಾದನೆ ಸ್ಥಗಿತ: ಬೇಸಿಗೆಗೆ ನೀರು ಸಂಗ್ರಹಿಸಿಡಬೇಕಾದ ಕಾರಣ ಜಲ ವಿದ್ಯುತ್‌ ಉತ್ಪಾದನೆಯನ್ನು ಈಗ ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

3 ಸಾವಿರ ಕೋಟಿ ಹೊರೆ: ‘ಅಗತ್ಯ ಪ್ರಮಾಣದಷ್ಟು ವಿದ್ಯುತ್ ಖರೀದಿಗೆ ಸರ್ಕಾರ ಮುಂದಾಗಿದೆ. ಕೆಲವು ಕಂಪೆನಿಗಳು ವಿದ್ಯುತ್‌ ನೀಡಲು ಮುಂದೆ ಬಂದಿವೆ. ಪ್ರತಿ ಯೂನಿಟ್‌ಗೆ ₹ 5.08ರಂತೆ ಖರೀದಿಸಲಾಗುವುದು. ಇದಕ್ಕೆ ₹ 3 ಸಾವಿರ ಕೋಟಿ (2016ರ ಮಾರ್ಚ್‌ವರೆಗೆ) ಹೆಚ್ಚುವರಿ ವೆಚ್ಚ ಮಾಡಬೇಕಾಗುತ್ತದೆ. ಪ್ರತಿ ತಿಂಗಳು ₹ 300 ಕೋಟಿ ಹೊರೆಯಾಗುತ್ತದೆ’ ಎಂದು ಸಂಪುಟ‌ಸಭೆ ನಂತರ ಕಾನೂನು  ಸಚಿವ ಟಿ.ಬಿ. ಜಯಚಂದ್ರ ಸುದ್ದಿಗಾರರಿಗೆ ತಿಳಿಸಿದರು.

ಬರ ತೀವ್ರ: ರಾಜ್ಯದಲ್ಲಿ ಬರಪರಿಸ್ಥಿತಿ ಬಿಗಡಾಯಿಸಿರುವ ಬಗ್ಗೆ ಸಂಪುಟ ಸಭೆಯಲ್ಲಿ ತೀವ್ರ ಚರ್ಚೆ ನಡೆದಿದೆ. ‘40 ವರ್ಷಗಳಲ್ಲಿ ಇಂತಹ ಪರಿಸ್ಥಿತಿ ಎದುರಾಗಿರಲಿಲ್ಲ. 27 ಜಿಲ್ಲೆಗಳ 135 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸುವ ಸಂಬಂಧ ಸಂಪುಟ ಉಪ ಸಮಿತಿ ಮಾಡಿರುವ ಶಿಫಾರಸನ್ನು ಸಂಪುಟ ಸಭೆ ಅಂಗೀಕರಿಸಿತು’ ಎಂದು ಸಚಿವರು ಹೇಳಿದರು.

‘ಆಗಸ್ಟ್‌ 31ರವರೆಗಿನ ಅಂಕಿ ಅಂಶಗಳನ್ನು ಪರಿಗಣಿಸಿದರೆ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಆಗಿದೆ.  ಮೂರು –ನಾಲ್ಕು ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಿದೆ. ಆದರೆ, ಒಣ ಹವೆ ಕಾರಣಕ್ಕೆ ಅಲ್ಲೂ ಬೆಳೆ ನಾಶವಾಗಿದೆ’ ಎಂದರು.

‘ಜಲಾಶಯಗಳಲ್ಲಿ ಸಾಕಷ್ಟು ನೀರಿನ ಸಂಗ್ರಹ ಇಲ್ಲದಿರುವುದರಿಂದ ಕುಡಿಯುವ ನೀರು ಪೂರೈಸುವುದಕ್ಕೆ ಸರ್ಕಾರ ಮೊದಲ ಆದ್ಯತೆ ನೀಡಲಿದೆ’ ಎಂದರು.

‘ಬರ ಪರಿಸ್ಥಿತಿಯಿಂದ ₹ 11 ಸಾವಿರ ಕೋಟಿಗೂ ಹೆಚ್ಚು ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ವಿಚಾರವನ್ನು  ಪ್ರಧಾನಿ ಗಮನಕ್ಕೂ ತರಲಾಗಿದೆ. ₹ 3 ಸಾವಿರ ಕೋಟಿ ಪರಿಹಾರ ನೀಡಬೇಕು ಎಂದು ಕೇಂದ್ರಕ್ಕೆ ಮನವಿ ಮಾಡಲಾಗಿದೆ’ ಎಂದರು.

ಕುಡಿಯುವ ನೀರಿಗೆ ವಿದ್ಯುತ್‌ ಕಡಿತ ಇಲ್ಲ: ಕೈಗಾರಿಕೆ, ಕುಡಿಯುವ ನೀರಿನ ಪೂರೈಕೆ ಮತ್ತು ಆಸ್ಪತ್ರೆಗಳಿಗೆ ವಿದ್ಯುತ್‌ ಕಡಿತಗೊಳಿಸುವುದಿಲ್ಲ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಗ್ರಾಮೀಣ ಭಾಗದಲ್ಲಿ ಸದ್ಯ 4ರಿಂದ 6 ಗಂಟೆಗಳ ಕಾಲ ವಿದ್ಯುತ್‌ ಕಡಿತ ಮಾಡಲಾಗುತ್ತಿದೆ. ಒಂದೆರಡು ವಾರಗಳ ವಿದ್ಯುತ್‌ ಬೇಡಿಕೆಯನ್ನು ಪರಾಮರ್ಶಿಸಿ ಈ ಅವಧಿಯನ್ನು ಕಡಿಮೆ ಮಾಡಲು ಯತ್ನಿಸಲಾಗುವುದು ಎಂದಿದ್ದಾರೆ.

ಯುಪಿಸಿಎಲ್‌ನಲ್ಲಿ 650 ಮೆಗಾ ವಾಟ್‌ ವಿದ್ಯುತ್‌ ಉತ್ಪಾದನೆ ಆರಂಭವಾಗಿದೆ. 932 ಮೆಗಾವಾಟ್‌ ವಿದ್ಯುತ್‌ ಖರೀದಿಗೆ ಸರ್ಕಾರ ಒಪ್ಪಿಗೆ ಸೂಚಿಸಿದ್ದು, ಈಗಾಗಲೇ 400 ಮೆಗಾವಾಟ್‌ ವಿದ್ಯುತ್‌ ಲಭಿಸುತ್ತಿದೆ. ಬೆಸ್ಕಾಂ 100ರಿಂದ 500 ಮೆ.ವಾ.ನಷ್ಟು ವಿನಿಮಯ ಕೇಂದ್ರದಿಂದ ಖರೀದಿಸುತ್ತಿದೆ ಎಂದು ಹೇಳಿದ್ದಾರೆ.
*
ಮಹಾರಾಷ್ಟ್ರ: ಕಬ್ಬು ಬೆಳೆಯಲು ನಿರ್ಬಂಧ
ಮುಂಬೈ (ಪಿಟಿಐ):
ಮಹಾರಾಷ್ಟ್ರದ ಪಶ್ಚಿಮ ಮತ್ತು ಮರಾಠವಾಡದಲ್ಲಿ ತೀವ್ರ ನೀರಿನ ಅಭಾವ ತಲೆದೋರಿರುವ  ಕಾರಣ  ಸರ್ಕಾರ ಈ ವರ್ಷ ಕಬ್ಬು ಬೆಳೆಯದಂತೆ ರೈತರಿಗೆ ನಿರ್ಬಂಧ ಹೇರಿದೆ.  ಇದೇ ಕಾಲಕ್ಕೆ ಅಪಾರ ಪ್ರಮಾಣದ ನೀರನ್ನು ಬೇಡುವ ಕಬ್ಬು ನುರಿಸುವ ಕಾರ್ಯವನ್ನು   ಕೂಡ ಕೈಗೆತ್ತಿಕೊಳ್ಳದಂತೆ  ಸಕ್ಕರೆ ಕಾರ್ಖಾನೆಗಳಿಗೆ ತಾಕೀತು ಮಾಡಲಾಗಿದೆ. ‘ಜನ ಮತ್ತು ಜಾನುವಾರುಗಳ ಜೀವ ಉಳಿಸುವುದು ನಮ್ಮ ಮೊದಲ ಆದ್ಯತೆ. ಕೃಷಿ ಮತ್ತು ಕೈಗಾರಿಕೆಗೆ ನಂತರದ  ಪ್ರಾಮುಖ್ಯ’ ಎಂದು ಪರಿಹಾರ ಮತ್ತು ಪುನರ್ವಸತಿ ಸಚಿವ ಏಕನಾಥ್‌ ಖಡ್ಸೆ ಸೋಮವಾರ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT