ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದೆಲ್ಲೆಡೆ ವರುಣನ ಆರ್ಭಟ

ಕೊಡಗು ಜಿಲ್ಲೆ ಶಾಲಾ, ಕಾಲೇಜುಗಳಿಗೆ ರಜೆ
Last Updated 30 ಜೂನ್ 2016, 0:29 IST
ಅಕ್ಷರ ಗಾತ್ರ

ಬೆಂಗಳೂರು: ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ಭಾಗಮಂಡಲದ ತ್ರಿವೇಣಿ ಸಂಗಮ ಸಂಪೂರ್ಣ ಜಲಾವೃತಗೊಂಡಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಜಿಲ್ಲೆಯ ಎಲ್ಲ ಶಾಲೆ, ಕಾಲೇಜುಗಳಿಗೆ ಗುರುವಾರ ಸಹ ರಜೆ ಘೋಷಿಸಿದೆ. ಬುಧವಾರವೂ ರಜೆ ನೀಡಲಾಗಿತ್ತು.

ಮಡಿಕೇರಿಯಿಂದ ತಲಕಾವೇರಿಗೆ ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಿಗ್ಗೆ 10ರ ವರೆಗೆ ರಸ್ತೆ ಸಂಪರ್ಕ ಕಡಿದು ಹೋಗಿತ್ತು. ಮಧ್ಯಾಹ್ನದ ನಂತರ ಪ್ರವಾಹ ಸ್ಥಿತಿ ಸ್ವಲ್ಪ ಇಳಿಮುಖವಾಗಿದೆ. ಭಾಗಮಂಡಲ– ಅಯ್ಯಂಗೇರಿ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದ್ದು ರಸ್ತೆ ದಾಟಲು ಜನರಿಗೆ ದೋಣಿ ವ್ಯವಸ್ಥೆ ಕಲ್ಪಿಸಲಾಗಿದೆ. ಕಾವೇರಿ ನದಿಗೆ ಜೀವಕಳೆ ಬಂದಿದ್ದು ಮೈದುಂಬಿ ಹರಿಯುತ್ತಿದೆ.

ತಲಕಾವೇರಿ, ಭಾಗಮಂಡಲ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಸತತ ಮಳೆಗೆ ಕೊಟ್ಟಮುಡಿ ಗ್ರಾಮದಲ್ಲಿ ಪ್ರವಾಹದ ಆತಂಕ ಎದುರಾಗಿದೆ. ನಾಪೋಕ್ಲು ಸುತ್ತಮುತ್ತ ಭತ್ತದ ಗದ್ದೆಗಳು ಜಲಾವೃತಗೊಂಡಿವೆ. ಮಡಿಕೇರಿ ನಗರದಲ್ಲಿ ಅಲ್ಲಲ್ಲಿ ಗಾಳಿಗೆ ಮರಗಳು ಉರುಳಿದ್ದು ವಿದ್ಯುತ್‌ ಕಡಿತಗೊಂಡಿದೆ. ಜಿಲ್ಲೆಯ ಬಹುತೇಕ ಹಳ್ಳಿಗಳು ಕತ್ತಲಲ್ಲಿ ಮುಳುಗಿವೆ.

ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು, ಬುಧವಾರ ನೀರಿನ ಮಟ್ಟ 2,824.54 ಅಡಿಯಷ್ಟು ನೀರಿನ ಸಂಗ್ರಹವಿದೆ. ಒಳಹರಿವು 6,018 ಕ್ಯೂಸೆಕ್‌ಗೆ ಏರಿಕೆ ಆಗಿದೆ.

ನೆರೆ- ಗಂಜಿ ಕೇಂದ್ರ ಆರಂಭ: ಧಾರವಾಡ, ಗದಗ, ಹಾವೇರಿ, ಬೆಳಗಾವಿ,  ಉತ್ತರ ಕನ್ನಡ, ಬಾಗಲಕೋಟೆ ಜಿಲ್ಲೆಯಾದ್ಯಂತ ಬುಧವಾರ ಬಿರುಸಿನ ಮಳೆಯಾಗಿದೆ.

ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲ್ಲೂಕಿನ ಬಡಗಣಿ ಹಳ್ಳದಲ್ಲಿ ನೆರೆ ಉಂಟಾಗಿದ್ದು, ಅಲ್ಲಿನ ಸುಮಾರು 29 ಮಂದಿಯನ್ನು ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ಬುಧವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ 24 ಗಂಟೆಗಳ ಅವಧಿಯಲ್ಲಿ ಉತ್ತರಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿದಿದೆ. ಹೊನ್ನಾವರ 201.6 ಮಿ.ಮೀ, ಕುಮಟಾ 196.6 ಮಿ.ಮೀ, ಕಾರವಾರ 150.6 ಮಿ.ಮೀ, ಸಿದ್ದಾಪುರ 140.6 ಮಿ.ಮೀ, ಅಂಕೋಲಾದಲ್ಲಿ 118.8 ಮಿ.ಮೀ, ಭಟ್ಕಳ 112.8 ಮಿ.ಮೀ, ಜೊಯಿಡಾ 87.6 ಮಿ.ಮೀ, ಶಿರಸಿ 71 ಮಿ.ಮೀ, ಯಲ್ಲಾಪುರ 51.4 ಮಿ.ಮೀ, ಹಳಿಯಾಳ 27 ಮಿ.ಮೀ, ಮುಂಡಗೋಡ 17.6 ಮಿ.ಮೀ ಮಳೆಯಾಗಿದೆ.

ಹೊನ್ನಾವರ ತಾಲ್ಲೂಕಿನ ಹಳದಿಪುರ ಗ್ರಾಮದ ಬಳಿ, ರಾಷ್ಟ್ರೀಯ ಹೆದ್ದಾರಿ–66ಕ್ಕೆ ಅಡ್ಡಲಾಗಿ ಬೃಹತ್‌ ಮರವೊಂದು ಬಿದ್ದು 4 ತಾಸು ಹೆದ್ದಾರಿ ಬಂದ್‌ ಆಗಿತ್ತು. ಗುಂಡಬಾಳ ಹಳ್ಳ, ಬಾಸ್ಕೇರಿ ಹಳ್ಳ ಉಕ್ಕಿ ಹರಿಯುತ್ತಿದ್ದು, ಪ್ರವಾಹದ ಭೀತಿ ಎದುರಾಗಿದೆ.

ಶಿರಸಿ, ಸಿದ್ದಾಪುರ, ಯಲ್ಲಾಪುರ, ಜೊಯಿಡಾ ಹಾಗೂ ಹಳಿಯಾಳದಲ್ಲಿ ಸಾಧಾರಣ ಮಳೆಯಾಗಿದೆ. ಬಾಗಲಕೋಟೆ ನಗರ ಸೇರಿದಂತೆ ಜಿಲ್ಲೆಯ ನವನಗರ, ಹುನಗುಂದ, ಇಳ ಕಲ್, ಅಮೀನಗಡ, ಕಮತಗಿ, ಗುಳೇದ ಗುಡ್ಡ, ಬಾದಾಮಿ, ಗದ್ದನಕೇರಿ ಕ್ರಾಸ್, ಕೆರೂರ, ಲೋಕಾಪುರ, ಕಲಾದಗಿ, ಮುಧೋಳದಲ್ಲಿ ಮಳೆಯಾಗಿದೆ.

ಧಾರವಾಡ, ಹಾವೇರಿ, ಗದಗ ಜಿಲ್ಲೆಯಾದ್ಯಂತ ಹಾಗೂ ಬೆಳಗಾವಿಯಲ್ಲಿ ಜಿಟಿ ಜಿಟಿ ಮಳೆಯಾಗಿದೆ.  ಬಳ್ಳಾರಿ, ಹೊಸಪೇಟೆಯಲ್ಲಿಯೂ ಮಳೆಯಾಗಿದೆ.
ಹಾಸನ ವರದಿ: ಎರಡು ದಿನಗಳಿಂದ ಜಿಲ್ಲೆಯಲ್ಲಿ ಮಳೆ ಬಿರುಸುಗೊಂಡಿದ್ದು, ಹಾಸನ, ಸಕಲೇಶಪುರ, ಹೆತ್ತೂರು, ವನಗೂರು, ಬಾಳ್ಳುಪೇಟೆ, ಅರಕಲ ಗೂಡು, ಚನ್ನರಾಯಪಟ್ಟಣ ತಾಲ್ಲೂಕು ಗಳಲ್ಲಿ ಉತ್ತಮ ಮಳೆಯಾಗಿದೆ.

ಎಚ್.ಡಿ.ಕೋಟೆ ವರದಿ: ತಾಲ್ಲೂಕಿನ ಕಬಿನಿ ಜಲಾಶಯಕ್ಕೆ18,000 ಕ್ಯೂಸೆಕ್ ನೀರು ಬುಧವಾರ ಹರಿದು ಬಂದಿದ್ದು, ಜಲಾಶಯದಲ್ಲಿ ನೀರಿನ ಪ್ರಮಾಣ ಒಂದೇ ದಿನದಲ್ಲಿ 8 ಅಡಿಯಷ್ಟು ಏರಿಕೆಯಾಗಿದೆ.

ಒಂದೇ ದಿನ 2 ಅಡಿ ಏರಿಕೆ: ಶಿವಮೊಗ್ಗ ಜಿಲ್ಲೆಯ ಎಲ್ಲೆಡೆ ಬುಧವಾರ ನಿರಂತರ ಮಳೆ ಸುರಿದಿದೆ. ಲಿಂಗನಮಕ್ಕಿ ಹಾಗೂ ಭದ್ರಾ ಜಲಾಶಯಗಳ ನೀರಿನ ಪ್ರಮಾಣ ಒಂದೇ ದಿನ 2 ಅಡಿ ಏರಿಕೆಯಾಗಿದೆ.

ಮಂಗಳವಾರ 116.10 ಇದ್ದ ಭದ್ರಾ ಜಲಾಶಯದ ನೀರಿನಮಟ್ಟ ಬುಧವಾರ 118.06 ಅಡಿಗೆ ತಲುಪಿದೆ. ಲಿಂಗನ ಮಕ್ಕಿ ನೀರಿನಮಟ್ಟ 1,755.90 ಅಡಿ ಯಿಂದ 1,758 ಅಡಿಗೆ ಏರಿಕೆಯಾಗಿದೆ.

ದಾವಣಗೆರೆ ವರದಿ: ದಾವಣಗೆರೆ ಜಿಲ್ಲೆಯ ಬಹುತೇಕ ಕಡೆ ಜಿಟಿಜಿಟಿ ಮಳೆಯಾಗಿದೆ. ಆದರೆ ಯಾವುದೇ ಹಾನಿಯಾದ ವರದಿಯಾಗಿಲ್ಲ.

ಮುಂಗಾರು ಬಿರುಸು: ಕರಾವಳಿ ಜಿಲ್ಲೆಗ ಳಾದ ದಕ್ಷಿಣ ಕನ್ನಡ, ಉಡುಪಿ, ಕಾಸರ ಗೋಡು ಮತ್ತು ಮಲೆನಾಡಿನ ಚಿಕ್ಕಮ ಗಳೂರಿನಲ್ಲಿ ಬುಧವಾರ ಮುಂಗಾರು ಮಳೆ ಮತ್ತಷ್ಟು ಬಿರುಸಾಗಿದ್ದು, ವರುಣನ ಅಬ್ಬರಕ್ಕೆ ಹಲವೆಡೆ ಮನೆಗಳು ಕುಸಿದಿವೆ. ರಸ್ತೆಗಳ ಮೇಲೆ ಮರಗಳು ಉರುಳಿ ಸಂಚಾರಕ್ಕೆ ಅಡ್ಡಿಯಾಗಿದೆ. ಗ್ರಾಮೀಣ ಪ್ರದೇಶದ ಹಲವು ಕಡೆಗಳಲ್ಲಿ ಗಾಳಿ, ಮಳೆಗೆ ಮರಗಳು ಉರುಳಿಬಿದ್ದು, ವಿದ್ಯುತ್‌ ಪೂರೈಕೆ ಸ್ಥಗಿತವಾಗಿದೆ.

ಕುಮಾರಧಾರ ನದಿಯ ನೀರಿನ ಮಟ್ಟದಲ್ಲಿ ಭಾರಿ ಏರಿಕೆಯಾಗಿದ್ದು, ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟ ಮುಳುಗಿದೆ. ಪುತ್ತೂರು ತಾಲ್ಲೂಕಿನ ಪಡುವನ್ನೂರು ಗ್ರಾಮದ ಸಜಂಕಾಡಿಯ ಪೂವಮ್ಮ ಎಂಬುವರ ಮನೆ ಮೇಲೆ ಮರ ಉರುಳಿಬಿದ್ದು ಹಾನಿಯಾಗಿದೆ. ಇದೇ ತಾಲ್ಲೂಕಿನ ಚಿಕ್ಕಮುಡ್ನೂರು ಗ್ರಾಮದ ಕೌರಿಗುಡ್ಡೆ ಎಂಬಲ್ಲಿ ಮಹಮ್ಮದ್‌ ಎಂಬುವರ ಮನೆಯ ಮೇಲೆ ಕಾಂಪೌಂಡ್‌ ಉರುಳಿಬಿದ್ದು ಹಾನಿ ಸಂಭವಿಸಿದೆ. ಪುತ್ತೂರು ತಾಲ್ಲೂಕಿನ ಅರಿಯಡ್ಕ ಗ್ರಾಮದ ಕೌಡಿಚ್ಚಾರುವಿನಲ್ಲಿ ಮರವೊಂದು ವಿದ್ಯುತ್‌ ಪ್ರಸರಣ ಮಾರ್ಗದ ಮೇಲೆ ಬಿದ್ದು, ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿದೆ.

ಉಡುಪಿಯಲ್ಲಿ ಕಡಲ್ಕೊರೆತ: ಉಡುಪಿ ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು ಮಲ್ಪೆ ತೊಟ್ಟಂ, ಹೂಡೆ, ಪಡುಕೆರೆ ಸೇರಿದಂತೆ ಹಲವು ಭಾಗಗಳಲ್ಲಿ ಕಡಲ್ಕೊರೆತ ಆರಂಭವಾಗಿದೆ. ಮರ ಉರುಳಿಬಿದ್ದು ಮೂರು ಮನೆಗಳಿಗೆ ಹಾನಿ ಸಂಭವಿಸಿದೆ.  ಕುಂದಾಪುರ ತಾಲ್ಲೂಕಿನ ಕಂಡ್ಲೂರು ಗ್ರಾಮದ ಜಯಲಕ್ಷ್ಮೀ ಮೊಗೇರ್ತಿ ಅವರ ಮನೆಯ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಕಾರ್ಕಳ ಕಸಬಾ ಗ್ರಾಮದ ವಿಶ್ವನಾಥ ಮೊಯ್ಲಿ, ಅಲೆವೂರಿನ ಪಾರ್ವತಿ ಹಾಗೂ ಗಿಳಿಯಾರಿನ ಅಂಬಾ ಪೂಜಾರಿ ಎಂಬುವರ ಮನೆಗಳ ಮೇಲೆ ಮರಗಳು ಬಿದ್ದು ಹಾನಿ ಸಂಭವಿಸಿದೆ.

ಚಿಕ್ಕಮಗಳೂರಿನಲ್ಲಿ ಮಳೆಯ ಅಬ್ಬರ: ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಬುಧವಾರ ಕೂಡ ಮುಂಗಾರು ಮಳೆ ಅಬ್ಬರ ಮುಂದುವರಿದಿದೆ.
ಬಡಗಣಿಯಲ್ಲಿ ನೆರೆ- ಗಂಜಿ ಕೇಂದ್ರ ಆರಂಭ: ಧಾರವಾಡ, ಉತ್ತರ ಕನ್ನಡ, ಗದಗ, ಹಾವೇರಿ, ಬೆಳಗಾವಿ, ಬಾಗಲ ಕೋಟೆ ಜಿಲ್ಲೆಯಾದ್ಯಂತ ಬುಧವಾರ ಬಿರುಸಿನ ಮಳೆಯಾಗಿದೆ.

ಮಳೆ: ಅಂತ್ಯಕ್ರಿಯೆಗೂ ತೊಂದರೆ
ಕಾರವಾರ:  ನಗರದಲ್ಲಿ ಎಡೆಬಿಡದೇ ಸುರಿಯುತ್ತಿರುವ ಭಾರಿ ಮಳೆ ಯಿಂದಾಗಿ, ವ್ಯಕ್ತಿಯೊಬ್ಬರ ಅಂತಿಮ ವಿಧಿವಿಧಾನವನ್ನೂ ಸುಸೂತ್ರವಾಗಿ ನೆರವೇರಿಸಲು ಸಾಧ್ಯವಾಗಲಿಲ್ಲ.

ಕಿಡ್ನಿ ವೈಫಲ್ಯದಿಂದ ಬಳಲು ತ್ತಿದ್ದರು ಎನ್ನಲಾದ ಇಲ್ಲಿಯ ಪದ್ಮನಾ ಭನಗರದ ನಿವಾಸಿ, ಸಂತೋಷ್‌ ನಾಯ್ಕ (35) ಅವರನ್ನು ಮಂಗಳ ವಾರ ಗೋವಾದಿಂದ ಕಾರವಾರಕ್ಕೆ ಕರೆತರುವಾಗ ರಕ್ತದೊತ್ತಡ ಏಕಾಏಕಿ ಕಡಿಮೆಯಾಗಿ ದಾರಿಯಲ್ಲಿಯೇ ಅವರು ಮೃತ ಪಟ್ಟರು. ಆದರೆ, ಅವರ ಮನೆಗೆ ಮಳೆನೀರು ನುಗ್ಗಿ, ಶವವನ್ನು ಒಳಗೆ ಒಯ್ಯಲಾಗದಂಥ ಪರಿಸ್ಥಿತಿ ಇತ್ತು. ಇದರಿಂದ ಶವವನ್ನು ಜಿಲ್ಲಾ ಆಸ್ಪತ್ರೆ ಯಲ್ಲೇ ಇರಿಸಿದ್ದ ಕುಟುಂಬದವರು, ಬುಧವಾರ ಬೆಳಿಗ್ಗೆ ಮನೆಗೆ ತಂದರು. ಆದರೆ ಆಗಲೂ ನೀರು ಸರಿದಿರಲಿಲ್ಲ. ಬಳಿಕ, ಮನೆಯ ಹೊರಗೆ ಮಂಚದ ಮೇಲೆ ಶವವನ್ನು ಇಟ್ಟು, ಮಳೆಯಲ್ಲಿಯೇ ಅಂತಿಮ ವಿಧಿ ವಿಧಾನ ನೆರವೇರಿಸಲಾಯಿತು. ನಂದನಗದ್ದಾ ಸ್ಮಶಾನದಲ್ಲಿ ಸಂಜೆ ಅಂತ್ಯಕ್ರಿಯೆ ನೆರವೇರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT