ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಭಾಷೆ ಉಳಿವಿಗೆ ಸಹಿ ಸಂಗ್ರಹ ಅಭಿಯಾನ

ಸಾಹಿತಿ ಚಂದ್ರಶೇಖರ ಕಂಬಾರ ಅಭಿಮತ
Last Updated 21 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಸಂಸತ್‌ನಲ್ಲಿ ಕಾಯ್ದೆ ಯೊಂದನ್ನು ಹೊರತರುವ ಮೂಲಕ ಕನ್ನಡ ಮೊದಲಾದ ಪ್ರಾಂತೀಯ ಭಾಷೆಗಳಿಗೆ ಶಕ್ತಿ ತುಂಬಬೇಕು. ಇದಕ್ಕಾಗಿ ಸಹಿ ಸಂಗ್ರಹ ಅಭಿಯಾನದ ಅಗತ್ಯವಿದೆ’ ಎಂದು ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅವರು ಅಭಿಪ್ರಾಯಪಟ್ಟರು.

81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕವಿ ಡಾ.ಸಿದ್ದಲಿಂಗಯ್ಯ ಅವರನ್ನು ಸನ್ಮಾನಿಸಲು ಕನ್ನಡ ಚಳವಳಿ ವಾಟಾಳ್ ಪಕ್ಷವು ನಗರದಲ್ಲಿ ಭಾನುವಾರ ಏರ್ಪಡಿಸಿದ್ದ  ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸಂಸತ್ತಿನಲ್ಲಿ ಕಾಯ್ದೆ ಜಾರಿ ಮಾಡುವಂತೆ  ಚಿಂತಕರು, ಬುದ್ಧಿಜೀವಿಗಳು, ಪ್ರಗತಿಪರರು ಹಾಗೂ ಕನ್ನಡಪರ ಸಂಘಟನೆಗಳು ಸಹಿ ಸಂಗ್ರಹಿಸಬೇಕು. ಮಾತೃಭಾಷೆ ದಿನವಾದ ಫೆ.22ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಹಿ ಸಂಗ್ರಹವನ್ನು ಸಲ್ಲಿಸಿ, ಮನವಿ ಮಾಡಬೇಕು’ ಎಂದು  ತಿಳಿಸಿದರು.

ಸಮ್ಮೇಳನದ ಅಧ್ಯಕ್ಷರಾಗಿ  ಸಿದ್ದಲಿಂಗಯ್ಯ ಅವರ ಆಯ್ಕೆ ಕುರಿತು ಮಾತನಾಡಿದ ಅವರು ‘ಶೋಷಿತರ ಮತ್ತು ಕೆಳವರ್ಗದ ದನಿಯಾಗಿ ಸಿದ್ದ ಲಿಂಗಯ್ಯ ಅವರು ಗುರುತಿಸಿಕೊಂಡಿದ್ದಾರೆ. ಇವರು ಕೇವಲ ದಲಿತ ಕವಿಯಲ್ಲ, ಕನ್ನಡದ ಕವಿ’ ಎಂದು ಬಣ್ಣಿಸಿದರು.

ಸಿದ್ದಲಿಂಗಯ್ಯ ಅವರು ಮಾತನಾಡಿ, ‘ಸಮ್ಮೇಳನದಲ್ಲಿ ಕನ್ನಡ ಭಾಷೆಗೆ ಇರುವ ಆತಂಕಗಳ ಬಗ್ಗೆ ಚರ್ಚೆ ನಡೆಸಲಾಗುವುದು. ನಂತರ ಈ ಬಗ್ಗೆ   ಜನಾಂದೋಲನ ರೂಪಿಸಲಾಗುವುದು. ಸಾಹಿತಿ ದೇವನೂರ ಮಹಾದೇವ ಅವರು ಚರ್ಚೆಯಾಗಬೇಕಾದ ವಿಷಯಗಳ ಬಗ್ಗೆ ನನಗೆ ಸೂಚನೆ ನೀಡಿದ್ದಾರೆ’ ಎಂದರು.

‘ವ್ಯವಸ್ಥೆಯೊಳಗೆ ಇದ್ದುಕೊಂಡೇ ಕನ್ನಡದ ಉಳಿವಿಗೆ ಹೋರಾಟ ಮಾಡುತ್ತೇನೆ. ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರು  ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ಆಶಯದ ಜೊತೆಗೆ ಅಂಬೇಡ್ಕರ್ ಆಶಯಗಳನ್ನು ಜಾರಿಗೊಳಿಸಿದ್ದಾರೆ’ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲಿಕ ಹಾಲಂಬಿ ಮಾತನಾಡಿ, ‘ಸಿದ್ದಲಿಂಗಯ್ಯ ಅವರಿಗೆ ದಲಿತ ಎನ್ನುವ ಕಾರಣಕ್ಕೆ ಅಧ್ಯಕ್ಷ ಸ್ಥಾನ ನೀಡಿಲ್ಲ. ಅವರ ಸಾಹಿತ್ಯದ ಮೌಲಿಕತೆಯ ಗಟ್ಟಿತನದ ಮೂಲಕ ಅಧ್ಯಕ್ಷ ಸ್ಥಾನವನ್ನು ಪಡೆದು ಕೊಂಡಿದ್ದಾರೆ’ ಎಂದು ಹೇಳಿದರು.
‘ಅಧ್ಯಕ್ಷ ಸ್ಥಾನ ನೀಡಿರುವುದು  ಭಿಕ್ಷೆ ಯಲ್ಲ, ಅದು ಅವರ ಸೃಜನಶೀಲ ತೆಯ ಪ್ರತಿಭೆಗೆ ಸಿಕ್ಕ ಗೌರವ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT