ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭೆಗೆ ಚಿದಂಬರಂ: ಸಿ.ಎಂ ತಣ್ಣೀರು

Last Updated 23 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಸೋಮವಾರ ಅಧಿಕಾರ ತ್ಯಜಿಸುವ ಕೇಂದ್ರ ಸರ್ಕಾರದ ಹಣಕಾಸು ಮಂತ್ರಿ ಚಿದಂಬರಂ ಅವರನ್ನು ಕರ್ನಾಟಕದಿಂದ ರಾಜ್ಯಸಭೆಗೆ ಕಳುಹಿಸುವ ಕಾಂಗ್ರೆಸ್‌ ಹೈಕಮಾಂಡ್‌ ಉತ್ಸಾಹಕ್ಕೆ ಮುಖ್ಯ­ಮಂತ್ರಿ ಸಿದ್ದರಾಮಯ್ಯ ತಣ್ಣೀರು ಎರಚಿದ್ದಾರೆ.

ತಮಿಳುನಾಡಿನ ಶಿವಗಂಗೆ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಲು ನಿರಾಕರಿಸಿದ ಚಿದಂಬರಂ ಅವರನ್ನು ಕಾಂಗ್ರೆಸ್‌ ಹೈಕಮಾಂಡ್‌ ಕರ್ನಾಟಕ ವಿಧಾನಸಭೆ­ಯಿಂದ ರಾಜ್ಯ ಸಭೆಗೆ ಕಳುಹಿಸಲು ಉದ್ದೇಶಿಸಿದೆ. ಕಳೆದ ವಾರ ಬೆಂಗಳೂರಿಗೆ ತೆರಳಿದ್ದ ರಾಜ್ಯದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ ಸಿಂಗ್‌ ಮುಖ್ಯಮಂತ್ರಿ ಮತ್ತು ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌ ಅವರ ಮುಂದೆ ಈ ಪ್ರಸ್ತಾವ ಇಟ್ಟರು.

ದಿಗ್ವಿಜಯ್‌ಸಿಂಗ್‌ ಅವರ ಮಾತನ್ನು ತಾಳ್ಮೆಯಿಂದ ಕೇಳಿಸಿಕೊಂಡ ಸಿದ್ದ­ರಾಮಯ್ಯ ‘ದಯವಿಟ್ಟು ರಾಜ್ಯದಿಂದ ಚಿದಂಬರಂ ಅವರನ್ನು ರಾಜ್ಯಸಭೆಗೆ ಕಳುಹಿ­­ಸುವುದು ಬೇಡ’ ಎಂದು ವಿನಮ್ರವಾಗಿ ಕೈ ಮುಗಿದರು. ಮುಖ್ಯಮಂತ್ರಿಗಳ ಮನವಿಗೆ ದಿಗ್ವಿಜಯ್‌ ಸಿಂಗ್‌ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಪರಮೇಶ್ವರ್‌ ಅವರು ಏನೂ ಹೇಳಲಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಹಿಂಜರಿದ ಚಿದಂಬರಂ ಅವರನ್ನು ರಾಜ್ಯಸಭೆಗೆ ಕಳುಹಿಸುವುದು ಸರಿಯಾದ ಕ್ರಮವಲ್ಲ. ಅಲ್ಲದೆ, ಕರ್ನಾಟಕ ಬಹು ಕಾಲದಿಂದ  ತಮಿಳುನಾಡಿನ ಜತೆ ಕಾವೇರಿ ವಿವಾದ ಹೊಂದಿದೆ. ಈ ಹಿನ್ನೆಲೆಯಲ್ಲಿ ತಮಿಳು­ನಾಡಿನ ರಾಜಕಾರಣಿಯೊಬ್ಬರನ್ನು ಕರ್ನಾಟ­ಕದಿಂದ ರಾಜ್ಯಸಭೆಗೆ ಕಳುಹಿ­ಸಿದರೆ ತಪ್ಪು ಸಂದೇಶ ರವಾನಿಸಿ­ದಂತಾಗುತ್ತದೆ ಎಂಬ ಅಭಿಪ್ರಾಯ ಮುಖ್ಯಮಂತ್ರಿ ಅವರಿಗೆ ಇದ್ದಂತಿದೆ ಎಂದು ಮೂಲಗಳು ಹೇಳಿವೆ.

ಜೂನ್‌ 19ರಂದು ಚುನಾವಣೆ:
ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಮಾಜಿ ಸಚಿವ ಎಸ್‌.ಎಂ. ಕೃಷ್ಣ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್‌, ಬಿಜೆಪಿ ಸದಸ್ಯರಾದ ಪ್ರಭಾಕರ ಕೋರೆ ಹಾಗೂ ಎಂ. ರಾಮಾ ಜೋಯಿಸ್‌ ಅವರ ಅವಧಿ ಜೂನ್‌ 24ರಂದು ಮುಗಿಯಲಿದೆ. ಈ ನಾಲ್ಕು ಸ್ಥಾನಗಳಿಗೆ ಜೂನ್‌ 19ರಂದು ಚುನಾವಣೆ ನಡೆಯ­ಲಿದೆ. ನಾಮಪತ್ರ ಸಲ್ಲಿಸಲು ಜೂನ್ 9 ಕೊನೆಯ ದಿನ.

ಪ್ರತಿ ಸದಸ್ಯರ ಆಯ್ಕೆಗೆ 45 ಸದಸ್ಯರ ಬೆಂಬಲ ಅಗತ್ಯವಿದೆ. ರಾಜ್ಯ ವಿಧಾನ­ಸಭೆಯಲ್ಲಿ ಕಾಂಗ್ರೆಸ್‌ ಸದಸ್ಯರ ಬಲ 123. ರಾಜ್ಯಸಭೆಗೆ ಇಬ್ಬರು ಅಭ್ಯರ್ಥಿ­ಗಳನ್ನು ಆಯ್ಕೆ ಮಾಡಿದ ಬಳಿಕ 33 ಮತಗಳು ಹೆಚ್ಚುವರಿಯಾಗಿ ಉಳಿಯ­ಲಿವೆ. ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಬೇರೆ ವಿರೋಧ ಪಕ್ಷಗಳ ಬೆಂಬಲ ಪಡೆಯಬೇಕಾಗುತ್ತದೆ. ಬಿಜೆಪಿಗೆ ಒಬ್ಬರನ್ನು ಆಯ್ಕೆ ಮಾಡುವ ಸಾಮರ್ಥ್ಯವಿದೆ. ಜಾತ್ಯತೀತ ಜನತಾ­ದಳಕ್ಕೆ ಒಬ್ಬರನ್ನು ಆಯ್ಕೆ ಮಾಡಲು ಕೆಲವು ಮತಗಳು ಕಡಿಮೆ ಆಗಲಿದೆ.

ಎಐಸಿಸಿ ಕಚೇರಿಯಲ್ಲಿ ಲಭ್ಯವಿರುವ ಮಾಹಿತಿ­ಯಂತೆ ಎಸ್‌.ಎಂ. ಕೃಷ್ಣ, ಹರಿ­ಪ್ರಸಾದ್‌ ಮರು ಆಯ್ಕೆಯಾಗುವ ಸಾಧ್ಯತೆ­ಯನ್ನು ತಳ್ಳಿಹಾಕುವಂತಿಲ್ಲ. ಮೇಲ್ಮನೆಗೆ ಯಾರು ಸೂಕ್ತ? ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೇ? ಎನ್ನುವ ತೀರ್ಮಾನವನ್ನು ಸಿದ್ದ­ರಾಮಯ್ಯ ಅಂತಿಮವಾಗಿ ಹೈಕ­ಮಾಂಡ್‌ಗೆ ಬಿಟ್ಟಿದ್ದಾರೆ. ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಮರುದಿನ ದೆಹಲಿಗೆ ಬಂದಿದ್ದ ಮುಖ್ಯಮಂತ್ರಿ ಹಿರಿಯ ಮುಖಂಡರಿಗೆ ಎಲ್ಲ ವಿಷಯಗಳನ್ನು ಸೂಚ್ಯವಾಗಿ ಹೇಳಿದ್ದಾರೆ. ಸ್ಥಳೀಯ ಅಭ್ಯರ್ಥಿಗಳಿಗೆ ಅವಕಾಶ ಕೊಟ್ಟರೆ ಒಳ್ಳೆಯದು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT