ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭೆ: ಆಸ್ಕರ್‌, ಜೈರಾಂಗೆ ಟಿಕೆಟ್‌?

ಮೂರನೇ ಅಭ್ಯರ್ಥಿಯಾಗಿ ರಾಮಮೂರ್ತಿ ಸಂಭವ
Last Updated 26 ಮೇ 2016, 19:41 IST
ಅಕ್ಷರ ಗಾತ್ರ

ನವದೆಹಲಿ: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್‌ ಹೈಕಮಾಂಡ್‌ ಶುಕ್ರವಾರ ಅಂತಿಮಗೊಳಿಸಲಿದೆ. ಶಾಸಕರ ಬಲದ ಆಧಾರದಲ್ಲಿ ಅದು ಎರಡು ಸ್ಥಾನಗಳನ್ನು ಸುಲಭವಾಗಿ ಗೆಲ್ಲಬಹುದಾಗಿದ್ದು, ಆಸ್ಕರ್‌ ಫರ್ನಾಂಡಿಸ್‌ ಮತ್ತು ಜೈರಾಂ ರಮೇಶ್‌ ಹೆಸರುಗಳು ಮುಂಚೂಣಿಯಲ್ಲಿವೆ.

ಮೂರನೇ ಸ್ಥಾನಕ್ಕೆ ಕಾಂಗ್ರೆಸ್‌ಗೆ 15 ಮತಗಳು ಕಡಿಮೆಯಾಗಲಿದ್ದು, ಐವರು ಸಹಸದಸ್ಯರು ಹಾಗೂ ಕೆಲವು ಜೆಡಿಎಸ್‌ ಶಾಸಕರ ಮತಗಳ ಮೇಲೆ ಕಣ್ಣಿಟ್ಟಿದೆ. ಮೂರನೇ ಅಭ್ಯರ್ಥಿಯಾಗಿ ನಿವೃತ್ತ ಪೊಲೀಸ್‌ ಅಧಿಕಾರಿ ಕೆ.ಸಿ. ರಾಮಮೂರ್ತಿ ಅವರನ್ನು ಕಣಕ್ಕೆ ಇಳಿಸುವುದು ಬಹುತೇಕ ಖಚಿತವಾಗಿದೆ.

ರಾಜ್ಯಸಭೆ ಮತ್ತು ವಿಧಾನಪರಿಷತ್‌ ಚುನಾವಣೆಯ ಅಭ್ಯರ್ಥಿಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌ ಗುರುವಾರ ದೆಹಲಿಗೆ ಬಂದಿದ್ದಾರೆ. ಇಬ್ಬರೂ ನಾಯಕರು ರಾತ್ರಿ ಸಮಾಲೋಚನೆ ನಡೆಸಿದರು.

ರಾಜ್ಯದ ಉಸ್ತುವಾರಿ ಕಾರ್ಯದರ್ಶಿ ದಿಗ್ವಿಜಯ್‌ ಸಿಂಗ್‌ ಅವರನ್ನು ಶುಕ್ರವಾರ ಮುಖ್ಯಮಂತ್ರಿ ಹಾಗೂ ಪಿಸಿಸಿ ಅಧ್ಯಕ್ಷರು ಭೇಟಿ ಮಾಡಿದ ಬಳಿಕ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಅವರೊಂದಿಗೆ ಅಂತಿಮವಾಗಿ ಮಾತುಕತೆ ನಡೆಸಲಿದ್ದಾರೆ.

‘ರಾಜ್ಯಸಭೆ ಅಭ್ಯರ್ಥಿಗಳ ಆಯ್ಕೆ ಅಧಿಕಾರವನ್ನು ಹೈಕಮಾಂಡ್‌ ನಾಯಕರಿಗೆ ಬಿಡುತ್ತೇವೆ. ವಿಧಾನ ಪರಿಷತ್ತಿನ ನಾಲ್ಕು ಸ್ಥಾನಗಳಿಗೆ 200 ಆಕಾಂಕ್ಷಿಗಳಿದ್ದಾರೆ’ ಎಂದು
ಸಿದ್ದ­ರಾಮಯ್ಯ ತಿಳಿಸಿದರು.

ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಲು ವೀರಣ್ಣ ಮತ್ತಿಕಟ್ಟಿ,  ರಾಣಿ ಸತೀಶ್‌, ಅಲ್ಲಂ ವೀರಭದ್ರಪ್ಪ, ನಜೀರ್‌ ಅಹಮದ್‌, ಸಲೀಂ ಅಹಮದ್‌, ಮಂಜುನಾಥ ಕುನ್ನೂರ, ಎನ್‌. ಮಂಜುನಾಥ್‌, ಮಲ್ಲಾಜಮ್ಮ, ಸೂರ್ಯನಾರಾಯಣ ರೆಡ್ಡಿ, ಬ್ರಿಜೇಶ್‌ ಕಾಳಪ್ಪ, ನಾಸಿರ್‌ ಅಹಮದ್‌, ಮನೋಹರ ಐನಾಪುರ, ಅನಂತ್‌ ಪ್ರಯತ್ನ ನಡೆಸುತ್ತಿದ್ದಾರೆ.

ರಮ್ಯಾಗೆ ಸ್ಥಾನ
ರಾಜ್ಯ ವಿಧಾನ ಪರಿಷತ್ತಿಗೆ ಮೂವರನ್ನು ನಾಮಕರಣ ಮಾಡಲು ಅವಕಾಶವಿದ್ದು ಚಿತ್ರ ನಟಿ ರಮ್ಯಾ, ಸಾಹಿತಿಗಳಾದ ಕೆ. ಮರುಳಸಿದ್ದಪ್ಪ, ಎಸ್.ಜಿ. ಸಿದ್ದರಾಮಯ್ಯ,  ಬರಗೂರು ರಾಮಚಂದ್ರಪ್ಪ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ  ಹನುಮಂತಯ್ಯ ಅವರ ಹೆಸರುಗಳು ಪರಿಶೀಲನೆಯಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT