ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಜೂನಿಯರ್‌ ಹಾಕಿ ಸಾಮರ್ಥ್ಯ ಗೊತ್ತಾ?

Last Updated 26 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಕರ್ನಾಟಕದಲ್ಲಿ ಹಾಕಿ ಕ್ರೀಡೆಗೆ ಸಂಬಂಧಿಸಿದ ಸೌಲಭ್ಯ ಚೆನ್ನಾಗಿಯೇ ಇದೆ. ಆದರೆ, ಈ ಕ್ರೀಡೆ ಕೆಲವೇ ಪ್ರದೇಶಗಳಿಗೆ ಸೀಮಿತವಾದಂತಿದೆ. ರಾಷ್ಟ್ರೀಯ ಸೀನಿಯರ್‌ ತಂಡದಲ್ಲಿ ಸ್ಥಾನ ಪಡೆಯುತ್ತಿರುವ ಆಟಗಾರರನ್ನೇ ಗಮನಿಸಿ. ಕೊಡಗು ಅಥವಾ ಬೆಂಗಳೂರಿನ ಆಟಗಾರರೇ ಹೆಚ್ಚಿರುತ್ತಾರೆ. ಭಾರತ ಜೂನಿಯರ್‌ ಹಾಕಿ ತಂಡದ ಕೋಚ್‌ ಹರೇಂದರ್‌ ಸಿಂಗ್‌ ಹೇಳಿದ ಮಾತಿನಲ್ಲಿ ಅರ್ಥವಿದೆ.

ರಾಷ್ಟ್ರೀಯ ತಂಡದಲ್ಲಿರುವ ವಿ.ಆರ್. ರಘುನಾಥ್‌, ಎಸ್.ವಿ.ಸುನಿಲ್‌, ಎಸ್‌.ಕೆ.ಉತ್ತಪ್ಪ, ನಿಕಿನ್‌ ತಿಮ್ಮಯ್ಯ ಅವರು ಕೊಡಗು ಮೂಲದ ಆಟಗಾರರು. ಕೊಡಗು ಹೊರತುಪಡಿಸಿದರೆ ಉಳಿದ ಪ್ರದೇಶಗಳಿಂದ ತಂಡದಲ್ಲಿ ಸ್ಥಾನ ಪಡೆಯುತ್ತಿರುವ ಆಟಗಾರರ ಸಂಖ್ಯೆ ವಿರಳ.
‘ಮಕ್ಕಳು ಯಾವಾಗಲೂ ತಮ್ಮ ಹೀರೊಗಳನ್ನು ಹಿಂಬಾಲಿಸುತ್ತಾರೆ. ದೇಶ ಕಂಡ ಕೆಲವು ಉತ್ತಮ ಆಟಗಾರರು ಕೊಡಗಿನಿಂದ ಬಂದಿದ್ದಾರೆ.

ಹಾಗಾಗಿ ಈ ಜಿಲ್ಲೆಯಿಂದ ಉತ್ತಮ ಆಟಗಾರರು ಮುಂದೆಯೂ ಬರುತ್ತಲೇ ಇರುತ್ತಾರೆ. ಹಾಕಿ ಆಡಳಿತಗಾರರು ಬೇರೆ ಜಿಲ್ಲೆಗಳತ್ತ ಚಿತ್ತ ಹರಿಸಿ ಕಾರ್ಯನಿರ್ವಹಿಸಬೇಕು. ಪ್ರತಿಭಾವಂತ ಯುವ ಆಟಗಾರರನ್ನು ಗುರುತಿಸಿ ತರಬೇತಿ ನೀಡಬೇಕು’ ಎಂಬುದು ಹರೇಂದರ್‌ ಸಲಹೆ. ವಿಪರ್ಯಾಸವೆಂದರೆ ರಾಷ್ಟ್ರೀಯ ಜೂನಿಯರ್‌ ತಂಡದಲ್ಲಿ ರಾಜ್ಯದ ಒಬ್ಬ ಆಟಗಾರನೂ ಇಲ್ಲ. ಇದು ರಾಜ್ಯ ಜೂನಿಯರ್‌ ಹಾಕಿಯ ದುಸ್ಥಿತಿಯನ್ನು ಬಿಚ್ಚಿಡುತ್ತದೆ. ಮುಂದೇನು ಎಂಬ ಪ್ರಶ್ನೆ ಹುಟ್ಟುಹಾಕುತ್ತದೆ.

ಮೈಸೂರಿನಲ್ಲಿ ನಡೆದ ರಾಷ್ಟ್ರೀಯ ಜೂನಿಯರ್‌ ‘ಎ’ ಡಿವಿಷನ್‌ ಚಾಂಪಿಯನ್‌ಷಿಪ್‌ನಲ್ಲಿ ಕೂಡ ರಾಜ್ಯ ತಂಡ ಗುಂಪು ಹಂತದಲ್ಲಿಯೇ ನಿರ್ಗ ಮಿಸಿತು. ಆಡಿದ ಮೂರು ಪಂದ್ಯಗಳಲ್ಲಿ ಗೆದ್ದಿದ್ದು ಒಂದರಲ್ಲಿ ಮಾತ್ರ. ಇದೇ ಗುಂಪಿನಲ್ಲಿದ್ದ ಒಡಿಶಾ ಚಾಂಪಿಯನ್ ಆಗಿದ್ದು ಬೇರೆ ಮಾತು.
ಈ ಚಾಂಪಿಯನ್‌ಷಿಪ್‌ನಲ್ಲಿ ಒಡಿಶಾ, ಪಂಜಾಬ್‌, ಹರಿಯಾಣ, ಜಾರ್ಖಂಡ್‌ ತಂಡಗ ಳದ್ದೇ ಪ್ರಾಬಲ್ಯ.

‘ಅತ್ಯುತ್ತಮ ಆಟಗಾರ’ ಪ್ರಶಸ್ತಿ ಪಡೆದಿದ್ದು ಕೂಡ ಈ ರಾಜ್ಯಗಳ ಆಟಗಾರರು. ಭಾರತ ಸೀನಿಯರ್‌ ಹಾಕಿ ತಂಡದಲ್ಲಿ ಈಗಲೂ ಕರ್ನಾಟಕದ್ದೇ ಮೇಲುಗೈ. ನಾಲ್ಕೈದು ಮಂದಿಯಾ ದರೂ ಇದ್ದೇ ಇರುತ್ತಾರೆ. ಇದೇ ಮಾತನ್ನು ಜೂನಿ ಯರ್‌ ಮಟ್ಟದಲ್ಲಿ ಹೇಳುವಂತಿಲ್ಲ. ರಾಷ್ಟ್ರೀಯ ಶಿಬಿರದಲ್ಲಿ ಪಾಲ್ಗೊಳ್ಳುವವರ ಸಂಖ್ಯೆಯೂ ಕಡಿಮೆ.

ಉತ್ತಮ ಸೌಲಭ್ಯವಿದೆ
ಹರೇಂದರ್‌ ಹೇಳಿದಂತೆ ರಾಜ್ಯದಲ್ಲಿ ಸೌಲಭ್ಯಗಳಿಗೆ ಕೊರತೆ ಇಲ್ಲ. ಭಾರತ ಕ್ರೀಡಾ ಪ್ರಾಧಿಕಾರದಲ್ಲಿ ಪದೇ ಪದೇ ರಾಷ್ಟ್ರೀಯ ಶಿಬಿರಗಳು ನಡೆಯುತ್ತಲೇ ಇರುತ್ತವೆ. ಹೆಸರಾಂತ ಹಾಕಿ ಆಟಗಾರರು ಇಲ್ಲಿದ್ದಾರೆ. ಹಾಗಾಗಿ ಸಲಹೆ, ಮಾರ್ಗದರ್ಶನಕ್ಕೂ ಕೊರತೆ ಇಲ್ಲ. ಆದರೆ, ಯುವ ಪ್ರತಿಭೆಗಳು ಕಾಣುತ್ತಿಲ್ಲ.

ನಿರಾಸಕ್ತಿಯೇ ಕಾರಣ
ಈ ಸಮಸ್ಯೆಗೆ ‘ಹಾಕಿ ಕರ್ನಾಟಕ’ ಕಾರ್ಯದರ್ಶಿ ಎ.ಬಿ.ಸುಬ್ಬಯ್ಯ ಅವರ ಪ್ರತಿಕ್ರಿಯೆ ಹೀಗಿದೆ ನೋಡಿ. ‘ರಾಜ್ಯದಲ್ಲಿ ಜೂನಿಯರ್‌ ಮಟ್ಟದಲ್ಲಿ ಹಿನ್ನಡೆಗೆ ಜಿಲ್ಲಾ ಹಾಕಿ ಸಂಸ್ಥೆಗಳ ನಿರಾಸಕ್ತಿಯೇ ಕಾರಣ. ಬೇಸಿಗೆ ಶಿಬಿರ ಆಯೋಜಿಸಲು ಹಿಂದೆ ಮುಂದೆ ನೋಡುತ್ತಾರೆ. ಉತ್ತರ ಕರ್ನಾಟಕಕ್ಕೆ ಹಾಕಿ ಕರ್ನಾಟಕ ವತಿಯಿಂದಲೇ ಕ್ರೀಡಾ ಸಾಮಗ್ರಿ ಒದಗಿಸುತ್ತಿದ್ದೇವೆ. ಆದರೂ ಪ್ರಯೋಜನ ವಾಗುತ್ತಿಲ್ಲ’ ಎನ್ನುತ್ತಾರೆ. 

‘ಜಿಲ್ಲೆಗಳಲ್ಲಿ ಹಾಕಿ ಸುಧಾರಣೆಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.  ಎರಡು ವರ್ಷಗಳಿಂದ ಮೈಸೂರಿನಲ್ಲಿ ರಾಷ್ಟ್ರೀಯ ಜೂನಿಯರ್ ಟೂರ್ನಿಗಳನ್ನು ಆಯೋಜಿಸುವ ಮೂಲಕ ಪ್ರೋತ್ಸಾಹ ನೀಡಲಾಗುತ್ತಿದೆ’ ಎಂದು ಹೇಳುತ್ತಾರೆ.

ಫಿಟ್‌ನೆಸ್‌ ಸಮಸ್ಯೆ
ಸದ್ಯದ ಜೂನಿಯರ್‌ ತಂಡದತ್ತ ಚಿತ್ತ ಹರಿಸಿದರೆ ಪ್ರಮುಖವಾಗಿ ಎದ್ದು ಕಾಣುವುದು ಫಿಟ್‌ನೆಸ್‌ ಸಮಸ್ಯೆ. ಇದೇ ಮಾತನ್ನು ಹರೇಂದರ್‌ ಕೂಡ ಹೇಳಿದರು. ಉಳಿದ ರಾಜ್ಯಗಳ ಆಟಗಾರರಿಗೆ ಹೋಲಿಸಿದರೆ ರಾಜ್ಯದ ಆಟಗಾರರು ಫಿಟ್‌ನೆಸ್‌ ಸಮಸ್ಯೆ ಎದುರಿಸುತ್ತಿದ್ದಾರೆ.
ರಾಜ್ಯ ತಂಡದ ಜೂನಿಯರ್‌ ಕೋಚ್‌ ಸಿ.ಯು.ಅಶ್ವಥ್‌ ಈ ಮಾತನ್ನು ಒಪ್ಪುವುದಿಲ್ಲ. ‘ಹುಡುಗರು ಚಿಕ್ಕವರಂತೆ ಕಾಣುತ್ತಾರೆ ಅಷ್ಟೆ. ಖಂಡಿತ ಫಿಟ್‌ನೆಸ್‌ ಸಮಸ್ಯೆ ಇಲ್ಲ. ಈ ಚಾಂಪಿಯನ್‌ಷಿಪ್‌ನಲ್ಲಿ ಒಡಿಶಾ ಎದುರು ಗೆದ್ದಿದ್ದರೆ ಖಂಡಿತ ನಾವೇ ಫೈನಲ್ ತಲುಪುತ್ತಿದ್ದೆವು’ ಎನ್ನುತ್ತಾರೆ.

‘ಈ ತಂಡದಲ್ಲಿರುವ ನಾಲ್ಕೈದು ಆಟಗಾರರು 3ರಿಂದ 4 ವರ್ಷಗಳಲ್ಲಿ ರಾಷ್ಟ್ರೀಯ ಸೀನಿಯರ್‌ ತಂಡದಲ್ಲಿ ಆಡುತ್ತಾರೆ ಎಂಬ ಭರವಸೆ ನನಗಿದೆ. ನಿಕಿನ್‌ ತಿಮ್ಮಯ್ಯ, ಎಸ್‌.ಕೆ.ಉತ್ತಪ್ಪ ಕೂಡ ಜೂನಿಯರ್‌ ತಂಡದಲ್ಲಿ ಆಡಿಲ್ಲ. ಆದರೆ, ಈಗ ಸೀನಿಯರ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ’ ಎಂದು ಸಮರ್ಥಿಸಿಕೊಳ್ಳುತ್ತಾರೆ.

‘ತಂಡದ ನಾಯಕ ಕೆ.ಸೋಮಯ್ಯ, ಜಿ.ಎಂ.ಪೃಥ್ವಿ, ಮಾಚಯ್ಯ, ಕೆ.ಟಿ.ಕಾರ್ಯಪ್ಪ, ಮೊಹಮ್ಮದ್‌ ರಹೀಲ್‌ ಪ್ರತಿಭಾವಂತ ಜೂನಿಯರ್‌ ಆಟಗಾರರು. ಇವರಿಗೆಲ್ಲಾ ಉತ್ತಮ ಭವಿಷ್ಯವಿದೆ’ ಎಂದು ಅಶ್ವಥ್‌ ನುಡಿಯುತ್ತಾರೆ.

ಪಂಜಾಬ್‌ ತಂಡ ಮತ್ತೆ ಮೇಲೆದ್ದ ಕಥೆ...
ದೇಶದ ಹಾಕಿಯಲ್ಲಿ ಒಂದೊಮ್ಮೆ ನೆಲೆ ಕಳೆದು ಕೊಂಡಿದ್ದ ಪಂಜಾಬ್‌ ಮತ್ತೆ ಮಿಂಚು ಹರಿಸುತ್ತಿದೆ. ಆ ಯಶ ಸ್ಸಿನ ಹಿಂದೆ ಒಂದು ಕಥೆ ಇದೆ. ತಂಡದ ಪುನಶ್ಚೇತನಕ್ಕಾಗಿ ಪಂಜಾಬ್‌ ಸರ್ಕಾರವು ಮಾಜಿ ನಾಯಕ ಪರ್ಗತ್‌ ಸಿಂಗ್ ಅವರನ್ನು ಕ್ರೀಡಾ ಅಕಾಡೆಮಿ ನಿರ್ದೇಶಕರನ್ನಾಗಿ ನೇಮಿಸಿತು.  ಜವಾಬ್ದಾರಿ ವಹಿಸಿಕೊಂಡ ಮೊದಲ ದಿನದಿಂದಲೇ ಕಾರ್ಯ ಪ್ರವೃತ್ತರಾದ ಪರ್ಗತ್‌ ಪ್ರಮುಖ ಹಳ್ಳಿಗಳಿಗೆ ಹೋಗಿ ಜಾಗ ಗುರುತಿಸಿದರು.

ಅಲ್ಲಿ ಆಸ್ಟ್ರೋಟರ್ಫ್‌ ಅಳವಡಿಸಲು ಶ್ರಮ ವಹಿಸಿ, ಸಂಬಂಧಪಟ್ಟ ಎಲ್ಲರೂ ಪಾಲ್ಗೊ ಳ್ಳುವಂತೆ ಮಾಡಿ ಆ ಕಾರ್ಯದಲ್ಲಿ ಯಶಸ್ವಿಯಾದರು. ಯುವ ಪ್ರತಿಭೆಗಳನ್ನು ಗುರುತಿಸಿ ತರಬೇತಿ ನೀಡಲಾ ರಂಭಿಸಿದರು. ಹಳ್ಳಿಹಳ್ಳಿಗಳಲ್ಲಿ ಶಿಬಿರ ಆಯೋಜಿಸಿದರು. ಕೇವಲ ಮೂರು ವರ್ಷಗಳಲ್ಲಿ ಪಂಜಾಬ್‌ ಹಾಕಿ ತನ್ನ ಗತವೈಭವವನ್ನು ಮರಳಿ ಪಡೆಯಿತು. ಈಗ ಭಾರತ ಜೂನಿಯರ್‌ ತಂಡದಲ್ಲಿರುವ ಹೆಚ್ಚಿನ ಆಟಗಾ ರರು ಪಂಜಾಬ್‌ ರಾಜ್ಯದವರು.

₹ 15 ಲಕ್ಷ ದುಡಿಮೆ
‘ನನ್ನ ಪ್ರಕಾರ ದೇಶದಲ್ಲಿ ಕ್ರಿಕೆಟ್‌, ಟೆನಿಸ್‌ ಹೊರತುಪಡಿಸಿದರೆ ಹೆಚ್ಚು ಹಣ ಗಳಿಸುತ್ತಿರುವವರೆಂದರೆ ಹಾಕಿ ಆಟಗಾರರು. ಹಾಕಿ ಇಂಡಿಯಾ ಲೀಗ್‌ನಿಂದಾಗಿ ಸಾಮಾನ್ಯ ಆಟಗಾರ ಕೂಡ ವರ್ಷಕ್ಕೆ ₹15 ಲಕ್ಷ ಹಣ ಗಳಿಸಬಹುದು’ ಎಂದು ಹೇಳಿದ್ದು ಭಾರತ ಜೂನಿಯರ್‌ ಹಾಕಿ ತಂಡದ ಕೋಚ್‌ ಹರೇಂದರ್‌ ಸಿಂಗ್‌. ‘ಪ್ರಜಾವಾಣಿ’ ಜತೆಗೆ ಮಾತನಾಡಿದ  ಅವರು, ‘ಹಾಕಿ ಕ್ರೀಡೆಯತ್ತ ಒಲವು ಹೆಚ್ಚಾಗುತ್ತಿದೆ. ಇದೊಂದು ಗಮನಾರ್ಹ ಬೆಳವಣಿಗೆ. ಉದ್ಯೋಗ ಕೂಡ ಲಭಿಸುತ್ತಿದ್ದು, ಆಟಗಾರರ ಜೀವನ ಭದ್ರವಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT