ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಹಣಕಾಸು ಆಯೋಗದ ದುರ್ವಿಧಿ

Last Updated 2 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಕರ್ನಾಟಕ ರಾಜ್ಯದ ಬಜೆಟ್‌ನಲ್ಲಿ ಪಂಚಾಯತ್ ರಾಜ್‌­ಗೊಂದು ಕಿಟಕಿ ತೆರೆದು (ಪಂಚಾಯತ್ ವಿಂಡೋ) ಒಂಬತ್ತು ವರ್ಷಗಳಾಯಿತು. 2005-06ರಿಂದ ಪಂಚಾಯತ್ ರಾಜ್ ಸಂಸ್ಥೆ­ಗಳಿಗೆ ಯೋಜನೆ ಮತ್ತು ಯೋಜನೇತರ ವೆಚ್ಚಗಳನ್ನು ತೂಗಿಸುವದಕ್ಕೆ ಒದಗಿಸುತ್ತಿರುವ ಹಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಇದನ್ನು ಯಾವ ಆಧಾರದ ಮೇಲೆ ಒದಗಿಸಲಾಗುತ್ತಿದೆ  ಮತ್ತು ಯಾವ ಆಧಾರದ ಮೇಲೆ ವಿವಿಧ ಪಂಚಾಯತ್ ರಾಜ್ ಸಂಸ್ಥೆಗಳ ಮಧ್ಯೆ ಹಂಚಲಾಗುತ್ತಿದೆ. ರಾಜ್ಯ ಸರ್ಕಾರವಂತೂ ಈ ವಿಷಯದ ಬಗ್ಗೆ ಈ ತನಕ ಏನನ್ನೂ ಹೇಳಿಲ್ಲ. ಯಾವುದೇ ಶಾಸಕರು ಈ ಕುರಿತಂತೆ ವಿಧಾನ ಮಂಡಲದ ಎರಡೂ ಸದನಗಳಲ್ಲಿ ಚರ್ಚಿಸಿದಂತೆಯೂ ಕಾಣಿಸುವುದಿಲ್ಲ.

ಅಧಿಕಾರ ವಿಕೇಂದ್ರಿಕರಣದ ಮುಖ್ಯ ಉದ್ದೇಶಗಳಲ್ಲಿ ಸಂಪನ್ಮೂಲ ಹಂಚಿಕೆಯೂ  ಒಂದು. ಕೇಂದ್ರ ಸರ್ಕಾರ ರಾಜ್ಯಗಳೊಂದಿಗೆ ಸಂಪ­ನ್ಮೂಲ ಹಂಚಿಕೆ ಮಾಡುವಂತೆ, ಪಂಚಾಯಿತಿಗಳಿಗೂ ಒಂದು ವ್ಯವಸ್ಥೆಯನ್ನು ಸಂವಿ­ಧಾನ ತಿದ್ದುಪಡಿಯ ಮೂಲಕ ಮಾಡಿದೆ.  ಸಂವಿಧಾ­ನದ 73ನೇ ತಿದ್ದುಪಡಿಯಲ್ಲಿ ಪಂಚಾಯಿತಿ­ಗಳ ಆರ್ಥಿಕ ಪರಿಸ್ಥಿತಿಯನ್ನು ಕಾಲಕಾಲಕ್ಕೆ ಪರಿಶೀಲಿಸಲು ರಾಜ್ಯ ಹಣಕಾಸು ಆಯೋಗವನ್ನು ಐದು ವರ್ಷಗಳಿ­ಗೊಮ್ಮೆ ರಚಿಸುವುದನ್ನು ಕಡ್ಡಾಯ ಮಾಡಲಾಗಿದೆ (ಕಲಂ 241-ಐ). ಹಣಕಾಸು ಆಯೋಗದ ಕೆಲಸ­ವೆಂದರೆ ರಾಜ್ಯಗಳಿಗೆ ಬರುವ ತೆರಿಗೆ,  ಕರ, ಶುಲ್ಕ ಮೊದ­­ಲಾದ ನಿವ್ವಳ ಆದಾಯದಲ್ಲಿ ಒಂದು ಪಾಲನ್ನು ಪಂಚಾಯತ್ ರಾಜ್ ಸಂಸ್ಥೆಗಳಿಗೆ ಕೊಡುವದು ಮತ್ತು ಅದನ್ನು  ಮೂರು ಹಂತದ ಪಂಚಾಯತ್ ರಾಜ್ ಸಂಸ್ಥೆಗಳ ನಡುವೆ ಹಂಚುವದು; ಪಂಚಾಯತ್ ರಾಜ್ ಸಂಸ್ಥೆಗಳೇ ಸಂಗ್ರಹಿಸಬಹುದಾದ ತೆರಿಗೆ, ಕರ, ಶುಲ್ಕ ಇವುಗಳನ್ನು ನಿರ್ಧರಿಸುವುದು; ರಾಜ್ಯದ ಸಂಚಿತ ನಿಧಿಯಿಂದ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಅನುದಾನ ಕೊಡುವದನ್ನು ನಿರ್ಧರಿಸುವುದು ಮತ್ತು  ಪಂಚಾಯಿತಿಗಳ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿ­ಸಲು ತೆಗೆದುಕೊಳ್ಳಬೇಕಾದ ಕ್ರಮಗಳನ್ನೂ ಸೂಚಿಸುವುದು. ರಾಜ್ಯ ಹಣಕಾಸು ಆಯೋಗದ ವರದಿ ಬಂದ ಕೂಡಲೇ ಸರ್ಕಾರದ ಅದರ ಮೇಲೆ ಏನು ಕ್ರಮ ಕೈಗೊಂಡಿದೆ ಎನ್ನುವದರ ವಿವರಣೆಯೊಂದಿಗೆ ರಾಜ್ಯದ  ವಿಧಾನ ಸಭೆಯಲ್ಲಿ ಮಂಡಿಸುವ ವ್ಯವಸ್ಥೆಯನ್ನು ರಾಜ್ಯಪಾಲರು ಮಾಡಬೇಕು ಎಂದು ಸಂವಿಧಾನ ತಿದ್ದುಪಡಿ ಸ್ಪಷ್ಟವಾಗಿ ಸೂಚಿಸಿದೆ.

ಇದು ಯಾವುದನ್ನು ಸಂವಿಧಾನ ತಿದ್ದುಪಡಿ ಬಂದ ನಂತರದ  ಅಧಿಕಾರದ ಚುಕ್ಕಾಣಿ ಹಿಡಿದಿದ್ದ  ಕಾಂಗ್ರೆಸ್ ಸರ್ಕಾರ, ಅವಿಭಜಿತ ಜನತಾದಳದ ಸರ್ಕಾರ, ಕಾಂಗ್ರೆಸ್–-ಜೆಡಿಎಸ್, ಮತ್ತೂ ಬಿಜೆಪಿ-–ಜೆಡಿಎಸ್ ಸಮ್ಮಿಶ್ರ ಸರ್ಕಾರಗಳು ಸರಿಯಾಗಿ ಮಾಡಿಯೇ ಇಲ್ಲ. ವಿಕೇಂದ್ರಿಕೃತ ಯೋಜನಾ ಪ್ರಕ್ರಿಯೆ ಬಗೆಗೆ­ರುವ ಸಂವಿಧಾನದ ಆಶಯಕ್ಕೆ ರಾಜ್ಯ ಸರ್ಕಾರ­ಗಳು ತೋರಿದ ಅವಜ್ಞೆಯೇ ಹಣಕಾಸು ಆಯೋಗಕ್ಕೂ ವಿಸ್ತರಿಸಿದಂತೆ ಕಾಣುತ್ತದೆ.

ಈವರೆಗೆ ರಾಜ್ಯ ಸರ್ಕಾರ ಮೂರು ಹಣಕಾಸು ಆಯೋಗಗಳನ್ನೇನೋ ರಚಿಸಿದೆ  ಅವುಗಳ ವರದಿಗಳು ಸರ್ಕಾರದ ಮುಂದಿವೆ. ಮೊದಲಿನ ಎರಡು ವರದಿಗಳ­ಲ್ಲಿನ ಮುಖ್ಯವಾದ ಸಂಪನ್ಮೂಲಗಳ ಹಂಚಿಕೆಗೆ ಸಂಬಂಧಿಸಿದಂತೆ ಸರ್ಕಾರಿ ಆಜ್ಞೆಗಳು ಹೊರಟಿವೆ. ಉಳಿದ ಶಿಫಾರಸುಗಳ ಬಗ್ಗೆ ಸರ್ಕಾರ ಮೌನವಾಗಿದೆ. ಮೂರನೆಯ ಹಣಕಾಸು ಆಯೋಗದ ವರದಿಯೂ ಸರ್ಕಾರದ ಕಡತಗಳ ಮಧ್ಯೆ ಧೂಳು ತಿನ್ನುತ್ತ ಬಿದ್ದಿದೆ. ಅಷ್ಟೇ ಅಲ್ಲ ಈ ವರದಿಗಳ ಆಧಾರದಲ್ಲಿ ಕೈಗೊಂಡ ಕ್ರಮಗಳನ್ನು ವಿಧಾನಮಂಡಲದ ಉಭಯ ಸದನ­ಗಳಲ್ಲಿ ಮಂಡಿಸಿದಂತೆಯೂ ಕಾಣಿಸುವುದಿಲ್ಲ. ಆದ್ದ­ರಿಂದ ವರದಿಯ ಶಿಫಾರಸುಗಳ ಮತ್ತು ಸರ್ಕಾರದ ನಿಲುವಿನ ಬಗ್ಗೆ ವಿಧಾನಮಂಡಲದಲ್ಲಿ ಯಾವ ಚರ್ಚೆಯೂ ಆಗಿಲ್ಲ. ಮೂರನೆಯ ಹಣಕಾಸು ಆಯೋ­ಗದ ವರದಿ ಮೂಲೆಗುಂಪಾಗಿರುವದಕ್ಕೂ ಯಾವ ಶಾಸಕರು ತಲೆ ಕೆಡಿಸಿಕೊಂಡಿಲ್ಲ.

ಹಣಕಾಸು ಆಯೋಗದ ವರದಿಗಳಲ್ಲಿ ಸರ್ಕಾರ ಒಪ್ಪಿದ ಶಿಫಾರಸುಗಳಿಂದ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಎಷ್ಟು ಉಪಯೋಗವಾಗಿದೆ? ಸರ್ಕಾರ ಒಪ್ಪಿದ ಅಂಶಗಳ ಅನುಷ್ಠಾನ ಎಷ್ಟರ ಮಟ್ಟಿಗೆ ಆಗಿದೆ ಎನ್ನುವದರ ಬಗ್ಗೆ ಯಾವ ಮಾಹಿತಿಯೂ ಲಭ್ಯವಿಲ್ಲ. ಮೂರನೆಯ ಹಣಕಾಸು ಆಯೋಗ ತನ್ನ ವರದಿಯನ್ನು ಕೊಟ್ಟಾದ ಮೇಲೆ ವರದಿಗಳ ಅನುಷ್ಠಾನ ಹೇಗಾಗಿದೆ ಎಂದು ನೋಡುವದಕ್ಕಾಗಿ, ಹಣಕಾಸು ಆಯೋಗದ ಅಧ್ಯಕ್ಷರಾಗಿದ್ದ ಎ.ಜಿ. ಕೊಡ್ಗಿಯವರ ಹಿರಿತನದಲ್ಲಿ ಒಂದು ಮೇಲುಸ್ತುವಾರಿ ಸಮಿತಿಯನ್ನು ಸರ್ಕಾರ ರಚಿಸಿತ್ತು. ಆ ಸಮಿತಿ ಒಂದು ದೀರ್ಘವಾದ ವರದಿಯನ್ನೇ ಸಲ್ಲಿಸಿತ್ತು. ಅದೂ ಧೂಳು ತಿನ್ನುತ್ತಾ ಬಿದ್ದಿದೆ.

ಈ ಹೊತ್ತಿಗಾಗಲೇ ನಾಲ್ಕನೆಯ ಹಣಕಾಸು ಆಯೋಗ ರಚಿಸಿ ಒಂದು ವರ್ಷ ಕಳೆಯಬೇಕಿತ್ತು. ಈಗ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಇದರ ಬಗ್ಗೆ  ಇನ್ನೂ ಆಲೋಚಿಸಿರುವಂತೆಯೇ ಕಾಣುತ್ತಿಲ್ಲ. ಒಂದು ರೀತಿಯಲ್ಲಿ ಇದೂ ಸರಿಯೇ. ಹಿಂದಿನ ಮೂರು ಆಯೋಗ­ಗಳ ಶಿಫಾರಸುಗಳ ಮೇಲೆ ಯಾವ ಕ್ರಮವನ್ನೂ ಕೈಗೊಳ್ಳದಿರು­ವಾಗ,  ಹೊಸ ಆಯೋಗ ರಚಿಸುವ ಅವಶ್ಯಕತೆಯಿಲ್ಲ­ವೆಂದು ಯಾರಾದರೂ ಭಾವಿಸಿದ್ದರೆ ಅದರಲ್ಲಿ ಆಶ್ಚರ್ಯ­ವೇನೂ ಇಲ್ಲ.

ಮೊದಲನೆಯ ಹಣಕಾಸು ಆಯೋಗವನ್ನು ೧೯೯೪ರಲ್ಲಿ ರಚಿಸಲಾಯಿತಾದರೂ, ಆದರ ಅನುಷ್ಠಾ­ನದ ಬಗೆಗೆ ಸರ್ಕಾರಿ ಆಜ್ಞೆ ಹೊರಟಿದ್ದು ೧೯೯೭ರಲ್ಲಿ. ಅದನ್ನು ಅನ್ವಯಮಾಡಿದ್ದು ಅದರ ಮುಂದಿನ ಆರ್ಥಿಕ ವರ್ಷದಿಂದ. ಈ ಹೊತ್ತಿಗಾಗಲೇ ಪಂಚಾಯತ್ ರಾಜ್ ಸಂಸ್ಥೆಗಳ ಎರಡನೆಯ ಐದು ವರ್ಷದ ಅವಧಿ ಆರಂಭವಾಗಿತ್ತು. ಎರಡನೆಯ ಆಯೋಗವನ್ನು ೨೦೦೦­ರಲ್ಲಿ ರಚಿಸಿ, ಅದರೆ ಮುಂದಿನ ಎರಡು ವರ್ಷದಲ್ಲಿ ಬಂದರೂ, ಅನುಷ್ಠಾನದ ಸರ್ಕಾರಿ ಆಜ್ಞೆ ಹೊರಟಿದ್ದು ನಾಲ್ಕು ವರ್ಷದ ನಂತರ. ಮೂರನೆಯ ಆಯೋಗ ರಚನೆಯಾದದ್ದು ೨೦೦೬ರಲ್ಲಿ. ಅದರ  ವರದಿ ಸರ್ಕಾರಕ್ಕೆ ೨೦೦೮ರಲ್ಲಿ ಸಲ್ಲಿಸಿದರೂ, ಅದರ ಮೇಲೆ ಇಲ್ಲಿಯ ತನಕ ಸರ್ಕಾರ ಯಾವ ಕ್ರಮಗಳನ್ನೂ ತೆಗೆದುಕೊಂಡಿಲ್ಲ. ಈ ಮಧ್ಯೆ ಹೊಸ ಆಯೋಗ ರಚಿಸುವ ಕಾಲ ಬಂದು ಹೋಗಿದ್ದರೂ, ಇನ್ನು ನಾಲ್ಕನೆಯ ಆಯೋಗವನ್ನು ರಚಿಸುವ ವಿಚಾರವನ್ನು ಸರ್ಕಾರ ಮಾಡಿಯೇ ಇಲ್ಲ.

ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಪಾಲನ್ನು ಕೊಡಬೇಕಾದಾಗ ಆದಾಯವೆಂದು ಯಾವ­ದನ್ನು ಪರಿಗಣಿಸಬೇಕು? ಒಟ್ಟು ಆದಾಯವನ್ನೋ? ಬರೀ ತೆರಿಗೆ ಆದಾಯವನ್ನೋ?  ಅಥವಾ ಕೇಂದ್ರದಿಂದ ಬರುವ ಅನುದಾನ, ಕೇಂದ್ರ ಸರ್ಕಾರದ ಪಾಲು, ಮತ್ತು ಸರ್ಕಾರಕ್ಕೆ ಇತರ ಬಾಬುಗಳಿಂದ ಬರುವ ಆದಾಯವನ್ನೂ ಪರಿಗಣಿಸಬೇಕೋ? ಇವು  ಮೂರು ಹಣಕಾಸು ಆಯೋಗಗಳ ಮುಂದಿದ್ದ  ಮುಖ್ಯ ಪ್ರಶ್ನೆ.

ಕೆಲ ನಿರ್ದಿಷ್ಟ ಕರಗಳಲ್ಲಿ ಪಾಲು ಕೊಡುವ ಬದಲು  ಸಾಲವನ್ನು ಹೊರತು ಪಡಿಸಿದ ಇತರ ಆದಾಯದಲ್ಲಿ ಪಾಲು ಕೊಡಬೇಕು. ಇದರಲ್ಲಿ ಎಲ್ಲ ತೆರಿಗೆಗಳು ಶುಲ್ಕಗಳು ಮತ್ತು ಬಡ್ಡಿ ಆದಾಯಗಳು ಸೇರುತ್ತವೆ. ಆದರೆ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಬರುವ ಅನುದಾನ ಮತ್ತು ಕೇಂದ್ರದಿಂದ ದೊರಕುವ ಆದಾಯ ಕರ, ಅಬಕಾರಿ ಕರಗಳು ಸೇರುವದಿಲ್ಲವೆಂದು ಮೊದಲನೆಯ ಹಣಕಾಸು ಆಯೋಗ ಹೇಳಿತು. ಸರ್ಕಾರ ಇದಕ್ಕೆ ಒಪ್ಪಿ ಸೂಕ್ತ ಆಜ್ಞೆ ಹೊರಡಿಸಿತು. ಎರಡನೆಯ ಹಣಕಾಸು ಆಯೋಗವೂ ಈ ಸೂತ್ರವನ್ನು ಪುನರುಚ್ಚರಿಸಿತು.

ಪಾಲು ಎಷ್ಟಿರಬೇಕು ಎಂಬ ಪ್ರಶ್ನೆ ಬಂದಾಗ,  ಮೊದಲನೆಯ ಆಯೋಗ ಇದು  ಶೇ 36ರಷ್ಟು ಇರ­ಬೇಕು  ಹೀಗೆ ಮೀಸಲಿಟ್ಟ ಹಣದಲ್ಲಿ ಶೇ 85ರಷ್ಟು ಪಂಚಾ­ಯತ್ ರಾಜ್ ಸಂಸ್ಥೆಗಳಿಗೆ, ಮಿಕ್ಕದ್ದನ್ನು ನಗರ ಸ್ಥಳೀಯ ಸಂಸ್ಥೆಗಳಿಗೆ  ಕೊಡಬೇಕು ಎಂದು ಶಿಫಾರಸು ಮಾಡಿ­ದ್ದನ್ನೂ ಒಪ್ಪಿ ಸರ್ಕಾರವು ಆಜ್ಞೆ ಹೊರಡಿಸಿತು. ೧೯೯೭–-೯೮ರಿಂದ ಮುಂದಿನ  ಐದು ವರ್ಷಗಳ ತನಕ ಈ ಸೂತ್ರದಂತೆ ಹಣ ಹಂಚುವದಾಗಿ ಹೇಳಿತು. ಇದರ ಪ್ರಕಾರ ಪಂಚಾಯತ್ ರಾಜ್ ಸಂಸ್ಥೆಗಳ ಯೋಜನೆ ಮತ್ತು ಯೋಜನೇತರ ವೆಚ್ಚಕ್ಕೆ ಸಿಗುವ ಹಣ ರೂ 2697  ಕೋಟಿಯಿಂದ ರೂ 3997 ಕೋಟಿ­ಗಳಾ­ಗು­ತ್ತವೆ ಎಂದು ಅಂದಾಜು ಮಾಡಲಾಯಿತು.

ಆದರೆ ಎರಡನೆಯ ಹಣಕಾಸು ಆಯೋಗ ಮೂಲ ಸೂತ್ರದಲ್ಲಿ ಯಾವುದೇ ಬದಲಾವಣೆ ಮಾಡದೇ ಕೊಡುವ ಪಾಲನ್ನು ಬದಲಾಯಿಸಿತು. ಅಂದರೆ ಶೇ 36 ರಿಂದ 40ಕ್ಕೆ ಹೆಚ್ಚಿಸಬೇಕು. ಮತ್ತು ಅದರಲ್ಲಿ, ಶೇ 32 ಪಂಚಾಯತ್ ರಾಜ್ ಸಂಸ್ಥೆಗಳಿಗೂ, ಶೇ 8ರಷ್ಟನ್ನು ನಗರಸಭೆ ಮೊದಲಾವುಗಳಿಗೆ ಕೊಡಬೇಕು ಎಂದು ಶಿಫಾರಸು ಮಾಡಿತು. ನಾಲ್ಕು ವರ್ಷ ವಿಳಂಬ­ವಾಗಿ ಬಂದ ಸರ್ಕಾರದ ಸಮ್ಮತಿಯಲ್ಲಿ ಸರ್ಕಾರವು ಇದನ್ನು ನಗರ ಸಂಸ್ಥೆಗಳಿಗೆ ಅನ್ವಯಿಸಿತೇ ಹೊರತು ಪಂಚಾಯತ್ ರಾಜ್ ಸಂಸ್ಥೆಗಳಿಗಲ್ಲ.  ಹೊಸ ಸೂತ್ರದ ಪ್ರಕಾರ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಕೊಡುವ ಹಣದಲ್ಲಿ ಕಡಿಮೆಯಾಗುವದರಿಂದ ಅದನ್ನು ಒಪ್ಪದೇ ಹಳೆಯ ಸೂತ್ರದಂತೆ ಪಾಲನ್ನು ಕೊಡುವ ನೀತಿಯನ್ನು ಮುಂದುವರಿಸುವ ಆಜ್ಞೆ ಹೊರಡಿಸಿತು.

ಮೂರನೆಯ ಹಣಕಾಸು ಆಯೋಗವು  ಹಂಚುವ ನಿಧಿ ಪರಿಗಣಿಸುವಲ್ಲಿನ ಸೂತ್ರದಲ್ಲಿ ಬದಲಾವಣೆ ಮಾಡಿ ಅದು ಒಟ್ಟಾರೆ ಆದಾಯದ ಮೇಲಿರದೇ ಸರ್ಕಾರದ ಸ್ವಂತ ನಿವ್ವಳ ತೆರಿಗೆಯ ಮೇಲಿನ ಶೇ 33ರಷ್ಟನ್ನು ಹಂಚಬೇಕು. ಇದರಲ್ಲಿ ಪಂಚಾಯತ್ ಸಂಸ್ಥೆ- ನಗರ ಸ್ಥಳೀಯ ಸಂಸ್ಥೆಗಳಿಗೆ 70: 30 ಅನುಪಾತದಲ್ಲಿ ನೀಡಬೇಕು ಎಂದು ಹೇಳಿತು.  ಹಾಗೆಯೇ ಸಂಸ್ಥೆಗಳ ನಡುವೆ ಹಣ ಹಂಚುವ ಸೂತ್ರದಲ್ಲಿ ಕೆಲ ಮಹತ್ತರ ಬದಲಾವಣೆಯನ್ನು ಮಾಡಬೇಕೆಂದೂ ಸೂಚಿಸಿತು. ಒಂದು ಮಹತ್ವದ ಸೂಚನೆ ಎಂದರೆ  ನೌಕರರ ಸಂಬಳ ಸಾರಿಗೆಗಳಿಗೆ ಕೊಡುವ ಹಣವನ್ನು ಬೇರೆಯೇ ಸೂಚಿಸಬೇಕು. ಕೆಲ ನಿರ್ದಿಷ್ಟ ಅಭಿವೃದ್ಧಿ ಮತ್ತು ಪ್ರೋತ್ಸಾಹಕಗಳ ಆಧಾರದ ಮೇಲೆ  ಹಣವನ್ನು ಪಂಚಾಯತ್ ರಾಜ್ ಸಂಸ್ಥೆಗಳಿಗೆ ನೀಡಬೇಕು ಎಂದೂ ಹೇಳಿತು.  ವರದಿಯ ಪ್ರಕಾರ ಸರ್ಕಾರಕ್ಕೆ 2008–09ರ ಆರ್ಥಿಕ ವರ್ಷದಿಂದ ಮುಂದಿನ ಐದು ವರ್ಷಗಳ ತನಕ, ಕರಗಳ ಮತ್ತು ಇತರ ಮೂಲಗಳಿಂದ ಬರುವ ಸರ್ಕಾರದ ಸ್ವಂತ ಆದಾಯವನ್ನು ರೂ 32, 247ಕೋಟಿಯಿಂದ ರೂ 54,425 ಕೋಟಿಗೆ ಏರುವ  ಅಂದಾಜು ಮಾಡಲಾಗಿತ್ತು.   ಪಂಚಾಯತ್ ರಾಜ್ ಸಂಸ್ಥೆಗಳ ಪಾಲು (ಶೇ ೨೩ರ ಪ್ರಮಾಣದಲ್ಲಿ) ರೂ 7394 ಕೊಟಿಯಿಂದ ರೂ12,518 ಕೋಟಿಯಷ್ಟು ಆಗಲಿದೆ. ಆದರೆ ಇದು ಸದ್ಯದ ಮಟ್ಟಿಗೆ ಕನ್ನಡಿಯಲ್ಲಿನ ಗಂಟಿದ್ದ ಹಾಗೆ. ಏಕೆಂದರೆ ಇದಕ್ಕೆ ಸರ್ಕಾರವು ಇನ್ನೂ ತನ್ನ ಸಮ್ಮತಿ ಸೂಚಿಸಿಲ್ಲ. ಹೀಗಾಗಿ, 2007–08ರಲ್ಲಿ ಜಾರಿಗೆ  ಬಂದ ಎರಡನೆಯ ಹಣಕಾಸು ಆಯೋಗದ ಸೂತ್ರದ  ಪ್ರಕಾರವೇ ಹಣ ಹಂಚುವ ಕಾರ್ಯ ಮುಂದುವರಿದಿದೆ.

ಮೇಲಾಗಿ ಎರಡೂ ಹಣಕಾಸಿನ ಆಯೋಗಗಳು ಮಾಡಿದ ಇತರ ಸೂಚನೆಗಳನ್ನು ಸರ್ಕಾರ ಪರಿಗಣಿ­ಸಿಯೇ ಇಲ್ಲ. ಮೂರನೆಯ ಹಣಕಾಸು ಆಯೋಗವು ಪರಿಸ್ಥಿತಿ ಸುಧಾರಿಸಲು ಇನ್ನಷ್ಟು ಶಿಫಾರಸುಗಳನ್ನು ಮಾಡಿದೆ. ಇವುಗಳೆಲ್ಲ ಅರಣ್ಯ ರೋಧನವಾಗುವ­ದ­ರಲ್ಲಿ ಸಂದೇಹವೇ ಇಲ್ಲ. ಏಕೆಂದರೆ ಇದನ್ನು ಏಕೆ ಮಾಡಲಿಲ್ಲ ಎಂದು ಕೇಳಲು ಅವಕಾಶವೇ ಇಲ್ಲ. ಏಕೆಂದರೆ  ಈ ವರದಿಗಳನ್ನು ಯಾವ ಕಾಲದಲ್ಲಿಯೂ ವಿಧಾನಮಂಡಲದ ಮುಂದೆ ಇಟ್ಟಿಲ್ಲ ಮತ್ತು ಏದರೆ ಸಾಧಕ ಬಾಧಕಗಳ ಬಗೆಗೆ ಯಾವ ಚರ್ಚೆಯೂ ಆಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT