ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್‌ ಈ ನೆಲದ ‘ಮಹಾ ವಿದ್ಯಮಾನ’

‘ಡಾ.ರಾಜ್‌ ಸಂಸ್ಕೃತಿ ಹಬ್ಬ, ವಿಚಾರ ಸಂಕಿರಣ’ದಲ್ಲಿ ಸಾಹಿತಿ ಚಂಪಾ ಅಭಿಪ್ರಾಯ
Last Updated 27 ಏಪ್ರಿಲ್ 2015, 20:10 IST
ಅಕ್ಷರ ಗಾತ್ರ

ಬೆಂಗಳೂರು: ‘ಕಲಾ ಕಾಯಕದ ಪರಿಧಿಯನ್ನು ಮೀರಿದ ವ್ಯಕ್ತಿತ್ವ ಹೊಂದಿದ್ದ ಡಾ. ರಾಜ್‌ಕುಮಾರ್‌ ಅವರು ಈ ನೆಲದ ‘ಮಹಾ ವಿದ್ಯಮಾನ’ ಎಂದು ಸಾಹಿತಿ ಡಾ. ಚಂದ್ರಶೇಖರ ಪಾಟೀಲ ಅವರು ಬಣ್ಣಿಸಿದರು.

‘ಡಾ. ರಾಜ್‌ಕುಮಾರ್ ರಾಷ್ಟ್ರೀಯ ಅಧ್ಯಯನ ಮತ್ತು ಸಂಶೋಧನಾ ತರಬೇತಿ ಕೇಂದ್ರ’ ಹಾಗೂ ‘ರಂಗಜಂಗಮ ಕಲಾನಿಕೇತನ’ ಸಹಯೋಗದಲ್ಲಿ ಸೋಮವಾರ ನಗರದಲ್ಲಿ ನಡೆದ ‘ಡಾ. ರಾಜ್‌ ಸಂಸ್ಕೃತಿ ಹಬ್ಬ ಮತ್ತು ವಿಚಾರ ಸಂಕಿರಣ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಮಷ್ಠಿ ವ್ಯಕ್ತಿತ್ವವನ್ನು ಹೊಂದಿದ್ದ ರಾಜ್‌ಕುಮಾರ್ ಅವರ ಹೆಸರಿನಲ್ಲೇ ಅನೇಕ ಆಯಾಮ ಮತ್ತು ಬಿಂಬಗಳಿದ್ದು, ಅವೆಲ್ಲವು ಕನ್ನಡದ ಅಸ್ಮಿತೆಯ ಪ್ರತೀಕವಾಗಿವೆ’ ಎಂದು ಅವರು ನುಡಿದರು.

ಸಿನಿಮಾದಿಂದ ಗಟ್ಟಿಗೊಂಡ ಅನಿಷ್ಟಗಳು: ‘ಅಕ್ಷರದ ವ್ಯಾಪ್ತಿಯನ್ನು ಮೀರಿ ಸಮಸ್ಯೆ, ಸನ್ನಿವೇಶ ಹಾಗೂ ಮಾದರಿಗಳನ್ನು ಕಟ್ಟಿಕೊಡುವ ಸಿನಿಮಾ, ಸಾಮಾಜಿಕ ಚಿಂತನೆ ಮತ್ತು ಸ್ಥಿತಿಗತಿಗಳ ಮೇಲೆ ಅಷ್ಟಾಗಿ ಪರಿಣಾಮ ಬೀರಿಲ್ಲ. ಅಲ್ಲದೆ, ದೇಶದಲ್ಲಿ ಹಿಂದಿನಿಂದಲೂ ಅಸ್ತಿತ್ವದಲ್ಲಿರುವ ಅನಿಷ್ಠ ಪದ್ಧತಿಗಳನ್ನು ಗಟ್ಟಿಗೊಳಿಸುವಲ್ಲಿ ಸಿನಿಮಾ ಪ್ರಭಾವ ಹೆಚ್ಚಾಗಿದೆ’ ಎಂದು ಅವರು ಗಮನ ಸೆಳೆದರು.

ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಮಾತನಾಡಿ, ‘ರಾಜ್‌ಕುಮಾರ್  ಅವರನ್ನು ಗುಡಿ ಕಟ್ಟಿ ಆರಾಧಿಸುವ ಬದಲು, ಮನುಷ್ಯನನ್ನಾಗಿ ಗ್ರಹಿಸಿ, ಅವರ ವ್ಯಕ್ತಿತ್ವದ ಅಂಶಗಳನ್ನು ಇಂದಿನವರು ಮೈಗೂಡಿಸಿಕೊಳ್ಳಬೇಕಿದೆ’ ಎಂದು ಹೇಳಿದರು.

ಸಾಹಿತಿ ಡಾ. ಗೀತಾ ರಾಮಾನುಜಂ, ‘ಇಂದಿನ ಚಲನಚಿತ್ರಗಳು ಜನರನ್ನು ಚಿಂತನೆಗೆ ಹಚ್ಚುವ ಬದಲು ಚಿಂತೆಗೀಡು ಮಾಡುತ್ತಿವೆ. ಕಲೆ, ಕಲಾವಿದ ಹಾಗೂ ಸಮಾಜದ ಮಧ್ಯೆ ಒಂದು ರೀತಿಯ ಬೆಸುಗೆ ಇದ್ದು, ಅದನ್ನು ಉಳಿಸಿಕೊಳ್ಳುವತ್ತ ಚಿತ್ರರಂಗ ಗಮನಹರಿಸಬೇಕಿದೆ’ ಎಂದು ಹೇಳಿದರು.

ರಾಜ್ ಮನಸ್ಸು ಮಾಡಿದ್ದರೆ...
‘ಗೋಕಾಕ್ ಚಳವಳಿಯಲ್ಲಿ ಭಾಗವಹಿಸಿ ಬಲ ತುಂಬಿದ್ದ ರಾಜ್‌ಕುಮಾರ್‌ ಅವರು, ಕುಳಿತಲ್ಲಿಯೇ ಯಾವುದಾದರೂ ಒಂದು ಪಕ್ಷಕ್ಕೆ ಬೆಂಬಲ ನೀಡಿದ್ದಿದ್ದರೆ, ರಾಜ್ಯದಲ್ಲಿ ಯಾವಾಗಲೋ ಕನ್ನಡ ಸರ್ಕಾರವೊಂದು ಅಸ್ತಿತ್ವಕ್ಕೆ ಬರುತ್ತಿತ್ತು’ ಎಂದು ಚಂಪಾ ಅಭಿಪ್ರಾಯಪಟ್ಟರು.

‘ಚಳವಳಿಯ ಜತೆಜತೆಗೆ ರಾಜ್ ಅವರನ್ನು ರಾಜಕೀಯಕ್ಕೆ ಕರೆತಂದು ಇಂದಿರಾಗಾಂಧಿ ಅವರ ವಿರುದ್ಧ ಚುನಾವಣೆಗೆ ನಿಲ್ಲಿಸುವ ಪ್ರಯತ್ನ ನಡೆದಿತ್ತು. ಆದರೆ ಇದನ್ನು ನಯವಾಗಿಯೇ ನಿರಾಕರಿಸಿದ್ದ ಅವರು, ರಾಜಕೀಯಕ್ಕೆ ಬರುವುದರಿಂದ ರಾಜ್ಯದ ಅಖಂಡ ಜನರ ಪ್ರೀತಿಯಿಂದ ವಂಚಿತನಾಗುವುದಾಗಿ ಹೇಳಿ ದೂರ ಉಳಿದರು’ ಎಂದು ಅವರು ಸ್ಮರಿಸಿದರು.

‘ಕಲಾವಿದ ಅಶಾಂತ ಸಂತ’
ಬೆಂಗಳೂರು:
‘ಸಾಹಿತಿ ಮತ್ತು   ಕಲಾವಿದರು ಅಶಾಂತ ಸಂತರಿದ್ದಂತೆ. ಅವರಿಗೆ ತಮ್ಮ  ಸಾಧನೆಗಳ ಬಗ್ಗೆ ಯಾವತ್ತೂ ತೃಪ್ತಿ ಇರುವುದಿಲ್ಲ. ಡಾ. ರಾಜ್‌ಕುಮಾರ್‌ ಸಹ ಇದಕ್ಕೆ ಹೊರತಾಗಿರಲಿಲ್ಲ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಲ್‌. ಹನುಮಂತಯ್ಯ ಅಭಿಪ್ರಾಯಪಟ್ಟರು.

ಸೋಮವಾರ ನಗರದಲ್ಲಿ  ಡಾ. ರಾಜ್‌ಕುಮಾರ್‌ ರಾಷ್ಟ್ರೀಯ ಅಧ್ಯಯನ ಹಾಗೂ ಸಂಶೋಧನಾ ತರಬೇತಿ ಕೇಂದ್ರ ಹಾಗೂ ರಂಗಜಂಗಮ ಕಲಾನಿಕೇತನ ವತಿಯಿಂದ ನಡೆದ ಕನ್ನಡ ಚಿತ್ರರಂಗದ ಸಾಧಕರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಿನಿಮಾ ಸಾಮಾಜಿಕ ಬದುಕಿನ ಭಾಗ. ಜನರು ಸಿನಿಮಾಗಳನ್ನು ತಮ್ಮ ಬದುಕಿಗೆ  ಮಾರ್ಗದರ್ಶಕ ಎಂದು  ಭಾವಿಸುತ್ತಾರೆ. ಆದರೆ ಈಗ ಸದಭಿರುಚಿ ಚಿತ್ರಗಳು ಕಡಿಮೆಯಾಗುತ್ತಿವೆ. ಪ್ರಸ್ತುತ ಸಮಾಜ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಚಿತ್ರಗಳು ಹೆಚ್ಚು ನಿರ್ಮಾಣವಾಗಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT