ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ ಜನ್ಮದಿನ: ಅಭಿಮಾನಿಗಳ ಮಹಾಪೂರ

ಹಿರಿಯ ನಟರಿಗೆ ಡಾ.ರಾಜ್ ಸೌಹಾರ್ದ ಪ್ರಶಸ್ತಿ ಪ್ರದಾನ
Last Updated 25 ಏಪ್ರಿಲ್ 2014, 15:21 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕಂಠೀರವ ಸ್ಟುಡಿಯೋ ಆವರಣದಲ್ಲಿ ಇರುವ ಡಾ.ರಾಜ್‌ ಸ್ಮಾರಕದಲ್ಲಿ ಗುರುವಾರ ನಡೆದ ಡಾ. ರಾಜ್‌ ಕುಮಾರ್‌ ಅವರ 86ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಸಾವಿರಾರು ಅಭಿಮಾನಿಗಳು ಕಣ್ತುಂಬಿಕೊಂಡರು.

ಕಾರ್ಯಕ್ರಮಕ್ಕೆ ಅಭಿಮಾನಿಗಳ ಸಮೂಹವೇ ಹರಿದು ಬಂದಿತ್ತು. ಸ್ಮಾರಕದ ಹತ್ತಿರದಲ್ಲೇ ನಿಂತು ಕಾರ್ಯಕ್ರಮದ ಸವಿ­ಯನ್ನು ಅನುಭವಿಸಬೇಕು ಎಂದು ಅಂಧರು ಬೆಳಗ್ಗೆಯಿಂದಲೇ ಕಾದು ನಿಂತಿದ್ದರು. ಇನ್ನೊಂದೆಡೆ  ನೇತ್ರದಾನಕ್ಕೆ ಹೆಸರು ನೋಂದಾ­ಯಿ­ಸಲು ಅಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಸೇರಿದ್ದರು. ಒಂದು ಆಟೊ ಪೂರ್ತಿ ರಾಜ್‌ ಚಿತ್ರಗಳನ್ನೇ ಅಂಟಿಸಿ ಆಟೊ ಚಾಲಕ­ರೊಬ್ಬರು ಅಭಿಮಾನ ತೋರಿಸಿದರು. ಹತ್ತಾರು ಸಂಖ್ಯೆಯಲ್ಲಿ ನೆರೆದಿದ್ದ ಲೈಂಗಿಕ ಅಲ್ಪಸಂಖ್ಯಾತ­ರಿಗೆ ಒಳಗೆ ಪ್ರವೇಶ ಸಿಗುತ್ತದೋ ಇಲ್ಲವೋ ಎಂಬ ಆತಂಕ. ಮತ್ತೊಂದೆಡೆ, ಕಿಕ್ಕಿರಿದಿದ್ದ ಅಭಿಮಾನಿ­ಗಳನ್ನು ನಿಯಂತ್ರಿಸಲು ಪೊಲೀಸರು ಹರ ಸಾಹಸ ಪಡುತ್ತಿದ್ದರು.

ಇದೇ ಸಂದರ್ಭದಲ್ಲಿ ಡಾ.ರಾಜ್‌ಕುಮಾರ್ ಟ್ರಸ್ಟ್ ವತಿಯಿಂದ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಚಲನಚಿತ್ರ ರಂಗದಲ್ಲಿ ಸಾಧನೆ ಮಾಡಿದವರಿಗೆ  ₨ 1 ಲಕ್ಷ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡ ‘ಡಾ.ರಾಜ್‌ಕುಮಾರ್ ಸೌಹಾರ್ದ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಹಿರಿಯ ಕಲಾವಿದರಾದ  ಎಂ.ಎನ್. ಲಕ್ಷ್ಮೀದೇವಿ,  ಸದಾಶಿವ ಬ್ರಹ್ಮಾವರ, ಅಶ್ವತ್ಥನಾರಾಯಣ ಅವರಿಗೆ 2013 ನೇ ಸಾಲಿನ ಪ್ರಶಸ್ತಿ ಮತ್ತು  ಚಿತ್ರ ನಿರ್ದೇಶಕ ಎಂ.ಎಸ್. ರಾಜಶೇಖರ್, ನಟ ಹೊನ್ನವಳ್ಳಿ ಕೃಷ್ಣ ಮತ್ತು ಹಲವು ಚಿತ್ರಗಳಲ್ಲಿ ರಾಜ್ ತಂಗಿಯ ಪಾತ್ರಗಳನ್ನು ನಿರ್ವಹಿಸಿದ್ದ ಕಲಾ ಅವರಿಗೆ 2014ನೇ ಸಾಲಿನ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.


ಪಾರ್ವತಮ್ಮ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಮತ್ತು ಕುಟುಂಬದ ಸದಸ್ಯರು ರಾಜ್

ಸಮಾಧಿಗೆ ಪೂಜೆ ಸಲ್ಲಿಸಿದರು.

ನಟ ರಾಘವೇಂದ್ರ ರಾಜ್‌ಕುಮಾರ್ ಮಾತ­ನಾಡಿ, ‘ಇಷ್ಟೊಂದು ಜನ ಬರುತ್ತಿರುವುದನ್ನು ನೋಡಿದರೆ ಅಪ್ಪಾಜಿ ಜೀವಂತವಾಗಿದ್ದಾರೆ ಎಂದು ಭಾಸ­ವಾಗುತ್ತಿದೆ’ ಎಂದು ಭಾವುಕರಾದರು.

‘ಅಪ್ಪಾಜಿ ಅವರ ಜನ್ಮ ದಿನಾಚರಣೆಯಂದು ಸರ್ಕಾರಿ ರಜೆ ನೀಡಬೇಕು ಎಂದು ಅಭಿಮಾನಿಗಳ ಒತ್ತಡವಿದೆ. ಅದು ಕಾನೂನಾತ್ಮಕ ಪ್ರಕ್ರಿಯೆ ಮತ್ತು ಸರ್ಕಾರಕ್ಕೆ ಬಿಟ್ಟ ವಿಚಾರ’ ಎಂದರು.

ಡಾ.ರಾಜ್‌ಕುಮಾರ್ ಸೌಹಾರ್ದ ಪ್ರಶಸ್ತಿ ಪುರಸ್ಕೃತ ಹೊನ್ನವಳ್ಳಿ ಕೃಷ್ಣ ಮಾತನಾಡಿ, ‘ಇದು ಬಯಸದೆ ಬಂದ ಭಾಗ್ಯ. ಏನು ಹೇಳಬೇಕೋ  ತಿಳಿಯು­ತ್ತಿಲ್ಲ. ನನ್ನಂತಹ ನೂರಾರು ಕಲಾವಿದರನ್ನು ರಾಜ್ ಕುಟುಂಬ ಬೆಳಕಿಗೆ ತಂದಿದೆ. ಈ ಸಮಯ ಆನಂದಮಯ.. ಅಷ್ಟೆ’ ಎಂದು ಭಾವುಕರಾದರು.

‘ಡಾ.ರಾಜ್‌ಕುಮಾರ್‌ ಅವರದು ಮೇರು ವ್ಯಕ್ತಿತ್ವ. ಅವರು ಎಲ್ಲರ ಮನಸ್ಸಿನಲ್ಲಿ ಇಂದಿಗೂ ಜೀವಂತವಾಗಿ­ದ್ದಾರೆ’ ಎಂದು ವಸತಿ ಸಚಿವ ಅಂಬರೀಷ್‌ ಹೇಳಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ನಗರದಲ್ಲಿ ಗುರುವಾರ ಏರ್ಪಡಿಸಿದ್ದ ಡಾ.ರಾಜ್‌ಕುಮಾರ್‌ ಅವರ 86ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಪುನರ್ಜನ್ಮ ಪಡೆದು ಹುಟ್ಟಿ ಬಂದವನಂತೆ ಡಾ.ರಾಜ್‌ಕುಮಾರ್‌ ಅವರ  ಹುಟ್ಟುಹಬ್ಬ­ದಲ್ಲಿ ಭಾಗವಹಿಸುತ್ತಿದ್ದೇನೆ. ಅದಕ್ಕೆ ತುಂಬಾ ಖುಷಿ­ಯಾಗಿದೆ’ ಎಂದು ಹೇಳಿದರು.

‘ನನ್ನ ಜೊತೆಗಿದ್ದವರು ಇತರ ನಟರು, ನಿರ್ದೇಶಕರ ಬಗ್ಗೆ ಹೇಳುತ್ತಿದ್ದರು. ಆದರೆ, ನಿನ್ನ ಬಗ್ಗೆ ಯಾರೂ ಕೆಟ್ಟ ಮಾತುಗಳನ್ನು ಆಡಿಲ್ಲ ಎಂದು ಡಾ.ರಾಜ್‌ಕುಮಾರ್‌ ಒಮ್ಮೆ ನನ್ನ ಬಳಿ ಹೇಳಿದ್ದರು. ಅಂತಹ ದೊಡ್ಡ ವ್ಯಕ್ತಿಯಿಂದ ಒಳ್ಳೆಯ­ವನು  ಎನ್ನಿಸಿಕೊಳ್ಳುವುದೇ  ಪುಣ್ಯ’ ಎಂದರು.

ಸಂಗೀತ ನಿರ್ದೇಶಕ ಹಂಸಲೇಖ  ಮಾತ­ನಾಡಿ,  ‘ಡಾ.ರಾಜ್‌ಕುಮಾರ್‌ ನಾಡಿನ ಸಾಂಸ್ಕೃತಿಕ ಹೆಮ್ಮೆ. ನಾಡಿನಾದ್ಯಂತ ಅವರ ಜನ್ಮದಿನವನ್ನು ಹಬ್ಬದ ರೀತಿ ಆಚರಿಸ­ಲಾ­ಗುತ್ತಿದೆ. ಅವರು ಬೇರೆ ಭಾಷೆಗೆ ಹೋಗದೆ 50  ವರ್ಷಗಳ ಕಾಲ ಕನ್ನಡದಲ್ಲಿಯೇ  ನಟಿಸಿ­ದ್ದಾರೆ. ಅದು ಅವರ ಕನ್ನಡ ಪ್ರೇಮಕ್ಕೆ ಸಾಕ್ಷಿ’ ಎಂದರು.

ಕಂಠೀರವ ಸ್ಟುಡಿಯೊ ಹೊರಗೆ ರೆಡ್‌ಕ್ರಾಸ್ ಸಂಸ್ಥೆಯ ವತಿಯಿಂದ  ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 400 ಯುನಿಟ್ ರಕ್ತ ಸಂಗ್ರಹಿಸಲಾಯಿತು ಹಾಗೂ 35 ಮಂದಿ ನೇತ್ರದಾನಕ್ಕೆ ಹೆಸರು ನೋಂದಾಯಿಸಿಕೊಂಡರು.

‘ಡಾ.ರಾಜ್ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ನಾನು ಮತ್ತು ನನ್ನ ಸ್ನೇಹಿತರು ರಕ್ತದಾನ ಮಾಡಿದ್ದೇವೆ ಮತ್ತು ನೇತ್ರದಾನಕ್ಕೆ ಹೆಸರು ನೋಂದಾಯಿಸಿ­ದ್ದೇವೆ’ ಎನ್ನುತ್ತಾರೆ ಲಗ್ಗರೆಯ ಭರತ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT