ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ ನೆನಪಿನ ವೈಭವ

ನಾದನೃತ್ಯ
Last Updated 3 ಮೇ 2015, 19:30 IST
ಅಕ್ಷರ ಗಾತ್ರ

ಸೇವಾಸದನದಲ್ಲಿ  ಅಂತರರಾಷ್ಟ್ರೀಯ ಕಲೆ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಕನ್ನಡ ಮತ್ತು ಸ೦ಸ್ಕೃತಿ ಇಲಾಖೆ ಡಾ.ರಾಜ್ ನೃತ್ಯೋತ್ಸವವನ್ನು ಅವರ ಜನ್ಮದಿನದ   ಪ್ರಯುಕ್ತ ಇತ್ತೀಚೆಗೆ ಆಯೋಜಿಸಿತ್ತು. ಈ ನೃತ್ಯೋತ್ಸವ ಒಂದು ಅವಿಸ್ಮರಣೀಯ ಅನುಭವ.  ಡಾ. ರಾಜ್ ಕುಮಾರ್ ಅವರ ಹಳೆಯ ಮತ್ತು ಅಷ್ಟೇ ಪ್ರಸಿದ್ಧಿ ಪಡೆದ ಸುಮಧುರ ಗೀತೆಗಳ ನೃತ್ಯದ ಸ೦ಭ್ರಮ ಕಲಾರಸಿಕರ ಮನ ತಣಿಸಿತು. 

ಆರ೦ಭದ ಪ್ರಸ್ತುತಿಯಲ್ಲಿ ಗುರು ರಾಧಾ ಶ್ರೀಧರ್ ಅವರ ಶಿಷ್ಯೆಯರಾದ ದೀಪ್ತಿ, ದಿವ್ಯ ಸಿ.ಎನ್, ‘ಶ್ರೀಕೃಷ್ಣ ದೇವರಾಯ’ ಚಿತ್ರದ ‘ಶರಣು ವಿರೂಪಾಕ್ಷ ಶಶಿಶೇಖರ’ ಗೀತೆಗೆ ನರ್ತಿಸಿದರು.  ನ೦ತರದಲ್ಲಿ ‘ಸ್ಕೂಲ್ ಮಾಸ್ಟರ್’ ಚಿತ್ರದ ‘ಭಾಮೆಯ ನೋಡಲು ತಾ ಬಂದ’, ‘ಶೃತಿ ಸೇರಿದಾಗ’ ಚಿತ್ರದ ‘ಬೊಂಬೆಯಾಟವಯ್ಯ’ ಹಾಡುಗಳಿಗೆ ನರ್ತಿಸಿದರು.  ಗುರು ಶಮಾ ಅವರ ಶಿಷ್ಯೆಯರಾದ ಕವಿತಾ,  ದೀಪ್ತಿ, ಮತ್ತು ಸುರಭಿ ‘ಕನಸಲ್ಲಿ ಬಂದವನಾರೆ’, ‘ಮೆಲ್ಲ ಮೆಲ್ಲನೆ ಬಂದನೇ’ ಹಾಗೂ ‘ಮರೆಯದ ಹಾಡು’ ಚಿತ್ರದ  ‘ಭುವನೇಶ್ವರಿಯ ನೆನೆ ಮಾನಸವೇ’ ಹಾಡುಗಳಿಗೆ ನೃತ್ಯ ಪ್ರದರ್ಶನ ಮಾಡಿದರು. 

ಗುರು ವೈಜಯಂತಿ ಕಾಶಿಯವರ ಪುತ್ರಿ ಪ್ರತೀಕ್ಷಾ  ಕಾಶಿ ‘ಬಬ್ರುವಾಹನ’ ಚಿತ್ರದ ‘ಆರಾಧಿಸುವೆ  ಮದನಾರಿ’ ಮತ್ತು ‘ಕವಿರತ್ನ ಕಾಳಿದಾಸ’ ಚಿತ್ರದ ‘ಮಾಣಿಕ್ಯವೀಣಾಂ ಉಪಲಾಲಯ೦ತೀ೦’ ಗೀತೆಗಳಿಗೆ ಅರ್ಥಪೂರ್ಣವಾಗಿ ಹೆಜ್ಜೆ ಹಾಕಿದರು. ನ೦ತರದ ಪ್ರಸ್ತುತಿಯಲ್ಲಿ ಶೇಷಾದ್ರಿ ಅಯ್ಯಂಗಾರ್ ಅವರ ಶಿಷ್ಯೆಯ೦ದಿರು ‘ಸನಾದಿ ಅಪ್ಪಣ್ಣ’ ಚಿತ್ರದ ‘ಕರೆದರೂ ಕೇಳದೆ’ ಹಾಗೂ ‘ದೇವರು ಕೊಟ್ಟ ತಂಗಿ’  ಚಿತ್ರದ ‘ಲಾಲಿಸಿದಳು ಮಗನ’ ಮತ್ತು  ‘ಭಾಮೆಯ ನೋಡಲು ತಾ ಬಂದ‘ ಗೀತೆಗಳಿಗೆ ನರ್ತಿಸಿದರು. ‌ಗುರು ಕಿರಣ್ ಸುಬ್ರಹ್ಮಣ್ಯಂ ಶಿಷ್ಯೆ  ಮಾತಂಗಿ ಎನ್. ಪ್ರಸನ್ನ ‘ಸನಾದಿ ಅಪ್ಪಣ್ಣ ’ ಚಿತ್ರದ ‘ಕರೆದರೂ ಕೇಳದೆ’ ಹಾಗೂ ‘ಎರಡು ಕನಸು’ ಚಿತ್ರದ ‘ಇಂದು ಎನಗೆ ಗೋವಿಂದ’ ಗೀತೆಗಳಿಗೆ ನರ್ತಿಸಿದರು.  

ವಿದ್ಯಾ ತಾಯೂರ್(ಎಂ.ಎನ್. ವ್ಯಾಸರಾವ್  ಅವರ ಸೊಸೆ)  ‘ಸಂಧ್ಯಾ ರಾಗ’ ಚಿತ್ರದ ‘ನಂಬಿದೆ ನಿನ್ನ ನಾದದೇವತೆಯೇ’ ಮತ್ತು ‘ಆಹಾ ಎಂಥ ಸಮಯ’ ಗೀತೆಗಳಿಗೆ ಅಚ್ಚುಕಟ್ಟಾಗಿ ನರ್ತಿಸಿದರು. ನಂತರ  ರಂಜನಿ ಗಣೇಶನ್  ಪುತ್ರಿ ಹಾಗೂ ಶಿಷ್ಯೆ, ಕಲಾವಿದೆ ದಕ್ಷಾ ಸ್ವಾಮಿನಾಥನ್  ‘ಜೀವನಚೈತ್ರ ಚಿತ್ರದ ‘ನಾದಮಯ ಈ ಲೋಕವೆಲ್ಲ’ , ‘ಇಮ್ಮಡಿ ಪುಲಕೇಶಿ’ ಚಿತ್ರದ ‘ಕನ್ನಡದ ಕುಲತಿಲಕ’, ‘ಓಂ’ ಚಿತ್ರದ  ‘ಬ್ರಹ್ಮಾನಂದ ಓಂಕಾರ’ ಗೀತೆಗಳಿಗೆ ಮನೋಜ್ಞವಾಗಿ  ನರ್ತಿಸಿದರು. ನಂತರ ಗುರು ಸುಪ್ರಿಯಾ ಕೋಮಂಡುರ್ ಶಿಷ್ಯೆಯರಾದ ಶ್ರುತಿ ಲಕ್ಷ್ಮಿ,  ಪ್ರಜ್ಞಾ, ಮಾಧುರಿ, ಇರ್ಶಿಕಾ ಕೃಷ್ಣಮೂರ್ತಿ  ‘ಹೊಸಬೆಳಕು’ ಚಿತ್ರದ ‘ತೆರೆದಿದೆ ಮನೆ ಓ ಬಾ ಅತಿಥಿ’  ಗೀತೆಗೆ ರಾಧೆಯ ಶೃಂಗಾರ ಹಾಗೂ  ಯಶೋದೆಯ ವಾತ್ಸಲ್ಯ ಭಾವಗಳಿಗೆ ಉತ್ತಮ ಅಭಿನಯ ನೀಡಿದರು.

ಕಾರ್ಯಕ್ರಮದ ಕೊನೆಯ ನೃತ್ಯಭಾಗದಲ್ಲಿ  ಶ್ರೀಕೃಷ್ಣ ದೇವರಾಯ ಚಿತ್ರದ  ‘ತಿರುಪತಿ ಗಿರಿವಾಸ’ ಹಾಡಿಗೆ ನರ್ತಿಸಿದರು.    ಕವಿ ಎಂ. ಎನ್. ವ್ಯಾಸರಾವ್,  ಅನನ್ಯ ಸಂಸ್ಥೆಯ ರಾಘವೇಂದ್ರ ರಾವ್ ಮತ್ತು ಕಲಾವಿದೆ ಮಾಳವಿಕಾ ಅವಿನಾಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.   ಒಟ್ಟಿನಲ್ಲಿ ಈ ಸದಭಿರುಚಿಯ ಕಾರ್ಯಕ್ರಮ ಅರ್ಥಪೂರ್ಣವಾಗಿ ಮೂಡಿ ಬಂದಿತು.

ಕೂಚಿಪುಡಿ ನೃತ್ಯ ಭಾವಾಭಿನಯ
ಯವನಿಕಾ ಸ೦ಭಾಗಣದಲ್ಲಿ ಇತ್ತೀಚೆಗೆ ಕೂಚಿಪುಡಿ ನೃತ್ಯವನ್ನ ಕಲಾರಸಿಕರು ಆಹ್ಲಾದಿಸುವ೦ತಾಯಿತು. ಗುರು ವೀಣಾ ವಿಜಯಾ ಮೂರ್ತಿ ಅವರ ಶಿಷ್ಯೆಯಾದ ಶ್ವೇತಾ ಕೆ. ಶೆಟ್ಟಿ  ಸಾಕಷ್ಟು ಪ್ರಗತಿ ಸಾಧಿಸಿರುವುದು ವ್ಯಕ್ತವಾಯಿತು. ಕಾರ್ಯಕ್ರಮದ ಆರಂಭವಾದದ್ದು ಸಾಂಪ್ರದಾಯಿಕ ಬ್ರಹ್ಮಾ೦ಜಲಿಯೊಂದಿಗೆ. ಇದು ರಾಗಮಾಲಿಕೆ ಮತ್ತು ಆದಿತಾಳದಲ್ಲಿತ್ತು. ನ೦ತರದ ಭಾಗದಲ್ಲಿ  ಕಲಾವಿದೆಯ ಆಯ್ಕೆ ‘ಉಲೂಪಿ ಶಬ್ದ೦’.  ಈ ಕೃತಿಯಲ್ಲಿ ಅರ್ಜುನನ ಬಳಿ ಒಬ್ಬ ಬ್ರಾಹ್ಮಣ ಬ೦ದು ತನ್ನ ಕಳೆದುಹೋದ ಹಸುಗಳನ್ನು ಮರಳಿ ಕೊಡಿಸಬೇಕೆ೦ದು ಕೇಳಿಕೊಳ್ಳುತ್ತಾನೆ. ಆಗ ಅರ್ಜುನನು  ತನ್ನ ಶಸ್ತ್ರಾಸ್ತ್ರ ತರಲು ಅರಮನೆಗೆ ಬರುತ್ತಾನೆ. ತನ್ನ ಅಣ್ಣ ಮತ್ತು ದ್ರೌಪದಿಯನ್ನು ಆ ಸನ್ನಿವೇಶದಲ್ಲಿ ಕ೦ಡು ಬಹಳ ವ್ಯಥೆ ಪಡುತ್ತಾನೆ. ನ೦ತರ ತನ್ನ ಪಾಪದ ತಪ್ಪಿಗಾಗಿ ತೀರ್ಥಯಾತ್ರೆಗೆ ಒಬ್ಬ೦ಟಿಗನಾಗಿ ಹೊರಡುತ್ತಾನೆ. ಸ೦ಯಮದಿ೦ದ ದೀರ್ಘ ತಪಸ್ಸಿನಲ್ಲಿರುವಾಗ ನಾಗ ದೇವತೆಯ ಮಗಳಾದ ಉಲೂಪಿಯು  ಪಾರ್ಥನನ್ನು ಕ೦ಡು ಮೋಹಿತಳಾಗುತ್ತಾಳೆ. ಅವನನ್ನು ನಾಗಲೋಕಕ್ಕೆ ಕರೆದುಕೊ೦ಡು ಹೋಗಿ  ಮದುವೆಯಾಗುತ್ತಾಳೆ. ಇದನ್ನು ಕಲಾವಿದೆ  ಪರಿಪೂರ್ಣವಾಗಿ ಪ್ರದರ್ಶಿಸಿದರು.

ಇದೊ೦ದು ಅಪರೂಪದ ಕೃತಿ  (ರಾಗ ರಾಗಮಾಲಿಕೆ ಮತ್ತು ಆದಿತಾಳ). ಕೂಚಿಪುಡಿ ನೃತ್ಯ ಸ೦ಪ್ರದಾಯದ ಪ್ರಕಾರ ತರ೦ಗ೦ಗೆ ವಿಶಿಷ್ಟ ಸ್ಥಾನವಿದೆ. ಇಲ್ಲಿ ಕಲಾವಿದೆಯು ಕನಕದಾಸರ ದೇವರನಾಮ  ‘ಬಾರೋ ಕೃಷ್ಣಯ್ಯ’ ರಚನೆಯಲ್ಲಿ ಕೃಷ್ಣನ ತು೦ಟಾಟ ಮತ್ತು ಅವನ ರೂಪವನ್ನ ಬಣ್ಣಿಸಿದರು. ನ೦ತರದಲ್ಲಿ ಕನಕದಾಸರಿಗೆ ಉಡುಪಿಯಲ್ಲಿ ಕೃಷ್ಣನ ನಿಜರೂಪ ದರ್ಶನ ನೀಡುವ ಪರಿಯನ್ನು ಕಲಾವಿದೆ ಅರ್ಥಪೂರ್ಣವಾಗಿ ಅಭಿನಯಿಸಿದರು. ಜಯದೇವ ಅಷ್ಟಪದಿಯಲ್ಲಿ ಅಭಿನಯವೂ ಹೆಚ್ಚು ಅಕರ್ಷಕವಾಗಿತ್ತು. ಇದರಲ್ಲಿ ಶ್ರೀ ಕೃಷ್ಣನ ಹಲವು ಲೀಲೆಗಳನ್ನು ಪ್ರತಿಬಿ೦ಬಿಸಿದರು  (ರಾಗ ರಾಗಮಾಲಿಕೆ ಆದಿತಾಳ).

ತಿಲ್ಲಾನದೊ೦ದಿಗೆ ಕಾರ್ಯಕ್ರಮ ಪರಿಪೂರ್ಣವಾಯಿತು. ಈ ಎಲ್ಲ ನೃತ್ಯಗಳನ್ನ ಗುರು  ವೀಣಾ ವಿಜಯಾ ಮೂರ್ತಿ ಸ೦ಯೋಜಿಸಿದ್ದು, ಕಲಾ ಶ್ರೀಮಂತಿಕೆಯನ್ನು ಮೆರೆಯುವಂತಿತ್ತು.

ಕಲಾವಿದೆಯ  ಉತ್ಸಾಹ ಮತ್ತು ಕಾಳಜಿ ನೃತ್ಯ ಪ್ರೇಮಿಗಳನ್ನು ರಸಾನಂದದಲ್ಲಿ ಮುಳುಗಿಸಿದವು. ಅವರು ಉಪಯೋಗಿಸಿದ ಧ್ವನಿ ಮುದ್ರಿತ ಸಂಗೀತ ಸಹಕಾರ ಉಪಯುಕ್ತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT