ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಟೆ ತಿರುಗಿಸುತ್ತ ಅಲ್ಲಮನ ಧ್ಯಾನಿಸುತ್ತ...

Last Updated 5 ಮಾರ್ಚ್ 2015, 19:30 IST
ಅಕ್ಷರ ಗಾತ್ರ

‘ಡೈರೆಕ್ಟರ್ಸ್‌ ಸ್ಪೆಷಲ್‌’ ಮೂಲಕ ಗಮನಸೆಳೆದ ನಟ ಧನಂಜಯ್‌ ‘ರಾಟೆ’ ಸಿನಿಮಾ ಮೂಲಕ ಹೊಸ ತಿರುವಿನ ನಿರೀಕ್ಷೆಯಲ್ಲಿದ್ದಾರೆ. ಅವರು ಒಪ್ಪಿಕೊಂಡಿರುವ ಪ್ರತಿ ಚಿತ್ರವೂ ಒಂದೊಂದು ತಿರುವಿನಂತೆ ಕಾಣಿಸುತ್ತಿರುವುದು ವಿಶೇಷ.

‘ನಿಮ್ಮನ್ನು ನೋಡಿದರೆ ಬರೆಯಬೇಕು ಎನಿಸುತ್ತದೆ. ಅದೇ ಖುಷಿ’– ‘ಡೈರೆಕ್ಟರ್ಸ್‌ ಸ್ಪೆಷಲ್‌’ ಚಿತ್ರ ವೀಕ್ಷಿಸಿದ ಬಳಿಕ ನಟ ಧನಂಜಯ್‌ ಅವರಿಗೆ ನಿರ್ದೇಶಕ ದುನಿಯಾ ಸೂರಿ ಹೇಳಿದ ಮಾತಿದು. ಸ್ಟಾರ್‌ ನಟರ ಇಮೇಜ್‌ಗೆ ತಕ್ಕಂತೆ ಕಥೆಗಳನ್ನು ಹೆಕ್ಕಿ ತಂದು ಸಿನಿಮಾ ಮಾಡುವ ನಿರ್ದೇಶಕರೇ ಹೆಚ್ಚಿರುವ ಕಾಲದಲ್ಲಿ, ನಿರ್ದೇಶಕರಲ್ಲಿ ಕಥೆ ಬರೆಯಬೇಕು ಎಂಬ ಉಮೇದು ಹುಟ್ಟಿಸುವ ನಟರ ಸಂಖ್ಯೆ ಅತಿ ವಿರಳ. ಅಂತಹ ಅಪರೂಪದ ನಟರ ಸಾಲಿಗೆ ಸೇರುತ್ತಾರೆ ಧನಂಜಯ್‌. ಧನಂಜಯ್ ಕೈಯಲ್ಲಿರುವ ಸಿನಿಮಾಗಳಲ್ಲಿನ ವೈವಿಧ್ಯದ ಕಥೆಗಳೇ ಇದಕ್ಕೆ ಉದಾಹರಣೆ. ‘ಸೂರಿ ಅವರಲ್ಲಿ ಬರೆಯಲು ಪ್ರೇರೇಪಣೆ ನೀಡುವಂತಹ ತಮ್ಮ ಮುಖಭಾವ ಅಮ್ಮನ ಬಳುವಳಿ, ಅಮ್ಮನ ಮುಖ ಲಕ್ಷಣಗಳೇ ತನಗೂ ಬಂದಿದೆ. ಹೀಗಾಗಿ ಅದರ ಶ್ರೇಯಸ್ಸು ಅಮ್ಮನಿಗೇ ಸೇರುತ್ತದೆ’ ಎನ್ನುತ್ತಾರೆ ಧನಂಜಯ್‌.

ಧನಂಜಯ್‌ ನಾಯಕರಾಗಿರುವ ಎರಡನೇ ಚಿತ್ರ ‘ರಾಟೆ’ ಯುಗಾದಿಗೆ ತೆರೆಕಾಣುತ್ತಿದೆ. ‘ರಾಟೆ’ಯ ಕಥೆಯಲ್ಲಿ ಬೇವು ಮತ್ತು ಬೆಲ್ಲ ಎರಡೂ ಇದೆ ಎನ್ನುವ ಧನಂಜಯ್‌, ಪ್ರೇಕ್ಷಕರಿಂದ ಬೆಲ್ಲ ನಿರೀಕ್ಷಿಸುತ್ತಿದ್ದಾರೆ. ‘ಡೈರೆಕ್ಟರ್ಸ್‌ ಸ್ಪೆಷಲ್‌’ ಬಿಡುಗಡೆಯಾದ ಸುಮಾರು ಎರಡು ವರ್ಷದ ನಂತರ ‘ರಾಟೆ’ ತೆರೆಕಾಣುತ್ತಿರುವುದರಿಂದ ಅವರ ನಿರೀಕ್ಷೆಗಳು ಇಮ್ಮಡಿಸಿದೆ. ‘ಕಾಲೇಜು ದಿನಗಳಲ್ಲಿ ಪರೀಕ್ಷೆ ಬರೆದಾಗಲೂ ಇಷ್ಟು ಚಡಪಡಿಕೆ ಇರುತ್ತಿರಲಿಲ್ಲ. ಈ ಪರೀಕ್ಷೆ ಹಾಗಲ್ಲ. ಲಕ್ಷಾಂತರ ಜನ ಮೌಲ್ಯಮಾಪನ ಮಾಡುತ್ತಾರೆ. ಒಮ್ಮೆ ಫಲಿತಾಂಶ ನೀಡಿದರೆ ಮುಗಿಯಿತು. ಒಳ್ಳೆಯ ಕಥೆ, ನಟನೆ ಮುಖ್ಯವಾಗುವುದಿಲ್ಲ. ಸೋಲು ಗೆಲುವಷ್ಟೇ ಇಲ್ಲಿ ಮುಖ್ಯ’ ಎನ್ನುತ್ತಾರೆ ಧನಂಜಯ್.

‘ಡೈರೆಕ್ಟರ್ಸ್‌ ಸ್ಪೆಷಲ್‌’ ಚಿತ್ರ ಅವರಿಗೆ ರಂಗಮಂಟಪದ ಮೇಲೆ ನಡೆಯುವ ಘಟನಾವಳಿಗಳಂತೆ ಅನಿಸಿದ್ದರೆ, ‘ರಾಟೆ’ ಹೊಸ ಪ್ರಪಂಚ ನೋಡಿದ ಅನುಭವ ನೀಡಿದೆ. ‘ರಾಟೆ’ಯನ್ನು ‘ರಸ್ತೆಯ ಮೇಲಿನ ಸಿನಿಮಾ’ ಎನ್ನುತ್ತಾರೆ ಅವರು. ‘ಇದು ಎ.ಪಿ. ಅರ್ಜುನ್‌ ಅವರ ‘ಅಂಬಾರಿ’ ಸ್ವರೂಪದ ಸಿನಿಮಾ. ಆದರೆ ಇನ್ನೂ ಪ್ರಬುದ್ಧತೆ ಕಾಣುತ್ತದೆ. ನೈಜತೆಗೆ ಹತ್ತಿರವಾಗಿರುವ ಕಲಾತ್ಮಕತೆಯನ್ನು ಬೆರೆಸಿದ ಪಕ್ಕಾ ಕಮರ್ಷಿಯಲ್‌ ಸಿನಿಮಾ ಇದು’ ಎಂದು ವಿವರಿಸುತ್ತಾರೆ. ಮಾಸ್‌ ಮತ್ತು ಕೌಟುಂಬಿಕ– ಎರಡೂ ವಲಯದ ಪ್ರೇಕ್ಷಕರನ್ನು ಸೆಳೆಯಲಿದೆ ಎಂಬ ನಂಬಿಕೆ ಅವರದು.

‘ನಮ್ಮ ಬದುಕು ಒಂದು ರೀತಿ ಸಾಗುತ್ತದೆ ಎಂದು ಅಂದುಕೊಂಡಿರುತ್ತೇವೆ. ಆದರೆ ಜೀವನದ ರಾಟೆ ಬೇರೆಯದನ್ನೇ ಬಯಸುತ್ತದೆ. ಬದುಕಿನ ರಾಟೆ ನಾವು ಅಂದುಕೊಂಡಂತೆ ಸುತ್ತುತ್ತದೆಯೋ ಅಥವಾ ಬೇರೆಯವರು ತಿರುಗಿಸಿದಂತೆ ಸುತ್ತುತ್ತದೆಯೋ ಎನ್ನುವ ಪ್ರಶ್ನೆಯನ್ನು ಸಿನಿಮಾ ಎತ್ತುತ್ತದೆ’ ಎನ್ನುತ್ತಾರೆ ಅವರು.

ಜನಸಾಮಾನ್ಯ ನಾಯಕ!
‘ರಾಟೆ’ಯಲ್ಲಿ ಕೇಬಲ್‌ ಆಪರೇಟರ್‌ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಧನಂಜಯ್‌, ತಮ್ಮ ಪಾತ್ರವನ್ನು ‘ಜನಸಾಮಾನ್ಯ ನಾಯಕ’ ಎಂದು ವಿಶ್ಲೇಷಿಸುತ್ತಾರೆ. ಹಾಡು, ಫೈಟ್‌ಗಳಿರುವ ಈ ಚಿತ್ರದಲ್ಲಿ ವ್ಯಾಪಾರಿ ಸಿನಿಮಾದ ಅಂಶಗಳಿವೆ. ಜತೆಗೇ ಸಾಮಾನ್ಯ ಮನುಷ್ಯನ ಬದುಕು, ಪ್ರೀತಿಯ ಸುತ್ತಲಿನ ಒದ್ದಾಟಗಳಿವೆ. ಹಾಗಾಗಿ ಅದನ್ನು ಕಾಮನ್‌ ಮ್ಯಾನ್‌ ಹೀರೊಯಿಸಂ ಎಂದು ಕರೆಯಬಹುದು ಎನ್ನುತ್ತಾರೆ ಅವರು. ನಾಯಕ ಜನಸಾಮಾನ್ಯರಲ್ಲಿ ಒಂದಾಗಿ, ಅವರಿಗಿಂತ ತುಸು ವಿಭಿನ್ನವಾಗಿ ಕಾಣಿಸುವ ಸಿನಿಮಾಗಳು ಇತ್ತೀಚಿನ ದಿನಗಳಲ್ಲಿ ಕಡಿಮೆ ಎನ್ನುವ ಅವರು ಪ್ರಯೋಗಕ್ಕೆ ತೆರೆದುಕೊಳ್ಳುವ ಬಗೆಯನ್ನು ಎರಡು ರೀತಿ ವಿಭಾಗಿಸುತ್ತಾರೆ.
ಮೊದಲನೆಯದು ಇಂಥದ್ದೇ ಸಿನಿಮಾಗಳಿಗೆ ಎಂದು ನಾಯಕನನ್ನು ಸೀಮಿತಗೊಳಿಸುವುದು.

ಒಂದು ಸಿನಿಮಾ ಗೆಲುವಿನ ಬೆನ್ನಲ್ಲಿ ಇಮೇಜ್‌ ರೂಪಿಸಿ ಅಂಥದ್ದೇ ಕಥೆಗಳನ್ನು ಪುನಃ ಸೃಷ್ಟಿಸುವುದು. ಅದರಿಂದ ಹೊರತಾದ ಸಿನಿಮಾ ಮಾಡಿದರೆ ಆತ ಗೆಲ್ಲಲಾರ ಎಂಬಂತಹ ವಾತಾವರಣ ನಿರ್ಮಾಣ ಮಾಡುವುದು. ಎರಡನೆಯದು ಇಮೇಜ್‌ ಅನ್ನು ಮೀರಿ ವಿಭಿನ್ನ ಸಿನಿಮಾಗಳಲ್ಲಿಯೂ ಗೆದ್ದು ಸಾಧಿಸುವುದು. ರಾಜ್‌ಕುಮಾರ್ ಅಂತಹ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡವರು. ಶಿವರಾಜ್‌ಕುಮಾರ್‌ ‘ಜನುಮದ ಜೋಡಿ’ಯಂತಹ ಸಿನಿಮಾದಲ್ಲಿಯೂ ಗೆಲ್ಲಬಲ್ಲರು, ‘ಜೋಗಿ’ಯಂತಹ ಸಿನಿಮಾ ಮಾಡಿಯೂ ಗೆಲ್ಲಬಲ್ಲರು.

ಈ ಎರಡು ವರ್ಗೀಕರಣಗಳನ್ನು ಅವರು ನೀಡಲು ಕಾರಣಗಳಿವೆ. ಧನಂಜಯ್‌ ನಟಿಸುತ್ತಿರುವ ಸಿನಿಮಾಗಳಲ್ಲಿಯೂ ವೈವಿಧ್ಯವಿದೆ. ‘ರಾಟೆ’, ‘ಬಾಕ್ಸರ್‌’, ‘ಬದ್ಮಾಶ್‌’, ‘ಅಲ್ಲಮ’ ಚಿತ್ರಗಳ ಮೂಲಕ ಈ ಎರಡೂ ವರ್ಗಗಳಿಗೆ ಸೇರುವ ತವಕ ಅವರದು. ‘ಅಲ್ಲಮ’ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಾಗ, ಕಮರ್ಷಿಯಲ್‌ ಸಿನಿಮಾದ ನಾಯಕನಾಗಿ ಹೆಸರು ಮಾಡಬೇಕಾದ ಸಂದರ್ಭದಲ್ಲಿ ಈ ರೀತಿಯ ಚಿತ್ರ ಬೇಕೆ? ಎಂದು ಪ್ರಶ್ನಿಸಿದವರೇ ಹೆಚ್ಚು. ಆದರೆ ತಮ್ಮೊಳಗಿನ ನಟನಿಗೆ ಅಂತಹ ಚಿತ್ರ ಬೇಕು ಎಂದು ಅವರಿಗೆ ಅನಿಸಿದೆ.

ನಾಗಾಭರಣ ಅವರಂತಹ ನಿರ್ದೇಶಕರ ಗರಡಿಯಲ್ಲಿ ಈ ಬಗೆಯ ಸಿನಿಮಾ ತಮಗೆ ಒಲಿದಿರುವುದು ಅದೃಷ್ಟ ಎನ್ನುವ ಧನಂಜಯ್‌, ಸಿನಿಮಾ ಚೆನ್ನಾಗಿದ್ದರೆ ಜನ ಖಂಡಿತಾ ಸ್ವೀಕರಿಸುತ್ತಾರೆ ಎನ್ನುತ್ತಾರೆ.

‘ಅಲ್ಲಮ’ ಚಿತ್ರಕ್ಕಾಗಿ ಅವರು ಸಾಕಷ್ಟು ತಯಾರಿ ನಡೆಸಿದ್ದಾರೆ. ಅಲ್ಲಮ ಹಟಯೋಗಿಯಾಗಿದ್ದರಿಂದ ದಿನದ ಹೆಚ್ಚು ಸಮಯ ಯೋಗ ಕಲಿಕೆಗೆ ಮೀಸಲಿಟ್ಟಿದ್ದಾರೆ ಧನಂಜಯ್. ರವಿಶಂಕರ್‌ ಶರ್ಮಾ ಅವರ ಬಳಿ ಮೃದಂಗದ ಪ್ರಾಥಮಿಕ ಸಂಗತಿಗಳನ್ನು ಅಭ್ಯಸಿಸುತ್ತಿದ್ದಾರೆ. ಬಳಿಕ ನೃತ್ಯ ತರಬೇತಿಯೂ ಪ್ರಾರಂಭವಾಗಲಿದೆ. ‘ಬಾಕ್ಸರ್‌’ಗೆ ದೇಹವನ್ನು ಸಿಕ್ಸ್‌ಪ್ಯಾಕ್‌ಗೆ ಒಗ್ಗಿಸಿರುವ ಅವರು ಜಿಮ್‌ನಲ್ಲಿ ತೀವ್ರ ಕಸರತ್ತು ನಡೆಸುತ್ತಿದ್ದರು. ಈಗ ಯೋಗದತ್ತಲೂ ಆಸಕ್ತಿ ಮೂಡಿದೆ. ಸಿನಿಮಾಕ್ಕಾಗಿ ಪ್ರಾರಂಭಿಸಿದ ಯೋಗವನ್ನು ಮುಂದುವರಿಸಲು ನಿರ್ಧರಿಸಿದ್ದಾರೆ.

ಕಳೆದು ಹೋಗುವ ಭಯ!
‘ಚಿತ್ರರಂಗ ಸಿನಿಮಾ ಮತ್ತು ಬದುಕು ಎರಡನ್ನೂ ಕಲಿಸುತ್ತದೆ. ಆದರೆ ಅದು ನಮ್ಮತನವನ್ನು ಕಸಿದುಕೊಳ್ಳುತ್ತದೆ. ಇಲ್ಲಿ ನಾವು ನಾವಾಗಿರುವುದು ಕಷ್ಟ. ಅವರಂತೆ ನಮ್ಮನ್ನು ಬದಲಿಸುತ್ತಾರೆ. ಇದು ಚಿತ್ರರಂಗದ ಕುರಿತ ದೂರಲ್ಲ. ಕೆಲವು ಅನುಭವಗಳು ನಮ್ಮತನವನ್ನು ಕಳೆಯುತ್ತವೆ. ಅವುಗಳನ್ನು ಉಳಿಸಿಕೊಳ್ಳುವುದೇ ಸವಾಲು. ವೈವಿಧ್ಯಮಯ ಸಿನಿಮಾಗಳ ಮೂಲಕ ಆತ್ಮವಿಶ್ವಾಸ ಪಡೆದುಕೊಳ್ಳುತ್ತಾರೆ, ಪ್ರತಿರೋಧ ಒಡ್ಡುತ್ತಿದ್ದೇನೆ’ ಎಂದು ಬಣ್ಣದ ಬದುಕಿನ ಇನ್ನೊಂದು ಮುಖವನ್ನು ಸೂಕ್ಷ್ಮವಾಗಿ ತೆರೆದಿಡುತ್ತಾರೆ ಧನಂಜಯ್. ಕಳೆದುಹೋಗುವ ತಮ್ಮತನವನ್ನು ಅವರು ಓದು, ಚಿಂತನೆ, ಗೆಳೆಯರ ಬಳಗದ ನಡುವೆ ಕಂಡುಕೊಳ್ಳುವ ಪ್ರಯತ್ನ ನಡೆಸಿದ್ದಾರೆ.

‘ಜಯನಗರ 4ನೇ ಬ್ಲಾಕ್‌’ ಎಂಬ ಕಿರುಚಿತ್ರಕ್ಕೆ ಕಥೆ ಹೆಣೆದ ಧನಂಜಯ್‌, ನಗರ ಸಂವೇದನೆಯ ಇನ್ನೊಂದು ಮಗ್ಗಲನ್ನು ಆಪ್ತವಾಗಿ ಹೊಸೆದಿದ್ದರು. ಬಿಡುವಿದ್ದಾಗ ಕಥೆಗಳನ್ನು ರಚಿಸುವುದು ಅವರ ಪ್ರವೃತ್ತಿ. ಹಳ್ಳಿಯಿಂದ ಬಂದು ನಗರವನ್ನು ವಿಭಿನ್ನವಾಗಿ ಗ್ರಹಿಸಬಲ್ಲ ಧನಂಜಯ್, ಸಿನಿಮಾಗಳ ಕಥೆಗಳನ್ನು ಹಳ್ಳಿಗಳಲ್ಲಿಯೇ ಹುಡುಕಬೇಕು ಎನ್ನುತ್ತಾರೆ.

‘ತಮಿಳಿನಲ್ಲಿ ಕಥೆಗಾಗಿ ಹಳ್ಳಿಗಳತ್ತ ಹೋಗುತ್ತಿದ್ದಾರೆ. ನಾವಿಲ್ಲಿ ಇನ್ನೂ ಬೆಂಗಳೂರಿನಲ್ಲಿಯೇ ಹುಡುಕುತ್ತಿದ್ದೇವೆ. ಸಣ್ಣ ಊರು, ಹಳ್ಳಿಗಳಲ್ಲಿನ ಕಥೆಗಳನ್ನು ಆಚೆ ತೆಗೆಯಬೇಕು’ ಎನ್ನುವ ಅವರಲ್ಲಿ ನಿರ್ದೇಶನಕ್ಕಿಳಿಯುವ ಯೋಚನೆ ಇದೆ. ಆದರೆ ಅದಕ್ಕೆ ಅವರಲ್ಲಿ ಆತುರವಿಲ್ಲ. ಸದ್ಯಕ್ಕೆ ನಟನಾಗಿ ವಿಭಿನ್ನ ಪಾತ್ರಗಳಿಗೆ ಒಡ್ಡಿಕೊಳ್ಳುತ್ತ ಬೆಳೆಯುವುದಷ್ಟೇ ಧನಂಜಯ್ ಗುರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT