ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ನಾಳೆ ಉಚಿತ ಆರೋಗ್ಯ ತಪಾಸಣೆ

Last Updated 9 ಅಕ್ಟೋಬರ್ 2015, 10:56 IST
ಅಕ್ಷರ ಗಾತ್ರ

ರಾಮನಗರ: ‘ಬೆಂಗಳೂರಿನ ಸ್ಪರ್ಶ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ರೋಟರಿ ರಾಮನಗರ ಜಂಟಿಯಾಗಿ ಇದೇ 10ರಂದು ರಾಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಸಮಾಲೋಚನಾ ಶಿಬಿರವನ್ನು ಹಮ್ಮಿಕೊಂಡಿವೆ’ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಕನಕತಾರ ತಿಳಿಸಿದರು.   

‘ಕಾಲೇಜಿನ ವಿದ್ಯಾರ್ಥಿಗಳು, ಅವರ ಪೋಷಕರು ಹಾಗೂ ಸಾರ್ವಜನಿಕರ ಆರೋಗ್ಯವನ್ನು ಗಮನದಲ್ಲಿ ಇಟ್ಟುಕೊಂಡು ಆರೋಗ್ಯ ಶಿಬಿರ ನಡೆಯಲಿದ್ದು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಶಿಬಿರದಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಅವರ ರಕ್ತದ ಗುಂಪು ಯಾವುದು ಎಂಬುದನ್ನು ಇಲ್ಲಿ ತಿಳಿಸಲಾಗುತ್ತದೆ. ಜತೆಗೆ ಆರೋಗ್ಯ ಸುಧಾರಣೆಗೆ ಕೈಗೊಳ್ಳಬೇಕಾದ ಕ್ರಮಗಳು ಏನು ಎಂಬುದರ ಬಗ್ಗೆ ನುರಿತ ವೈದ್ಯರು ತಿಳಿಹೇಳುವರು. ವಿದ್ಯಾರ್ಥಿನಿಯರಲ್ಲಿ ‘ಹಿಮೋಗ್ಲೋಬಿನ್‌’ ಪ್ರಮಾಣ ಎಷ್ಟಿದೆ ಎಂಬುದನ್ನು ಸಹ ತಿಳಿಸಲು ಆಸ್ಪತ್ರೆಯವರು ಒಪ್ಪಿಗೆ ಸೂಚಿಸಿದ್ದಾರೆ’ ಎಂದರು.

ಸ್ಪರ್ಶ ಆಸ್ಪತ್ರೆಯ ನರರೋಗ ತಜ್ಞರಾದ ವಿವೇಕಾನಂದ ಮಾತನಾಡಿ, ‘ಬದುಕಿಗೆ ಭರವಸೆಯ ಸ್ಪರ್ಶ ಎಂಬ ಧ್ಯೇಯದೊಂದಿಗೆ ಸ್ಪರ್ಶ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯು ಸಾಮಾಜಿಕ ಕಾಳಜಿಯಿಂದ ಜಿಲ್ಲಾ ಕೇಂದ್ರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿದೆ. ಇದರಲ್ಲಿ ಈ ಕಾಲೇಜಿನ ವಿದ್ಯಾರ್ಥಿಗಳಷ್ಟೇ ಅಲ್ಲದೆ, ಜಿಲ್ಲೆಯ ಇತರ ಕಾಲೇಜಿನ ವಿದ್ಯಾರ್ಥಿಗಳು, ಅವರ ಪೋಷಕರು ಮತ್ತು ಸಾರ್ವಜನಿಕರು ಪಾಲ್ಗೊಳ್ಳಬಹುದು’ ಎಂದು ಹೇಳಿದರು.

ಉಚಿತ ಸೇವೆಗಳು: ಶಿಬಿರದಲ್ಲಿ ಭಾಗವಹಿಸುವರರ ತೂಕ, ಎತ್ತರವನ್ನು ತಿಳಿಸಲಾಗುತ್ತದೆ. ಅಲ್ಲದೆ ರಕ್ತದೊತ್ತಡ, ಮಧುಮೇಹ, ಜಿಆರ್‌ಬಿಎಸ್‌, ಇಸಿಜಿ, ಇಸಿಎಚ್‌ಒ (ಎಕೊ), ಅಲ್ಟ್ರಾಸೌಂಡ್‌, ಎಕ್ಸ್‌ರೇ ಸೇವೆಗಳನ್ನು ಉಚಿತವಾಗಿ ಒದಗಿಸಲಾಗುತ್ತದೆ.   ಜತೆಗೆ ಜನರಲ್‌ ಮೆಡಿಸಿನ್‌, ಮೂಳೆ, ಬೆನ್ನು ಮೂಳೆ, ನರರೋಗ, ನರರೋಗದ ಶಸ್ತ್ರ ಚಿಕಿತ್ಸೆ, ಹೃದಯ ಸಂಬಂಧಿ ಕಾಯಿಲೆ, ಬೆನ್ನುಹುರಿ, ಗ್ಯಾಸ್ಟ್ರೋ ಎಂಟರಾಲಾಜಿ ಮತ್ತು ಸರ್ಜಿಕಲ್‌, ಹೃದ್ರೋಗ ಶಸ್ತ್ರಚಿಕಿತ್ಸೆ, ಸ್ತ್ರೀರೋಗ, ಡಯಾಬೆಟಾಲಜಿ, ಎಂಡೋಕ್ರೈನಾಲಜಿ, ಮೂತ್ರರೋಗ, ಮೂತ್ರಪಿಂಡ ರೋಗ, ಶಿಶುವೈದ್ಯ ಶಾಸ್ತ್ರ ಸೇರಿದಂತೆ ಹಲವು ಬಗೆಯ ಚಿಕಿತ್ಸೆಗಳನ್ನು ಅಗತ್ಯ ಇರುವವರಿಗೆ ಸಮಾಲೋಚನೆ ನಡೆಸಿ ಒದಗಿಸಲಾಗುವುದು ಎಂದರು.

‘ಸ್ಪರ್ಶ ಆಸ್ಪತ್ರೆ ಸೂಪರ್‌ ಸ್ಪೆಷಾಲಿಟಿಯ ಬಹುತೇಕ ಎಲ್ಲ ವಿಭಾಗಗಳನ್ನು ಒಂದು ದಿನದ ಮಟ್ಟಿಗೆ ರಾಮನಗರದ ಈ ಕಾಲೇಜಿಗೆ ತರಲಾಗುತ್ತಿದೆ. ಎಲ್ಲ ವಿಭಾಗಗಳ 35ರಿಂದ 40 ನುರಿತ ವೈದ್ಯರು ಶಿಬಿರದಲ್ಲಿ ಭಾಗವಹಿಸಿ, ತಪಾಸಣೆ, ಸಮಾಲೋಚನೆ ಮಾಡಲಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

‘ಯಾರಿಗಾದರೂ ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ ಎಂದು ಕಂಡು ಬಂದರೆ ಅವರಿಗೆ ಆಸ್ಪತ್ರೆಯ ವಿಶೇಷ ಕಾರ್ಡ್‌ ಒದಗಿಸಲು ನಿರ್ಧರಿಸಲಾಗಿದೆ. ಅದರಿಂದ ರೋಗಿಗೆ ಸ್ಪರ್ಶ ಆಸ್ಪತ್ರೆಯಲ್ಲಿ ಶೇ 20ರಿಂದ 30ರಷ್ಟು ರಿಯಾಯಿತಿ ದರದಲ್ಲಿ ಚಿಕಿತ್ಸೆ ಪಡೆಯಲು ಅನುಕೂಲವಾಗುತ್ತದೆ’ ಎಂದು ಅವರು ತಿಳಿಸಿದರು.

ಮೊದಲ ಬಾರಿ: ಕಾರ್ಯಕ್ರಮದ ಸಂಯೋಜಕರೂ ಆದ ಸಮಾಜಶಾಸ್ತ್ರ ವಿಭಾಗದ ಡಾ. ಮೋಹನ್‌ ದಾಸ್‌ ಮಾತನಾಡಿ, ‘ಇದು ಸಂಪೂರ್ಣ ಉಚಿತ ಆರೋಗ್ಯ ತಪಾಸಣಾ ಶಿಬಿರವಾಗಿದ್ದು, ಯಾವುದೇ ನೋಂದಣಿ ಶುಲ್ಕವೂ ಇರುವುದಿಲ್ಲ ’ ಎಂದರು.

ವಿದ್ಯಾರ್ಥಿಗಳಿಗೆ ಆಂತರಿಕ ಅಂಕ: ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಾಗವಾಗಿ ಆಂತರಿಕ ಅಂಕಗಳನ್ನು ಬೋಧಕರು ನೀಡಬೇಕಿದೆ. ಆರೋಗ್ಯ ಶಿಬಿರ ಕುರಿತು ಪ್ರಚಾರ ಕಾರ್ಯದಲ್ಲಿ ಹಾಗೂ ಶಿಬಿರದಲ್ಲಿ ಸ್ವಯಂ ಸೇವಕರಾಗಿ ಪಾಲ್ಗೊಳ್ಳುವ ಎಲ್ಲ ವಿದ್ಯಾರ್ಥಿಗಳಿಗೆ 10 ಆಂತರಿಕ ಅಂಕಗಳನ್ನು ನೀಡಲು ಕಾಲೇಜು ತೀರ್ಮಾನಿಸಿದೆ ಎಂದು ಮೋಹನ್‌ ದಾಸ್‌ ತಿಳಿಸಿದರು. ರೋಟರಿ ರಾಮನಗರದ ಅಧ್ಯಕ್ಷ ಅಲ್ತಾಫ್‌ ಮಾತನಾಡಿ, ‘ಶಿಬಿರಕ್ಕೆ ಬೇಕಾದ ನೀರು, ವಾಹನ ಹಾಗೂ ಪ್ರಚಾರದ ಜವಾಬ್ದಾರಿಯನ್ನು ರೋಟರಿ ವಹಿಸಿಕೊಂಡಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT