ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಾಪುರದಿಂದ ಜಿನೀವಾ ತನಕ

Last Updated 14 ನವೆಂಬರ್ 2013, 8:33 IST
ಅಕ್ಷರ ಗಾತ್ರ

ಐದನೇ ತರಗತಿಯಲ್ಲಿರುವಾಗಲೇ ಮಕ್ಕಳ ನಡುವೆ ಈಕೆಗೆ ನಾಯಕಿಯ ಸ್ಥಾನವಿತ್ತು. ಆಗಲೂ ಅಷ್ಟೇ ವಯಸ್ಸು, ಸಣ್ಣದಾಗಿದ್ದರೂ ಆಡುವ ಮಾತುಗಳು ದೊಡ್ಡವಾಗಿದ್ದವು. ಈಗ ಪದವಿ ಪೂರ್ವ ವಿದ್ಯಾರ್ಥಿನಿ. ಮಾತು ಮತ್ತು ಕ್ರಿಯೆಗಳಲ್ಲಿ ಮಾತ್ರ ನುರಿತ ಹೋರಾಟಗಾರ್ತಿಯ ಪರಿಣತಿ ಕಾಣಿಸುತ್ತದೆ.

ಆಕೆ ಹೊರಾಟಕ್ಕಾಗಿ ಆರಿಸಿಕೊಂಡಿರುವ ವಿಚಾರಗಳೂ ಅಷ್ಟೇ. ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಶೌಚಾಲಯ ಕಟ್ಟಿಸಿ ಎಂಬ ತನ್ನ ಮಾತನ್ನು ಸರ್ಕಾರ ಕೇಳಿಸಿಕೊಳ್ಳುವಂತೆ ಹೇಳುವ ಈಕೆ ಸೈಕಲ್‌ನಲ್ಲಿ ಊರೂರು ಸುತ್ತಿ ಪರಿಸರ ಉಳಿಸಿ ಎಂದು ಜನ ಜಾಗೃತಿ ಮೂಡಿಸುವುದಕ್ಕೂ ಸಿದ್ಧ. ಸಾಮೂಹಿಕ ವಿವಾಹಗಳು ನಡೆಯುತ್ತಿರುವ ಸ್ಥಳಗಳಿಗೆ ತೆರಳಿ ಬಾಲ್ಯ ವಿವಾಹ ನಡೆಯುತ್ತಿದ್ದರೆ ಅದನ್ನು ಪತ್ತೆ ಹಚ್ಚುವ ತನಿಖಾ ಪಟುತ್ವವೂ ಈ ಪದವಿ ಪೂರ್ವ ತರಗತಿಯ ವಿದ್ಯಾರ್ಥಿನಿಗಿದೆ.

ಈಕೆ ಯಾರು ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಡಿರಬಹುದು. ವಿಶ್ವಸಂಸ್ಥೆಯ ತನಕ ಹೋಗಿಬಂದ ಧಾರವಾಡದ ರಾಮಾಪುರ ಗ್ರಾಮದ ಮಂಜುಳಾ ಮಹಾಂತೇಶ ಮುನವಳ್ಳಿ. 10ನೇ ವಯಸ್ಸಿನಲ್ಲಿ ಮಕ್ಕಳ ಪರ ಮಾತನಾಡುವುದನ್ನು ಆರಂಭಿಸಿದ ಈಕೆ ಈಗ ಧಾರವಾಡದ ಎಲ್‌ಆರ್‌ಎಸ್‌ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿನಿ. ವಯಸ್ಸು ಹದಿನೇಳು.

ಹಿಂದೆ ಮಕ್ಕಳ ಪ್ರತಿನಿಧಿಯಾಗಿ ಮಾತಿಗಿಳಿಯುತ್ತಿದ್ದ ಮಂಜುಳಾ ಈಗ ಮಕ್ಕಳ ಹಕ್ಕುಗಳ ಹೋರಾಟಗಾರ್ತಿಯಾಗಿ ಅಖಾಡಕ್ಕಿಳಿಯುತ್ತಾರೆ. ಮಂಜುಳಾ ಕೇವಲ ಹುಬ್ಬಳ್ಳಿ–ಧಾರವಾಡಕ್ಕೆ ಸೀಮಿತವಾಗಿಲ್ಲ, ಅವರ ಪ್ರತಿಭೆ ಸಮುದ್ರದಾಚೆಗೂ ಸಾಗಿದೆ. ಅಕ್ಟೋಬರ್‌ 10ರಂದು ಜಿನೀವಾದಲ್ಲಿ ನಡೆದ 66ನೇ ಅಂತರರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿ ವಿಚಾರ ಮಂಡಿಸಿದ್ದಾರೆ.

ಆ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಮಂಜುಳಾ ಕನ್ನಡ ನುಡಿಯನ್ನು ಬಳಸಿದ್ದಾರೆ. ಎಂಟು ನಿಮಿಷದ ವಿಷಯ ಮಂಡನೆಯಲ್ಲಿ ಕರ್ನಾಟಕದ ವಿವಿಧ ಶೈಕ್ಷಣಿಕ ಯೋಜನೆಗಳ ಮೂಲಕ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಬಗ್ಗೆ ಹೇಳಿದಂತೆಯೇ ಕ್ಷೀರಭಾಗ್ಯ,  ಪೌಷ್ಟಿಕಾಂಶದ ಮಾತ್ರೆಗಳ ವಿತರಣೆ, ಮಕ್ಕಳ ಪ್ರತಿಭೆಯ ಅನಾವರಣಕ್ಕೆ ಇರುವ ಹಲವು ಯೋಜನೆಗಳ ಕುರಿತು ಚರ್ಚಿಸಿದ್ದಾರೆ. ಬಿಹಾರದಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿ ಅಸುನೀಗಿದ ಮಕ್ಕಳ ಕುರಿತೂ ಹೇಳಿದ್ದಾರೆ. ಇವೆಲ್ಲವುಗಳ ಜೊತೆಗೆ ಕಡ್ಡಾಯ ಶಿಕ್ಷಣ ಕಾಯ್ದೆಯಲ್ಲಿ ಉಚಿತ ಶಿಕ್ಷಣ ಪಡೆಯುವ ಮಕ್ಕಳ ವಯಸ್ಸನ್ನು 6ರಿಂದ 18ರವರೆಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಬಾಲ ಕಾರ್ಮಿಕರ ಕಾನೂನಿನಲ್ಲಿರುವ ‘ಬಾಲಕಾರ್ಮಿಕರು’ ಪದದ ಆರ್ಥವನ್ನು ‘ಅಪಾಯಕಾರಿ ಸ್ಥಳದಲ್ಲಿ ಕೆಲಸ ಮಾಡುವವರು ಮಾತ್ರ’ ಎಂಬ ವಾಖ್ಯೆಯನ್ನು  ‘ದುಡಿಯುವ ಮಕ್ಕಳು’ ಎಂದು ಬದಲಾಯಿಸಬೇಕು ಎಂಬ ಸಲಹೆ ಮಂಜುಳಾ ಅವರದ್ದು. ಹಾಗೆಯೇ ಬಾಲಾಪರಾಧಿ ಕಾನೂನಿನಲ್ಲಿ ‘ಬಾಲಾಪರಾಧಿ’ಗಳ ವಯಸ್ಸನ್ನು 18ಕ್ಕೆ ಏರಿಸುವ ಪ್ರಸ್ತಾಪಕ್ಕೂ ಅವರ ಬಲವಾದ ವಿರೋಧವಿದೆ.

ಹಸಿರು ಕಾನನದ ರಾಮಾಪುರ
ಧಾರವಾಡದಿಂದ 22 ಕಿ.ಮೀ ದೂರದಲ್ಲಿರುವ ರಾಮಾಪುರ ಕಾಡಿನ ನಡುವಣ ಹಳ್ಳಿ. ಇಲ್ಲಿಂದ ಧಾರವಾಡಕ್ಕೆ ಬರುವುದಕ್ಕೆ ಬೆಳಿಗ್ಗೆ 7.15ಕ್ಕೆ ಒಂದು ಬಸ್ ಇದೆ. ಇದನ್ನು ಬಿಟ್ಟರೆ 9.30ರವರೆಗೆ ಕಾಯಬೇಕು. ಮಂಜುಳಾ ಬೇಗನೆ ಎದ್ದು 7.15ರ ಬಸ್‌ ಹತ್ತಿ ಧಾರವಾಡಕ್ಕೆ ಬಂದು ಕಾಲೇಜು ಮತ್ತು ಮಕ್ಕಳ ಸಂಘದ ಚಟುವಟಿಕೆ ಮುಗಿಸಿಕೊಂಡು ಮನೆಗೆ ತೆರಳುವುದು ಸಂಜೆಗೆ. ರೈತ ಕುಟುಂಬದ ಮಂಜುಳಾಗೆ ಮನೆ ಕೆಲಸ, ಹೊಲಗೆಲಸವೂ ಗೊತ್ತು.

ಕಾಲೇಜಿನಿಂದ ಮನೆಗೆ ಬಂದ ನಂತರ ಎಮ್ಮೆ, ದನ ಕಟ್ಟುವುದು, ತಿಂಡಿ ಕೊಡುವುದು, ಮೇವು ಹಾಕುವ ಕೆಲಸಗಳಲ್ಲೂ ತೊಡಗಿಸಿಕೊಳ್ಳುತ್ತಾರೆ. ರಜೆಯ ದಿನಗಳಲ್ಲಿ ಜೋಳ ಬಿಡಿಸುವುದು, ಕಳೆ ಕೀಳುವ, ಗೊಬ್ಬರ ಹಾಕುವ ಕೆಲಸಗಳನ್ನೂ ಮಾಡುತ್ತಾರೆ. ತಂದೆ ಮಹಾಂತೇಶ ಬಸಪ್ಪ ಮುನವಳ್ಳಿ, ತಾಯಿ ಮಹಾದೇವಿ. ನೇತ್ರಾವತಿ, ಪ್ರತೀಕ್ಷಾ ಎಂಬ ಇಬ್ಬರು ತಂಗಿಯರು, ಬಸವರಾಜನೆಂಬ ತಮ್ಮ ಇರುವ ತುಂಬು ಕುಟುಂಬದಲ್ಲಿ ಮಂಜುಳಾರದ್ದೇ ಮೇಲುಗೈ. ಆಕೆ ಹೇಳುವ ಮಾತುಗಳಿಗೆ ಮನೆಯಲ್ಲೂ ಊರಿನಲ್ಲೂ ಒಂದು ಮಹತ್ವವಿದೆ.

ಮಂಜುಳಾ ಸಾರ್ವಜನಿಕವಾಗಿ ಮೊದಲು ಮಾತನಾಡಿದ್ದು ರಾಮಾಪುರ ಗ್ರಾಮ ಪಂಚಾಯಿತಿಯ ‘ಮಕ್ಕಳ ಗ್ರಾಮ ಸಭೆ’ಯಲ್ಲಿ. 2005ರಿಂದ ಅವರು ಮಕ್ಕಳ ಗ್ರಾಮಸಭೆಯ ಪ್ರತಿನಿಧಿ. ಪಂಚಾಯಿತಿ ವ್ಯಾಪ್ತಿಯ ಮಕ್ಕಳನ್ನು ಒಂದೆಡೆ ಸೇರಿಸಿ ಗ್ರಾಮದ ಹಾಗೂ ಶಾಲೆಗಳ ಸಮಸ್ಯೆಗಳ ಸದಸ್ಯರು ಹಾಗೂ ಅಧಿಕಾರಿಗಳ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದರು. ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣವಾಗಬೇಕು ಎಂಬುದನ್ನು ಮುಖ್ಯವಾಗಿ ಚರ್ಚಿಸುತ್ತಿದ್ದರು. ಇತರೆ ಶಾಲಾ ಮಕ್ಕಳು ಅಧಿಕಾರಿಗಳನ್ನು ಪ್ರಶ್ನೆ ಕೇಳುವಂತೆ ಪ್ರೇರೇಪಿಸುವ ಕೆಲಸ ಮಾಡುತ್ತಿದ್ದರು. ಇದು ಅವರ ಸಂಘಟನಾ ಚಾತುರ್ಯದ ಬೆಳವಣಿಗೆಗೆ ಕಾರಣವಾಯಿತು.
ಈ ಎಲ್ಲಾ ಚಟುವಟಿಕೆಗಳು ಅವರ ಪಠ್ಯ ಸಂಬಂಧಿ ಸಾಧನೆಗಳನ್ನೇನೂ ಮುಕ್ಕಾಗಿಸಲಿಲ್ಲ. ಅಲ್ಲಿಯೂ ಅವರು ಯಶಸ್ಸಿನ ಹಾದಿಯಲ್ಲೇ ಇದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ಆಶುಭಾಷಣ ಸ್ಪರ್ಧೆ, ಗಾದೆ ಹೇಳುವ ಸ್ಪರ್ಧೆ, ವಚನ ಸ್ಪರ್ಧೆಯಲ್ಲಿ ಹಲವು ಬಹುಮಾನ ಗಳಿಸಿದ್ದಾರೆ. ಯಾವುದೇ ವಿಷಯ ಕೊಟ್ಟರೂ ಅರಳು ಹುರಿದಂತೆ ಮಾತನಾಡುತ್ತಿದ್ದ ಮಂಜುಳಾ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ರಾಮಾಪುರದಲ್ಲೇ ಮುಗಿಸಿದ ಮಂಜುಳಾ ಮಾಧ್ಯಮಿಕ ಮತ್ತು ಪ್ರೌಢಶಿಕ್ಷಣವನ್ನು ಸಮೀಪದ ವೀರಾಪುರದಲ್ಲಿ ಪೂರೈಸಿದರು.

ಗುಬ್ಬಚ್ಚಿ ಮಕ್ಕಳ ಸಂಘ
ಕರ್ನಾಟಕ ರಾಜ್ಯ ಸಮಗ್ರ ಅಭಿವೃದ್ಧಿ ಸೇವಾ ಸಂಸ್ಥೆ, ಗುಲಾಬಿ ಮಕ್ಕಳ ಸಂಘದ ಪ್ರತಿನಿಧಿ ಹುದ್ದೆ ಸೇರಿದಂತೆ ರಾಜ್ಯದ ಹಲವು ಮಕ್ಕಳ ಸಂಘಗಳ ಪ್ರತಿನಿಧಿಯಾಗಿ ಮಂಜುಳಾ ಕಾರ್ಯ ನಿರ್ವಹಿಸುತ್ತಿದ್ದಾರೆ. 2008ರಲ್ಲಿ ಗುಬ್ಬಚ್ಚಿ ಮಕ್ಕಳ ಮಹಾಸಂಘದ ಉಪಾಧ್ಯಕ್ಷೆಯಾಗಿ ನೇಮಕಗೊಂಡ ಮೇಲೆ ಉತ್ತರ ಕರ್ನಾಟಕದಲ್ಲಿ ಮಂಜುಳಾ ಹಲವು ಮಹತ್ವದ ಕಾರ್ಯಗಳನ್ನು ಕೈಗೊಂಡಿದ್ದಾರೆ. ಧಾರವಾಡ ಜಿಲ್ಲೆಯ 10 ಗ್ರಾಮಗಳಲ್ಲಿ ಸೈಕಲ್‌ ಸಂಚಾರ ಮಾಡಿ, ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಹಾಗೆಯೇ ಪರಿಸರ ಸಂರಕ್ಷಣೆಯ ಕರಪತ್ರ ಹಂಚುವುದು, ಭಿತ್ತಿ ಪತ್ರಗಳ ಪ್ರದರ್ಶನ, ಮಕ್ಕಳನ್ನು ಶಾಲೆಗೆ ಕರೆತರುವುದು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ರೂಪಿಸಿ ಭಾಗವಹಿಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆ ವೇಳೆ ಅಭ್ಯರ್ಥಿಗಳನ್ನು ಸಂವಾದಕ್ಕೆ ಆಹ್ವಾನಿಸಿ ಮಕ್ಕಳ ಹಕ್ಕುಗಳ ಕುರಿತು ಅವರೊಂದಿಗೆ ಚರ್ಚಿಸಿ ಗಮನಸೆಳೆದಿದ್ದಾರೆ. ಸಾಮೂಹಿಕ ವಿವಾಹ ನಡೆಯುವ ಸ್ಥಳಗಳಿಗೆ ತೆರಳಿ ಬಾಲ್ಯ ವಿವಾಹ ಪ್ರಕರಣಗಳನ್ನು ಪತ್ತೆ ಹಚ್ಚಿ ಅಧಿಕಾರಿಗಳ ಗಮನಕ್ಕೆ ತರುವ ಕೆಲಸವನ್ನು ತಮ್ಮ ಗುಬ್ಬಚ್ಚಿ ಸಂಘದ ಮೂಲಕ ಮಾಡುತ್ತಿದ್ದಾರೆ.

ಮಕ್ಕಳ ಹಕ್ಕುಗಳ ವರದಿ
ಜಿನೀವಾ ಮಕ್ಕಳ ಸಮ್ಮೇಳನದಲ್ಲಿ ಭಾಗವಹಿಸುವ ಅವಕಾಶ ಮಂಜುಳಾಗೆ ದೊರೆಯಲು ಕೇವಲ ಚರ್ಚಾಸ್ಪರ್ಧೆ, ಮಕ್ಕಳ ಪರ ಚಟುವಟಿಕೆಗಳು ಮಾತ್ರ ಕಾರಣವಲ್ಲ. ಕರ್ನಾಟಕದ ಮಕ್ಕಳ ಸ್ಥಿತಿಗತಿಯ ಬಗ್ಗೆ ವರದಿಯೊಂದನ್ನು ಸಿದ್ಧಪಡಿಸುವ ರಾಜ್ಯಮಟ್ಟದ ಸ್ಪರ್ಧೆಯೊಂದು ನಡೆಯಿತು. ಇದರಲ್ಲಿ 300 ಮಕ್ಕಳು ಭಾಗವಹಿಸಿದ್ದರು. ಇವರಲ್ಲಿ ಮಂಜಳಾ ಹಾಗೂ ಮೈಸೂರು ಮತ್ತು ದಕ್ಷಿಣ ಕನ್ನಡದಿಂದ ಮೂವರನ್ನು ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆರಿಸಲಾಯಿತು. ನಂತರ ನಡೆದ ‘ಆಲ್ಟರ್ನೇಟಿವ್‌ ಚೈಲ್ಡ್  ರಿಪೋರ್ಟ್‌’ ತಯಾರಿಸುವ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಮಂಜುಳಾ ಸೇರಿ 9 ಮಕ್ಕಳು ಆಯ್ಕೆಯಾದರು. ನಂತರ ಇನ್ನೊಂದು ಪರಿಷ್ಕೃತ ರಾಷ್ಟ್ರಮಟ್ಟದ ಸ್ಪರ್ಧೆ ನಡೆಸಲಾಯಿತು. ಅದರಲ್ಲಿ ಕರ್ನಾಟಕದ ಮಂಜುಳಾ ಮತ್ತು ಗುಜರಾತ್‌ನ ಅಪ್ಸಾನ ಆಯ್ಕೆಯಾಗಿ ಜಿನೀವಾ ಸಮ್ಮೇಳನದಲ್ಲಿ ಭಾಗವಹಿಸುವ ಅವಕಾಶ ಪಡೆದರು.

ಕಾನೂನು ಕಲಿಯುವ ಗುರಿ
ಮಂಜುಳಾರ ಮಾತುಗಳನ್ನು ಕೇಳಿಸಿಕೊಂಡವರೆಲ್ಲರೂ ಆಕೆಗೆ ನಾಗರಿಕ ಸೇವೆಗಳಿಗೆ ಸೇರುವ ಸಲಹೆ ಮಾಡುತ್ತಾರೆ. ಆದರೆ ಆಕೆಯ ಮನಸ್ಸಿನಲ್ಲಿರುವುದೇ ಬೇರೆ. ‘ಐಎಎಸ್‌ ಮಾಡಿ ಅಧಿಕಾರಿಯಾದರೆ ಹೋರಾಟಗಾರ್ತಿಯಾಗಿ ಅಖಾಡಕ್ಕಿಳಿಯಲು ಸಾಧ್ಯವಿಲ್ಲ. ಮಕ್ಕಳ ಹಕ್ಕುಗಳಿಗಾಗಿ ಹೋರಾಡುವುದೇ ನನ್ನ ಗುರಿ. ಅದಕ್ಕಾಗಿ ಕಾನೂನು ಅಧ್ಯಯನ ಮಾಡುತ್ತೇನೆ. ಪಿಯುಸಿ ಮುಗಿಯುತ್ತಲೇ ಕಾನೂನು ಶಿಕ್ಷಣಕ್ಕೆ ಸೇರುತ್ತೇನೆ’ ಎನ್ನುತ್ತಾರೆ ಮಂಜುಳಾ.

ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿದ ನಂತರ ಮಂಜುಳಾ ಮನೋಭಾವವೂ ಬದಲಾಗಿದೆ. ಇಷ್ಟು ದಿನ ಮಕ್ಕಳ ಜೊತೆ ಮಗುವಾಗಿರುತ್ತಿದ್ದ ಮಂಜುಳಾ, ಮಕ್ಕಳ ಜೊತೆ ಹೋರಾಟಗಾರ್ತಿಯಾಗಿರುವ ನಿರ್ಧಾರ ಮಾಡಿದ್ದಾರೆ. ಮಂಜುಳಾ ದೊಡ್ಡ ದೊಡ್ಡ ಮಾತುಗಳನ್ನಾಡಿದರೂ, ದೊಡ್ಡ ಕನಸುಗಳನ್ನು ಇಟ್ಟುಕೊಂಡಿದ್ದರೂ ಅವರ ವಯೋ ಸಹಜ ಮುಗ್ಧತೆ ಅಳಿಸಿಲ್ಲ. ಕಾನೂನುಗಳ ಬಗ್ಗೆ ಮಾತನಾಡಿದರೂ ಐಸ್‌ಕ್ರೀಂ ಮೇಲಿನ ಪ್ರೀತಿ ಹೋಗಿಲ್ಲ.

ಪ್ರಜ್ವಲ್‌ ದೇವರಾಜ್‌ ಅಭಿನಯದ ಚಿತ್ರಗಳೆಂದರೆ ಅವರಿಗಿಷ್ಟ. ನಟಿ ಐಂದ್ರಿತಾ ರೇ ಅಂದರೆ ಮಂಜುಳಾ ಕಣ್ಣು ಕೆಂಪಾಗುತ್ತವೆ. ‘ಅಮ್ಮಾ ನಿನ್ನ ಎದೆಯಾಳದಿಂದ ಗಾಳಕ್ಕೆ ಸಿಕ್ಕ ಮೀನು, ಮಿಡುಕಾಡುತಿರುವೆ ನಾನು’ ಅವರ ಇಷ್ಟವಾದ ಹಾಡು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT