ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಬಬಲಾದ ಸ್ವಾಮೀಜಿಗೆ ಪ್ರಶಸ್ತಿ ಪ್ರದಾನ

Last Updated 5 ಮಾರ್ಚ್ 2015, 6:23 IST
ಅಕ್ಷರ ಗಾತ್ರ

ರಾಯಚೂರು:  ರಾಯಚೂರು ಕೃಷಿ ವಿಶ್ವವಿದ್ಯಾಲಯದ 5ನೇ ಘಟಿಕೋತ್ಸವ­ದಲ್ಲಿ 2013–14ನೇ ಸಾಲಿನ ‘ರೈತ ವಿಜ್ಞಾನಿ’ ಪ್ರಶಸ್ತಿಯನ್ನು ಕಲಬುರ್ಗಿ ಜಿಲ್ಲೆ ಬಬಲಾದ ಗ್ರಾಮದ ಶ್ರೀ ಗುರುಪಾದಲಿಂಗ ಸ್ವಾಮೀಜಿ ಅವರಿಗೆ ರಾಜ್ಯಪಾಲ ವಜುಭಾಯಿ ವಾಲಾ, ಮುಖ್ಯ ಅತಿಥಿ ಕೃಷಿ ವಿಜ್ಞಾನಿ ಡಾ.ಆರ್.ಎಸ್.ಪರೋಡಾ, ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ಬುಧವಾರ ಪ್ರದಾನ ಮಾಡಿದರು. ₹ 50 ಸಾವಿರ ನಗದು, ಪ್ರಶಸ್ತಿ ಫಲಕ, ಸನ್ಮಾನ ಪತ್ರದೊಂದಿಗೆ ರೈತ ವಿಜ್ಞಾನಿ ಪ್ರಶಸ್ತಿ ನೀಡಿ ಗೌರವಿಸಿದರು.

ರೈತ ವಿಜ್ಞಾನಿ ಕುರಿತು ಮಾಹಿತಿ: ಕಲಬುರ್ಗಿ ಜಿಲ್ಲೆಯ ಬಬಲಾದ ಗ್ರಾಮದ ಶ್ರೀ ಗುರುಪಾದಲಿಂಗ ಸ್ವಾಮೀಜಿ ಅವರ 67 ಎಕರೆ ಭೂಮಿಯೇ ಪ್ರಯೋಗಶಾಲೆ.  ಯಾವುದೇ ರೀತಿ ಪ್ರಯೋಜಕ್ಕೆ ಬಾರದು ಎಂದು ಬಿಡಲಾಗಿದ್ದ 45 ಎಕರೆ  ಕಲ್ಲು ಜಮೀನಿನಲ್ಲಿ ಪರಿಶ್ರಮವಹಿಸಿ  ಕೃಷಿ ಕೈಗೊಂಡವರು. ದಾಳಿಂಬೆ, ಪಪ್ಪಾಯ, ಕಲ್ಲಂಗಡಿಯಂಥ ಹಣ್ಣಿನ ಬೆಳೆ ಬೆಳೆಯುತ್ತಿದ್ದಾರೆ. ಕೃಷಿ ಮತ್ತು ಅದಕ್ಕೆ ಸಂಬಂಧಿಸಿದಂಥ ಕೃಷಿ ಚಟುವಟಿಕೆಗಳಲ್ಲಿ 25 ವರ್ಷ ಅನುಭವ ಹೊಂದಿದ್ದಾರೆ.

ಬೇಸಿಗೆಯಲ್ಲಿ ಪಪ್ಪಾಯವನ್ನು ಪ್ಲಾಸ್ಟಿಕ್ ಹೊದಿಕೆಯೊಂದಿಗೆ ಬೆಳೆದು ಪ್ರತಿ ಎಕರೆಗೆ 10 ಟನ್ ಇಳುವರಿ ಪಡೆಯುತ್ತಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಅದೇ ಪಪ್ಪಾಯ ಬೆಳೆಯೊಂದಿಗೆ ಚೆಂಡು ಹೂವು ಬೆಳೆದು ದಸರಾ, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಾರಾಟ ಮಾಡಿ ಅಧಿಕ ಲಾಭ ಗಳಿಸಿದ್ದಾರೆ. ಅದೇ ರೀತಿ ಬಾಳೆಯಲ್ಲಿ  ಮತ್ತು ದಾಳಿಂಬೆ ನಡುವೆ ಚೆಂಡು ಹೂವು  ಬೆಳೆದು ರೈತರಿಗೆ ನವೀನ ಕೃಷಿ ಪದ್ಧತಿ ತೋರಿಸಿಕೊಟ್ಟಿದ್ದಾರೆ.

ಜೋಳ, ಗೋಧಿ, ಕಡಲೆ, ತೊಗರಿ, ಹೆಸರು, ಉದ್ದು, ಕುಸುಬೆ, ಕಬ್ಬು, ಹತ್ತಿ, ದ್ರಾಕ್ಷಿ, ಲಿಂಬೆ,  ಕಲ್ಲಂಗಡಿ, ಅರಿಷಿಣ, ಶುಂಠಿ,  ಬಾಳೆ, ತೆಂಗು, ಬೇವಿನ ಬೆಲೆ, ಸಾಗವಾನಿ ಇತರ ಬೆಳೆಗಳು. ಇವರ ಜಮೀನು ಸಮಗ್ರ ಕೃಷಿ ಪದ್ಧತಿಗೆ ಮಾದರಿಯಂತಿದೆ. ದ್ರಾಕ್ಷಿ ಬೆಳೆಯ ಮೌಲ್ಯವರ್ಧನೆಯು ಇವರ ಇನ್ನೊಂದು  ವಿಶೇಷತೆ. ದ್ರಾಕ್ಷಿಯನ್ನು ಸಂಸ್ಕರಣೆ ಮಾಡಿ ತಮ್ಮದೇ ಆದ ಬ್ರ್ಯಾಂಡ್‌ನಲ್ಲಿ ಮಾರಾಟ ಮಾಡುತ್ತಾರೆ.

ಇವರು ಅನುಸರಿಸುತ್ತಿರುವ ಮಣ್ಣು ಮತ್ತು ನೀರಿನ ಸಂಸ್ಕರಣೆ ಅಭೂತ­ಪೂರ್ವ. ಹೊಲ, ಸಮಪಾತಳಿ,  ಜೈವಿಕ ಬದು ನಿರ್ಮಾಣ ಮಾಡಿರುವುದು,­ಗಣಕೀಕೃತ ನೀರಾವರಿ ಪದ್ಧತಿ ಜೊತೆಗೆ ರಸಗೊಬ್ಬರ ಪೂರೈಕೆಯೂ ಇತರ ರೈತರಿಗೆ ಮಾದರಿ. ದೇಶಿ ಹೈನುಗಾರಿಕೆ ತಳಿ ಸಂರಕ್ಷಣೆಯಲ್ಲಿ ತೊಡಗಿಸಿ­ಕೊಂಡಿರುವ  ಗುರುಪಾದ ಲಿಂಗ ಸ್ವಾಮೀಜಿ ಅವರು ವೈಜ್ಞಾನಿಕ ದನದ ಕೊಟ್ಟಿಗೆಯನ್ನು, ಮೇವಿನ ಬ್ಯಾಂಕ್‌ ಅಳವಡಿಕೆ ತಂತ್ರಜ್ಞಾನ ಅಳವಡಿಸಿಕೊಂಡಿದ್ದಾರೆ.

ಬೆಳೆ ವೈವಿಧ್ಯತೆ, ನೀರಿನ ಸದ್ಬಳಕೆ, ಮಣ್ಣಿನ ಫಲವತ್ತತೆ ಜೊತೆಗೆ ಎಲ್ಲಾ ರೀತಿಯ ಕೃಷಿ ಉಪಕರಣಗಳನ್ನು  ಬಳಸುತ್ತ ರೈತರ ಮಧ್ಯೆ ರೈತ ವಿಜ್ಞಾನಿಯಾಗಿ ಪರಿಚಯಗೊಂಡಿ­ದ್ದಾರೆ. ಕೃಷಿ ತ್ಯಾಜ್ಯದ ಮರುಬಳಕೆಯೂ ಇವರ ವಿಶಿಷ್ಟವಾದ ಕೃಷಿಗಳಲ್ಲೊಂದು. ಪ್ರತಿ ವರ್ಷ ಇವರು 400 ಟನ್ ಕಾಂಪೊಸ್ಟ್ ಉತ್ಪಾದನೆ ಮಾಡಿ ತಮ್ಮ ಜಮೀನಿಗೆ ಬಳಕೆ ಮಾಡುತ್ತಾರೆ.

ಅವರ ಹೊಲದ ಭದ್ರತೆಗಾಗಿ ಸೌರಶಕ್ತಿ ಬೇಲಿ ನಿರ್ಮಾಣ ಮಾಡಿದ್ದಾರೆ. ಕಾಯಕವೇ ಕೈಲಾಸ ಎಂಬ ನಾಣ್ಣುಡಿಯನ್ನು ತತ್ವಶಃ ಪಾಲನೆ ಮಾಡುತ್ತಿದ್ದಾರೆ.  ಇವರು ರಾಜ್ಯಮಟ್ಟದ ಕೃಷಿ ಪಂಡಿತ ಪ್ರಶಸ್ತಿಗೆ ಭಾಜನರಾಗಿದ್ದರು ಎಂದು ಕೃಷಿ ವಿಸ್ತರಣಾ ನಿರ್ದೇಶಕ ಡಾ.ಕೆ.ಪಿ.ವಿಶ್ವನಾಥ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT