ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಲ್ಸ್‌ ಎದುರಾಳಿ ಸನ್‌ರೈಸರ್ಸ್‌

Last Updated 17 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಅಬುಧಾಬಿ (ಪಿಟಿಐ): ಸ್ಪಾಟ್‌ಫಿಕ್ಸಿಂಗ್‌ ಪ್ರಕರಣದಿಂದ ಆಘಾತ ಅನುಭವಿಸಿದ್ದ ರಾಜಸ್ತಾನ ರಾಯಲ್ಸ್‌ ತಂಡ ಐಪಿಎಲ್‌ ಏಳನೇ ಋತುವಿನ ಟೂರ್ನಿಯ ತನ್ನ ಮೊದಲ ಪಂದ್ಯವನ್ನು ಶುಕ್ರವಾರ ಆಡಲಿದೆ.

ಶೇಖ್ ಜಾಯೆದ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಶೇನ್‌ ವಾಟ್ಸನ್‌ ನೇತೃತ್ವದ ತಂಡ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಪೈಪೋಟಿ ನಡೆಸಲಿದೆ.

ಐಪಿಎಲ್‌ನ ಆರನೇ ವರ್ಷದ ಟೂರ್ನಿಯ ವೇಳೆ ರಾಯಲ್ಸ್‌ ತಂಡದ ಆಟಗಾರರಾದ ಎಸ್‌. ಶ್ರೀಶಾಂತ್‌, ಅಜಿತ್‌ ಚಾಂಡಿಲ ಮತ್ತು ಅಂಕಿತ್‌ ಚವಾಣ್‌ ಅವರು ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣದಲ್ಲಿ ಸಿಲುಕಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದರು. ಇದು ತಂಡಕ್ಕೆ ಸಾಕಷ್ಟು ಹಿನ್ನಡೆ ಉಂಟುಮಾಡಿತ್ತು. ಆದರೂ ರಾಹುಲ್‌ ದ್ರಾವಿಡ್‌ ನೇತೃತ್ವದಲ್ಲಿ ತಂಡ ಮೂರನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿತ್ತು.

ಈ ಬಾರಿ ರಾಯಲ್ಸ್‌ ತಂಡ ಆಸ್ಟ್ರೇಲಿಯಾದ ಆಲ್‌ರೌಂಡರ್‌ ಶೇನ್‌ ವಾಟ್ಸನ್‌ ನಾಯಕತ್ವದಲ್ಲಿ ಆಡಲಿದೆ. ಅಜಿಂಕ್ಯ ರಹಾನೆ, ಜೇಮ್ಸ್‌ ಫಾಕ್ನರ್‌, ಸ್ಟುವರ್ಟ್‌ ಬಿನ್ನಿ ಮತ್ತು ಸಂಜು ಸ್ಯಾಮ್ಸನ್‌ ಅವರಂತಹ ಆಟಗಾರರನ್ನು ಒಳಗೊಂಡಿರುವ ತಂಡ ಎದುರಾಳಿಗಳಿಗೆ ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದೆ.

ರಾಯಲ್ಸ್‌ ಈ ಬಾರಿಯ ಹರಾಜಿನಲ್ಲಿ ಟಿಮ್‌ ಸೌಥಿ, ಸ್ಟೀವನ್ ಸ್ಮಿತ್‌ ಮತ್ತು ಉನ್ಮುಕ್ತ್‌ ಚಾಂದ್‌ ಅವರನ್ನು ಕೊಂಡುಕೊಂಡಿದೆ. ಇದರಿಂದ ತಂಡದ ಬಲ ಇನ್ನಷ್ಟು ಹೆಚ್ಚಿದೆ.

ಶಿಖರ್‌ ಧವನ್‌ ಮುನ್ನಡೆಸುತ್ತಿರುವ ಸನ್‌ರೈಸರ್ಸ್‌ ಹೈದರಾಬಾದ್‌  ಕೂಡಾ ಶುಭಾರಂಭದ ನಿರೀಕ್ಷೆಯಲ್ಲಿದೆ. ಈ ತಂಡದ ಮಾಲೀಕರು ಹರಾಜಿನಲ್ಲಿ ಕೆಲವು ಪ್ರಮುಖ ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದ್ದರು. ಅಬ್ಬರದ ಆಟವಾಡಬಲ್ಲ ಡೇವಿಡ್‌ ವಾರ್ನರ್‌ ಮತ್ತು ಆ್ಯರನ್‌ ಫಿಂಚ್‌ ಈ ತಂಡದಲ್ಲಿದ್ದಾರೆ. ವಿಶ್ವದ ಘಾತಕ ವೇಗಿಗಳಲ್ಲಿ ಒಬ್ಬರಾದ ಡೇಲ್‌ ಸ್ಟೇಯ್ನ್‌ ಕೂಡಾ ತಂಡದಲ್ಲಿದ್ದಾರೆ.

ಬೌಲಿಂಗ್‌ ವಿಭಾಗದಲ್ಲಿ ಸ್ಟೇಯ್ನ್‌ಗೆ ಬೆಂಬಲ ನೀಡಲು ಭುವನೇಶ್ವರ್‌ ಕುಮಾರ್‌ ಮತ್ತು ಅಮಿತ್‌ ಮಿಶ್ರಾ ಇರುವ ಕಾರಣ ರಾಯಲ್ಸ್‌ ಬ್ಯಾಟ್ಸ್‌ ಮನ್‌ಗಳಿಗೆ ಮೊದಲ ಪಂದ್ಯದಲ್ಲೇ ಅಗ್ನಿಪರೀಕ್ಷೆ ಎದುರಾಗುವುದು ಖಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT