ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಕವಿಗೆ ಅಪಚಾರ

Last Updated 25 ನವೆಂಬರ್ 2015, 19:46 IST
ಅಕ್ಷರ ಗಾತ್ರ

ಕನ್ನಡ ಎಂ.ಎ. ವಿದ್ಯಾರ್ಥಿಗಳಿಗೆ ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ ಪಾಠ ಮಾಡುತ್ತಿದ್ದೆ. ಕೃತಿಯ ಆರಂಭದಲ್ಲಿ ಸಂಪುಟಗಳಿಗೂ ಮುಂಚೆಯೇ ಬರುವ ‘ಇದೋ ಮುಗಿಸಿ ತಂದಿಹೆನ್ ಈ ಬೃಹದ್‌ಗಾನಮಂ...’ ಸಾಲುಗಳನ್ನು ಓದತೊಡಗಿದೆ.

ವಿದ್ಯಾರ್ಥಿಗಳು ಪುಸ್ತಕದ ಬದಲು ನನ್ನ ಮುಖ ನೋಡತೊಡಗಿದರು. ‘ಯಾಕ್ರಪ್ಪಾ’ ಅಂದರೆ, ‘ನೀವು ಓದುತ್ತಿರುವ ಭಾಗ ಎಲ್ಲಿದೆ ಸಾರ್?’ ಎಂದು ಪ್ರಶ್ನಿಸಿದರು. ‘ಶುರುವಿನಲ್ಲೇ ಇದೆ ನೋಡಿ’ ಅಂದೆ. ‘ಇಲ್ಲ ಸಾರ್’ ಅಂದರು. ನಾನೂ ನೋಡಿದೆ, ಇಡೀ ಕೃತಿಯೆಲ್ಲ ತಡಕಾಡಿದೆ. ಊಹೂಂ, ಈ ಭಾಗವೇ ಇಲ್ಲ.

ಇಲ್ಲಿ ಕವಿವರ್ಯರು ಕೇವಲ ತಮ್ಮ ಗುರು ಶ್ರೀ ವೆಂಕಣ್ಣಯ್ಯನವರಿಗೆ ಕೃತಿಯನ್ನು ಅರ್ಪಿಸಿಲ್ಲ, ಇಡೀ ಕೃತಿಯ ದಿಕ್ಸೂಚಿಯನ್ನೂ ತೋರಿಸುತ್ತ ‘ಬಹಿರ್ಘಟನೆಯಂ ಪ್ರತಿಕೃತಿಸುವಾ ಲೌಕಿಕ ಚರಿತ್ರೆಯಲ್ತಿದು, ಅಲೌಕಿಕ ನಿತ್ಯ ಸತ್ಯಂಗಳಂ ಪ್ರತಿಮಿಸುವ ಸತ್ಯಸ್ಯ ಸತ್ಯ ಕಥನಂ ಕಣಾ...’ ಎಂದಿದ್ದಾರೆ. ದರ್ಶನಕ್ಕೆ ಆಧಾರವಾದ ಪದ್ಯ ಇದು. ಕೇವಲ ಒಂದು ಪುಟದಲ್ಲಿನ ಮಹತ್ವದ ಈ ಭಾಗವನ್ನು ಕೈಬಿಡಲಾಗಿದೆ!

ಅನೇಕ ಹಿರಿಯರನ್ನು ಈ ಬಗ್ಗೆ ಕೇಳಿದೆ. ಎಲ್ಲರ ಬಳಿಯೂ ಇರುವುದು ಸಂಸ್ಕೃತಿ ಇಲಾಖೆ ಅಥವಾ ಮೈಸೂರು ವಿಶ್ವವಿದ್ಯಾನಿಲಯ ಪ್ರಕಟಿಸಿದ ಹಳೆಯ ಜನಪ್ರಿಯ ಆವೃತ್ತಿ. ಅವುಗಳಲ್ಲಿ ಈ ಭಾಗವಿದೆ. ಆದರೆ ಈಗ ಈ ಪ್ರತಿಗಳು ಲಭ್ಯವಿಲ್ಲ. ಲಭ್ಯವಿರುವುದು ಕುವೆಂಪು ಜೀವನ ಸಂದೇಶವನ್ನು ಶಾಶ್ವತಗೊಳಿಸುವ ಘನ ಉದ್ದೇಶದ ‘ಕುಪ್ಪಳಿ ಪ್ರತಿಷ್ಠಾನ’ ಪ್ರಕಟಿಸಿದ ಸಮಗ್ರ ಕೃತಿಗಳಲ್ಲಿ ಒಂದಾದ, ಎರಡು ಕೃತಿಗಳನ್ನು ಸೇರಿಸಿ ಪ್ರಕಟಿಸಲಾದ ‘ಶ್ರೀ ರಾಮಾಯಣ ದರ್ಶನಂ ಹಾಗೂ ಚಿತ್ರಾಂಗದಾ’. ಇದರಲ್ಲಿರುವ ಪುಟಗಳು 887, ಬೆಲೆ- ₹ 400. ಹಿಂದಿನ ಜನಪ್ರಿಯ ಆವೃತ್ತಿಗಳ ಬೆಲೆ ₹ 10! ಇಷ್ಟಿದ್ದಾಗ ಇದೊಂದು ಪುಟ ಪ್ರಕಟಣೆಗೆ ಭಾರವಾಯಿತೇ? ಸಾಲದ್ದಕ್ಕೆ ಇದು ಸರ್ಕಾರದ ಅನುದಾನದಿಂದ ಪ್ರಕಟವಾಗಿದೆ.

ಮಾನ್ಯ ಕುವೆಂಪು ಅವರೇ ಸೇರಿಸಿದ್ದ, ಕೃತಿಗೆ ಅನಿವಾರ್ಯವಾದ ಈ ಭಾಗವನ್ನು ಯಾವ ಘನ ಉದ್ದೇಶದಿಂದ ಕೈಬಿಡಲಾಗಿದೆ? ಕುವೆಂಪು ಅವರಿಗೂ ಹೊಳೆಯದ ಅಂಥ ಅನುಚಿತ ಸಂಗತಿ ಇಲ್ಲಿ ಏನಿದೆ? ಈ ಕೃತಿ ನಾಡೋಜ ಹಂಪ ನಾಗರಾಜಯ್ಯನವರ ಅಧ್ಯಕ್ಷತೆಯಲ್ಲಿ, ಜಿಎಸ್ಎಸ್ ಅವರ ಲೇಖನದ ಜೊತೆ 2013ರಲ್ಲಿ ಪ್ರಕಟವಾಗಿದೆ. ಪ್ರತಿಷ್ಠಾನದಲ್ಲಿ ಮಹನೀಯರೆಲ್ಲ ಇದ್ದಾಗಲೇ ಪ್ರಕಟಆಗಿದ್ದರೂ ಯಾರೊಬ್ಬರ ಗಮನಕ್ಕೂ ಇದು ಬರಲಿಲ್ಲವೇ? ಇದು ಕವಿವರ್ಯರಿಗೂ, ಅವರ ಗುರುಭಕ್ತಿಗೂ, ದರ್ಶನದ ಉದ್ದೇಶಕ್ಕೂ ಮಾಡಿದ ಅಪಚಾರವಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT