ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಗೀತೆಯ ನಿನಾದ, ಏಕತೆಯ ಅನುರಣನ

Last Updated 26 ಜನವರಿ 2015, 20:44 IST
ಅಕ್ಷರ ಗಾತ್ರ

ಬೆಂಗಳೂರು: ಶುಭ್ರ ನೀಲಾಕಾಶದಲ್ಲಿ ಹಾರಾಡಿದ ತ್ರಿವರ್ಣ ಧ್ವಜ, ಧ್ವಜಾರೋಹಣದ ವೇಳೆ ಹೆಲಿಕಾಪ್ಟರ್‌ ಮೂಲಕ ಉದುರಿದ ಗುಲಾಬಿಯ ಹೂಮಳೆ, ಜತೆಗೆ ‘ಜನಗಣಮನ’ ರಾಷ್ಟ್ರಗೀತೆಯ ನಿನಾದ, ರಾಷ್ಟ್ರಗೀತೆಯ ನಿನಾದಕ್ಕೆ ದೇಶಭಕ್ತಿಯಲ್ಲಿ ಎದೆಯುಬ್ಬಿಸಿದ ಜನ...

ಮಾಣೆಕ್‌ ಷಾ ಕವಾಯತು ಮೈದಾನದಲ್ಲಿ  ಸೋಮ­ವಾರ ನಡೆದ ಗಣರಾಜ್ಯೋತ್ಸವ ಆಚರಣೆಯ ಸಂಭ್ರಮದ ಪರಿಯಿದು.
ಸಮಾರಂಭದಲ್ಲಿ ಸೇನೆ ಹಾಗೂ ವಿದ್ಯಾರ್ಥಿ ತಂಡಗಳು ಚಿತ್ತಾಕರ್ಷಕ ಪಥ ಸಂಚಲನ ನಡೆಸಿದರೆ, ವಿವಿಧ ಶಾಲೆಗಳ ಮಕ್ಕಳು ರಾಷ್ಟ್ರಭಕ್ತಿ ಗೀತೆಗಳಿಗೆ ಹೆಜ್ಜೆ ಹಾಕಿದರು.

ರಾಜ್ಯಪಾಲ ವಜುಭಾಯಿ ವಾಲಾ ಅವರು ಧ್ವಜಾ­ರೋಹಣ ನೆರವೇರಿಸಿದರು. ಅದೇ ವೇಳೆಗೆ ವಾಯು­ಪಡೆಯ ಹೆಲಿ­ಕಾಪ್ಟರ್‌ನಿಂದ ಗುಲಾಬಿ ಹೂದಳಗಳ ಸುರಿಮಳೆ. ಧ್ವಜಾರೋಹಣದ ನಂತರ ರಾಜ್ಯಪಾಲರು ತೆರೆದ ಜೀಪ್‌ನಲ್ಲಿ ಪರೇಡ್ ತಂಡಗಳ ಬಳಿ ತೆರಳಿ ಗೌರವ ವಂದನೆ ಸ್ವೀಕರಿಸಿದರು.

ಪಥಸಂಚಲನದಲ್ಲಿ ಸೇನೆ, ಪೊಲೀಸ್, ಎನ್‌ಸಿಸಿ, ಗೃಹರಕ್ಷಕ ದಳ, ಸ್ಕೌಟ್ಸ್ ಮತ್ತು ಗೈಡ್ಸ್, ವಿವಿಧ ಶಾಲೆಗಳ ವಿದ್ಯಾರ್ಥಿ ತಂಡಗಳು ಪಥ ಸಂಚಲನ ನಡೆಸಿ, ರಾಜ್ಯಪಾಲರಿಗೆ ಗೌರವ ವಂದನೆ ಸಲ್ಲಿಸಿದವು.

ಕಾವೇರಿ ಶಾಲಾ ತಂಡ, ಅಶ್ವಿನಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ತಂಡ, ತ್ರಿವೇಣಿ ಪಬ್ಲಿಕ್‌ ಶಾಲೆ, ಎನ್‌ಎಸ್‌ಎಸ್‌ ಬಾಲಕರ ತಂಡ, ಎನ್‌ಎಸ್‌ಎಸ್‌ ಬಾಲಕಿಯರ ತಂಡ, ಭಾರತ್‌ ಸೇವಾದಳದ ಬಾಲಕರ ತಂಡ, ಪ್ರೆಸಿಡೆನ್ಸಿ ಶಾಲೆ, ಕೆಂಬ್ರಿಜ್‌ ಶಾಲಾ ತಂಡಗಳು ಪಥಸಂಚಲನ­ದಲ್ಲಿ ಭಾಗವಹಿಸಿದ್ದವು. ಪೊಲೀಸ್ ಬ್ಯಾಂಡ್‌ನ ಕಲಾವಿದರು ವಾದ್ಯಗಳ ಮೂಲಕ ‘ಸಾರೆ ಜಹಾಸೆ ಅಚ್ಚಾ’ ನುಡಿಸುವ ಮೂಲಕ ಮೆರುಗು ತಂದರು.

ವಿಶೇಷ ಯೋಗಾಸನ ಪ್ರದರ್ಶನ
ಅಂಬಿಕಾ ಪ್ರಾಥಮಿಕ ಮತ್ತು ಪ್ರೌಢಶಾಲೆ, ವಿದ್ಯೋದಯ ಶಾಲೆ, ಮದರ್‌ ತೆರೇಸಾ ಶಾಲೆ, ಎಸ್‌ವಿಎಸ್‌ ಶಾಲೆ, ಬಸವೇಶ್ವರ ಶಾಲೆ, ಈಸ್ಟ್‌ ವೆಸ್ಟ್‌ ಶಾಲೆ, ನಿರ್ಮಲಾ ರಾಣಿ ಪ್ರೌಢಶಾಲೆ, ಸ್ಟೆಲ್ಲಾ ಮೇರಿ ಪ್ರೌಢಶಾಲೆ, ಶಿಲ್ಪಶ್ರೀ ಶಾಲೆ, ಸಿದ್ದಗಂಗಾ ಪ್ರೌಢಶಾಲೆಯ ಒಟ್ಟು 750 ಮಕ್ಕಳು ‘ಯೋಗಾಸನ’ ವನ್ನು ಪ್ರದರ್ಶಿಸಿದರು.

‘ಮಾಡಬೇಕು ಯೋಗ, ದೂಡಬೇಕು ರೋಗ, ಬಾಳಿನಲಿ ಸುಯೋಗ...’ ಎಂಬ ಗೀತೆಗೆ ಅನುಗುಣವಾಗಿ ಮಕ್ಕಳು ಸೂರ್ಯ ನಮಸ್ಕಾರ, ಪದ್ಮಾಸನ, ವಜ್ರಾಸನ, ಪಶ್ಚಿಮೋತ್ತಾಸನ, ಸುಪ್ತ ಪದ್ಮಾಸನ, ಪೂರ್ವೋತ್ತಾಸನ, ಸುಪ್ತವೀರಾಸನ, ಉಷ್ಟ್ರಾಸನ ಮುಂತಾದ ಆಸನಗಳನ್ನು ಮಾಡಿದರು.

ಸಿಡಿದೆದ್ದ ಹಲಗಲಿ ಬೇಡರು
ಬ್ರಿಟಿಷ್‌ ಸರ್ಕಾರದ ನಿಶ್ಯಸ್ತ್ರೀಕರಣ ನೀತಿಯನ್ನು ವಿರೋಧಿಸಿ, ಹಲಗಲಿ ಬೇಡರು ದಂಗೆ ಎದ್ದು, ಬ್ರಿಟಿಷರ ನೀತಿಯನ್ನು ಒಪ್ಪದೇ ಇದ್ದಾಗ ಬ್ರಿಟಿಷರು ಹಲಗಲಿ ಬೇಡರನ್ನು ದಮನ ಮಾಡಿದ ಘಟನಾವಳಿಗಳನ್ನು ಚಿಕ್ಕಬಿದರಕಲ್ಲು ಸರ್ಕಾರಿ ಪ್ರೌಢಶಾಲೆಯ ಮಕ್ಕಳು ‘ಹಲಗಲಿ ಬೇಡರು’ ನೃತ್ಯರೂಪಕದ ಮೂಲಕ ಪ್ರದರ್ಶಿಸಿ­ದರು.

ದೇಶದ ಏಕತೆ ಸಾರಿದ ‘ವಂದೇ ಮಾತರಂ’
ಹೆಸರಘಟ್ಟದ ತ್ರಿವೇಣಿ ವಿದ್ಯಾ ಸಂಸ್ಥೆ, ಸೇಂಟ್‌ ತೆರೇಸಾ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮಕ್ಕಳು ‘ವಂದೇ ಮಾತರಂ’ ನೃತ್ಯ ರೂಪಕದಲ್ಲಿ ದೇಶದ ವಿವಿಧ ಭಾಗದ ಜನರು ಧರಿಸುವ ಉಡುಪು ಧರಿಸಿ ನೃತ್ಯವನ್ನು ಮಾಡಿದ್ದು ವಿಶೇಷ­ವಾಗಿತ್ತು. ಭಾರತ ಸರ್ವಧರ್ಮ ಸಮನ್ವಯ­ಗಳ ಬೀಡು, ಭಾವೈಕ್ಯದ ನಾಡು ಎಂಬುದರ ಸಾಕಾರ ರೂಪವನ್ನು  ನೃತ್ಯರೂಪಕದಲ್ಲಿ ಪ್ರದರ್ಶಿಸಲಾಯಿತು.

‘ಜನನಿ ಜನ್ಮಭೂಮಿಶ್ಚ, ಸ್ವರ್ಗಾದಪಿ ಗರಿಯಸಿ...’ ಎಂಬ ಸಾಲಿಗೆ ತಕ್ಕಂತೆ ದೇಶಕ್ಕಾಗಿ ಹೋರಾಡಿ ಪ್ರಾಣತೆತ್ತ ಝಾನ್ಸಿರಾಣಿ ಲಕ್ಷ್ಮಿ ಬಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಟಿಪ್ಪುಸುಲ್ತಾನ್‌, ತಾತ್ಯಾಟೋಪಿ ಮತ್ತಿತರರ ವೇಷ ಧರಿಸಿದ್ದ ಮಕ್ಕಳು ಕಣ್ಮನ ಸೆಳೆದರು.

ನವಭಾರತ ನೃತ್ಯರೂಪಕ
ಸ್ವಾತಂತ್ರ್ಯ ಗಳಿಸಿದ ನಂತರವೂ, ಜಮ್ಮು ಮತ್ತು ಕಾಶ್ಮೀರದ ರಾಜ, ಜುನಾಗಡ ಹಾಗೂ ಹೈದರಾಬಾದಿನ ನವಾಬರು ಭಾರತದ ಒಕ್ಕೂಟದಲ್ಲಿ ಸೇರುವುದಿಲ್ಲ ಎಂದು ಹಠ ಹಿಡಿದಾಗ, ಸರ್ದಾರ್‌ ವಲ್ಲಭ ಬಾಯ್‌ ಪಟೇಲರು ಈ ಎಲ್ಲಾ ಪ್ರಾಂತ್ಯಗಳನ್ನು ಭಾರತಕ್ಕೆ ಸೇರಿಸುವ ಮೂಲಕ ಅಖಂಡ ಭಾರತ ನಿರ್ಮಾಣಕ್ಕೆ ನಾಂದಿ ಹಾಡಿರುವುದನ್ನು ‘ನವಭಾರತ’ ನೃತ್ಯ­ರೂಪಕದ ಮೂಲಕ ಎನ್‌ಬಿಎನ್‌ ವಿದ್ಯಾಮಂದಿರ, ವೀವರ್ಸ್‌ ಕಾಲೋನಿ, ಸೇಂಟ್‌ ಮೇರಿಸ್‌ ಶಾಲೆಯ ಮಕ್ಕಳು ಸ್ಮರಿಸಿದರು.

ಪ್ರಶಸ್ತಿ ವಿಜೇತ ತಂಡಗಳು
ಪರೇಡ್‌ನ ಮೊದಲ ವಿಭಾಗದ ಪ್ರಥಮ ಪ್ರಶಸ್ತಿ ಭಾರತೀಯ ಸೇನಾ ತಂಡಕ್ಕೆ ಲಭಿಸಿತು. ಎರಡನೇ ಪ್ರಶಸ್ತಿಯು ಮಹಿಳಾ ಕೇಂದ್ರೀಯ ಮೀಸಲು ಪೊಲೀಸ್‌ ಪಡೆಗೆ, ಮೂರನೇ ಪ್ರಶಸ್ತಿ ಗಡಿ ಭದ್ರತಾ ಪಡೆಯ ಪಾಲಾಯಿತು. ಎರಡನೇ ವಿಭಾಗದಲ್ಲಿ ಗೃಹರಕ್ಷಕ ದಳದ ಗ್ರಾಮೀಣ ವಿಭಾಗದ ತಂಡ, ಟ್ರಾಫಿಕ್‌ ವಾರ್ಡನ್‌ ತಂಡ, ಅಗ್ನಿಶಾಮಕ ಮಹಿಳಾ ತಂಡಗಳು ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ಪಡೆದವು.

ಮೂರು, ನಾಲ್ಕು ಮತ್ತು ಐದನೇ ವಿಭಾಗದಲ್ಲಿ ಪ್ರಥಮ ಬಹುಮಾನಗಳನ್ನು ಎನ್‌ಸಿಸಿ ಬಾಲಕಿಯರ ತಂಡ, ಎಸ್‌ಎಆರ್‌ಎಸ್‌ ಕಾರ್ಮೆಲ್‌ ಶಾಲಾ ತಂಡ, ಬಿಎಂಎಸ್‌ ರೇಂಜರ್‌ ಶಾಲಾ ತಂಡಗಳು ಪಡೆದವು. ಏಳು ಮತ್ತು ಎಂಟನೇ ವಿಭಾಗದ ವಾದ್ಯ ನುಡಿಸುವ ವಿಭಾಗದಲ್ಲಿ ಎಸ್‌ಎಆರ್ಎಸ್‌ ಪ್ರೆಸಿಡೆನ್ಸಿ ಶಾಲಾ ತಂಡ, ಸೇನಾ ತಂಡವು ಪ್ರಥಮ ಬಹುಮಾನವನ್ನು ಪಡೆದವು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪಡೆದ ತಂಡಗಳು
‘ವಂದೇ ಮಾತರಂ’ ನೃತ್ಯರೂಪಕಕ್ಕೆ ಪ್ರಥಮ, ‘ಹಲಗಲಿ ಬೇಡರು’ ನೃತ್ಯಕ್ಕೆ ದ್ವಿತೀಯ,  ‘ನವಭಾರತ’ ನೃತ್ಯರೂಪಕಕ್ಕೆ ತೃತೀಯ ಬಹುಮಾನ ಲಭಿಸಿದವು.

ವಿಶೇಷ ಮಕ್ಕಳ ಪಥಸಂಚಲನ
ವಿಶೇಷ ಮಕ್ಕಳ ಪಥಸಂಚಲನದಲ್ಲಿ ರಮಣ ಮಹರ್ಷಿ ಅಂಧರ ಶಾಲೆ ಪ್ರಥಮ ಬಹುಮಾನವನ್ನು ಪಡೆದರೆ, ದ್ವಿತೀಯ ಬಹುಮಾನವನ್ನು ಸಮರ್ಥನಂ   ಟ್ರಸ್ಟ್‌ ಮಕ್ಕಳ ತಂಡ ಪಡೆಯಿತು.

ಸ್ತಬ್ಧಚಿತ್ರ ಪ್ರದರ್ಶನ
‘ಆಧಾರ್‌’ ನೋಂದಣಿ ಪ್ರತಿ ಭಾರತೀಯನೂ ಮಾಡಿಸ­ಬೇಕು ಎಂಬ ಸಂದೇಶ ಹಾಗೂ ಕಾನೂನು ಸೇವೆಗಳ ಪ್ರಾಧಿ­ಕಾರವು ಲೋಕ ಅದಾಲತ್‌ ಮೂಲಕ ಕಾನೂನು ಸೇವೆ­ಯನ್ನು ಜನಸಾಮಾನ್ಯರಿಗೆ ತಲುಪಿಸುತ್ತಿರುವ ಸಂದೇಶವನ್ನು ಸಾರುವ ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಲಾಯಿತು.

ಸಮರ ಕಲೆ (ಕಲರಿಯಪಟ್ಟು)
ನಾಯಕ್‌ ರಾಜೇಶ್‌ ನೇತೃತ್ವದಲ್ಲಿ ಮದ್ರಾಸ್‌ ರೆಜಿಮೆಂಟ್‌ನ ಯೋಧರು ಪ್ರದರ್ಶಿಸಿದ ಸಮರಕಲೆ ಮೈನವಿರೇಳುವಂತೆ ಮಾಡಿತು. ಕತ್ತಿ, ಗುರಾಣಿ, ಕೋಲು ಹಿಡಿದು ಕಾದಾಟಕ್ಕಿಳಿದ ಯೋಧರ ಪ್ರದರ್ಶನವು ಮೆಚ್ಚುಗೆಗೆ ಪಾತ್ರವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT