ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪಿತನಿಗೆ ಗೌರವ, ಅಟಲ್‌ ಆಶೀರ್ವಾದ

ಪ್ರಮಾಣವಚನ ಸ್ವೀಕಾರ: ಎಲ್ಲೆ ಮೀರಿದ ಸಂಭ್ರಮ
Last Updated 26 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ನರೇಂದ್ರ ಮೋದಿ ಅವರು ರಾಜಘಾಟ್‌ಗೆ ತೆರಳಿ ರಾಷ್ಟ್ರ­ಪಿತನಿಗೆ ಗೌರವ ನಮನ ಸಲ್ಲಿಸಿದರು. ಅಲ್ಲಿ ಸುಮಾರು 10 ನಿಮಿಷಗಳ ಕಾಲ ಇದ್ದ ಮೋದಿ, ಗಾಂಧಿ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿ ಪ್ರದಕ್ಷಿಣೆ ಹಾಕಿದರು.

ಮೋದಿ ಜತೆಯಲ್ಲಿ ಹರ್ಷ ವರ್ಧನ್‌್, ವಿಜಯ್‌ ಗೋಯಲ್‌್ ಹಾಗೂ ವಿಜೇಂದ್ರ ಗುಪ್ತಾ ಸೇರಿದಂತೆ ದೆಹಲಿ ಬಿಜೆ­ಪಿಯ ಹಲವಾರು ಮುಖಂಡರು ಇದ್ದರು. ರಾಜಘಾಟ್‌ನಿಂದ ಅವರು ನೇರ­ವಾಗಿ ಮಾಜಿ ಪ್ರಧಾನಿ ಅಟಲ್‌್ ಬಿಹಾರಿ ವಾಜಪೇಯಿ ಅವರ ನಿವಾಸಕ್ಕೆ ತೆರಳಿ ಅವರಿಂದ ಆಶೀರ್ವಾದ ಪಡೆದರು.

ಹೀರಾಬೆನ್‌್ ಗೈರು: ಅನಾರೋಗ್ಯದ ಕಾರಣ ಮೋದಿ ಅವರ ತಾಯಿ ಹೀರಾಬೆನ್‌್ ಅವರು ಪ್ರಮಾಣ­ವಚನ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಮೋದಿ ಮೂರು ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ­ವಚನ ಸ್ವೀಕರಿಸಿದ್ದ ಸಂದರ್ಭದಲ್ಲಿ ಹೀರಾಬೆನ್‌್ ಉಪಸ್ಥಿತರಿದ್ದರು.

ಟಿ.ವಿ ಬಿಟ್ಟು ಕದಲಲಿಲ್ಲ: ಗುಜರಾತ್‌ನ ಗಾಂಧಿನಗರ­ದಲ್ಲಿರುವ ತಮ್ಮ ನಿವಾಸ­ದಲ್ಲಿ ಹೀರಾಬೆನ್‌್ ಅವರು ಸೋಮ­ವಾರ ಟಿ.ವಿ ಬಿಟ್ಟು ಕದಲಲಿಲ್ಲ. ಮಗನ ಪ್ರಮಾಣವಚನ ಸ್ವೀಕಾರ ಸಮಾರಂಭದ ನೇರ ಪ್ರಸಾರವನ್ನು ನೋಡುತ್ತ ಸಂತಸ­ಪಟ್ಟರು.

ಸೂಚಕರಿಗೂ ಆಹ್ವಾನ: ವಾರಾಣಸಿಯಲ್ಲಿ ಮೋದಿ ಅವರಿಗೆ ಸೂಚಕರಾಗಿದ್ದ ನೇಕಾರ ಅಶೋಕ್‌, ಅಂಬಿಗ ವೀರಭದ್ರ ನಿಷಾದ ಹಾಗೂ ವಡೋದರಾದಲ್ಲಿ ಮೋದಿ ಅವರ ಸೂಚಕರಾಗಿದ್ದ ಚಹಾ ಮಾರಾಟ­ಗಾರ ಕಿರಣ್‌ ಮಹಿದಾ ಅವರಿಗೂ ಪ್ರಮಾಣವಚನ ಸಮಾರಂಭಕ್ಕೆ ಆಹ್ವಾನ ನೀಡಲಾಗಿತ್ತು.

ಬದುಕಿನ ಸಂತಸದ ಕ್ಷಣ: ದೆಹಲಿಯ ಜವಾಹರ­ಲಾಲ್‌್ ನೆಹರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್‌್ ಪಡೆದರೂ ಜೀವನೋಪಾಯಕ್ಕಾಗಿ ಡಾಬಾ ನಡೆಸುತ್ತಿರುವ  ಶಹಜಾದ್‌ ಇಬ್ರಾಹಿಮಿ ಅವ­ರಿಗೆ ಸೋಮವಾರ ಅವಿಸ್ಮರಣೀಯ ದಿನವಾಗಿತ್ತು.  ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ಅವರಿಗೆ ಮೋದಿ ಅವರಿಂದಲೇ ಆಹ್ವಾನ ಬಂದಿತ್ತು.‘ಟೀ ಮಾರಾಟ ಮಾಡುತ್ತಿದ್ದ ವ್ಯಕ್ತಿ ಇಂದು ಪ್ರಧಾನಿಯಾಗಿದ್ದಾರೆ. ಈ ಕಾರ್ಯ­ಕ್ರಮಕ್ಕೆ ಅವರು ಮತ್ತೊಂದು ಚಾಯ್‌ವಾಲಾನನ್ನು ಆಹ್ವಾನಿಸಲು ಮರೆಯಲಿಲ್ಲ. ನನಗೆ ಭಾರಿ ಸಂತೋಷ­ವಾಗಿದೆ. ಮಾತಿನಲ್ಲಿ ಹೇಳಲಾರೆ’ ಎಂದು ಇಬ್ರಾಹಿಮಿ ನುಡಿದರು.

ಜೆಎನ್‌ಯುದಿಂದ ಎಂ.ಎ, ಎಂ.ಫಿಲ್‌್ ಬಳಿಕ ಪಿಎಚ್‌.ಡಿ ಮಾಡಿದ್ದಕ್ಕಾಗಿ ಇಬ್ರಾಹಿಮಿ ಅವರು ಅನೇಕ ಸಲ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದರು. ಇಷ್ಟೆಲ್ಲ ಓದಿದರೂ ಅವರಿಗೆ ಉದ್ಯೋಗ ಸಿಕ್ಕಿಲ್ಲ ಎನ್ನುವುದು ವಿಪರ್ಯಾಸ. ತಾವು ಪದವಿಗಳನ್ನು ಪಡೆದ ಜೆಎನ್‌ಯು ಕ್ಯಾಂಪಸ್‌ನಲ್ಲಿ ಅವರು ‘ ಮಾಮೂಸ್‌ ಡಾಬಾ’ ನಡೆಸುತ್ತಿದ್ದಾರೆ.

ಆಹ್ವಾನ ಸಿಕ್ಕಿದ್ದು ಹೇಗೇ?: ಬಿಹಾರದಲ್ಲಿ ಬಿಜೆಪಿ ಮಿತ್ರ ಪಕ್ಷ ಆರ್‌ಎಲ್‌ಎಸ್‌ಪಿ ಮುಖಂಡರೊಬ್ಬರು ಇಬ್ರಾಹಿಮಿ ಬಗ್ಗೆ ಮೋದಿ ಕಚೇರಿಗೆ ಮಾಹಿತಿ ಕಳಿಸಿ, ಪ್ರಮಾಣವಚನ ಸ್ವೀಕಾರಕ್ಕೆ ಇವರನ್ನು ಆಹ್ವಾನಿಸುವಂತೆ ಕೋರಿಕೊಂಡಿದ್ದರು. ಕೊನೆಗೂ ಇಬ್ರಾಹಿಮಿ ಅವರಿಗೆ ಆಹ್ವಾನ ಬಂತು.

‘ಉನ್ನತ ವಿದ್ಯಾಭ್ಯಾಸ ಮಾಡಿದವರಿಗೆ ಮೋದಿ ಆಡಳಿತದಲ್ಲಿ ಚಹಾ ಮಾರುವ ಪರಿಸ್ಥಿತಿ ಬರುವುದಿಲ್ಲ ಎಂದು ಭಾವಿಸಿದ್ದೇನೆ’ ಎಂದು ಅವರು ಹೇಳುತ್ತಾರೆ.
ಬಿಹಾರ ಮೂಲದ ಇಬ್ರಾಹಿಮಿ ಉನ್ನತ ವಿದ್ಯಾಭ್ಯಾಸಕ್ಕಾಗಿ ದೆಹಲಿಗೆ ಬಂದರು. ಇಷ್ಟೆಲ್ಲ ಪದವಿಗಳನ್ನು ಪಡೆದುಕೊಂಡರೂ ಅವರಿಗೆ ಒಳ್ಳೆಯ ಕೆಲಸಕ್ಕೆ ಸಿಕ್ಕಿಲ್ಲ. ಹಾಗಾಗಿ ಡಾಬಾ ನಡೆಸುತ್ತಿದ್ದಾರೆ.

‘ಬನಾರಸಿ ಪಾನ್‌’: (ಜಂಷೆಡ್‌ಪುರ ವರದಿ): ಮೋದಿ ಪ್ರಮಾಣವಚನ ಸ್ವೀಕಾರದ ಸಂಭ್ರಮಾಚರ­ಣೆ­ಗಾಗಿ  ಇಲ್ಲಿನ ಬೀಡಾ ಅಂಗಡಿ ಮಾಲೀಕ  ಖೇಮ­ಲಾಲ್‌ ಸಾಹು ಅವರು ಸೋಮವಾರ ಎಲ್ಲರಿಗೂ ಉಚಿತ­ವಾಗಿ ‘ಬನಾರಸಿ ಪಾನ್‌’ ನೀಡಿದರು. ‘ಬನಾರಸಿ ಪಾನ್‌’ಗೆ ಹೆಸರಾಗಿರುವ ವಾರಾಣಸಿ­ಯಿಂದ ಮೋದಿ ಅವರು ದಾಖಲೆ ಅಂತರದಲ್ಲಿ ಗೆದ್ದಿ­ದ್ದಾರೆ. ಆದದ್ದರಿಂದ ಅವರು ಅಧಿಕಾರ ಸ್ವೀಕಾರ ಸಮಾರಂಭದ ದಿನ ಉಚಿತ ಪಾನ್‌್ ವಿತರಿಸಿದೆ’ ಎನ್ನುತ್ತಾರೆ ಖೇಮಲಾಲ್‌.

ನಿತೀಶ್‌ ಅಭಿನಂದನೆ...
ಪಟ್ನಾ (ಪಿಟಿಐ): ಮೋದಿ ನೇತೃತ್ವದ ನೂತನ ಸರ್ಕಾರವನ್ನು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅಭಿನಂದಿಸಿದ್ದಾರೆ. ಕಳೆದ ಒಂದು ವರ್ಷಗಳಿಂದ ಉಭಯ ನಾಯ­ಕರು ಪರಸ್ಪರರ ಮೇಲೆ ವಾಗ್ದಾಳಿ ನಡೆಸುವ ಯಾವ ಅವಕಾಶವನ್ನೂ ಬಿಟ್ಟುಕೊಂಡಿರಲಿಲ್ಲ. ‘ರಾಜ್ಯಕ್ಕೆ ವಿಶೇಷ ಸ್ಥಾನಮಾನ ಸೇರಿದಂತೆ ಹೊಸ ಸರ್ಕಾರದಿಂದ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದೇನೆ’ ಎಂದು ಅವರು ಹೇಳಿದ್ದಾರೆ.

ಬೇಲೂರುಮಠಕ್ಕೆ ಆಹ್ವಾನ
ಕೋಲ್ಕತ್ತ (ಪಶ್ಚಿಮಬಂಗಾಳ): 
ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಆತ್ಮಸ್ಥಾನಂದ ಮಹಾ­ರಾಜ ಅವರು ಬೇಲೂರುಮಠದಲ್ಲಿರುವ ಆಶ್ರ­ಮದ ಪ್ರಧಾನ ಕಚೇರಿಗೆ ಭೇಟಿ ನೀಡುವಂತೆ ಮೋದಿ ಅವರಿಗೆ ಆಹ್ವಾನ ನೀಡಿದ್ದಾರೆ.ಇವರು ಮೋದಿ ಅವರಿಗೆ ಆರಂಭದ ದಿನಗಳಲ್ಲಿ ಅಧ್ಯಾತ್ಮ ಬೋಧಿಸಿದ್ದರು.

‘ಭಾರತದ ಪ್ರಧಾನಿಯಾಗಿ ನೀವು ಬೇಲೂರು­ಮಠಕ್ಕೆ ಭೇಟಿ ನೀಡುವುದನ್ನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ’ ಎಂದು ಅವರು ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ‘ನರೇಂದ್ರ ಭಾಯ್‌, ನೀವು ಪ್ರಚಂಡ ವಿಜಯ ಸಾಧಿಸಿ­ರುವುದಕ್ಕೆ ನನಗೆ ಖುಷಿಯಾಗಿದೆ. ಜಾತಿ, ಧರ್ಮ ಲೆಕ್ಕಿಸದೆ ದೇಶ ಸೇವೆ ಮಾಡುವ ಅವಕಾಶವನ್ನು ಶ್ರೀ ರಾಮಕೃಷ್ಣರು ನಿಮಗೆ ದಯಪಾಲಿಸಿದ್ದಾರೆ’ ಎಂದೂ ಅವರು ಪತ್ರದಲ್ಲಿ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT