ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ತಂಡದ ಆಯ್ಕೆಗೆ ಐಪಿಎಲ್‌ ಮಾನದಂಡವೇ?

Last Updated 24 ಏಪ್ರಿಲ್ 2016, 19:34 IST
ಅಕ್ಷರ ಗಾತ್ರ

ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಲಭಿಸುವುದು ಖಚಿತವೇ ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿದೆ. ಕೆಲವರು ಹೌದು ಎಂದರೆ, ಇನ್ನು ಕೆಲವರು ಅದೆಲ್ಲ ಸುಳ್ಳು ಎನ್ನುತ್ತಿದ್ದಾರೆ. ಈ ವಿಷಯದ ಬಗ್ಗೆ  ಚನ್ನಗಿರಿ ಕೇಶವಮೂರ್ತಿ ವಿಶ್ಲೇಷಿಸಿದ್ದಾರೆ.

‘ನನ್ನ ಪ್ರದರ್ಶನ ಮಟ್ಟವನ್ನು ಸುಧಾರಿಸಿಕೊಳ್ಳಲು ಮಾತ್ರ ದೇಶಿ ಮತ್ತು ಐಪಿಎಲ್ ಟೂರ್ನಿಗಳಲ್ಲಿ ಆಡುತ್ತೇನೆ. ಈ ಟೂರ್ನಿಗಳಲ್ಲಿ ತೋರುವ ಸಾಮರ್ಥ್ಯದಿಂದ ರಾಷ್ಟ್ರೀಯ ತಂಡದಲ್ಲಿ ಮರಳಿ ಸ್ಥಾನ ಲಭಿಸುತ್ತದೆ ಎನ್ನುವ ಯಾವ ನಂಬಿಕೆಯೂ ನನಗಿಲ್ಲ...’

ಒಂದು ಕಾಲದಲ್ಲಿ ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ರನ್‌ ಹೊಳೆ ಹರಿಸುತ್ತಿದ್ದ ಗೌತಮ್ ಗಂಭೀರ್‌ ಅವರ ಮಾತುಗಳಿವು.
ದೆಹಲಿ ಮೂಲದ ಗಂಭೀರ್ ಅವರು ಮಾರ್ಚ್‌ ಮೂರನೇ ವಾರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು  ಹೇಳಿದ್ದರು. ಇವರ ಮಾತು ಪೂರ್ಣ ಒಪ್ಪುವಂತೆ ಇಲ್ಲದೇ ಇರಬಹುದು. ಆದರೆ, ತೆಗೆದು ಹಾಕುವಂತಿಲ್ಲ.

ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಳಿಸಲು ಪ್ರಮುಖ ದೇಶಿ ಟೂರ್ನಿಗಳಾದ ರಣಜಿ, ವಿಜಯ್‌ ಹಜಾರೆ, ಇರಾನಿ ಕಪ್, ದುಲೀಪ್‌ ಟ್ರೋಫಿ ವೇದಿಕೆ ಎಂದು ಹಲವಾರು ಕ್ರಿಕೆಟಿಗರು  ಹಿಂದೆ ಹೇಳಿದ್ದಾರೆ. ಆದರೆ ಕೆಲವರು ಈ ವಾದವನ್ನು ಒಪ್ಪುವುದಿಲ್ಲ. ಆದ್ದರಿಂದ ಐಪಿಎಲ್‌ ಒಂಬತ್ತನೇ ಆವೃತ್ತಿ  ನಡೆಯುತ್ತಿರುವ ಈ ವೇಳೆ ‘ರಾಷ್ಟ್ರೀಯ ತಂಡದ ಆಯ್ಕೆಗೆ ಐಪಿಎಲ್‌ ಮಾನದಂಡವೇ’ ಎನ್ನುವ ಚರ್ಚೆ ಜೋರಾಗಿಯೇ ನಡೆಯುತ್ತಿದೆ.

ಐಪಿಎಲ್‌ ಟೂರ್ನಿಯಿಂದಾಗಿ ಅನೇಕ ಯುವ ಆಟಗಾರರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಸಾಧ್ಯವಾಗಿದೆ. ಐಪಿಎಲ್‌ನಲ್ಲಿ ಶತಕ ಬಾರಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಎನಿಸಿರುವ ಕರ್ನಾಟಕದ ಮನೀಷ್‌ ಪಾಂಡೆ ಚುಟುಕು ಕ್ರಿಕೆಟ್‌ನಲ್ಲಿ ಗಮನಾರ್ಹ ಪ್ರದರ್ಶನ ತೋರಿಸಿದ್ದಾರೆ. ಆದ್ದರಿಂದಲೇ ಅವರಿಗೆ ಹೋದ ವರ್ಷ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಕ್ಕಿತ್ತು.

ಕೆಲ ಆಟಗಾರರ ವಿಷಯದಲ್ಲಿ ಇದು ಉಲ್ಟಾ ಆಗಿದೆ. ಆದರೆ ರಾಷ್ಟ್ರೀಯ ತಂಡದಲ್ಲಿ ಉತ್ತಮವಾಗಿ ಆಡಿದವರಿಗೆ ‘ಮಿಲಿಯನ್ ಡಾಲರ್ ಬೇಬಿ’ ಐಪಿಎಲ್‌ನಲ್ಲಿ ಕೋಟಿ ಕೋಟಿ ‘ಬೆಲೆ’ ಸಿಕ್ಕಿದೆ.  ಹೊಡಿಬಡಿ ಆಟಕ್ಕೆ ಹೆಸರಾಗಿರುವ ಐಪಿಎಲ್‌ನಲ್ಲಿ ಸಲ್ಲುವವರು ರಾಷ್ಟ್ರೀಯ ತಂಡದಲ್ಲಿಯೂ ಸಲ್ಲುತ್ತಾರೆ ಎನ್ನುವ ಮಾತು ಕ್ರಿಕೆಟ್ ವಲಯದಲ್ಲಿ ಜನಜನಿತ.

2008ರಲ್ಲಿ ಐಪಿಎಲ್‌ ಶುರುವಾದ ಬಳಿಕ ಅನೇಕ ಯುವ ಆಟಗಾರರು ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.   ಆ ವರ್ಷದ ಫೆಬ್ರುವರಿಯಿಂದ 2016ರ ಜನವರಿ ಅವಧಿಯಲ್ಲಿ ಒಟ್ಟು 40 ಆಟಗಾರರು ರಾಷ್ಟ್ರೀಯ ಏಕದಿನ ತಂಡದಲ್ಲಿ ಆಡಿದ್ದಾರೆ. ಇವರಲ್ಲಿ ಕರ್ನಾಟಕದ ಆರ್‌. ವಿನಯ್‌ ಕುಮಾರ್‌, ಅಭಿಮನ್ಯು ಮಿಥುನ್‌, ಸ್ಟುವರ್ಟ್‌ ಬಿನ್ನಿ ಮತ್ತು ಮನೀಷ್‌ ಪಾಂಡೆ ಕೂಡ ಇದ್ದಾರೆ.

ಐಪಿಎಲ್‌ ಮತ್ತು ದೇಶಿ ಟೂರ್ನಿಗಳಲ್ಲಿ ಉತ್ತಮ ಸಾಮರ್ಥ್ಯ ತೋರಿದ 40 ಆಟಗಾರರು ಅಂತರರಾಷ್ಟ್ರೀಯ ಟ್ವೆಂಟಿ–20 ಟೂರ್ನಿಗಳಲ್ಲಿ ಸ್ಥಾನ ಪಡೆದಿದ್ದಾರೆ. ಇದರಲ್ಲಿ ಐವರು ರಾಜ್ಯದ ಆಟಗಾರರಿದ್ದಾರೆ. ಹಿಂದಿನ ಎಂಟು ಆವೃತ್ತಿಗಳಲ್ಲಿ ಸುಮಾರು 250 ಭಾರತೀಯ ಆಟಗಾರರು ಐಪಿಎಲ್‌ನಲ್ಲಿ ಅವಕಾಶ ಪಡೆದಿದ್ದಾರೆ.

ಆಟಗಾರರು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಐಪಿಎಲ್ ವೇದಿಕೆ ಎನ್ನುವ ವಿಷಯವನ್ನಷ್ಟೇ ಚರ್ಚಿಸುವುದು ಸರಿಯಲ್ಲ. ಐಪಿಎಲ್‌ನಿಂದ ಸಾಕಷ್ಟು ಆಟಗಾರರ ಬದುಕು ಬದಲಾಗಿದೆ. ಹಣವೂ ಸಿಕ್ಕಿದೆ. 

ವೇದಿಕೆಯೂ ಹೌದು
ಮೊದಲೆಲ್ಲಾ ರಾಷ್ಟ್ರೀಯ ಮಟ್ಟದ ಟೂರ್ನಿಗಳೇ ಕಡಿಮೆ ಇರುತ್ತಿದ್ದವು. ಆಗ ಯುವ ಆಟಗಾರರಿಗೆ ತಮ್ಮಲ್ಲಿನ ಪ್ರತಿಭೆಯನ್ನು ತೋರಿಸಲು ಅವಕಾಶಗಳು ವಿರಳವಾಗಿದ್ದವು.

ವರ್ಷಕ್ಕೊಮ್ಮೆ ನಡೆಯುವ ದೇಶಿ ಟೂರ್ನಿಗಳು ಬರುವ ತನಕ ಕಾಯಬೇಕಾದ ಅನಿವಾರ್ಯತೆ ಇತ್ತು. ಆದರೆ ಈಗ ಅಂಥ ಅಗತ್ಯವೇನೂ ಇಲ್ಲ. ಐಪಿಎಲ್‌ನಲ್ಲಿ ಆರಂಭದ ವರ್ಷಗಳಲ್ಲಿ ಗಮನಾರ್ಹ ಸಾಮರ್ಥ್ಯ ತೋರಿದ್ದ ಮಧ್ಯಪ್ರದೇಶದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್ ನಮಜ್‌ ಓಜಾ, ರಾಹುಲ್‌ ಶರ್ಮಾ, ಗುಜರಾತ್‌ನ ಅಕ್ಷರ್ ಪಟೇಲ್‌,  ಕರ್ನಾಟಕದ ಎಡಗೈ ವೇಗಿ ಎಸ್‌. ಅರವಿಂದ್ ಮತ್ತು ಮನೀಷ್ ಅವರು ಖ್ಯಾತಿ ಪಡೆದಿದ್ದೇ ಐಪಿಎಲ್‌ನಿಂದ.
ಇದಕ್ಕೆ ಹೋದ ವರ್ಷದ ಘಟನೆಯೊಂದನ್ನು ಉದಾಹರಣೆಯಾಗಿ ನೀಡಬಹುದು.

ಆರ್‌ಸಿಬಿ ತಂಡದ ಬೌಲರ್‌  ಆ್ಯಡಮ್‌ ಮಿಲ್ನೆ ಐಪಿಎಲ್‌ ಟೂರ್ನಿಯ ಕೆಲ ಪಂದ್ಯಗಳಲ್ಲಿ ಆಡಿ ತೀವ್ರ ಗಾಯದ ಸಮಸ್ಯೆಗೆ ಸಿಲುಕಿದರು. ಇದರಿಂದ ಅವರಿಗೆ ಪೂರ್ತಿ ಟೂರ್ನಿಯನ್ನು ಆಡಲು  ಸಾಧ್ಯವಾಗಲಿಲ್ಲ. ಆಗ ಆರ್‌ಸಿಬಿ ಫ್ರಾಂಚೈಸ್‌ ಅರವಿಂದ್‌ಗೆ ಅವಕಾಶ ಕೊಟ್ಟಿತು. ಅದೃಷ್ಟವಶಾತ್‌ ಸಿಕ್ಕ ಈ ಅವಕಾಶವನ್ನು ಅರವಿಂದ್ ಚೆನ್ನಾಗಿ ಬಳಸಿಕೊಂಡರು. ಇದರಿಂದ ಅವರಿಗೆ 2015ರಲ್ಲಿಯೇ ರಾಷ್ಟ್ರೀಯ ಟ್ವೆಂಟಿ–20 ತಂಡದಲ್ಲಿ ಆಡುವ ಅವಕಾಶ ಲಭಿಸಿತ್ತು.

ಹೋದ ವರ್ಷದ ಅಕ್ಟೋಬರ್‌ನಲ್ಲಿ ದಕ್ಷಿಣ ಆಫ್ರಿಕಾ ಎದುರು ನಡೆದ ಚುಟುಕು ಕ್ರಿಕೆಟ್‌ ಸರಣಿಯಲ್ಲಿ ಕರ್ನಾಟಕದ ಬೌಲರ್ ಒಂದು ಪಂದ್ಯವಾಡಿದ್ದರು. ಹಾಗೆಂದ ಮಾತ್ರಕ್ಕೆ ಐಪಿಎಲ್‌ನಲ್ಲಿ ಚೆನ್ನಾಗಿ ಆಡಿದ ಎಲ್ಲಾ ಆಟಗಾರರಿಗೆ ಬಿಸಿಸಿಐ ಆಯ್ಕೆ ಸಮಿತಿ ಮಣೆ ಹಾಕಿದೆ ಎಂದರ್ಥವಲ್ಲ.

ಆಟಗಾರನ ಅದೃಷ್ಟವೂ ಇಲ್ಲಿ ಮುಖ್ಯವಾಗುತ್ತದೆ. ಚುಟುಕು ಕ್ರಿಕೆಟ್‌ಗೆ ಹೆಸರಾಗಿರುವ ಕರ್ನಾಟಕದ ಮಯಂಕ್‌ ಅಗರವಾಲ್‌ ದೇಶಿ ಮತ್ತು ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಪಂಜಾಬ್‌ನ ಮನನ್‌ ವೊಹ್ರಾ, ಮನ್ವೀದರ್ ಸಿಂಗ್ ಬಿಸ್ಲಾ ಕೂಡ ಚೆನ್ನಾಗಿಯೇ ಆಡಿದ್ದಾರೆ. ಆದರೂ ರಾಷ್ಟ್ರೀಯ ತಂಡದಲ್ಲಿ ಇವರಿಗೆ ಅವಕಾಶ ಲಭಿಸಿಲ್ಲ.

ಕೆಲವು ಆಟಗಾರರು ಒಂದೆರೆಡು ವರ್ಷಗಳಿಂದ ಗಮನಾರ್ಹ ಪ್ರದರ್ಶನ ನೀಡುತ್ತಿದ್ದಾರೆ. ಸಹೋದರರಾದ ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ (ಮುಂಬೈ ಇಂಡಿಯನ್ಸ್‌), ಶ್ರೇಯಸ್‌ ಅಯ್ಯರ್‌ (ಡೆಲ್ಲಿ ಡೇರ್‌ಡೆವಿಲ್ಸ್‌),  ಕರುಣ್‌ ನಾಯರ್‌ (ಡೆಲ್ಲಿ) ಸರ್ಫರಾಜ್‌ ಖಾನ್‌ ಮತ್ತು ಯಜುವೇಂದ್ರ ಚಾಹಲ್‌ (ಆರ್‌ಸಿಬಿ) ಇವರಲ್ಲಿ ಪ್ರಮುಖರು. ಇವರಲ್ಲಿ ಕೆಲವರು ಇದೇ ವರ್ಷ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದರೂ ಅಚ್ಚರಿಯೇನಿಲ್ಲ.

*
ಅಪ್ಪಟ ಐಪಿಎಲ್‌ ಪ್ರತಿಭೆ ಸರ್ಫರಾಜ್‌
ಏಪ್ರಿಲ್‌ ಎರಡನೇ ವಾರದಲ್ಲಿ ಬೆಂಗಳೂರಿ ನಲ್ಲಿ ಆರ್‌ಸಿಬಿ ಮತ್ತು ಸನ್‌ರೈಸರ್ಸ್‌ ಹೈದರಾಬಾದ್ ನಡುವೆ ಐಪಿಎಲ್‌ ಪಂದ್ಯ ನಡೆದಿತ್ತು.  ಆ ಪಂದ್ಯದಲ್ಲಿ  ಸರ್ಫರಾಜ್‌ ಖಾನ್ ಬ್ಯಾಟಿಂಗ್ ನೋಡಿದವರಿಗೆ ಆತನಲ್ಲಿರುವ ಪ್ರತಿಭೆ ಎಂಥದ್ದು ಎಂಬುದು ಗೊತ್ತಿರುತ್ತದೆ.

ವೇಗಿ ಭುವನೇಶ್ವರ್ ಕುಮಾರ್‌ ಬೌಲಿಂಗ್‌ನ ಒಂದೇ ಓವರ್‌ನಲ್ಲಿ ಸರ್ಫರಾಜ್‌ 26 ರನ್‌ ಬಾರಿಸಿದ್ದರು. ಆ ಓವರ್‌ನಲ್ಲಿ ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್ ಸಿಡಿಸಿದ್ದರು. ಯುವ ಆಟಗಾರನ ಬ್ಯಾಟಿಂಗ್‌ಗೆ   ನಾಯಕ ವಿರಾಟ್‌ ಕೊಹ್ಲಿಯೇ ತಲೆದೂಗಿದ್ದರು.

‘ಸನ್‌ರೈಸರ್ಸ್‌ ಎದುರಿನ ಪಂದ್ಯದಲ್ಲಿ ಕೊಹ್ಲಿ ಮತ್ತು ಡಿವಿಲಿಯರ್ಸ್‌ ಉತ್ತಮ ಜೊತೆಯಾಡಿದರು ನಿಜ. ಆದರೆ ಪಂದ್ಯದ ಆಕರ್ಷಣೆ ಎನಿಸಿದ್ದು ಸರ್ಫರಾಜ್‌. ಆತ ನನಗೆ ಮಗನಂತೆ ಕಾಣಿಸುತ್ತಾನೆ’ ಎಂದು  ಕ್ರಿಸ್‌ ಗೇಲ್‌ ಮೆಚ್ಚುಗೆ ವ್ಯಕ್ತಪಡಿಸಿದ್ದರು.

18 ವರ್ಷದ ಸರ್ಫರಾಜ್‌ ವಿವಿಧ ವಯೋಮಿತಿಯೊಳಗಿನ ಟೂರ್ನಿಗಳಲ್ಲಿ ಗಮನ ಸೆಳೆದಿದ್ದಾರೆ. ಎರಡು ವರ್ಷಗಳ ಹಿಂದೆಯಷ್ಟೇ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ಅವರು ಹೆಸರಾಗಿದ್ದು ಐಪಿಎಲ್‌ನಿಂದ.

2012ರಲ್ಲಿ ಭಾರತದಲ್ಲಿ ನಡೆದ 19 ವರ್ಷದ ಒಳಗಿನವರ ಚತುಷ್ಕೋನ ಸರಣಿ ಯಲ್ಲಿ ದಕ್ಷಿಣ ಆಫ್ರಿಕಾ ಎದುರು ಕೇವಲ 66 ಎಸೆತಗಳಲ್ಲಿ 101 ರನ್ ಬಾರಿಸಿದ್ದರು.  2013ರ ಆಗಸ್ಟ್‌ನಲ್ಲಿ ಜರುಗಿದ  ಶ್ರೀಲಂಕಾ   ಎದುರಿನ ಕ್ರಿಕೆಟ್‌ ಸರಣಿಯ ಪಂದ್ಯದಲ್ಲಿ  ನಾಲ್ಕು ವಿಕೆಟ್‌ ಕಬಳಿಸಿ ತಾವೊಬ್ಬ ಉತ್ತಮ ಆಲ್‌ರೌಂಡರ್‌ ಆಗಬಲ್ಲೆ ಎನ್ನುವ ಸುಳಿವು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT