ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಭದ್ರತೆ: ಅಭ್ಯರ್ಥಿಗಳ ನಿಲುವೇನು?

ದೇಶ ಸದ್ಯಕ್ಕೆ ಆಂತರಿಕವಾಗಿಯೂ ಬಾಹ್ಯವಾಗಿಯೂ ಅಸು­ರಕ್ಷತೆಯನ್ನು ಎದುರಿಸುತ್ತಿದೆ. ಭಯೋತ್ಪಾದನೆ, ನಕ್ಸಲ್ ಹಾವಳಿ, ಧಾರ್ಮಿಕ ಅಸಹನೆ ಇತ್ಯಾದಿಗಳಿಂದಾಗಿ  ದೇಶ ಆಂತರಿಕವಾಗಿ ಧಗಧಗಿಸುತ್ತಿದ್ದು, ಇದನ್ನು  ಆರಿಸು­ವು­ದಕ್ಕೇ ಸೇನೆಯ ಶ್ರಮ ಹೆಚ್ಚು ವ್ಯಯವಾಗುತ್ತಿದೆ.

ಹೊರಗಿನಿಂದ ಎದುರಾಗುವ ದಾಳಿ ಎದುರಿ­ಸಲು ಸೇನೆ ಲಭ್ಯವಾಗುತ್ತಿಲ್ಲ. ಇದು ನಮ್ಮ ಎದುರಾಳಿ­ಗ­ಳಾದ ಪಾಕಿಸ್ತಾನ–ಚೀನಾಗಳಿಗೆ ಆಮಂತ್ರಣ ನೀಡಿದಂತೆ. ಎದು­ರಾ­ಳಿ­­ಗಳ ಹಸ್ತಕ್ಷೇಪ, ಗಡಿ ಕಲಹ, ಚಕಮಕಿಗಳು ಹೆಚ್ಚುತ್ತಲೇ ಇವೆ. ಪ್ರತಿಸಲ ಇಂಥ ಮುಖಾಮುಖಿಯಲ್ಲಿ ನಮ್ಮ ಅಶಕ್ತತೆ, ಅನಿ­ಶ್ಚಿ­­ತತೆ ಎದ್ದು ಕಾಣುತ್ತಿದೆ. ನಮ್ಮ ಆತ್ಮವಿಶ್ವಾಸ, ಸ್ಥೈರ್ಯ ಉಡುಗತೊಡಗಿವೆ.

ಆಂತರಿಕ ಸುರಕ್ಷತೆಯನ್ನು ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾ­­ಜಿ­ಕವಾಗಿ, ಮಾನಸಿಕವಾಗಿ ಕಾಪಾಡಿಕೊಳ್ಳುವ ದೃಢ ಪ್ರಯ­ತ್ನ­ಗಳು ಆಗುತ್ತಿಲ್ಲ. ದೇಶದ ಒಳಗಿನ ಹುಣ್ಣುಗಳನ್ನು ಸೇನೆಯ ಉಡಿಯಲ್ಲಿಯೇ ಹಾಕುತ್ತಿರುವುದು ಏಕೆ? ಜನತಾ ಪ್ರತಿ­ನಿಧಿ­ಗಳು ಈ ಸಮಸ್ಯೆಗಳನ್ನು ರಾಜಕೀಯವಾಗಿ, ಪ್ರಜಾ­ತಾಂತ್ರಿಕ­ವಾಗಿ ಬಿಡಿಸಲು ಏಕೆ ಆಗುತ್ತಿಲ್ಲ?

ಚಿಕ್ಕಪುಟ್ಟ ಕಚ್ಚಾಟ, ಗಡಿಗಲಭೆ, ಚಕಮಕಿಯಂಥ  ಕೃತ್ಯಗಳನ್ನು ನಡೆಸಿ, ಗಡಿ ಪ್ರದೇಶದಲ್ಲಿ ಅಭದ್ರ ಸ್ಥಿತಿಯನ್ನು ಸೃಷ್ಟಿಸಿ, ನಮ್ಮ ದೇಶ­ವನ್ನು ಕೆಣಕುವ ಕಾರ್ಯಾಚರಣೆಯೇ ಈಗಿನ  ಸಮರ ಶೈಲಿ­-ಯಾ­ದಂತಿದೆ. ಇಂತಹ ಶತ್ರು ಸಂಕಲ್ಪ ಕಾರ್ಯಾಚರಣೆ­ಯನ್ನು ಯಶಸ್ವಿಯಾಗಿ ಎದುರಿಸುವ ಯುದ್ಧ ತಂತ್ರ ನಮ್ಮಲ್ಲಿ ಏಕಿಲ್ಲ?  ನಾವು ದೇಶದ ಭದ್ರತೆ ವಿಷಯದಲ್ಲಿ ಏಕೆ ಹಿಂದುಳಿದಿದ್ದೇವೆ?

ನಮ್ಮ ಗಡಿಯಲ್ಲಿ ಯುದ್ಧ ಸಿದ್ಧತೆ, ರಸ್ತೆ, ರೈಲು, ವಿಮಾನ­ತಾಣ, ಗುಡಾಣ, ವರ್ಕ್‌ಶಾಪ್, ಸಮರ ಸಲಕರಣೆಗಳ ಸಂಗ್ರಹ ಇತ್ಯಾದಿ ಬುನಾದಿ ವ್ಯವಸ್ಥೆಗಳಿಲ್ಲದೇ ನಮ್ಮ ಸೈನಿಕರು ಹೋರಾಡು­ವುದೆಂತು?  ಆಧುನೀಕರಣ ಮತ್ತು ಶಸ್ತ್ರಾಸ್ತ್ರ ಸಂಖ್ಯೆ ಯುದ್ಧ ಗೆಲ್ಲ­­ಲಷ್ಟೇ ಅಲ್ಲ, ವಿರೋಧಿಯು ಯುದ್ಧಕ್ಕಿಳಿಯದಂತೆ ತಡೆಯಲು ಕೂಡ ಅವಶ್ಯಕ. ಸೈನಿಕರನ್ನು ಶೂರರು ಎಂದು ಹುರಿ­­ದುಂಬಿಸುತ್ತ, ಸತ್ತ ಸೈನಿಕರಿಗೆ ಮಾಲಾರ್ಪಣೆ ಮಾಡಿ, ಕಣ್ಣೀರು ಸುರಿಸುವುದೇ ನಮ್ಮ ಸಮರ ಶಕ್ತಿಯಾಗಬಲ್ಲದೇ? ಜೀವಂತ ಸೈನಿಕರು, ಅವರ ಸಮರ ಸಿದ್ಧತೆ, ಶಸ್ತ್ರಾಸ್ತ್ರಗಳ ಬಗ್ಗೆ ಮಾತಾಡುವುದಿಲ್ಲ ಏಕೆ?

ಈ ಎಲ್ಲ ವಿಷಯಗಳು ಚುನಾ­ವಣೆ­ಯಲ್ಲಿ ಕೇಳಿಬರುವುದೇ ಇಲ್ಲ­ವಲ್ಲ? ದೇಶವನ್ನು ಕಾಯುವ ಸೇನೆಯ ಬಗ್ಗೆ ಇಷ್ಟು ಅನಾ­ದ­ರವೇ? ದೇಶದ ಸುರ­ಕ್ಷತೆಯ ವಿಷಯದ ಬಗ್ಗೆ ಯಾವೊಂದು ಪಕ್ಷ, ಅಭ್ಯರ್ಥಿ ಚಕಾರವೆತ್ತುತ್ತಿಲ್ಲ. ಇದೆಂತಹ ದೇಶಪ್ರೇಮ? 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT