ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಸೇವಾ ಯೋಜನೆಗೂ ಶುಲ್ಕ!

ಕಾಲೇಜುಗಳಲ್ಲಿ ಆರಂಭವಾಗಲಿದೆ ಪ್ರತ್ಯೇಕ ಘಟಕ: ಪ್ರಸ್ತಾವಕ್ಕೆ ವಿರೋಧ
Last Updated 3 ಜೂನ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಾಲೇಜು ವಿದ್ಯಾರ್ಥಿಗಳು ಇನ್ನು ಮುಂದೆ ರಾಷ್ಟ್ರೀಯ ಸೇವಾ  ಯೋಜನೆಗಾಗಿ (ಎನ್‌ಎಸ್‌ಎಸ್‌)  ಪ್ರತ್ಯೇಕ ಶುಲ್ಕ ಪಾವತಿಸಬೇಕು! 

ಕೇಂದ್ರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಲಹೆಯ ಅನ್ವಯ ರಾಜ್ಯ ಉನ್ನತ ಶಿಕ್ಷಣ ಇಲಾಖೆಯು  ರಾಜ್ಯದ ಪದವಿ ಕಾಲೇಜುಗಳಲ್ಲಿ ಸ್ವಆರ್ಥಿಕ (ಆರ್ಥಿಕ ಸ್ವಾವಲಂಬಿ) ಎನ್‌ಎಸ್‌ಎಸ್‌ ಘಟಕಗಳನ್ನು ಕಡ್ಡಾಯವಾಗಿ ಸ್ಥಾಪಿಸುವಂತೆ ಆದೇಶ ಹೊರಡಿಸಿದೆ.

ಆದೇಶದ ಅನ್ವಯ, ಎನ್‌ಎಸ್‌ಎಸ್‌ ಘಟಕಗಳು ಇಲ್ಲದ ಕಾಲೇಜುಗಳಲ್ಲಿ  ಎಲ್ಲ ವಿದ್ಯಾರ್ಥಿಗಳಿಂದ ₨50 ಮತ್ತು ಈಗಾಗಲೇ ಘಟಕಗಳು ಇರುವ ಕಾಲೇಜುಗಳಲ್ಲಿ ₨40 ಶುಲ್ಕ ಸಂಗ್ರಹಿಸಬೇಕು. ಕಾಲೇಜು ಪ್ರವೇಶಾತಿಯ ಶುಲ್ಕದೊಂದಿಗೆ ಇದನ್ನು ಸಂಗ್ರಹಿಸಬೇಕಾಗುತ್ತದೆ.
ವಿದ್ಯಾರ್ಥಿಗಳಿಗೆ ಸಮಾಜ ಸೇವೆಯ ಮುಖವನ್ನು ಪರಿಚಯ ಮಾಡಲು ಮತ್ತು ಆ ಮೂಲಕ ಅವರ ವ್ಯಕ್ತಿತ್ವ ವಿಕಸನದ  ಉದ್ದೇಶದಿಂದ ಕೇಂದ್ರ ಸರ್ಕಾರ 1969ರಲ್ಲಿ ಎನ್‌ಎಸ್‌ಎಸ್‌ ಆರಂಭಿಸಿತ್ತು. ಈ ಘಟಕಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಅನುದಾನ ನೀಡುತ್ತವೆ.

100 ಸ್ವಯಂಸೇವಕರ ಒಂದು  ಘಟಕದ ಚಟುವಟಿಕೆಗಳಿಗೆ ವಾರ್ಷಿಕ ₨16 ಸಾವಿರ ಮತ್ತು ವಾರ್ಷಿಕ ಸೇವಾ ಶಿಬಿರಕ್ಕೆ ₨ 22,500 ಅನುದಾನ ದೊರೆಯುತ್ತದೆ.

ಪ್ರತ್ಯೇಕ ಘಟಕ: ಪ್ರಸ್ತಾವಿತ ಸ್ವಆರ್ಥಿಕ ಎನ್‌ಎಸ್‌ಎಸ್‌ ಘಟಕಗಳು, ಸರ್ಕಾರ ಅನುದಾನ ನೀಡುವ ಎನ್‌ಎಸ್‌ಎಸ್‌ ಘಟಕಗಳಿಂದ ಪ್ರತ್ಯೇಕವಾಗಿರುತ್ತವೆ. ಇದಕ್ಕಾಗಿಯೇ ಪ್ರತ್ಯೇಕ ಯೋಜನಾಧಿಕಾರಿಗಳನ್ನು ನೇಮಿಸಲಾಗುತ್ತದೆ.

‘ದೇಶದ ಒಟ್ಟಾರೆ ವಿದ್ಯಾರ್ಥಿಗಳ ಪೈಕಿ ಶೇ 33ರಷ್ಟು ಮಂದಿ ಮಾತ್ರ ಎನ್‌ಎಸ್‌ಎಸ್‌, ಎನ್‌ಸಿಸಿ, ಸ್ಕೌಟ್ಸ್‌, ಗೈಡ್ಸ್‌ ರೋವರ್ಸ್‌ ಮತ್ತು ರೇಂಜರ್ಸ್‌, ರೆಡ್‌ ಕ್ರಾಸ್‌ ಘಟಕದಂತಹ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಉಳಿದ ಶೇ 67ರಷ್ಟು ವಿದ್ಯಾರ್ಥಿಗಳು ಪಠ್ಯಕ್ಕೆ ಹೊರತಾದ ಚಟುವಟಿಕೆಗಳಲ್ಲಿ ನಿಷ್ಕ್ರಿಯರಾಗಿದ್ದಾರೆ. ಅವರೂಕೂಡ ಇದರಲ್ಲಿ ತೊಡಗಿಕೊಳ್ಳಬೇಕು ಎಂಬ ಉದ್ದೇಶ ಈ ಪ್ರಸ್ತಾವದ ಹಿಂದಿದೆ’ ಎಂದು ಎನ್‌ಎಸ್ಎಸ್‌ನ ನಿವೃತ್ತ ಸಲಹೆಗಾರರಾದ ಡಾ. ಎಚ್‌.ಎಸ್‌. ಸುರೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಐಟಿಐ, ಡಿಪ್ಲೊಮಾ ಸಂಸ್ಥೆಗಳು, ಪಿಯು ಮತ್ತು ಪದವಿ ಕಾಲೇಜುಗಳು ಹಾಗೂ ವಿವಿಗಳಲ್ಲಿ ಎನ್‌ಎಸ್‌ಎಸ್‌ ಘಟಕಗಳು ಇವೆ. ಆದರೆ, ಒಂದು ಘಟಕದಲ್ಲಿ 100 ಸ್ವಯಂ ಸೇವಕರಿಗೆ ಮಾತ್ರ ಅವಕಾಶ ಇರುವುದರಿಂದ ಇತರರಿಗೆ ಇದರಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ. ಸ್ವ ಆರ್ಥಿಕ ಘಟಕಗಳು ಉಳಿದ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಿವೆ’  ಎಂದು  ವಿವರಿಸಿದರು.

‘ವಿದ್ಯಾರ್ಥಿಗಳಿಂದ ಸಂಗ್ರಹಿಸುವ ಮೊತ್ತ ಆಯಾ ಕಾಲೇಜುಗಳಲ್ಲೇ ಇರಲಿದೆ. ಘಟಕಗಳ ಯೋಜನಾಧಿಕಾರಿ ಮತ್ತು ಪ್ರಾಂಶುಪಾಲರ ಜಂಟಿ ಬ್ಯಾಂಕ್‌ ಖಾತೆಯಲ್ಲಿ ಇದನ್ನು ಇಡಲಾಗುವುದು. ಘಟಕವು ನಡೆಸುವ ಚಟುವಟಿಕೆಗಳಿಗೆ ಮಾತ್ರ ಹಣವನ್ನು ಬಳಸಬೇಕಾಗುತ್ತದೆ. ಘಟಕವು ಲೆಕ್ಕಪರಿಶೋಧನೆಗೂ ಒಳಪಡಲಿದೆ’ ಎಂದು ಅವರು ಮಾಹಿತಿ ನೀಡಿದರು.

ವಿರೋಧ:  ಆದರೆ, ಈ ಪ್ರಸ್ತಾವಕ್ಕೆ ಶಿಕ್ಷಣ ವಲಯದಲ್ಲಿ ವಿರೋಧ ವ್ಯಕ್ತವಾಗಿದೆ. ಸ್ವತಃ ಎನ್‌ಎಸ್‌ಎಸ್‌ ಘಟಕದ ಅಧಿಕಾರಿಗಳೇ ಇದನ್ನು ವಿರೋಧಿಸಿದ್ದಾರೆ. ಸಂಗ್ರಹವಾಗುವ ಹಣ ದುರ್ಬಳಕೆಯಾಗುವ ಆತಂಕವನ್ನೂ ಅವರು ವ್ಯಕ್ತಪಡಿಸಿದ್ದಾರೆ.

‘ಸೇವಾ ಮನೋಭಾವನೆಯುಳ್ಳ ವಿದ್ಯಾರ್ಥಿಗಳೇ ಹೆಚ್ಚಾಗಿ ಎನ್‌ಎಸ್‌ಎಸ್‌ ಘಟಕಕ್ಕೆ ಸೇರಲು ಆಸಕ್ತಿ ತೋರುತ್ತಾರೆ. ಸೇವೆ ಮಾಡಲು ಬರುವವರಿಂದ ಶುಲ್ಕ ಸಂಗ್ರಹಿಸುವುದು ಸರಿಯಲ್ಲ’ ಎಂದು ಕುಂದಾಪುರದ ಕಾಲೇಜೊಂದರ ಯೋಜನಾಧಿಕಾರಿ ಹೇಳಿದರು.

‘ಎನ್‌ಎಸ್‌ಎಸ್‌ ಅಂದರೆ, ಅಲ್ಲಿ ರಚನಾತ್ಮಕ ಕೆಲಸಗಳು ನಡೆಯಬೇಕು. ಎಷ್ಟೋ ಕಾಲೇಜುಗಳಲ್ಲಿ ಈಗ ಇರುವ ಘಟಕಗಳೇ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅನುದಾನ ದುರ್ಬಳಕೆಯಾದ ಪ್ರಕರಣಗಳೂ ನಡೆಯುತ್ತಿವೆ. ಹೀಗಾಗಿ, ಸ್ವ ಆರ್ಥಿಕ‌ ಎನ್‌ಎಸ್‌ಎಸ್‌ ಘಟಕದ ಹಣ  ಅನ್ಯ ಉದ್ದೇಶಕ್ಕೆ ಬಳಕೆಯಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ’ ಎಂದು  ಮತ್ತೊಬ್ಬ ಯೋಜನಾಧಿಕಾರಿ ಕಳವಳ ವ್ಯಕ್ತಪಡಿಸಿದರು.

‘ಕಾಲೇಜುಗಳಲ್ಲಿ ಎನ್‌ಸಿಸಿ ಸೇರಿದಂತೆ ಬೇರೆ ಬೇರೆ ಪಠ್ಯೇತರ ಚಟುವಟಿಕೆಗಳಿವೆ. ಎಲ್ಲರಿಗೂ ಎನ್‌ಎಸ್‌ಎಸ್‌ ಅಗತ್ಯ
ವಿಲ್ಲ. ಪಠ್ಯೇತರ ಚಟುವಟಿಕೆಗಳೇ ಹೆಚ್ಚಾದರೆ, ಪಠ್ಯ ಗೌಣ ಆಗುವ ಅಪಾಯವೂ ಇದೆ’ ಎಂದೂ ಅವರು ಎಚ್ಚರಿಸಿದರು.

ಎಷ್ಟು ಶುಲ್ಕ?
₨50 - ಎನ್‌ಎಸ್‌ಎಸ್‌ ಘಟಕಗಳು ಇಲ್ಲದ ಕಾಲೇಜುಗಳಲ್ಲಿ
₨40 -ಎನ್‌ಎಸ್‌ಎಸ್‌ ಘಟಕಗಳು ಇರುವ ಕಾಲೇಜುಗಳಲ್ಲಿ

ಮುಖ್ಯಾಂಶಗಳು
*ಕಾಲೇಜುಗಳಲ್ಲಿ ಸ್ವಆರ್ಥಿಕ ಎನ್‌ಎಸ್‌ಎಸ್‌ ಘಟಕ ಸ್ಥಾಪನೆಗೆ ಸೂಚನೆ
*ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡುವ ಗುರಿ
*ಸಂಗ್ರಹವಾದ ಮೊತ್ತ ಘಟಕದ ಚಟುವಟಿಕೆಗಳಿಗೆ ಮಾತ್ರ ಮೀಸಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT