ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಹೆದ್ದಾರಿ ಬದಿಯ ಬದುಕು ದುಸ್ತರ!

ಜೀವ ಭಯದಲ್ಲಿ ಜೀವನ ಸಾಗಿಸುತ್ತಿರುವ ನಿವಾಸಿಗಳು
Last Updated 22 ಜುಲೈ 2014, 10:47 IST
ಅಕ್ಷರ ಗಾತ್ರ

ಉಡುಪಿ: ನಗರದ ನಿಟ್ಟೂರಿನ ಬಳಿ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿರುವ ಕೊಳೆಗೇರಿಯ ನಿವಾಸಿಗಳು ಜೀವಭಯದಲ್ಲಿಯೇ ಕಾಲ ದೂಡುತ್ತಿದ್ದಾರೆ.
ಕುಂದಾಪುರ ಮತ್ತು ಮಂಗಳೂರನ್ನು ಸಂಪರ್ಕಿ­ಸುವ ಈ ರಸ್ತೆಯಲ್ಲಿ ಅತಿ ವೇಗದಲ್ಲಿ ಸಂಚರಿಸುವ ಲಾರಿಗಳು, ಬೃಹತ್‌ ವಾಹನಗಳು ನಿಯಂತ್ರಣ ಕಳೆದುಕೊಂಡು ಕೊಳೆಗೇರಿಯತ್ತ ನುಗ್ಗಿದರೆ ಹತ್ತಾರು ಮಂದಿ ಪ್ರಾಣ ಕಳೆದುಕೊಳ್ಳುವುದು ಖಚಿತ.

ಶೌಚಾಲಯ, ಸ್ನಾನಗೃಹ ಇಲ್ಲದೆ ನೈರ್ಮಲ್ಯ ಇಲ್ಲವಾಗಿದ್ದು, ಸಾಂಕ್ರಾಮಿಕ ರೋಗಗಳಿಗೆ ಸುಲಭ­ವಾಗಿ ತುತ್ತಾಗುವ ಅಪಾಯ ಎದುರಿಸುತ್ತಿದ್ದಾರೆ. ಕೂಲಿ ಕೆಲಸಕ್ಕೆ ಹೋಗಿ ಬರಲು ಅನುಕೂಲಕರ­ವಾಗಿರುವ ಸ್ಥಳವೊಂದನ್ನು ಗುರುತಿಸಿ ಪುಟ್ಟದೊಂದು ಮನೆ ಕಟ್ಟಿಕೊಡಿ ಎಂದು ಇಪ್ಪತ್ತು ವರ್ಷದಿಂದ ಅವರು ಮನವಿ ಮಾಡುತ್ತಿದ್ದಾರೆ. ಸರ್ಕಾರವಾಗಲಿ ಅಥವಾ ಉಡುಪಿಯ ಸ್ಥಳೀಯ ಆಡಳಿತ ಹೊಣೆ ಹೊತ್ತಿರುವ ನಗರಸಭೆಯಾಗಲಿ ಬೇಡಿಕೆಯನ್ನು ಈಡೇರಿಸುವ ಗೋಜಿಗೆ ಹೋಗಿಲ್ಲ.

ಜಿಲ್ಲಾಧಿಕಾರಿ ಡಾ. ಮುದ್ದುಮೋಹನ್‌ ಅವರು ಇತ್ತೀಚೆಗಷ್ಟೇ ಕೊಳೆಗೇರಿಗೆ ಭೇಟಿ ನೀಡಿ ಪರಿಶೀಲಿ­ಸಿದ್ದರು. ಅವರಾದರೂ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುತ್ತಾರೆಯೇ ಎಂದು ಆಸೆಗಣ್ಣಿನಿಂದ ನೋಡುತ್ತಿದ್ದಾರೆ ಇಲ್ಲಿನ ನಿವಾಸಿಗಳು.

‘ಮನೆ ನಿರ್ಮಾಣಕ್ಕೆ ಯತ್ನ’
‘ನಿಟ್ಟೂರಿನ ಕೊಳೆಗೇರಿ ನಿವಾಸಿಗಳಿಗೆ ಮನೆ ಕಟ್ಟಿಕೊಡಲು ಪ್ರಯತ್ನಿಸುತ್ತಿದ್ದೇವೆ. ನಗರಸಭೆಯ ಜಾಗ ಇಲ್ಲದಿರುವುದು ಸಮಸ್ಯೆಯಾಗಿದೆ. ಕಂದಾಯ ಇಲಾಖೆಯ ಜಾಗವಿದ್ದರೆ ಮನೆ ನಿರ್ಮಿಸಬಹುದು. ಈ ಬಗ್ಗೆ ಕಂದಾಯ ಇಲಾಖೆಗೆ ಪತ್ರ ಬರೆದು ಮನವಿ ಮಾಡಲಾಗುತ್ತದೆ. ಅವರು ಜಾಗ ನೀಡಿದರೆ ಮನೆ ನಿರ್ಮಿಸಿ ಕೊಳಗೇರಿ ನಿವಾಸಿಗಳನ್ನು ಸ್ಥಳಾಂತರಿಸುತ್ತೇವೆ’
–ಶ್ರೀಕಾಂತ್‌ ರಾವ್‌, ನಗರಸಭೆ ಪೌರಾಯುಕ್ತ

ಈ ಕೊಳೆಗೇರಿಯಲ್ಲಿ ಸುಮಾರು 50 ಜೋಪಡಿಗಳಿವೆ. ಇಲ್ಲಿರುವ ಹೆಚ್ಚಿನವರು ಹತ್ತಿರ ಅಥವಾ ದೂರದ ಸಂಬಂಧಿಗಳೇ ಆಗಿರುವುದು ಕುತೂಹಲಕಾರಿ ಸಂಗತಿ. ಹುಬ್ಬಳ್ಳಿ, ಲಕ್ಷ್ಮೇಶ್ವರ, ಹಾನಗಲ್‌ ಸುತ್ತಮುತ್ತಲಿನ ಹಳ್ಳಿಗಳಿಂದ ಸುಮಾರು 30 ವರ್ಷದ ಹಿಂದೆ ವಲಸೆ ಬಂದು ನಿಟ್ಟೂರಿನಲ್ಲಿ ನೆಲೆ ನಿಂತಿದ್ದಾರೆ. 50 ಮಂದಿ ಮಕ್ಕಳು ಸೇರಿ ಸುಮಾರು 300 ಮಂದಿ ಇಲ್ಲಿದ್ದಾರೆ.

ಹೆಚ್ಚಿನವರು ಮಲ್ಪೆ ಬಂದರಿನಲ್ಲಿ ಕೆಲಸ ಮಾಡುತ್ತಾರೆ. ಬೋಟ್‌ನಿಂದ ಮೀನನ್ನು ಹೊತ್ತು ಹಾಕುವುದು, ಲಾರಿಗಳಿಗೆ ತುಂಬುವುದು, ಬೋಟ್‌­ಗಳ ಸ್ವಚ್ಛತೆ ನಿತ್ಯದ ಕಾಯಕ. ಹೆಣ್ಣು ಮಕ್ಕಳೂ ದುಡಿದೇ ತಿನ್ನುತ್ತಾರೆ. ಮನೆಗಳ ಮುಂದೆ ಹೋಗಿ ಸಂಗೀತ ವಾದ್ಯಗಳನ್ನು ನುಡಿಸಿ ಕಾಸು ಸಂಪಾದನೆ ಮಾಡುವವರೂ ಇದ್ದಾರೆ. ದುಬಾರಿ ಬಾಡಿಗೆ ಮನೆಯಲ್ಲಿ ವಾಸಿಸಲು ಸಾಧ್ಯವಿಲ್ಲದ್ದರಿಂದ ಜೋಪಡಿಯಲ್ಲೇ ನೆಲೆಸಿದ್ದಾರೆ. ಜೋಪಡಿ ಸುಮಾರು 8x8 ಅಡಿ ಇದೆಯಷ್ಟೇ. ಇಂಥ ಜೋಪಡಿಯಲ್ಲಿ ಗಂಡ, ಹೆಂಡತಿ ಮತ್ತು ಸೇರಿ ನಾಲ್ಕೈದು ಮಂದಿ ವಾಸಿಸುತ್ತಿದ್ದಾರೆ.

ಶೌಚಾಲಯ ಇಲ್ಲದ್ದರಿಂದ ಬಹಿರ್ದೆಸೆಗೆ ಬಯಲೇ ಗತಿಯಾಗಿದೆ. ಸ್ನಾನಗೃಹಗಳಿಲ್ಲದ ಕಾರಣ ಹಳೆಯ ಸೀರೆಗಳನ್ನು ಸುತ್ತಲೂ ಕಟ್ಟಿಕೊಂಡು ಸ್ನಾನ ಮಾಡಬೇಕಿದೆ. ಬಚ್ಚಲು ಮನೆಯ ನೀರು ಹೋಗಲು ಚರಂಡಿ ಇಲ್ಲದೆ ನೀರು ಅಲ್ಲಿಯೇ ಸಂಗ್ರಹವಾಗಿ ಕಾಯಿಲೆಗಳಿಗೆ ಕಾರಣವಾಗುತ್ತಿದೆ. 

‘ಆತಂಕದಲ್ಲೇ ದಿನ ದೂಡುತ್ತಿದ್ದೇವೆ’
‘ಹೆದ್ದಾರಿ ಪಕ್ಕದಲ್ಲಿದ್ದು ಆತಂಕ­ದಲ್ಲೇ ಕಾಲ ಕಳೆಯಬೇಕಾಗಿದೆ. ಹಾವು– ಹುಳಗಳ ಕಾಟವೂ ಇದೆ. ಅಪಘಾತದಿಂದ ಮಕ್ಕಳು ಗಾಯಗೊಳ್ಳುವ ಘಟನೆಗಳೂ ನಡೆಯುತ್ತಿರುತ್ತವೆ. ಈ ಜಾಗ ಬಿಟ್ಟರೆ ಬೇರೆ ಎಲ್ಲಿಗೆ ಹೋಗುವುದು? ಕಷ್ಟವೋ ಸುಖವೋ ಇಲ್ಲಿಯೇ ನೆಲೆಸಿದ್ದೇವೆ. 20 ವರ್ಷಗಳಿಂದ ಅಧಿಕಾರಿಗಳು ಇಲ್ಲಿಗೆ ಬಂದು ಹೋಗುತ್ತಿದ್ದಾರೆ. ಶಾಶ್ವತ ಸೂರು ಕಲ್ಪಿಸಿಕೊಟ್ಟಿಲ್ಲ. ಮನೆ ನಿರ್ಮಿಸಿ ಕೊಟ್ಟರೆ ಋಣಿಯಾಗಿರುತ್ತೇವೆ’
–ಶಂಕರಪ್ಪ, ಕೊಳೆಗೇರಿ ನಿವಾಸಿ

‘ಮನೆ ನಿರ್ಮಿಸಿ ಕೊಡಿ’
‘ನಾವು ಮಲ್ಪೆಯ ಬಂದರಿನಲ್ಲಿ ಕೂಲಿ ಕೆಲಸ ಮಾಡುತ್ತೇವೆ. ಈಗಿರುವ ಸ್ಥಳದಿಂದ ಕರಾವಳಿ ಜಂಕ್ಷನ್‌ಗೆ ಹೋಗಿ ಅಲ್ಲಿಂದ ಮತ್ತೊಂದು ಬಸ್‌ನಲ್ಲಿ ಮಲ್ಪೆಗೆ ಹೋಗಲು ₨16 ಖರ್ಚಾ ಗುತ್ತದೆ. ಬೆಳಗಿನ ಜಾವ ಮೂರು ಗಂಟೆಗೆ ಕೆಲಸಕ್ಕೆ ಹೋಗ ಬೇಕಾಗುತ್ತದೆ. ಆಗ ಬಸ್‌ಗಳು ಇರುವುದಿಲ್ಲ ಎಲ್ಲರೂ ನಡೆದುಕೊಂಡೇ ಹೋಗುತ್ತೇವೆ. ನಗರದ ವ್ಯಾಪ್ತಿಯಲ್ಲಿಯೇ ಅದರಲ್ಲೂ ಮಲ್ಪೆಗೆ ಹತ್ತಿರದ ಸ್ಥಳದಲ್ಲಿ ಪುಟ್ಟದೊಂದು ಮನೆ ನಿರ್ಮಿಸಿ ಕೊಟ್ಟರೆ ಸಾಕು. ರೇಷನ್‌ ಕಾರ್ಡ್‌ ನೀಡಿದರೆ ಆಹಾರ ಧಾನ್ಯ ಖರೀದಿಸಿ ಜೀವನ ಸಾಗಿಸುತ್ತೇವೆ’
‘ತಂದೆಯ ಕಾಲದಿಂದಲೂ ಇಲ್ಲಿದ್ದೇವೆ. ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ನಮ್ಮದಂತೂ ಇಷ್ಟೇ ಜೀವನ; ಅವರಾದರೂ ಚೆನ್ನಾಗಿ ಓದಿ ಉತ್ತಮ ಜೀವನ ಸಾಗಿಸಬೇಕೆಂಂಬುದು ನಮ್ಮ ಕನಸು’
– ಯಲ್ಲಮ್ಮ, ಕೊಳೆಗೇರಿ ನಿವಾಸಿ

ದುಡಿದು ತಿನ್ನುವವರು ಕಾಯಿಲೆ ಬಿದ್ದರೆ ಇನ್ನಷ್ಟು ಆರ್ಥಿಕ ಸಂಕಷ್ಟಕ್ಕೀಡಾಗುತ್ತಾರೆ. ಕುಡಿಯುವ ನೀರಿಗಾಗಿ ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿರುವ ಬಾವಿಯನ್ನು ಇವರು ಅವಲಂಬಿಸಿದ್ದಾರೆ. ಎರಡು ಮೂರು ಫರ್ಲಾಂಗ್‌ ದೂರದ ಬಾವಿಯಿಂದ ನೀರು ಸೇದಿಕೊಂಡು ಬರಬೇಕು. ಬಿಂದಿಗೆ ಹೊತ್ತುಕೊಂಡೇ ರಸ್ತೆಯ ಒಂದು ಬದಿಯಿಂದ ಇನ್ನೊಂದ ಬದಿಗೆ ಹೋಗಬೇಕು.

ಅಂಗನವಾಡಿಯಿಂದ ಹತ್ತನೇ ತರಗತಿಯವರೆಗೆ ಕಲಿಯುತ್ತಿರುವ ಮಕ್ಕಳು ಇದ್ದಾರೆ. ಸುಮಾರು ಅರ್ಧ ಕಿ.ಮೀ ದೂರದಲ್ಲಿ ಇರುವ ಹನುಮಂತ­ನಗರದ ಸರ್ಕಾರಿ ಶಾಲೆಗೆ ಎಲ್ಲರೂ ಹೋಗುತ್ತಿದ್ದಾರೆ ಎಂಬುದು ಸಮಾಧಾನದ ಸಂಗತಿ. ಹಣ್ಣು, ತರಕಾರಿ ಪೌಷ್ಟಿಕ ಆಹಾರದ ಕೊರತೆ ಇರುವುದರಿಂದ ಮಕ್ಕಳು ಬಳಲಿರುವಂತೆ ಕಾಣುತ್ತಾರೆ.

ಮತದಾರರ ಚೀಟಿ, ಪಡಿತರ ಚೀಟಿ ಇಲ್ಲದ್ದರಿಂದ ಸರ್ಕಾರದ ಯಾವೊಂದು ಸೌಲಭ್ಯಗಳೂ ಸಿಗುತ್ತಿಲ್ಲ. ಜಿಲ್ಲಾ ಆಸ್ಪತ್ರೆಯ ಸಂಚಾರಿ ಆಸ್ಪತ್ರೆಯ ಸಿಬ್ಬಂದಿ ವಾರಕ್ಕೊಮ್ಮೆ ಇಲ್ಲಿಗೆ ಭೇಟಿ ನೀಡಿ ಆರೋಗ್ಯದ ಬಗ್ಗೆ ಮಾಹಿತಿ ಪಡೆದು ಔಷಧ ನೀಡುತ್ತಿದ್ದಾರೆ.

ತೀವ್ರ ಅನಾರೋಗ್ಯ ಇದ್ದರೆ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ಗರ್ಭಿಣಿ, ಬಾಣಂತಿ­ಯರ ನಿಗಾ ವಹಿಸುತ್ತಿದ್ದಾರೆ ಎಂದು ಅವರು ಆಸ್ಪತ್ರೆಯ ಸಿಬ್ಬಂದಿಯ ಬಗ್ಗೆ ಮೆಚ್ಚುಗೆಯ ಮಾತನಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT