ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್‌ ಬಂದರು ಮ್ಯಾನ್ಮಾರ್‌ನಿಂದ

ಕಾಂಗ್ರೆಸ್‌ ಉಪಾಧ್ಯಕ್ಷನ 56 ದಿನಗಳ ‘ಅಜ್ಞಾತವಾಸ’ ಅಂತ್ಯ
Last Updated 16 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕಳೆದ 56 ದಿನಗಳಿಂದ ಸುದೀರ್ಘ  ‘ಅಜ್ಞಾತವಾಸ’ ದಲ್ಲಿದ್ದ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ  ಗುರುವಾರ ಕೊನೆಗೂ ಮರಳಿ ಬಂದಿದ್ದಾರೆ.

ಬ್ಯಾಂಕಾಕ್‌ನ ಥಾಯ್‌ ಏರ್‌ವೇಸ್‌ ವಿಮಾನದ ಮೂಲಕ ಬೆಳಿಗ್ಗೆ 11.15ಕ್ಕೆ ದೆಹಲಿಗೆ ಬಂದಿಳಿದ ಅವರು ನೇರವಾಗಿ  ತಮ್ಮ ನಿವಾಸಕ್ಕೆ ತೆರಳಿದರು.   ಅವರನ್ನು ತಾಯಿ ಸೋನಿಯಾ ಗಾಂಧಿ ಹಾಗೂ ಸಹೋದರಿ ಪ್ರಿಯಾಂಕಾ ಆತ್ಮೀಯವಾಗಿ ಬರಮಾಡಿಕೊಂಡರು. 

ಹೊರಗೆ ಕಾಯುತ್ತಿದ್ದ ಮಾಧ್ಯಮಪ್ರತಿನಿಧಿಗಳ ಜತೆ ಅವರು ಮಾತನಾಡಲಿಲ್ಲ. ಸುಮಾರು ಎರಡು ತಾಸು ಮನೆಯಲ್ಲಿಯೇ ಕಾಲ ಕಳೆದ ಅವರು ನಂತರ ಜನಪಥ್‌ ರಸ್ತೆಯಲ್ಲಿರುವ ಸೋನಿಯಾ ನಿವಾಸಕ್ಕೆ ಹೋದರು.

ರಾಹುಲ್‌ ಬರುವಿಕೆಯ ಸುಳಿವಿನ ಮೇಲೆ ಸುದ್ದಿವಾಹಿನಿಗಳ ಕ್ಯಾಮೆರಾಮನ್‌ ತಂಡ ಬುಧವಾರ ರಾತ್ರಿಯಿಂದಲೇ ದೆಹಲಿ ವಿಮಾನ ನಿಲ್ದಾಣದಲ್ಲಿ ಬೀಡು ಬಿಟ್ಟಿತ್ತು. ರಾಹುಲ್‌ ಬುಧವಾರ ರಾತ್ರಿಯೇ ಬರಬೇಕಿತ್ತು. ಆದರೆ, ಬ್ಯಾಂಕಾಕ್‌ನಲ್ಲಿ ಸಂಪರ್ಕ ವಿಮಾನ ವಿಳಂಬವಾದ ಕಾರಣ ಗುರುವಾರ ಬೆಳಿಗ್ಗೆ ದೆಹಲಿ ತಲುಪಿದರು.

ರಾಹುಲ್‌, ಮ್ಯಾನ್ಮಾರ್‌ನ ಧ್ಯಾನ ಕೇಂದ್ರದಲ್ಲಿ ಹೆಚ್ಚಿನ ದಿನಗಳನ್ನು ಕಳೆದು ಬಂದಿದ್ದಾರೆ ಎನ್ನಲಾಗಿದೆ. ಈ ಹಿಂದೆ ಕೂಡ ಅವರು ಇಲ್ಲಿಗೆ ಭೇಟಿ ನೀಡಿದ್ದರು. ರಾಹುಲ್‌ ಮರಳಿ ಬಂದಿರುವುದಕ್ಕೆ  ಖುಷಿಪಟ್ಟ ಕಾರ್ಯಕರ್ತರು ಅವರ ನಿವಾಸದ ಎದುರು ಪಟಾಕಿ ಹೊಡೆದು ಸಂಭ್ರಮಿಸಿದರು.

ರಾಹುಲ್‌  ಎಲ್ಲಿದ್ದರು ಎನ್ನುವ ಬಗ್ಗೆ ಸ್ವತಃ ಕಾಂಗ್ರೆಸ್ಸಿಗರಿಗೂ ಖಚಿತ ಮಾಹಿತಿ ಇರಲಿಲ್ಲ. ಇದರಿಂದಾಗಿ ಪ್ರತಿಪಕ್ಷಗಳ ಗೇಲಿಗೆ ಆಹಾರವಾಗಿದ್ದರು. ಇದೀಗ ರಾಹುಲ್‌ ವಾಪಸ್‌ ಬಂದಿರುವುದರಿಂದ ಕಾಂಗ್ರೆಸ್‌ ನಾಯಕರು ನಿರಾಳವಾಗಿದ್ದಾರೆ.

ರಾಹುಲ್‌ ಅವರಲ್ಲಿ ನಾಯಕತ್ವ ಗುಣ ಕಾಣುತ್ತಿಲ್ಲ ಎಂದು ಪಕ್ಷದೊಳಗೆ ಟೀಕೆ ವ್ಯಕ್ತವಾದ ಬೆನ್ನಲ್ಲಿಯೇ ಕೆಲವು ನಾಯಕರು, ‘ರಾಹುಲ್‌ ಪ್ರಬುದ್ಧ ನಾಯಕ. ಅವರು ಪಕ್ಷದ ಪುನಶ್ಚೇತನಕ್ಕೆ  ಮಾಂತ್ರಿಕ ಸ್ಪರ್ಶ ನೀಡಲಿದ್ದಾರೆ’ ಎಂದು   ಬಣ್ಣಿಸಿದ್ದಾರೆ.

ಮೂರು ದಿನ ಬಿಡುವಿಲ್ಲ:  ಶುಕ್ರವಾರದಿಂದ ಮೂರುದಿನಗಳ ಕಾಲ ಅವರು ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಶುಕ್ರವಾರ ಎಐಸಿಸಿ ಪದಾಧಿಕಾರಿಗಳನ್ನು ಭೇಟಿಯಾಗುವರು. ಅಲ್ಲದೇ ರೈತ ಮುಖಂಡರ ಜತೆ ಸಮಾಲೋಚನೆ ನಡೆಸುವರು.  ಭೂಸ್ವಾಧೀನ ಮಸೂದೆ  ವಿರೋಧಿಸಿ ಭಾನು ವಾರ ರಾಮಲೀಲಾ ಮೈದಾನದಲ್ಲಿ   ನಡೆಯಲಿರುವ ರೈತರ  ಸಮಾವೇಶದಲ್ಲಿ ಭಾಗವಹಿಸುವರು. ‘ಅಜ್ಞಾತವಾಸ’ದ ಬಳಿಕ ರಾಹುಲ್‌ ಭಾಗವಹಿಸುತ್ತಿರುವ ಮೊದಲ ಬಹಿರಂಗ ಸಭೆ ಇದಾಗಿದೆ.

ಅಮೇಠಿಗೆ ಭೇಟಿ: ತಮ್ಮ ಸ್ವಕ್ಷೇತ್ರ ಅಮೇಠಿಗೂ ಅವರು ಇನ್ನೆರಡು ದಿನ ಗಳಲ್ಲಿ ಭೇಟಿ ನೀಡಲಿದ್ದಾರೆ. ‘ಸ್ಥಳೀಯ ಸಂಸದ ನಾಪತ್ತೆಯಾಗಿದ್ದಾನೆ’ ಎಂದು ಅಮೇಠಿಯ ಕೆಲವು ಕಡೆ ಈ ಹಿಂದೆ ಭಿತ್ತಿ ಪತ್ರವನ್ನು ಅಂಟಿಸಿದ ಪ್ರಕರಣ ದೇಶದಾದ್ಯಂತ ಸುದ್ದಿಯಾಗಿತ್ತು.

ರಾಹುಲ್‌, ಫೆಬ್ರುವರಿ 23ರಂದು ಆರಂಭಗೊಂಡಿದ್ದ ಬಜೆಟ್‌ ಅಧಿ ವೇಶನಕ್ಕೆ ಮುನ್ನವೇ ವಿಶ್ರಾಂತಿಯ ಮೇಲೆ ತೆರಳಿದ್ದರು. ಇಲ್ಲಿಯವರೆಗೆ ಅವರು ಎಲ್ಲಿ ದ್ದರು ಎನ್ನುವುದು ಮಾತ್ರ ಸ್ಪಷ್ಟವಾಗಿಲ್ಲ.
ರಾಹುಲ್‌ ‘ಅಜ್ಞಾತವಾಸ’ದ ಬಗ್ಗೆ ಹಲವಾರು ಅನುಮಾನಗಳು ಎದ್ದಿದ್ದವು.  ಪಕ್ಷವನ್ನು ಸ್ವತಂತ್ರವಾಗಿ ಮುನ್ನಡೆಸುವುದಕ್ಕೆ ಅವಕಾಶ ಸಿಗುತ್ತಿಲ್ಲ ಎನ್ನುವ ಅಸಮಾಧಾನ  ಅವರನ್ನು ಕಾಡುತ್ತಿದೆ ಎಂಬ ವದಂತಿ ಕೂಡ ಇತ್ತು.

ಎಐಸಿಸಿ ಅಧಿವೇಶನದಲ್ಲಿ ರಾಹುಲ್‌ ಅವರನ್ನು ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ನೇಮಿಸುವ ಸಾಧ್ಯತೆ ಇದೆ ಎಂಬ ಮಾತು  ಕೇಳಿಬಂದ ಸಂರ್ಭದಲ್ಲಿಯೇ ಅವರು ರಜೆಯ ಮೇಲೆ  ತೆರಳಿದ್ದರು. ಮಾಜಿ ಮುಖ್ಯಮಂತ್ರಿಗಳಾದ ಅಮರಿಂದರ್‌ ಸಿಂಗ್‌, ಶೀಲಾ ದೀಕ್ಷಿತ್‌ ಮತ್ತಿತರ ನಾಯಕರು ರಾಹುಲ್‌ ನಾಯಕತ್ವ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಎತ್ತಿದ್ದರು. ಸೋನಿಯಾ ಗಾಂಧಿ ಅವರೇ ಅಧ್ಯಕ್ಷರಾಗಿ ಮುಂದುವರಿಯಬೇಕು ಎಂದು ಒತ್ತಾಯಿಸಿದ್ದರು.

ಬಿಜೆಪಿ ಟೀಕೆ: ರಾಜಕೀಯದಲ್ಲಿ ಮುಂದುವರಿಯುತ್ತಾರೋ ಇಲ್ಲವೋ ಎನ್ನುವುದನ್ನು ಜನರಿಗೆ ರಾಹುಲ್‌
ತಿಳಿಸಬೇಕು ಎಂದು ಬಿಜೆಪಿ ವ್ಯಂಗ್ಯ ವಾಡಿದೆ. ‘ರಾಹುಲ್‌  ಅವರಿಗೆ ಬಡ್ತಿ ನೀಡಬೇಕೇ ಅಥವಾ ಅವರನ್ನು ಮೂಲೆಗುಂಪು ಮಾಡಬೇಕೇ ಎನ್ನುವ ಗೊಂದಲ ಕಾಂಗ್ರೆಸ್‌ ಪಕ್ಷವನ್ನು ಕಾಡುತ್ತಿದೆ’ ಎಂದೂ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾ ಲೇವಡಿ ಮಾಡಿದ್ದಾರೆ.

ರಾಹುಲ್‌ ವಾಪಸಾಗಿದ್ದಾರೆ. ಅವರು  ಪಕ್ಷಕ್ಕೆ ಒಳ್ಳೆಯ ನಾಯಕತ್ವ ನೀಡುವ ಬದ್ಧತೆಯಿಂದ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಾರೆ ಎನ್ನುವುದರಲ್ಲಿ ಅನುಮಾನ ಇಲ್ಲ.
ಆನಂದ್‌ ಶರ್ಮಾ,ಕಾಂಗ್ರೆಸ್‌ ಮುಖಂಡ

ಕಾಂಗ್ರೆಸ್‌ ಸ್ಥಿತಿ ಚುಕ್ಕಾಣಿ  ಇಲ್ಲದ ಹಡಗಿನಂತಾಗಿದೆ.  ಪಕ್ಷದಲ್ಲಿ ನಾಯಕತ್ವ ಬಿಕ್ಕಟ್ಟು ಎದುರಾಗಿದೆ
ಸಂಬಿತ್‌ ಪಾತ್ರಾ, ಬಿಜೆಪಿ ವಕ್ತಾರ

ನಾಯಕರ ಭೇಟಿಗೆ ಸಿದ್ಧ
ತಮ್ಮ  ನಾಯಕತ್ವದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ನಾಯಕರನ್ನು ಭೇಟಿಯಾಗಲು ರಾಹುಲ್‌ ಹಿಂಜರಿಯು ವುದಿಲ್ಲ ಎಂದು ಎಐಸಿಸಿ ಹೇಳಿದೆ.

ಕಾಂಗ್ರೆಸ್‌ ನಾಯಕರು  ಹಾಗೂ ಮಾಧ್ಯಮ ಪ್ರತಿನಿಧಿಗಳನ್ನು ಭೇಟಿಯಾಗಲಿರುವ ರಾಹುಲ್‌ ಗಾಂಧಿ ಪಕ್ಷದ ಕುರಿತಾಗಿ ತಮಗಿರುವ ಕನಸು ಹಾಗೂ ಕಾರ್ಯತಂತ್ರವನ್ನು ಹಂಚಿಕೊಳ್ಳಲಿದ್ದಾರೆ ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲಾ ಹೇಳಿದ್ದಾರೆ.

ಶೀಘ್ರವೇ ಎಐಸಿಸಿ ಅಧಿವೇಶನ ಹಾಗೂ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಯೂ ನಡೆಯಲಿದೆ. ಈ ಕುರಿತು ನಿರ್ಧಾರ ಕೈಗೊಳ್ಳಲು ಇದೇ 19ರ  ನಂತರ ಸಭೆ ಕರೆಯಲಾಗುವುದು ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ರಾಹುಲ್‌ ಅವರು ಮರಳಿ ಬಂದಿರುವುದರಿಂದ ನನೆಗುದಿ ಯಲ್ಲಿರುವ ಹಲವು ನಿರ್ಣಯಗಳನ್ನು ಈಗ ತೆಗೆದುಕೊಳ್ಳಲಾಗುವುದು ಎಂದು ಮತ್ತೊಬ್ಬ ವಕ್ತಾರ ಪಿ.ಸಿ. ಚಾಕೊ ತಿಳಿಸಿದ್ದಾರೆ.

ಈ ನಡುವೆ ಶೀಲಾ ದೀಕ್ಷಿತ್‌ ಅವರ ಪುತ್ರ ಸಂದೀಪ್‌ ದೀಕ್ಷಿತ್‌, ಈ ಹಂತದಲ್ಲಿ ನಾಯಕತ್ವ ಬದಲಿಸುವುದರಿಂದ ಪಕ್ಷದ ಪುನರುತ್ಥಾನ ವಿಳಂಬವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಸೋನಿಯಾ ಗಾಂಧಿ ಅವರ ನಾಯಕತ್ವವನ್ನು ಹೊಗಳಿದ ಅವರು, ಇಲ್ಲಿ ವಯಸ್ಸಿನ ಪ್ರಶ್ನೆ ಏಳುವುದಿಲ್ಲ. ಮಾನಸಿಕ ಸ್ವಾಸ್ಥ್ಯ ಹಾಗೂ ಸದೃಢ ಆಲೋಚನೆಗಳು ಮುಖ್ಯ ಎಂದು  ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT