ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಪಬ್ಲಿಕನ್‌ ಅಧಿಕೃತ ಸ್ಪರ್ಧಿ ಟ್ರಂಪ್‌

ನವೆಂಬರ್‌ 8ರಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ
Last Updated 20 ಜುಲೈ 2016, 23:30 IST
ಅಕ್ಷರ ಗಾತ್ರ

ಕ್ಲೀವ್‌ಲ್ಯಾಂಡ್‌ (ಪಿಟಿಐ): ಡೊನಾಲ್ಡ್‌ ಟ್ರಂಪ್‌ ಅವರು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಇಲ್ಲಿ ಬುಧವಾರ ನಡೆದ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಈ ಬಗ್ಗೆ ಔಪಚಾರಿಕ ಘೋಷಣೆ ಮಾಡಲಾಯಿತು.

ಅಧ್ಯಕ್ಷರ ಚುನಾವಣೆ ನವೆಂಬರ್‌ 8 ರಂದು ನಡೆಯಲಿದೆ. ಆಗ ಅವರು ಡೆಮಾಕ್ರಟಿಕ್‌ ಪಕ್ಷದ ಹಿಲರಿ ಕ್ಲಿಂಟನ್‌ ಅವರನ್ನು ಎದುರಿಸಲಿದ್ದಾರೆ.
70 ವರ್ಷದ ಟ್ರಂಪ್‌ ಮೂಲತಃ ಉದ್ಯಮಿ. ಒಂದು ವರ್ಷದ ಹಿಂದೆ ಅವರು ರಾಜಕೀಯ ಪ್ರವೇಶಿಸಿದ್ದರು. ಅನುಭವಿ ರಾಜಕಾರಣಿಗಳಾದ ಜಾನ್‌ ಕಸಿಚ್‌ ಮತ್ತು ಜೆಬ್‌ ಬುಷ್‌ ಸೇರಿದಂತೆ 16 ಪ್ರಮುಖ ಸ್ಪರ್ಧಿಗಳನ್ನು ಪಕ್ಷದೊಳಗೆ ಎದುರಿಸಿದ್ದರು. ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಲು ಅಗತ್ಯವಿದ್ದ 1,237 ಪ್ರತಿನಿಧಿಗಳ ಮತಗಳನ್ನು ಪಡೆಯುವ ಮೂಲಕ ತಮ್ಮ ಹಾದಿಯನ್ನು ಸುಗಮಗೊಳಿಸಿಕೊಂಡರು.

‘ಇದೊಂದು ದೊಡ್ಡ ಗೌರವ. ಇದು ಆಂದೋಲನ. ನಾವು ಕ್ರಮಿಸಬೇಕಾದ ದಾರಿ ಇನ್ನೂ ಇದೆ. ನಾನು ಇನ್ನೂ ಹೆಚ್ಚು ಶ್ರಮಪಡುತ್ತೇನೆ. ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ. ಏನೇ ಆದರೂ ನನಗೆ ನನ್ನ ದೇಶವೇ  ಮೊದಲು’ ಎಂದು ಟ್ರಂಪ್‌  ತಮ್ಮ ಆಯ್ಕೆಗೆ ಟ್ವೀಟ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.

‘ಅಧ್ಯಕ್ಷನಾಗಿ ಆಯ್ಕೆಯಾಗುವುದು ಖಚಿತ. ಅಮೆರಿಕದಲ್ಲಿ ಬದಲಾವಣೆ ತರುವುದು ಅಗತ್ಯವಿದೆ.  ಅಮೆರಿಕನ್ನರಿಗೆ ಉದ್ಯೋಗ ಸೃಷ್ಟಿಸುತ್ತೇನೆ. ಸೇನಾ ಸಾಮರ್ಥ್ಯವನ್ನು ಹೆಚ್ಚಿಸುತ್ತೇನೆ. ಗಡಿ ಪ್ರದೇಶಗಳನ್ನು ಮತ್ತಷ್ಟು ಬಲಪಡಿಸುತ್ತೇನೆ’ ಎಂದು ಭರವಸೆ ನೀಡಿದ್ದಾರೆ.

ಕ್ಲಿಂಟನ್‌ ವಿರುದ್ಧ ವಾಗ್ದಾಳಿ: ರಿಪಬ್ಲಿಕನ್‌ ರಾಷ್ಟ್ರೀಯ ಸಮಾವೇಶದಲ್ಲಿ ಮುಖಂಡರು  ಹಿಲರಿ ಕ್ಲಿಂಟನ್‌ ವಿರುದ್ಧ ವಾಗ್ದಾಳಿ ನಡೆಸಿದರು.
ನ್ಯೂಜೆರ್ಸಿ ಗವರ್ನರ್‌ ಕ್ರಿಸ್‌್ ಕ್ರಿಸ್ಟಿ ಮಾತನಾಡಿ, ‘ಹಿಲರಿ ವಿದೇಶಾಂಗ ಸಚಿವೆಯಾಗಿದ್ದ ಸಂದರ್ಭದಲ್ಲಿ ರೂಪಿಸಿದ್ದ ನೀತಿಗಳಿಂದಾಗಿಯೇ ಭಯೋತ್ಪಾದನೆ ಸಂಘಟನೆಗಳು ನೈಜಿರಿಯಾದಲ್ಲಿ 300 ಶಾಲಾ ಬಾಲಕಿಯರನ್ನು ಅಪಹರಿಸಿದ್ದರು.  ಅವರ ಜೀವನದ ಕುರಿತ ವಾಸ್ತವ ಸಂಗತಿಗಳು ಮತ್ತು ವೃತ್ತಿ ಅವರನ್ನು ಅಧ್ಯಕ್ಷೀಯ ಚುನಾವಣೆಗೆ ಅನರ್ಹಗೊಳಿಸುತ್ತದೆ’ ಎಂದು ಟೀಕಿಸಿದರು.

ಟ್ರಂಪ್‌ಗೆ ಅವಕಾಶ ನೀಡಬೇಡಿ:  ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌  ಟ್ರಂಪ್‌ ಅವರಿಗೆ ಶ್ವೇತಭವನದ ಒವಲ್‌ ಕಚೇರಿಯಲ್ಲಿ ಹೆಜ್ಜೆ ಇಡಲು ಅಮೆರಿಕದ ಮತದಾರರು ಅವಕಾಶ ನೀಡಬಾರದು ಎಂದು ಡೆಮಾಕ್ರಟಿಕ್‌ ಪಕ್ಷದ  ಅಧ್ಯಕ್ಷೀಯ  ಆಕಾಂಕ್ಷಿ ಹಿಲರಿ ಕ್ಲಿಂಟನ್‌ ಕರೆ ನೀಡಿದ್ದಾರೆ.

ಒವಲ್‌ ಕಚೇರಿಯು ಅಮೆರಿಕ ಅಧ್ಯಕ್ಷರ ಅಧಿಕೃತ ಕಚೇರಿಯಾಗಿದೆ. ಶ್ವೇತಭನದ ಪಶ್ಚಿಮ ಭಾಗದಲ್ಲಿ ಈ ಕಚೇರಿ ಇದೆ. ‘ಅಮೆರಿಕವನ್ನು ಮತ್ತೆ ಮಹಾನ್‌ ರಾಷ್ಟ್ರವನ್ನಾಗಿ ಮಾಡುವ ಇಚ್ಛೆ ಟ್ರಂಪ್‌ ಅವರಿಗೆ ಇದ್ದರೆ ಮೊದಲು ಅವರು ಅಮೆರಿಕದಲ್ಲೇ ಉತ್ಪನ್ನಗಳನ್ನು ತಯಾರಿಸುವುದನ್ನು ಆರಂಭಿಸಲಿ’ ಎಂದು ಹಿಲರಿ ಕ್ಲಿಂಟನ್‌ ಟ್ವೀಟ್‌ ಮಾಡಿದ್ದಾರೆ.

ಡೊನಾಲ್ಡ್‌ ಗೆ ₹ 6 ಕೋಟಿ ದೇಣಿಗೆ
ಡೊನಾಲ್ಡ್‌ ಟ್ರಂಪ್‌ ಅವರ ‘ವಿಜಯೋತ್ಸವ ನಿಧಿ’ಗೆ ಷಿಕಾಗೊದಲ್ಲಿ ನೆಲೆಸಿರುವ ಭಾರತ ಮೂಲದ ಅಮೆರಿಕ ಪ್ರಜೆಗಳಾದ ಶೆಲ್ಲಿ ಕುಮಾರ್‌ ದಂಪತಿ 8.98 ಲಕ್ಷ ಡಾಲರ್‌ (ಸುಮಾರು ₹ 6 ಕೋಟಿ) ದೇಣಿಗೆ ನೀಡಿದ್ದಾರೆ.

ಕುಮಾರ್‌ ನೀಡಿದ ಮೊತ್ತ 4.49 ಲಕ್ಷ ಡಾಲರ್‌. ಟ್ರಂಪ್‌ ಪರ ನಿಧಿಗೆ ವ್ಯಕ್ತಿಯೊಬ್ಬರು ಕೊಡಬಹುದಾದ ಗರಿಷ್ಠ ಮೊತ್ತ ಇದು. ಉಳಿದ ಮೊತ್ತವನ್ನು ಕುಮಾರ್‌ ಪತ್ನಿ ನೀಡಿದ್ದಾರೆ. ಇಷ್ಟೊಂದು ದೊಡ್ಡ ದೇಣಿಗೆ ಕೊಟ್ಟವರ ಸಂಖ್ಯೆ ಕಡಿಮೆ.

ಪಾಕಿಸ್ತಾನ ಮತ್ತು ಮುಸ್ಲಿಮರ ವಿರುದ್ಧ ಟ್ರಂಪ್‌ ಅವರು ಹೊಂದಿರುವ ನಿಲುವುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಕುಮಾರ್‌, ‘ಅಮೆರಿಕದ ಅಧ್ಯಕ್ಷೀಯ ಇತಿಹಾಸದ 45 ವರ್ಷಗಳಲ್ಲಿ ಅತ್ಯಂತ ಬಲಿಷ್ಠ ವ್ಯಕ್ತಿಯೊಬ್ಬರು ಈಗ ನಮಗೆ ದೊರೆತಿದ್ದಾರೆ’ ಎಂದು ಶ್ಲಾಘಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT