ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಪ್ಪಲ್‌ ಫ್ರೇಗ್ರನ್ಸಸ್‌ನ ಮಾರುಕಟ್ಟೆ ವಿಸ್ತರಣೆ

Last Updated 15 ಡಿಸೆಂಬರ್ 2015, 19:49 IST
ಅಕ್ಷರ ಗಾತ್ರ

ಪರಿಮಳ ದ್ರವ್ಯಗಳ ತಯಾರಿಕೆಯಲ್ಲಿ ತನ್ನ ವಿಶಿಷ್ಟ ಉತ್ಪನ್ನಗಳ ಮೂಲಕ ಗ್ರಾಹಕರ ಮನಕ್ಕೆ ಲಗ್ಗೆ ಹಾಕಿರುವ ಮೈಸೂರು ಮೂಲದ ರಿಪ್ಪಲ್‌ ಫ್ರೇಗ್ರನ್ಸಸ್‌,  ರಾಷ್ಟ್ರೀಯ ಮಾರುಕಟ್ಟೆ ಪ್ರವೇಶಿಸಲು ಹೊರಟಿರುವುದನ್ನು ಕೇಶವ ಜಿ. ಝಿಂಗಾಡೆ ಅವರು ಇಲ್ಲಿ ವಿವರಿಸಿದ್ದಾರೆ.

ಜೀವನಮಟ್ಟದಲ್ಲಿನ ಸುಧಾರಣೆ, ಜೀವನಶೈಲಿಯಲ್ಲಿನ ಬದಲಾವಣೆ, ವೆಚ್ಚ  ಮಾಡುವ ಸಾಮರ್ಥ್ಯ ಹೆಚ್ಚಳ ಮತ್ತಿತರ ಕಾರಣಗಳಿಗೆ ಗ್ರಾಹಕರು ಈಗ ತಮ್ಮ ದೈನಂದಿನ ಚಟುವಟಿಕೆಗಳು ಹೆಚ್ಚೆಚ್ಚು ಆಹ್ಲಾದಕರ ಆಗಿರುವಂತೆ ನೋಡಿಕೊಳ್ಳಲು ಗಮನ ಹರಿಸುತ್ತಿದ್ದಾರೆ. ತಮ್ಮ ಸುತ್ತಲಿನ ಪರಿಸರವು ಮನಸ್ಸಿಗೆ ಮುದ ಕೊಡುವ ರೀತಿಯಲ್ಲಿ  ಇರುವಂತೆ ನೋಡಿಕೊಳ್ಳಲು ಆದ್ಯತೆ ನೀಡುತ್ತಿದ್ದಾರೆ. ಮನೆ ಮತ್ತು ಕಚೇರಿಗಳು ಯಾವುದೇ ಬಗೆಯ ವಾಸನೆಯಿಂದ ಮುಕ್ತವಾಗಿ ಇಟ್ಟುಕೊಳ್ಳಲು ನಗರವಾಸಿಗಳು ಈಗ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಇದಕ್ಕಾಗಿ ಹೆಚ್ಚುವರಿ ಹಣ ವೆಚ್ಚ ಮಾಡಲೂ ಸಿದ್ಧರಾಗುತ್ತಿದ್ದಾರೆ.

ಧಾರ್ಮಿಕ ಉದ್ದೇಶದ ಪೂಜೆ  ಮತ್ತಿತರ ಕಾರ್ಯಕ್ರಮಗಳಿಗೆ  ಸೀಮಿತವಾಗಿದ್ದ ಸಾಂಪ್ರದಾಯಿಕ ಅಗರಬತ್ತಿಗಳ ಬದಲಿಗೆ ಸುವಾಸನೆ ಪಸರಿಸುವ ವೈವಿಧ್ಯಮಯ ಉತ್ಪನ್ನಗಳು ಈಗ ಮಾರುಕಟ್ಟೆಯಲ್ಲಿ ಲಭ್ಯ ಇವೆ. ಏರ್‌ಕಂಡಿಷನ್ ಸೌಲಭ್ಯ ಹೊಂದಿರುವ ಆಧುನಿಕ ಕಚೇರಿಗಳಲ್ಲಿನ ವಾತಾವರಣವು ಅಲ್ಲಿ ಕೆಲಸ ಮಾಡುವವರಿಗೆ ಸದಾ ಉತ್ಸಾಹ ತುಂಬುವ ರೀತಿಯಲ್ಲಿ ಇರುವಂತೆ ನೋಡಿಕೊಳ್ಳುವಲ್ಲಿ ಸುಗಂಧ ದ್ರವ್ಯಗಳು ನೆರವಾಗುತ್ತಿವೆ. 

ಜನರಲ್ಲಿ ಹೆಚ್ಚಿದ ಆರೋಗ್ಯ ಭಾವನೆ, ಸದಾ ಉಲ್ಲಸಿತರಾಗಿ ಇರಬೇಕೆಂಬ ಬಯಕೆ, ಮನೆ –ಕಚೇರಿಯಲ್ಲಿನ ವಾತಾವರಣವು ಮನಸ್ಸಿಗೆ ಹಿತಕಾರಿಯಾಗಿರುವಂತೆ ನೋಡಿಕೊಳ್ಳಲು ವಿವಿಧ ಸ್ವರೂಪಗಳಲ್ಲಿ ಲಭ್ಯ ಇರುವ ಈ ಸುಗಂಧದ್ರವ್ಯಗಳು ನೆರವಾಗುತ್ತಿವೆ. ವಾತಾವರಣ ಸುಗಂಧದ್ರವ್ಯ ಉತ್ಪನ್ನಗಳು (air care)  ನಗರದ ಜೀವನಶೈಲಿಯ ಅವಿಭಾಜ್ಯ ಅಂಗವಾಗಿ   ಬಳಕೆಗೆ ಬರುತ್ತಿವೆ.  ಗ್ರಾಹಕರ ಅಗತ್ಯಗಳೆಲ್ಲ ಬದಲಾಗುತ್ತಿವೆ. ಮಾನಸಿಕ ಒತ್ತಡ ನಿವಾರಣೆಗೆ ಒತ್ತು ನೀಡುತ್ತಿದ್ದಾರೆ. 

ನೈಸರ್ಗಿಕವಾಗಿ ಶುದ್ಧ ಗಾಳಿಯಾಡದ ಕೋಣೆಗಳಲ್ಲಿ ಹೊಗೆರಹಿತ ಸುಗಂಧದ್ರವ್ಯಗಳ ಬಳಕೆ ಅನಿವಾರ್ಯವಾಗುತ್ತಿದೆ. ಇಂತಹ ಸ್ಥಳಗಳಲ್ಲಿನ ವಾತಾವರಣವು ಕೆಲಸ ಮಾಡಲು ಉತ್ಸಾಹ ಮೂಡಿಸುವ ರೀತಿಯಲ್ಲಿ ಇರಲು ಈ ಸುಗಂಧದ್ರವ್ಯಗಳು ನೆರವಾಗುತ್ತಿವೆ. ಗ್ರಾಹಕರ ಇಷ್ಟಾನಿಷ್ಟಗಳನ್ನು  ಅರಿತುಕೊಂಡು ಅವರ  ಅಗತ್ಯಗಳನ್ನು ಪೂರೈಸುತ್ತ ದಶಕಗಳಿಂದ ಮನ ಗೆದ್ದಿರುವ ಮೈಸೂರಿನ ಎನ್‌. ಆರ್‌. ಗ್ರೂಪ್‌ನ ಅಂಗಸಂಸ್ಥೆಯಾಗಿರುವ ರಿಪ್ಪಲ್‌ ಫ್ರೇಗ್ರನ್ಸಸ್‌ ಈಗ ಇಂತಹ ಉತ್ಪನ್ನಗಳ ಮಾರುಕಟ್ಟೆ ವಿಸ್ತರಿಸಲು ಉತ್ಸುಕವಾಗಿದೆ. ವಾತಾವರಣ ಸುಗಂಧದ್ರವ್ಯ (Air Care) ಉತ್ಪನ್ನಗಳ ಮಾರಾಟದಲ್ಲಿಯೂ ತನ್ನದೇ ಆದ ಛಾಪು ಮೂಡಿಸಲು ಹೊರಟಿದೆ.

ಮೂರು ತಲೆಮಾರಿನಿಂದ – ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನಗಳನ್ನು ಪೂರೈಸುತ್ತಿರುವ ಸಂಸ್ಥೆಯು ಈಗಲೂ ಅದೇ ಗುಣಮಟ್ಟ ಕಾಯ್ದುಕೊಂಡು ಗ್ರಾಹಕರ ಮನಕ್ಕೆ ಲಗ್ಗೆ ಹಾಕಲು ಹೊರಟಿದೆ. ರಿಪ್ಪಲ್‌ ಫ್ರೇಗ್ರನ್ಸ್‌ಸ್‌ ಪ್ರೈವೇಟ್‌ ಲಿಮಿಟೆಡ್‌ನ  ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿರುವ ಕಿರಣ್‌ ವಿ ರಂಗಾ ಅವರ ಜತೆಗಿನ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

* ನಿಮ್ಮ ಉತ್ಪನ್ನಗಳು ಇತರರಿಗಿಂತ ಹೇಗೆ ಭಿನ್ನ?
ನಮ್ಮ ಪ್ರತಿಸ್ಪರ್ಧಿಗಳು ಈ ಉತ್ಪನ್ನಗಳ ತಯಾರಿಕೆಗೆ ಅಗತ್ಯವಾದ ಕಚ್ಚಾ ಸರಕನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಾರೆ. ನಾವು ಸ್ಥಳೀಯವಾಗಿಯೇ ಕಚ್ಚಾ ಸರಕನ್ನು ತಯಾರಿಸುತ್ತೇವೆ.

ನಮ್ಮ ತಾತ – ಎನ್. ರಂಗರಾವ್‌, ದೊಡ್ಡಪ್ಪ  ಮೂರ್ತಿ ಮತ್ತು ನನ್ನ  ತಂದೆ ವಾಸು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾನು ಮತ್ತು ನನ್ನ ಸೋದರ ಅರ್ಜುನ್‌ ಸಾಗುತ್ತಿದ್ದೇವೆ. ನಮ್ಮ ಗ್ರಾಹಕರ ಇಷ್ಟಾನಿಷ್ಟಗಳಿಗೆ ಪೂರಕವಾಗಿ ನಾವು ನಮ್ಮ ಉತ್ಪನ್ನಗಳನ್ನು ತಯಾರಿಸುತ್ತ ಅವರ ಮನಸ್ಸು ಗೆಲ್ಲುವ ಪ್ರಯತ್ನ ಮಾಡುತ್ತಿದ್ದೇವೆ.

* ನಿಮ್ಮ ಮಾರುಕಟ್ಟೆ ತಂತ್ರ ಏನು?
ಸೈಕಲ್‌ ಬ್ರ್ಯಾಂಡ್‌ನ ಅಗರಬತ್ತಿಗಳ ವಹಿವಾಟಿನ  ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿ ಇರುವ ಸಂಸ್ಥೆಯ ಪ್ರಭಾವ ಆಧಾರವಾಗಿಟ್ಟುಕೊಂಡು ಹೊಸ ಹೊಸ ಸುಗಂಧ ದ್ರವ್ಯಗಳ ತಯಾರಿಕೆ, ಉತ್ಪನ್ನಗಳ ಆಕರ್ಷಕ ವಿನ್ಯಾಸ ಮತ್ತು ಗ್ರಾಹಕರಿಗೆ  ಮೆಚ್ಚುಗೆಯಾಗುವ ರೀತಿಯಲ್ಲಿನ ಪ್ಯಾಕೆಜಿಂಗ್‌ ಮೂಲಕ ಮಾರುಕಟ್ಟೆ ಮೇಲೆ ಹಿಡಿತ ಸಾಧಿಸುವುದು   ನಮ್ಮ ಉದ್ದೇಶವಾಗಿದೆ.

* ಉತ್ಪನ್ನಗಳಲ್ಲಿ ಪ್ರಮುಖ ಬಗೆಗಳು ಯಾವವು?
‘ಡು ಗುಡ್‌’ ಮತ್ತು ‘ಫೀಲ್‌ ಗುಡ್‌’ ಎಂದು ಅವುಗಳನ್ನು ವಿಂಗಡಿಸಬಹುದು. ಸುತ್ತಲಿನ ಪರಿಸರದಲ್ಲಿ ಇರಬಹುದಾದ ಮನಸ್ಸಿಗೆ ಕಿರಿಕಿರಿ ಉಂಟು ಮಾಡುವ ಯಾವುದೇ ಬಗೆಯ ವಾಸನೆ ನಿವಾರಿಸುವುದು, ವಾಸನೆ ಪ್ರಮಾಣ ಕಡಿಮೆ ಮಾಡುವುದು, ವಾಸನೆ ಬರದಿರುವಂತೆ ಮಾಡುವ (Do Good) ಉತ್ಪನ್ನಗಳು ಒಂದು ಬಗೆಯಾಗಿವೆ. ಎರಡನೆಯದಾಗಿ ವಾತಾವರಣವನ್ನೇ ಆಹ್ಲಾದಕರ ವಾಗಿರುವಂತೆ ಮಾಡುವ ಉತ್ಪನ್ನಗಳು (fee* good) - -ಹೀಗೆ ಎರಡು ಬಗೆಗಳು ಇವೆ.

ಏರ್‌ಕಂಡಿಷನ್‌ ಬಳಕೆ ಫಲವಾಗಿ ಗಾಳಿಯಾಡದ ಮುಚ್ಚಿದ ಕೋಣೆ, ಸಭಾಂಗಣ ಮತ್ತಿತರ ಕಡೆಗಳಲ್ಲಿನ ವಾತಾವರಣವು ಚೇತೋಹಾರಿಯಾಗಿರುವಂತೆ ಮಾಡುವ ಉತ್ಪನ್ನಗಳನ್ನು  ತಯಾರಿಸಲಾಗಿದೆ. ಈ ಉತ್ಪನ್ನಗಳ ಬಳಕೆಯಿಂದ ಮನಸ್ಸು ಉಲ್ಲಸಿತಗೊಳ್ಳಲಿದೆ.   ರೂಂ ಫ್ರೆಷ್‌ನೆಸ್‌ – ಕಾರ್‌ ಫ್ರೆಷ್‌ನೆಸ್‌ ಉತ್ಪನ್ನಗಳು ಲಿಯಾ ಬ್ರ್ಯಾಂಡ್‌  ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯವಾಗಿವೆ.

* ವಾತಾವರಣ ಸುಗಂಧದ್ರವ್ಯದ (ಐರಿಷ್‌) ಹೊಸ ಉತ್ಪನ್ನಗಳಿಗೆ ಮಾರುಕಟ್ಟೆ ಪ್ರತಿಕ್ರಿಯೆ ಹೇಗಿದೆ?
ಐರಿಷ್‌ ಬ್ರ್ಯಾಂಡ್‌ ( IRIS) ಉತ್ಪನ್ನಗಳನ್ನು ಪ್ರಾಯೋಗಿಕ ನೆಲೆಯಲ್ಲಿ ದಕ್ಷಿಣ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿತ್ತು. 5 ತಿಂಗಳಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಇಷ್ಟು ಅಲ್ಪಾವಧಿಯಲ್ಲಿ ಶೇ 5ರಷ್ಟು ಮಾರುಕಟ್ಟೆ ವಶಪಡಿಸಿಕೊಂಡಿರುವುದು ಈ ಉತ್ಪನ್ನಗಳಿಗೆ ಗ್ರಾಹಕರಿಂದ ದೊರೆತ ಉತ್ತಮ ಪ್ರತಿಕ್ರಿಯೆಗೆ ನಿದರ್ಶನವಾಗಿದೆ.

‘ಲಿಯಾ’ ಉತ್ಪನ್ನಗಳು ದಕ್ಷಿಣ ಭಾರತದ 9 ಸಾವಿರ ಮಳಿಗೆಗಳಲ್ಲಿ ದೊರೆಯುತ್ತಿವೆ. ದಕ್ಷಿಣದ ನಾಲ್ಕು ರಾಜ್ಯಗಳು ಮಹಾರಾಷ್ಟ್ರ, ಮುಂಬೈ ಮಹಾನಗರಗಳಲ್ಲಿ ಮಾರುಕಟ್ಟೆ ಮೇಲೆ ಸಂಸ್ಥೆಯು ಹಿಡಿತ ಸಾಧಿಸುವ ಹಾದಿಯಲ್ಲಿದೆ. ಐರಿಷ್‌ ಉತ್ಪನ್ನಗಳು – ಹೊಸ ತರಹ ಉತ್ಪನ್ನಗಳಾಗಿದ್ದು, ಇಂತಹ ಉತ್ಪನ್ನವನ್ನು ದೇಶಿ ಮಾರುಕಟ್ಟೆಗೆ ಪರಿಚಯಿಸಿದವರಲ್ಲಿ ನಾವೇ ಮೊದಲಿಗರಾಗಿದ್ದೇವೆ.

* ಹೊಸ ಸುವಾಸನೆಯ ಉತ್ಪನ್ನಗಳನ್ನು ಸೃಷ್ಟಿಸುವುದು ಸವಾಲಿನ ಕೆಲಸವೆ?
ಖಂಡಿತವಾಗಿಯೂ ನಿಜ. ಹೊಸ ಸುವಾಸನೆ ಸೃಷ್ಟಿಸುವುದು, ಆ ಸುವಾಸನೆ ಭಿನ್ನವಾಗಿರುವಂತೆ, ಸ್ಥಿರತೆ ಕಾಯ್ದುಕೊಳ್ಳುವಂತೆ, ಕಾರ್ಯಕ್ಷಮತೆ ಒಳಗೊಂಡಿರುವುದು ಸೇರಿದಂತೆ   ಬಳಕೆದಾರರ ಪಾಲಿಗೆ ಸುರಕ್ಷಿತವಾಗಿರುವಂತೆ  ನೋಡಿಕೊಳ್ಳುವುದು ಸವಾಲಿನ ಕೆಲಸವಾಗಿರುತ್ತದೆ.  ಪ್ರತಿಯೊಂದು ಉತ್ಪನ್ನ ಭಿನ್ನವಾಗಿರುವಂತೆ ನೋಡಿಕೊಳ್ಳಬೇಕಾಗುತ್ತದೆ.

* ಉತ್ಪನ್ನಗಳ ವಿನ್ಯಾಸ ವೈಶಿಷ್ಟ್ಯತೆ ಏನು?
ಐರಿಷ್‌ ಉತ್ಪನ್ನಗಳು –ಒಳಾಂಗಣ ವಿನ್ಯಾಸಕ್ಕೂ ಪೂರಕವಾಗಿರುವಂತೆ ವಿಶಿಷ್ಟ ಆಕಾರದಲ್ಲಿ ಸಿದ್ಧಪಡಿಸಲಾಗಿದೆ. ನೋಡಲೂ ಆಕರ್ಷಕವಾಗಿರಬೇಕು ಮತ್ತು ಕೋಣೆಯ ಪರಿಸರದ ಆಹ್ಲಾದಕತೆಯನ್ನೂ ಹೆಚ್ಚಿಸುವ ರೀತಿಯಲ್ಲಿ ಇರುವಂತೆ ಕಾಳಜಿ ವಹಿಸಲಾಗಿದೆ.

* ದೇಶಿ ಮಾರುಕಟ್ಟೆ ಎಷ್ಟಿದೆ?
‘ಏರ್‌ ಕೇರ್‌’ ಉತ್ಪನ್ನಗಳ ಮಾರುಕಟ್ಟೆಯು ಅಂದಾಜು ₹ 500 ಕೋಟಿಗಳಷ್ಟಿದೆ. ಈ ಮಾರುಕಟ್ಟೆಯು ವರ್ಷದಿಂದ ವರ್ಷಕ್ಕೆ 25ರಿಂದ ಶೇ 28ರಷ್ಟು ಬೆಳವಣಿಗೆ ಕಾಣುತ್ತಿದೆ.

* ಈ ಉತ್ಪನ್ನಗಳು ಯಾವ ವರ್ಗಕ್ಕೆ ಹೆಚ್ಚು ಉಪಯುಕ್ತಕರವಾಗಿವೆ?
ಇಲ್ಲಿ ವರ್ಗ ಪ್ರಜ್ಞೆಯ ಪ್ರಶ್ನೆ ಉದ್ಭವಿಸುವುದಿಲ್ಲ. ಲಿಯಾ ಮತ್ತು ಐರಿಷ್‌ ಉತ್ಪನ್ನಗಳು ಎಲ್ಲರಿಗೂ ಬೇಕಾಗುತ್ತವೆ. ವೆಚ್ಚ ಮಾಡುವ ಮತ್ತು ಖರೀದಿ ಸಾಮರ್ಥ್ಯ ಆಧರಿಸಿ ಈ ಉತ್ಪನ್ನಗಳ ಮಾರಾಟ ನಡೆಯುತ್ತದೆ.  ಯಾರು  ತಮ್ಮ ಮನೆ ತುಂಬ ಆಕರ್ಷಕವಾಗಿ ಕಾಣುವಂತೆ ಬಯಸುವರೋ ಅವರು ಐರಿಷ್‌ ಉತ್ಪನ್ನಗಳನ್ನು ಹೆಚ್ಚಾಗಿ ಖರೀದಿಸುತ್ತಾರೆ.

* ಬೆಲೆ ಮಟ್ಟ ಹೇಗಿದೆ?
ಈ ಉತ್ಪನ್ನಗಳ ಬೆಲೆ ಕನಿಷ್ಠ ₹ 50ರಿಂದ ₹ 2,000ವರೆಗೆ ಇದೆ.

* ಉತ್ಪನ್ನಗಳ ಪರೀಕ್ಷೆಗೆ ಯಾವ ಮಾರುಕಟ್ಟೆ ಆಯ್ಕೆ ಮಾಡಿಕೊಂಡಿರುವಿರಿ?
ಬೆಂಗಳೂರು ತುಂಬ ಪ್ರಶಸ್ತ ಸ್ಥಳ. ಇದೊಂದು ವಿಭಿನ್ನ ಸಂಸ್ಕೃತಿಯ ಜನರು ನೆಲೆಸಿರುವ, ಬೇರೆ, ಬೇರೆ ಸಾಮಾಜಿಕ ಹಿನ್ನೆಲೆಯಿಂದ ಬಂದ, ವಿಭಿನ್ನ ಸಂಪ್ರದಾಯ, ಭಾಷಿಕರು ನೆಲೆಸಿರುವ ನಗರ.  ಹೀಗಾಗಿ ಹೊಸ ಉತ್ಪನ್ನವು ಗ್ರಾಹಕರಿಗೆ ಮೆಚ್ಚುಗೆಯಾಗುವ ಬಗ್ಗೆ, ಮಾರುಕಟ್ಟೆಯ ನಾಡಿಮಿಡಿತ ಅರಿಯಲು ತುಂಬ ಸಹಕಾರಿಯಾಗಿದೆ.

* ವಹಿವಾಟಿನ ಗುರಿ ಏನಿದೆ?
ಮೂರು ವರ್ಷಗಳಲ್ಲಿ ಶೇ 40ರಷ್ಟು ವಹಿವಾಟು ಕುದುರಿಸುವ ಗುರಿ ಹಾಕಿಕೊಳ್ಳಲಾಗಿದೆ.

* ಪ್ರಚಾರ ರಾಯಭಾರಿ ನೇಮಿಸಿಕೊಂಡಿದ್ದೀರಾ?
ಇಲ್ಲ. ಎನ್‌ಆರ್‌ ಗ್ರೂಪ್‌ನ ಲಿಯಾ ಅಗರಬತ್ತಿಗೆ – ಅಮಿತಾಭ್‌ ಬಚ್ಚನ್‌  ಪ್ರಚಾರ ರಾಯಭಾರಿ ನೇಮಿಸಿಕೊಳ್ಳಲಾಗಿದೆ. ಐರಿಷ್‌ ಉತ್ಪನ್ನಗಳ ಬಳಕೆಯು ವ್ಯಾಪಕವಾದ ನಂತರ ಪ್ರಚಾರ ರಾಯಭಾರಿ ನೇಮಕ ಮಾಡಲಾಗುವುದು. 

ಪರಿಮಳ ದ್ರವ್ಯ ತಯಾರಿಕಾ ಪರಿಣತ ಕಿರಣ್‌ ವಿ. ರಂಗಾ
ರಿಪ್ಪಲ್‌ ಫ್ರೇಗ್ರನ್ಸ್‌ಸ್‌ ಪ್ರೈವೇಟ್‌ ಲಿಮಿಟೆಡ್‌ನ  ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿರುವ ಕಿರಣ್‌ ವಿ ರಂಗಾ  ಅವರು, ಪರಿಮಳ ದ್ರವ್ಯಗಳ ತಯಾರಿಕೆಯಲ್ಲಿ ಸೃಜನಶೀಲತೆಯಿಂದ ಕೆಲಸ ಮಾಡುತ್ತಿದ್ದಾರೆ. ಇವರ ಪರಿಣತಿಯ ಫಲವಾಗಿ ಸಂಸ್ಥೆಯು 50ಕ್ಕೂ ಹೆಚ್ಚು ವಿಭಿನ್ನ ಬಗೆಯ ಪರಿಮಳ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಗೃಹಬಳಕೆಯ ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಪಳಗಿರುವ ಕಿರಣ್‌, ರಿಪ್ಪಲ್‌ ಫ್ರೇಗ್ರನ್ಸ್‌ಸ್‌ ಸಂಸ್ಥೆಯನ್ನು  ಜಾಗತಿಕ ಮನ್ನಣೆಯ ಬ್ರ್ಯಾಂಡ್‌ ಆಗಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಅಗರಬತ್ತಿ ತಯಾರಿಕೆ  ಮತ್ತು ಮಾರಾಟದ ದೇಶಿ ಮಾರುಕಟ್ಟೆಯಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಮೈಸೂರು ಮೂಲದ ಎನ್‌. ಆರ್‌. ಗ್ರೂಪ್‌ನ ಅಂಗಸಂಸ್ಥೆಯಾಗಿರುವ ರಿಪ್ಪಲ್‌ ಫ್ರೇಗ್ರನ್ಸಸ್‌ ಈಗ ದೇಶದ ರಾಷ್ಟ್ರೀಯ  ಮಾರುಕಟ್ಟೆಗೆ ಐರಿಷ್‌ ಉತ್ಪನ್ನಗಳ ಮಾರುಕಟ್ಟೆ ವಿಸ್ತರಿಸಲು ಉತ್ಸುಕವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT