ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಯೊ ಒಲಿಂಪಿಕ್ಸ್‌ಗೆ ಹೀನಾ

10 ಮೀ. ಏರ್‌ ಪಿಸ್ತೂಲ್‌ನಲ್ಲಿ ಚಿನ್ನಕ್ಕೆ ಗುರಿಯಿಟ್ಟ ಭಾರತದ ಶೂಟರ್‌
Last Updated 27 ಜನವರಿ 2016, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ತವರಿನ ಅಭಿಮಾನಿಗಳ ಎದುರು ಅದ್ಭುತ ಸಾಮರ್ಥ್ಯ ತೋರಿದ ಭಾರತದ ಪ್ರಮುಖ ಪಿಸ್ತೂಲ್‌ ಶೂಟರ್‌ ಹೀನಾ ಸಿಧು ಮುಂಬರುವ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದಾರೆ.

ಕರ್ಣಿ ಸಿಂಗ್‌ ಶೂಟಿಂಗ್‌ ರೇಂಜ್‌ನಲ್ಲಿ ಬುಧವಾರ ನಡೆದ ಏಷ್ಯಾ ಒಲಿಂಪಿಕ್ಸ್‌ ಅರ್ಹತಾ  ಟೂರ್ನಿಯ ಮಹಿಳೆಯರ 10 ಮೀಟರ್ಸ್‌ ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಚಿನ್ನಕ್ಕೆ ಗುರಿ ಇಡುವ ಮೂಲಕ ಹೀನಾ ಈ ಸಾಧನೆ ಮಾಡಿದ್ದಾರೆ. ಪ್ರಸ್ತುತ ಈ ವಿಭಾಗದಲ್ಲಿ ವಿಶ್ವ ದಾಖಲೆ ಹೊಂದಿರುವ 26 ವರ್ಷದ ಪಟಿಯಾಲದ ಶೂಟರ್‌ ಎಂಟು ಮಂದಿ ಸ್ಪರ್ಧಿಗಳಿದ್ದ ಫೈನಲ್‌ನಲ್ಲಿ 199.4 ಸ್ಕೋರ್‌ ಕಲೆಹಾಕಿ ಮೊದಲ ಸ್ಥಾನ ಗಳಿಸಿದರು.

ಅರ್ಹತಾ ಸುತ್ತಿನಲ್ಲಿ 387 ಸ್ಕೋರ್‌ ಕಲೆಹಾಕಿ ಅಗ್ರಸ್ಥಾನದೊಂದಿಗೆ ಫೈನಲ್‌ ಪ್ರವೇಶಿಸಿದ್ದ ಹೀನಾ ವಿಶ್ವಾಸದ ಉತ್ತುಂಗದಲ್ಲಿದ್ದರು.
ವಿಶ್ವದ ಮಾಜಿ ಅಗ್ರರ್‍ಯಾಂಕ್‌ನ ಶೂಟರ್‌ ಆಗಿದ್ದ ಹೀನಾ  ಫೈನಲ್ ನಲ್ಲೂ ನಿಖರ ಗುರಿ ಹಿಡಿಯುವಲ್ಲಿ ಸಫಲರಾದರು. ಫೈನಲ್‌ ಸುತ್ತಿನ 2ನೇ ಅವಕಾಶದಲ್ಲಿ ಭಾರತದ ಶೂಟರ್‌ ಎಲ್ಲಾ ಹತ್ತು ಕೃತಕ ಹಕ್ಕಿಗಳನ್ನು ಹೊಡೆದುರುಳಿಸಿದರು. ಇದರೊಂದಿಗೆ 10.3 ಪಾಯಿಂಟ್ಸ್‌ ಗಳಿಸಿದ ಹೀನಾ ತಮ್ಮ ಸಮೀಪದ ಪ್ರತಿಸ್ಪರ್ಧಿ ಚೀನಾ ತೈಪೆಯ ತಿಯೆನ್‌ ಚಿಯಾ ಚೆನ್‌ ಅವರನ್ನು 1.5 ಪಾಯಿಂಟ್ಸ್‌ನಿಂದ ಹಿಂದಿಕ್ಕಿದರು.

ಆ ಬಳಿಕವೂ ಭಾರತದ ಗುರಿಗಾರ್ತಿಯಿಂದ ಶ್ರೇಷ್ಠ ಸಾಮರ್ಥ್ಯ ಮೂಡಿಬಂತು. ಹೀನಾ ಅಂತಿಮ ಅವಕಾಶದಲ್ಲಿ ಮತ್ತೊಮ್ಮೆ 10 ಕೃತಕ ಹಕ್ಕಿಗಳನ್ನು ಹೊಡೆದರು. ಇದರೊಂದಿಗೆ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ತಮ್ಮದಾಗಿಸಿಕೊಂಡರು. ಚೀನಾ ತೈಪೆಯ ಶೂಟರ್‌ ಅಂತಿಮ ಅವಕಾಶದಲ್ಲಿ 10.2 ಪಾಯಿಂಟ್ಸ್‌ ಕಲೆಹಾಕಿದರು. ಹೀಗಿದ್ದರೂ ಭಾರತದ ಗುರಿಗಾರ್ತಿಯನ್ನು ಹಿಂದಿಕ್ಕಲು ಅವರಿಂದ ಸಾಧ್ಯವಾಗಲಿಲ್ಲ.

ಒಟ್ಟು 198.1 ಪಾಯಿಂಟ್ಸ್‌ ಕಲೆಹಾಕಲು ಶಕ್ತರಾದ ಚಿಯಾ ಚೆನ್‌ ಬೆಳ್ಳಿಯ ಪದಕಕ್ಕೆ ತೃಪ್ತಿಪಟ್ಟರು. ಈ ಇಬ್ಬರೂ ಶೂಟರ್‌ಗಳಿಗೆ ಪ್ರಬಲ ಪೈಪೋಟಿ ಒಡ್ಡಿದ ದಕ್ಷಿಣ ಕೊರಿಯಾದ ಜಿಮ್‌ ಯುನ್‌ ಮಿ (177.9 ಪಾಯಿಂಟ್ಸ್‌) ಕಂಚಿನ ಪದಕಕ್ಕೆ ಕೊರಳೊಡ್ಡಿದರು.
ಹೀನಾ ಅರ್ಹತೆ ಗಳಿಸುವುದ ರೊಂದಿಗೆ ಪ್ರತಿಷ್ಠಿತ ಕೂಟದಲ್ಲಿ ಪಾಲ್ಗೊಳ್ಳುತ್ತಿರುವ ಭಾರತದ ಶೂಟರ್‌ಗಳ ಸಂಖ್ಯೆ ಒಂಬತ್ತಕ್ಕೆ ಏರಿಕೆಯಾಗಿದೆ.

ಪುರುಷರಿಗೆ ನಿರಾಸೆ: ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲು ಅಂತಿಮ ವೇದಿಕೆ ಎನಿಸಿದ್ದ  ಈ ಟೂರ್ನಿಯಲ್ಲಿ ಪುರುಷರ 50 ಮೀಟರ್ಸ್‌ ರೈಫಲ್‌ ಪ್ರೊನೊ ಮತ್ತು ಮಹಿಳೆಯರ ಟ್ರ್ಯಾಪ್‌ ವಿಭಾಗದಲ್ಲಿ ಆತಿಥೇಯ ಭಾರತಕ್ಕೆ ನಿರಾಸೆ ಕಾಡಿತು. ಈ ವಿಭಾಗಗಳಲ್ಲಿ ಸ್ಪರ್ಧಿಸಿದ್ದ ಭಾರತದ ಸ್ಪರ್ಧಿಗಳು ಅರ್ಹತಾ ಸುತ್ತಿನಲ್ಲೇ ಹೊರಬಿದ್ದು ನಿರಾಸೆ ಮೂಡಿಸಿದರು.

ಪುರುಷರ ರೈಫಲ್‌ ಪ್ರೊನೊ ವಿಭಾಗದಲ್ಲಿ ಭರವಸೆಯ ಶೂಟರ್‌ ಸ್ವಪ್ನಿಲ್‌ ಕುಶಾಲೆ ಆರು ಸುತ್ತುಗಳಿಂದ 617.2 ಸ್ಕೋರ್‌ ಗಳಿಸಿ 14ನೇ ಸ್ಥಾನದೊಂದಿಗೆ ಸ್ಪರ್ಧೆ ಕೊನೆಗೊಳಿಸಿದರು. ಸುಶೀಲ್‌ ಘಾಲೆ ಮತ್ತು ಸುರೇಂದ್ರ ಸಿಂಗ್‌ ರಾಥೋಡ್‌ ಅವರು ಕ್ರಮವಾಗಿ 17 ಮತ್ತು 24ನೇ ಸ್ಥಾನ ಗಳಿಸಿದರು. ಮಹಿಳೆಯರ ಟ್ರಾಪ್‌ ವಿಭಾಗದಲ್ಲಿ ಶ್ರೇಯಸಿ ಸಿಂಗ್‌ ಶಾಟ್‌ ಆಫ್‌ನಲ್ಲಿ ಪದಕದ ಆಸೆ ಕೈಚೆಲ್ಲಿದರು.

ಪುರುಷರ 25 ಮೀಟರ್ಸ್‌  ರ್‍ಯಾಪಿಡ್‌ ಫೈರ್‌ ಪಿಸ್ತೂಲ್‌ನಲ್ಲಿ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದ ವಿಜಯ್‌ ಕುಮಾರ್‌ ಏಳನೇ ಸ್ಥಾನಕ್ಕೆ ತೃಪ್ತಿಪಟ್ಟರು. ವಿಜಯ್‌ 285 ಸ್ಕೋರ್‌ ಕಲೆಹಾಕಲು ಮಾತ್ರ ಶಕ್ತರಾದರು.ಈ ವಿಭಾಗದಲ್ಲಿ ಸ್ಪರ್ಧಿಸಿದ್ದ ನೀರಜ್‌ ಕುಮಾರ್‌ ಮತ್ತು ಹರ್‌ಪ್ರೀತ್‌  ಸಿಂಗ್‌ ಕ್ರಮವಾಗಿ 13 ಮತ್ತು 16ನೇ ಸ್ಥಾನ ಗಳಿಸಿದರು.

ಟಾಪ್ ಅನುಷ್ಠಾನ ಅಸಮರ್ಪಕ:  ಟಾರ್ಗೆಟ್ ಒಲಿಂಪಿಕ್ ಪೋಡಿಯಂ (ಟಾಪ್) ಯೋಜನೆಯನ್ನು  ಸಮರ್ಪಕ ವಾಗಿ ಅನುಷ್ಠಾನಗೊಳಿಸಿಲ್ಲ ಎಂದು ಶೂಟರ್‌ಗಳಾದ ಅಭಿನವ್ ಬಿಂದ್ರಾ ಮತ್ತು ಹೀನಾ ಸಿಧು ಹೇಳಿದ್ದಾರೆ. ಬುಧವಾರ ಇಲ್ಲಿಯ ಕರ್ಣಿಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ಚಿನ್ನದ ಪದಕ ಗೆದ್ದ ಹೀನಾ ಸಿಧು ಸುದ್ದಿಗಾರರೊಂದಿಗೆ ಮಾತನಾಡಿದರು. ಕ್ರೀಡಾ ವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

‘ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯು ವುದು ಸುಲಭ ಎಂದು ಬಹಳ ಜನ ತಿಳಿದುಕೊಂಡಿದ್ದಾರೆ. ಆದರೆ, ಹಿಂದಿನ ಕಷ್ಟವನ್ನು ಅನುಭವಿಸಿದವರಿಗೇ ಗೊತ್ತು. ಒಲಿಂಪಿಕ್ ಕೋಟಾ ಮತ್ತು ಪದಕಗಳು ಸುಲಭವಾಗಿ ದಕ್ಕುವುದಿಲ್ಲ.  ಅದನ್ನು ಸಾಧಿಸಲು ಇಲ್ಲಿ ಹಲವರೊಂದಿಗೆ ಸತತವಾಗಿ ಹೋರಾಟ ನಡೆಸಬೇಕು. ಆದರೂ ಇಲ್ಲಿ ಏನೂ ಸುಧಾರಣೆ ಆಗುವುದೇ ಇಲ್ಲ’ ಎಂದು ಹೀನಾ ಹೇಳಿದರು.
‘ಭಾರತ ರೈಫಲ್ ಸಂಸ್ಥೆ ಮತ್ತು ನನ್ನ ಕುಟುಂಬದ ಬೆಂಬಲ ಸಿಕ್ಕಿರುವುದು ನನ್ನ ಅದೃಷ್ಟ. ನಾನು ಉತ್ತಮವಾಗಿ ಪ್ರದರ್ಶನ ನೀಡುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ’ ಎಂದರು.

ಬೀಜಿಂಗ್ ಒಲಿಂಪಿಕ್ ಚಿನ್ನದ ಪದಕ ವಿಜೇತ ಶೂಟರ್ ಬಿಂದ್ರಾ, ‘ಟಾಪ್ ಯೋಜನೆಯು ಅರ್ಥಪೂರ್ಣ ಕಾರ್ಯ ಕ್ರಮವಾಗಿತ್ತು.  ಆದರೆ, ಅನುಷ್ಠಾನದಲ್ಲಿ ಸರ್ಕಾರದ ಕೆಲವು ನೀತಿ, ನಿಯಮಗಳು ಅಡ್ಡಿಯಾಗುತ್ತವೆ. ಈ ಕುರಿತು ಕೇಂದ್ರ ಸರ್ಕಾರದೊಂದಿಗೆ ಚರ್ಚೆ ಮಾಡಿದ್ದೇನೆ. ಮುಂದೇನಾಗುತ್ತದೆ ಕಾದು ನೋಡೋಣ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT