ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಗುರಿ

‘ಸ್ಟಾಪ್‌ ವಾರ್‌ ಸ್ಟಾರ್ಟ್‌ ಟೆನಿಸ್‌’ ನಿಂದ ಬದಲಾವಣೆಯಾಗಿದೆ: ಬೋಪಣ್ಣ
Last Updated 19 ಜುಲೈ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಇತ್ತೀಚಿನ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ಟೆನಿಸ್‌ ಆಟಗಾರ ಕರ್ನಾಟಕದ ರೋಹನ್‌ ಬೋಪಣ್ಣ ಅವರು ರಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಗುರಿ ಹೊಂದಿದ್ದಾರೆ.

‘ಒಲಿಂಪಿಕ್ಸ್‌ನಲ್ಲಿ ಪ್ರತಿ ಕ್ರೀಡಾಪಟು ಅತ್ಯುನ್ನತ ಸಾಧನೆ ಮಾಡುವ ಆಸೆ ಹೊಂದಿರುತ್ತಾನೆ. ಇದರಿಂದ ನಾನೂ ಹೊರತಲ್ಲ. ಈ ಬಾರಿ ಚಿನ್ನದ ಪದಕ ಜಯಿಸುವ ಗುರಿ ಇಟ್ಟುಕೊಂಡಿದ್ದೇನೆ’ ಎಂದು ಬೋಪಣ್ಣ ಹೇಳಿದ್ದಾರೆ. ರಾಜ್ಯದ ಆಟಗಾರನಿಗೆ ‘ಜೆವೆನ್‌’ ಪ್ರಾಯೋಜಕತ್ವ ನೀಡಿದೆ.

ಚಂಡಿಗಡದಲ್ಲಿ ಎರಡು ದಿನಗಳ ಹಿಂದೆ ನಡೆದ ಕೊರಿಯಾ     ವಿರುದ್ಧದ ಡೇವಿಸ್‌ ಕಪ್‌ ಪಂದ್ಯದಲ್ಲಿ ಬೋಪಣ್ಣ ಉತ್ತಮ ಪ್ರದರ್ಶನ ನೀಡಿದ್ದರು. ಟೂರ್ನಿ ಆರಂಭದ ಎರಡು ದಿನಗಳಲ್ಲಿಯೇ ಭಾರತ ಗೆಲುವು ಪಡೆದಿತ್ತು. ಈಗ ಅವರು ಒಲಿಂಪಿಕ್ಸ್‌ನಲ್ಲಿ ಡಬಲ್ಸ್ ಮತ್ತು ಮಿಶ್ರ ಡಬಲ್ಸ್‌ ವಿಭಾಗಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಇದರ ಬಗ್ಗೆ ಬೋಪಣ್ಣ  ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

‘ಒಲಿಂಪಿಕ್ಸ್‌ನಂಥ ದೊಡ್ಡ ಕೂಟಕ್ಕೆ ಸಜ್ಜಾಗುತ್ತಿದ್ದೇನೆ. ಆದ್ದರಿಂದ ಬಲಿಷ್ಠ ರಾಷ್ಟ್ರಗಳ ಎದುರು ಪಂದ್ಯಗಳನ್ನು ಆಡುವುದು ಅಗತ್ಯವಾಗಿತ್ತು. ಕೊರಿಯಾ ತಂಡ ಬಲಿಷ್ಠವಾಗಿದ್ದರಿಂದ ಟೂರ್ನಿಯನ್ನು ಗಂಭೀರವಾಗಿ ಪರಿಗಣಿಸಿದ್ದೆವು. ಒಲಿಂಪಿಕ್ಸ್‌ಗೂ ಮೊದಲು ಟೊರಾಂಟೊ ಟೂರ್ನಿಯಲ್ಲಿ ಆಡುತ್ತೇನೆ. ಅಭ್ಯಾಸಕ್ಕೆ ಆ ಟೂರ್ನಿ ಕೂಡ ವೇದಿಕೆಯಾಗಲಿದೆ’ ಎಂದು ಅವರು ತಿಳಿಸಿದರು.

ಚುರುಕಾದ ಮುಂಗೈ ಹೊಡೆತಗಳ ಆಟಕ್ಕೆ ಹೆಸರಾದ 36 ವರ್ಷದ ಬೋಪಣ್ಣ    ಅವರು ಫ್ರೆಂಚ್‌ ಓಪನ್‌ ಟೂರ್ನಿಯ ಪುರುಷರ ಡಬಲ್ಸ್‌ ವಿಭಾಗದಲ್ಲಿ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದ್ದರು. ಹೋದ ವರ್ಷದ ವಿಂಬಲ್ಡನ್‌ನಲ್ಲಿ ಸೆಮಿಫೈನಲ್‌ ತಲುಪಿದ್ದರು. ಆಸ್ಟ್ರೇಲಿಯಾ ಓಪನ್‌ ಗ್ರ್ಯಾಂಡ್ ಸ್ಲಾಮ್ ಟೂರ್ನಿಯ ಮಿಶ್ರ ಡಬಲ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತಿದ್ದರು.

‘ಮ್ಯಾಡ್ರಿಡ್‌ ಓಪನ್‌ ಟೂರ್ನಿಯನ್ನು ಕ್ಲೈ ಕೋರ್ಟ್‌ನಲ್ಲಿ ಆಡಿದ್ದೆ. ಸಿಡ್ನಿ ಅಂತರರಾಷ್ಟ್ರೀಯ ಟೂರ್ನಿ ಹಾರ್ಡ್‌ ಕೋರ್ಟ್‌ನಲ್ಲಿ ಆಯೋಜನೆಯಾಗಿತ್ತು. ಹೀಗೆ ಎರಡೂ ಕೋರ್ಟ್‌ನಲ್ಲಿ ಆಡಿದ ಅನುಭವ ಇರುವ ಕಾರಣ ಡೇವಿಸ್‌ ಕಪ್‌ನಲ್ಲಿ ಉತ್ತಮ ಸಾಮರ್ಥ್ಯ ನೀಡಲು ಸಾಧ್ಯವಾಯಿತು’ ಎಂದೂ ಅವರು ಹೇಳಿದರು.
ಬದಲಾವಣೆಗೆ ವೇದಿಕೆ: ತಾವು ಆರಂಭಿಸಿದ್ದ ‘ಸ್ಟಾಪ್‌ ವಾರ್‌ ಸ್ಟಾರ್ಟ್‌ ಟೆನಿಸ್‌’ ಆಂದೋಲನದ  ಬಗ್ಗೆಯೂ ಮಾತನಾಡಿದರು.

‘ಭಾರತದಲ್ಲಿ ಟೆನಿಸ್‌ ವೇಗವಾಗಿ ಬೆಳೆಯುತ್ತಿದೆ. ಇದರ ನಡುವೆಯೂ ಆಟಗಾರರ ನಡುವೆ ಮನಸ್ತಾಪ, ಕಲಹ ಹೆಚ್ಚಾಗುತ್ತಿದ್ದವು. ಆದ್ದರಿಂದ ಬದಲಾವಣೆಗಾಗಿ ಹೊಸ ಆಂದೋಲನ ಆರಂಭಿಸಿದೆ. ಇದಕ್ಕೆ ಆತ್ಮೀಯ ಗೆಳೆಯ ಐಸಾಮ್ ಉಲ್ ಖುರೇಷಿ ಬೆಂಬಲ ನೀಡಿದ. ಇಬ್ಬರಲ್ಲೂ ಇದ್ದ ಟೆನಿಸ್‌  ಪ್ರೀತಿಯೇ ನಮಗೆ ಹಲವಾರು ಟೂರ್ನಿಗಳಲ್ಲಿ ಒಂದಾಗಿ ಆಡಲು ಪ್ರೇರಣೆಯಾಯಿತು’ ಎಂದೂ ಬೋಪಣ್ಣ ಹೇಳಿದರು.

ರಿಯೊ ಒಲಿಂಪಿಕ್ಸ್‌ನ ಟೆನಿಸ್‌ನಲ್ಲಿ ಭಾರತದ ನಾಲ್ವರು ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಬೋಪಣ್ಣ ಹಾಗೂ  ಅನುಭವಿ ಲಿಯಾಂಡರ್‌ ಪೇಸ್‌ ಕಣಕ್ಕಿಳಿಯಲಿದ್ದಾರೆ. ಮಹಿಳಾ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಜಾ ಹಾಗೂ  ಪ್ರಾರ್ಥನಾ ತೊಂಬಾರೆ ಆಡಲಿದ್ದಾರೆ. ಸಾನಿಯಾ ಮತ್ತು ಬೋಪಣ್ಣ ಮಿಶ್ರ ಡಬಲ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ.

ರಿಯೊ ಡಿ ಜನೈರೊದಲ್ಲಿರುವ ಒಲಿಂಪಿಕ್‌  ಸೆಂಟರ್‌ನಲ್ಲಿ ಆಗಸ್ಟ್‌  6ರಿಂದ 14ರ ವರೆಗೆ ಟೆನಿಸ್‌ ಸ್ಪರ್ಧೆಗಳು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT