ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರುಚಿಯಾದ ‘ಕೇಸರಿ’ ಸವಿ

ನಮ್ಮೂರ ಊಟ
Last Updated 13 ನವೆಂಬರ್ 2015, 19:38 IST
ಅಕ್ಷರ ಗಾತ್ರ

ಕೇಸರಿ ಪೇಡಾ
ಸಾಮಗ್ರಿ: 2 ಲೀಟರ್ ಹಾಲು, 200 ಗ್ರಾಂ ಸಕ್ಕರೆ, 2 ಚಮಚ ಏಲಕ್ಕಿ ಪುಡಿ, ಸ್ವಲ್ಪ ಕೇಸರಿ, 10-12 ಪಿಸ್ತಾ.

ವಿಧಾನ: ಒಂದು ಪಾತ್ರೆಯಲ್ಲಿ ಹಾಲನ್ನು ಹಾಕಿ. ಇದನ್ನು ಒಂದು ಸೌಟಿನಿಂದ ಗಟ್ಟಿಯಾಗುವವರೆಗೂ ತಿರುಗಿಸುತ್ತಿರಿ. ಹಾಲು ಕೋವಾದಂತೆ ಗಟ್ಟಿಯಾಗುವಂತೆ ಕಾಯಿಸಬೇಕು. ಹಾಲಿಗೆ ಸಕ್ಕರೆ ಬೆರೆಸಿ ಅದು ಕರಗುವವರೆಗೂ ಬಿಡದೇ ತಿರುಗಿಸಿ. ತಿರುಗಿಸದೇ ಇದ್ದರೆ ಪಾತ್ರೆಗೆ ಹಾಲು ಅಂಟಿಕೊಂಡು ಬಿಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಚೆನ್ನಾಗಿ ತಿರುಗಿಸುತ್ತಾ ಇರಿ.

ಗಟ್ಟಿ ಹಾಲು ಸಕ್ಕರೆ ಕರಗಿ ತೆಳುವಾಗುತ್ತಿರುವಾಗ ಕಡಿಮೆ ಉರಿಯಲ್ಲಿ ಕಾಯಿಸಿ. ಕೇಸರಿಯನ್ನು ಗಟ್ಟಿಯಾಗಿರುವ ಹಾಲಿಗೆ ಹಾಕಿ ಚೆನ್ನಾಗಿ ಬೆರೆಸಿ ಹಾಲಿನ ಬಣ್ಣ ಕೇಸರಿ ಹಳದಿ ಬಣ್ಣದ ಮಿಶ್ರಣಕ್ಕೆ ತಿರುಗಿಸಿ. ನಂತರ ಈ ಮಿಶ್ರಣ ಗಟ್ಟಿಯಾದಾಗ ಉರಿ ಆರಿಸಿ ಚೆನ್ನಾಗಿ ಕದಡಿ ತಣ್ಣಗಾಗಲು ಬಿಡಬೇಕು. ತಣ್ಣಗಾದ ನಂತರ ಮಿಶ್ರಣದಿಂದ ಸಣ್ಣ ಸಣ್ಣ ಉಂಡೆ ಮಾಡಿ ಅದರ ಮೇಲೆ ಪಿಸ್ತಾ ಅಂಟಿಸಿ ರುಚಿ ನೋಡಿ.

***
ಕೇಸರಿ ಶಿರಾ
ಸಾಮಗ್ರಿ: ರವೆ 2 ಲೋಟ, ಸಕ್ಕರೆ 2 ಲೋಟ, ತುಪ್ಪ 3 ಚಮಚ, ರಿಫೈಂಡ್ ಆಯಿಲ್ 3 ಚಮಚ, ಹಾಲು 1 ಲೋಟ, ಕೇಸರಿ ದಳ, ಏಲಕ್ಕಿ ಪುಡಿ ಸ್ವಲ್ಪ, ದ್ರಾಕ್ಷಿ ಮತ್ತು ಗೋಡಂಬಿ.

ವಿಧಾನ: ಕೇಸರಿ ದಳಗಳನ್ನು  ಒಂದೆರಡು ಚಮಚ ಹಾಲಿನಲ್ಲಿ ನೆನೆಸಿಡಿ.  ತುಪ್ಪ ಹಾಕಿ ರವೆಯನ್ನು ಸುವಾಸನೆ ಬರುವವರೆಗೆ ಹುರಿದುಕೊಳ್ಳಿ. ದ್ರಾಕ್ಷಿ ಮತ್ತು ಗೋಡಂಬಿಯನ್ನು ಸಹ ತುಪ್ಪ ಮತ್ತು ಎಣ್ಣೆ ಹಾಕಿ ಹುರಿದಿಟ್ಟುಕೊಳ್ಳಿ. ಆ ಪಾತ್ರೆಗೆ ಹಾಲು ಮತ್ತು ಸ್ವಲ್ಪ ನೀರು ಹಾಕಿ ಕುದಿಸಿ, ನಂತರ ಅದಕ್ಕೆ ಸಕ್ಕರೆ ಸೇರಿಸಿ, ಸಕ್ಕರೆ ಕರಗಿ ಕುದಿ ಬರುತ್ತಿರುವಾಗ ಏಲಕ್ಕಿ ಪುಡಿ ಮತ್ತು ಹಾಲಿನಲ್ಲಿ ನೆನೆಸಿದ ಕೇಸರಿದಳ ಹಾಕಿ, ಸ್ವಲ್ಪ ತುಪ್ಪ ಹಾಕಿ. ಆಮೇಲೆ ಹುರಿದಿರುವ ರವೆಯನ್ನು ಸ್ವಲ್ಪ ಸ್ವಲ್ಪವಾಗಿ ಹಾಕುತ್ತಾ ತಿರುಗಿಸುತ್ತಿರಿ. ಅದು ಗಂಟು ಕಟ್ಟದಂತೆ ನೋಡಿಕೊಳ್ಳಿ. ನಂತರ ಕೆಳಗಿಳಿಸಿ. ಈಗ ರುಚಿಯಾದ ಬಿಸಿಯಾದ ಕೇಸರಿಭಾತ್ ರೆಡಿಯಾಗುತ್ತದೆ.

***
ಕೇಸರಿ ರವಾ ಸ್ವೀಟ್‌
ಸಾಮಗ್ರಿ: ಸೂಜಿ ರವಾ 2 ಲೋಟ, ಸಕ್ಕರೆ - 4 ಲೋಟ, ತುಪ್ಪ - 2 ಲೋಟ, ಗೋಡಂಬಿ, ದ್ರಾಕ್ಷಿ - ಸ್ವಲ್ಪ, ಏಲಕ್ಕಿ ಪುಡಿ -1 ಚಮಚ, ಹಾಲು -ಅರ್ಧ ಲೋಟ, ಕೇಸರಿ ದಳಗಳು - ಸ್ವಲ್ಪ, ನೀರು - ಅಗತ್ಯ ಇದ್ದಷ್ಟು, ಚಿಟಿಕೆ ಉಪ್ಪು.

ವಿಧಾನ: ಬಾಣಲೆ ಕಾಯಲಿಟ್ಟು ಅದಕ್ಕೆ ಅರ್ಧದಷ್ಟು ತುಪ್ಪವನ್ನು ಹಾಕಿ. ರವೆಯನ್ನು ಇದಕ್ಕೆ ಸೇರಿಸಿ, ಪರಿಮಳ ಬರುವಂತೆ ಕೆಂಪಗೆ ಹುರಿಯಿರಿ. ಒಂದು ಪಾತ್ರೆಯಲ್ಲಿ ನೀರನ್ನು ಕುದಿಯಲಿಡಿ. ರವೆ ಹುರಿಯುವಷ್ಟರಲ್ಲಿ ನೀರು ಕಾದಿರಲಿ. ಹುರಿದ ರವೆಗೆ ನೀರನ್ನು ಸೇರಿಸಿ ಕೈಯಾಡಿಸಿ, ಮುಚ್ಚಳ ಮುಚ್ಚಿ ಬೇಯಿಸಿ. ಜೊತೆಗೆ ಚಿಟಿಕೆ ಉಪ್ಪನ್ನೂ ಹಾಕಿ.

ಕೆಲ ನಿಮಿಷಗಳ ನಂತರ ಮುಚ್ಚಳ ತೆಗೆದು ರವೆ ಬೆಂದಿದೆಯೇ ಎಂದು ನೋಡಿ. ಬೆಂದಿಲ್ಲವಾದರೆ ಇನ್ನೂ ಸ್ವಲ್ಪ ನೀರು ಸೇರಿಸಿ ಬೇಯಿಸಿ. ರವೆ ಬೆಂದಿದೆಯೇ ಎಂದು ನೋಡಲು ಬೆರಳಿನಿಂದ ಒತ್ತಿ ಪರೀಕ್ಷಿಸಿ. ಚೆನ್ನಾಗಿ ಮೆತ್ತಗಾಗಿದ್ದರೆ ರವೆ ಬೆಂದಿದೆ ಎಂದರ್ಥ.  ರವೆ ಬೆಂದು, ನೀರು ಆರುತ್ತಿದ್ದಂತೆ ಸಕ್ಕರೆ ಸೇರಿಸಿ. ಸಕ್ಕರೆ ಸೇರಿಸಿದಾಗ ಮಿಶ್ರಣ ಸ್ವಲ್ಪ ತೆಳ್ಳಗಾಗುತ್ತದೆ. ಇದಕ್ಕೆ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ 7- 8 ನಿಮಿಷ ಬೇಯಿಸಿ. ರುಚಿ ನೋಡಿಕೊಂಡು ಸಕ್ಕರೆ ಬೇಕಿದ್ದರೆ ಸೇರಿಸಿ.

ಕೇಸರಿ ದಳ ಅಥವಾ ಫುಡ್ ಕಲರ್ ಸೇರಿಸುವುದಾದರೆ ಸೇರಿಸಿ. ಗೋಡಂಬಿ, ದ್ರಾಕ್ಷಿಯನ್ನು ತುಪ್ಪದಲ್ಲಿ ಹುರಿದು ಸೇರಿಸಿ. ಮಿಶ್ರಣಕ್ಕೆ ಹಾಲು, ಸ್ವಲ್ಪ ತುಪ್ಪ, ಸೇರಿಸಿ ಸಣ್ಣ ಉರಿಯಲ್ಲಿ 8 - 10 ನಿಮಿಷ ಬೇಯಿಸಿ. ಚೆನ್ನಾಗಿ ಹದ ಬಂದಾಗ ಮಿಶ್ರಣದಿಂದ ತುಪ್ಪ ಬೇರ್ಪಡತೊಡಗುತ್ತದೆ. ಆಗ ಇದಕ್ಕೆ ಏಲಕ್ಕಿಪುಡಿ ಸೇರಿಸಿ ಕೆಳಗಿಳಿಸಿ. ತಯಾರಾದ ರವಾ ಕೇಸರಿಯನ್ನು ಕುರುಕಲು ತಿಂಡಿಯೊಡನೆ ಹಾಕಿಕೊಡಿ.

***
ಅನಾನಸ್ ಕೇಸರಿ ಭಾತ್
ಸಾಮಗ್ರಿ: ರವೆ 4 ಲೋಟ, ಸಕ್ಕರೆ 4 ಲೋಟ, ಅನಾನಸ್ ತುರಿದಿದ್ದು 1 ಲೋಟ, ತುಪ್ಪ 2 ಲೋಟ, ದ್ರಾಕ್ಷಿ, ಗೋಡಂಬಿ ಸ್ವಲ್ಪ, ಚಿಟಿಕೆ ಉಪ್ಪು, ಕೇಸರಿ ಸ್ವಲ್ಪ.

ವಿಧಾನ: ಕೇಸರಿನ್ನು ಹಾಲಿನಲ್ಲಿ ನೆನೆಸಿಡಿ. ಒಂದು ಪ್ಯಾನ್‌ನಲ್ಲಿ ಅರ್ಧ ಲೋಟ ತುಪ್ಪ ಹಾಕಿ ಅದಕ್ಕೆ ರವೆ ಹಾಕಿ ಚೆನ್ನಾಗಿ ಹುರಿಯಿರಿ. ಅದಕ್ಕೆ ನಾಲ್ಕು ಲೋಟ ನೀರು ಕುದಿಸಿ. ಬೇಯುವಾಗ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ರವೆ ಬೆಂದ ತಕ್ಷಣ ತುರಿದ ಅನಾನಸ್ ಹಾಕಿ. ಸಕ್ಕರೆ ಹಾಕಿ. ಹಾಲಿನಲ್ಲಿ ನೆನೆಸಿದ ಕೇಸರಿ ಸೇರಿಸಿ. ತುಪ್ಪವನ್ನು ಸ್ವಲ್ಪ ಸ್ವಲ್ಪವೇ ಸೇರಿಸುತ್ತಾ ಚೆನ್ನಾಗಿ ಮಗುಚಿ. ಪಾಕ ಬಂದು ಮುದ್ದೆಯಾದ ತಕ್ಷಣ ತುಪ್ಪದಲ್ಲಿ ಹುರಿದ ದ್ರಾಕ್ಷಿ ಮತ್ತು ಗೋಡಂಬಿ ಸೇರಿಸಿ.

***
ಕೇಸರಿ ಭಾತ್‌
ಸಾಮಗ್ರಿ: ಅಕ್ಕಿ - 2 ಲೋಟ, ತುಪ್ಪ-  ಅರ್ಧ ಲೋಟ, ಒಣ ದ್ರಾಕ್ಷಿ- 10-12, ಗೋಡಂಬಿ 10-12, ಏಲಕ್ಕಿ ಪುಡಿ–ಒಂದು ಚಮಚ, ಕೇಸರಿ - ನಾಲ್ಕೈದು ಎಳೆ, ಸಕ್ಕರೆ 1 ಲೋಟ.

ವಿಧಾನ: ಮೊದಲು ಅಕ್ಕಿಯನ್ನು ತೊಳೆದುಕೊಳ್ಳಿ. ಒಂದು ತಳ ಆಳವಿರುವ ಪ್ಯಾನ್‌ನಲ್ಲಿ ಸ್ವಲ್ಪ ತುಪ್ಪ ಹಾಕಿ ಕಾಯಿಸಿ. ಇನ್ನು ಇದರಲ್ಲಿ ಒಣ ದ್ರಾಕ್ಷಿ ಹುರಿಯಿರಿ. ಇದೇ ತುಪ್ಪದಲ್ಲಿ ನಂತರ ಗೋಡಂಬಿ ಹುರಿದುಕೊಳ್ಳಿ. ಅದೇ ಬಾಣಲೆಯಲ್ಲಿ ಸ್ವಲ್ಪ ತುಪ್ಪವನ್ನು ಮತ್ತೆ ಹಾಕಿ ಮತ್ತು ಅದರ ಮೇಲೆ ಅಕ್ಕಿಯನ್ನು ಹಾಕಿ. ಅಕ್ಕಿಯನ್ನು ತುಪ್ಪದಲ್ಲಿ ಹುರಿದುಕೊಳ್ಳಿ. ಇದರ ಮೇಲೆ ಏಲಕ್ಕಿ ಪುಡಿಯನ್ನು ಹಾಕಿ. ಇನ್ನೂ ಸ್ವಲ್ಪ ಸಮಯ ಇದನ್ನು ಹುರಿದುಕೊಳ್ಳಿ.

ಜೊತೆಗೆ ಒಂದು ಚೂರು ಕೇಸರಿ ಎಳೆಗಳನ್ನು ಅದಕ್ಕೆ ಹಾಕಿ. ಇದಕ್ಕೆ ನೀರನ್ನು ಹಾಕಿ, ಕಡಿಮೆ ಉರಿಯಲ್ಲಿ ಅಕ್ಕಿಯನ್ನು ಬೇಯಲು ಬಿಡಿ. ನೀರೆಲ್ಲ ಇಂಗುವಂತೆ ನೋಡಿಕೊಳ್ಳಿ. ಇದಕ್ಕೆ ಸಕ್ಕರೆ ಮತ್ತು ನೀರನ್ನು ಹಾಕಿ. ಸಕ್ಕರೆಯು ಅನ್ನದ ಜೊತೆಗೆ ಕರಗಲು ಬಿಡಿ. ಉರಿಯನ್ನು ಕಡಿಮೆ ಮಾಡಿಕೊಳ್ಳಿ. ಈಗ ಅಕ್ಕಿ ಕೇಸರಿ ಭಾತ್ ಮೇಲೆ ಗೋಡಂಬಿ ಮತ್ತು ದ್ರಾಕ್ಷಿಯನ್ನು ಹಾಕಿ. ಅನ್ನ ಆದ ನಂತರ ಸಕ್ಕರೆ ಹಾಕಿ ರುಚಿ ನೋಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT