ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರುಚಿಯ ಹವಾ ಹವಾಯಿ

ರಸಾಸ್ವಾದ
Last Updated 30 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ಇಂದಿರಾನಗರದಲ್ಲಿ ಹೊಸದಾಗಿ ಆರಂಭಗೊಂಡಿರುವ ‘ದಿ ಬಿಗ್‌ ಕಹುನ’ ರೆಸ್ಟೊರೆಂಟ್‌ ತಿನ್ನುವ ಬಯಕೆಗೆ ಕಿಚ್ಚುಹಚ್ಚುವ ತಾಣ. ಫುಡ್ಡಿಗಳ ಸ್ವರ್ಗ. ಸ್ಪೈಸಿ ಚಿಲ್ಲಿ ಫಿಶ್‌, ಕಹುನ ಐಲ್ಯಾಂಡ್‌ ಬರ್ಗರ್‌, ಮೇರಿ ಪ್ರಾನ್ಸ್‌ ಇಲ್ಲಿನ ಸಿಗ್ನೇಚರ್‌ ತಿನಿಸುಗಳು.

‘ದಿ ಬಿಗ್‌ ಕಹುನ’ ಆಹಾರಪ್ರಿಯರಿಗೆ ಹೊಸತೇ ಅನುಭವವನ್ನು ನೀಡುವ ರೆಸ್ಟೊರೆಂಟ್‌. ‘ವಿಶ್ವ ತಿನಿಸು’ಗಳನ್ನು ಬಡಿಸುವ ಈ ರೆಸ್ಟೊರೆಂಟ್‌ ಹವಾಯ್‌ ಥೀಮ್‌ನಲ್ಲಿ ಮೈದಳೆದಿದೆ. ರೆಸ್ಟೊರೆಂಟ್‌ನ ಒಳಾಂಗಣ ವಿನ್ಯಾಸಕ್ಕೆ ಬಳಸಿಕೊಂಡಿರುವ ಹವಾಯಿ ಮುಖವಾಡಗಳು, ಹವಾಯಿ ಕಲಾಕೃತಿಗಳು, ಹವಾಯಿಯನ್‌ ಫ್ಲೋರಲ್‌ ಶರ್ಟ್‌ಗಳನ್ನು ಧರಿಸಿ ಸರ್ವ್‌ ಮಾಡುವ ಸರ್ವರ್‌ಗಳು ಹೀಗೆ ಹವಾಯಿ ಗುಣವನ್ನು ಮೈದುಂಬಿಕೊಂಡಿರುವ ಈ ರೆಸ್ಟೊರೆಂಟ್‌ ಒಳಕ್ಕೆ ಕಾಲಿರಿಸಿದರೆ ಹವಾಯಿ ದ್ವೀಪಕ್ಕೆ ಹೋದ ಅನುಭವ ಆಗುತ್ತದೆ.

ಇಲ್ಲಿ ಕೇಳಿಸುವ ರೆಟ್ರೊ ಸಂಗೀತ ನಮ್ಮ ಕಾಲು ಕುಣಿಸುತ್ತದೆ. ಇಲ್ಲಿ ಸಿಗುವ ತಿನಿಸುಗಳ ರುಚಿಯೂ ಚೆನ್ನಾಗಿದೆ. ಡ್ರಿಂಕ್‌ಗಳ ಕಿಕ್‌ ಜೋರಾಗಿದೆ. ಹಾಗಾಗಿ, ಈ ರೆಸ್ಟೊರೆಂಟ್‌ಗೆ ಹೋದವರಿಗೆ ಊಟದ ರುಚಿಯ ಜೊತೆಗೆ ನೋಟದ ಮುದವೂ ಸಿಗುತ್ತದೆ.

ಕಾಕ್‌ಟೇಲ್‌ ಪ್ರಿಯರ ‘ತೀರ್ಥ’ಗ್ರಂಥಿಗಳನ್ನು ಮೀಟುವ ವೈವಿಧ್ಯಮಯ ಕಾಕ್‌ಟೇಲ್‌ಗಳ ಆಯ್ಕೆ ಇಲ್ಲಿ ಲಭ್ಯವಿದೆ. ಹೆಲ್ಮೆಟ್‌ ಶೆಲ್‌ನಲ್ಲಿ ಕೊಡುವ ರಮ್‌ ಗಿಗಲ್‌ ಇಲ್ಲಿನ ಜನಪ್ರಿಯ ಕಾಕ್‌ಟೇಲ್‌.  ಇದು ವೈಟ್‌ ರಮ್‌, ಪೈನಾಪಲ್‌, ಆರೆಂಜ್‌ ಜ್ಯೂಸ್‌ ಮಿಶ್ರಣದಿಂದ ಕೂಡಿರುತ್ತದೆ. ಪುಟ್ಟ ಬಾನಿಯಂತಿರುವ ಹೆಲ್ಮೆಟ್‌ ಶೆಲ್‌ನೊಳಗಿರುವ ಕಾಕ್‌ಟೇಲ್‌ ಅನ್ನು ದೊಡ್ಡ ಸ್ಟ್ರಾಇಟ್ಟುಕೊಂಡು ಹೀರುವಾಗ ಸಖತ್‌ ಮಜಾ ಬರುತ್ತದೆ. ಗ್ರಿಲ್ಡ್‌ ಅಥವಾ ಮೇರಿ ಪ್ರಾನ್‌್ ತಿನಿಸುಗಳು ಈ ಕಾಕ್‌ಟೇಲ್‌ಗೆ ಒಳ್ಳೆ ಸಾಥ್‌ ನೀಡುತ್ತವೆ.

ಕಾಕ್‌ಟೇಲ್‌ ಅಥವಾ ಹಾಟ್‌ ಡ್ರಿಂಕ್‌ನೊಂದಿಗೆ ಊಟ ಆರಂಭಿಸುವವರಿಗೆ ಟಿಬಿಕೆ ನಾನ್‌ವೆಜ್‌ ಟಿಕಿ ಪ್ಲಾಟರ್‌ ಉತ್ತಮ ಆಯ್ಕೆ. ಈ ಪ್ಲಾಟರ್‌ನಲ್ಲಿರುವ ಕ್ರಿಸ್ಪಿ ಚಿಕನ್‌, ಸ್ಟ್ರಿಂಗ್‌ ರೋಲ್ಸ್‌, ಇಟಾಲಿಯನ್‌ ಚಿಕನ್ ಸ್ಲೈಡರ್‌ಗಳು ಊಟಕ್ಕೆ ಉತ್ತಮ ಆರಂಭ ನೀಡುತ್ತವೆ. ಮುಖ್ಯ ಮೆನುವಿನಲ್ಲಿ ಸ್ಪೈಸಿ ಚಿಲ್ಲಿ ಫಿಶ್‌ ರುಚಿಯನ್ನು ತಪ್ಪದೇ ಸವಿಯಬೇಕು. ಇದು ಈ ರೆಸ್ಟೊರೆಂಟ್‌ನ ಸಿಗ್ನೇಚರ್‌ ತಿನಿಸೂ ಕೂಡ ಹೌದು.

ಹಾಗೆಯೇ, ಕಹುನ ಐಲ್ಯಾಂಡ್‌ ಬರ್ಗರ್‌, ಕ್ಲಾಸಿಕ್‌ ಚಿಕನ್‌ ಸಲಾಡ್‌ ಸ್ಯಾಂಡ್‌ವಿಚ್‌, ಬಾರ್ಬೆಕ್ಯು ಸಲಾಡ್‌ ಚಿಕನ್‌ ಮೊದಲಾದವುಗಳ ರುಚಿ ನೋಡಬಹುದು. ‘ಇಂದಿರಾನಗರಕ್ಕೆ ಹವಾಯಿ ರುಚಿ ಹತ್ತಿಸುತ್ತಿರುವುದು ಕಹುನ ಅಗ್ಗಳಿಕೆ. ಫುಡ್‌ ಹಾಗೂ ಡ್ರಿಂಕ್‌ಗಳ ಬಗ್ಗೆ ಗೀಳು ಹತ್ತಿಸಿಕೊಂಡರಿಗೆ ಈ ರೆಸ್ಟೊರೆಂಟ್‌ ಉತ್ತಮ ಆಯ್ಕೆ. ನಮ್ಮಲ್ಲಿ ಕಚೇರಿ ಕೆಲಸದಲ್ಲಿ ಬ್ಯುಸಿಯಾಗಿರುವವರಿಗೆ ಬೇಕಾದ ಕ್ವಿಕ್‌ ಮೆನು ಕೂಡ ಇದೆ. ಹಾಗೆಯೇ, ರಾತ್ರಿ ಆರಾಮವಾಗಿ ಕುಳಿತು ಹರಟುತ್ತಾ ಊಟ ಸವಿಯುವವರಿಗೆ ಬೇಕಿರುವ ಮೆನು ಕೂಡ ಇದೆ.

ಭರ್ಜರಿ ಪಾರ್ಟಿ ಮಾಡಲು ಬಯಸುವ ಗ್ರಾಹಕರ ಅಭಿರುಚಿಗೆ ಹೊಂದುವ ಡ್ರಿಂಕ್‌ ಮತ್ತು ತಿನಿಸುಗಳಂತೂ ನಮ್ಮಲ್ಲಿ ಹೇರಳವಾಗಿವೆ. ಈ ಅರ್ಥದಲ್ಲಿ ಬಿಗ್‌ ಕಹುನ ಎಲ್ಲರಿಗೂ ಇಷ್ಟವಾಗುವ ತಾಣ. ನಮ್ಮಲ್ಲಿ ವ್ಯಾಪಕ ಶ್ರೇಣಿಯ ರಮ್‌ ಮಿಶ್ರಿತ ಪಾನೀಯಗಳು ಲಭ್ಯ. ಅವುಗಳನ್ನು ಸ್ಕಾರ್ಪಿಯನ್‌ ಬೌಲ್‌ನಲ್ಲಿ ಸರ್ವ್‌ ಮಾಡುತ್ತೇವೆ. ಹವಾಯಿಯನ್‌ ಕಾಕ್‌ಟೇಲ್‌ಗಳು ಸೇರಿದಂತೆ ನಮ್ಮಲ್ಲಿ 40ಕ್ಕೂ ಅಧಿಕ ಸಿಗ್ನೇಚರ್‌ ಕಾಕ್‌ಟೇಲ್‌ಗಳು ಲಭಿಸುತ್ತವೆ.

ಡ್ರಿಂಕ್‌ಗಳಿಗೆ ತುಂಬ ಚೆನ್ನಾಗಿ ಹೊಂದಾಣಿಕೆ ಆಗುವ ಬಾರ್‌ ಸ್ನ್ಯಾಕ್ಸ್‌ ಇವೆ. ವೆಜ್ಜಿ ಬಿಬಿಕ್ಯು ಪಿಟಾ, ಇಟಾಲಿಯನ್‌ ಸ್ಲೈಡರ್‌, ಲೈವ್‌ ಗ್ರಿಲ್ಡ್‌ ಸುಕುನಿ, ಮೇರಿ ಪ್ರಾನ್ಸ್‌ ಮೊದಲಾದವು ಡ್ರಿಂಕ್‌ಗೆ ಉತ್ತಮ ಸಾಥ್‌ ನೀಡುತ್ತವೆ. ಗ್ರಾಹಕರು ಬಿಗ್‌ ಕಹುನ ಬರ್ಗರ್‌ ಅಥವಾ ಗ್ರಿಲ್ಡ್‌ ಪೆಸ್ಟೊ ತಿನಿಸುಗಳನ್ನು ಈ ಪಾನೀಯಗಳ ಜೊತೆಗೆ ಟ್ರೈ ಮಾಡಬಹುದು.

ದಿ ಬಿಗ್‌ ಕಹುನ ಗ್ರಾಹಕ ಸ್ನೇಹಿಯಾಗಿದೆ. ಇಲ್ಲಿಗೆ ಬಂದವರು ತಮ್ಮ ಕುಟುಂಬ ಅಥವಾ ಸ್ನೇಹಿತರೊಟ್ಟಿಗೆ ಸಂತಸದ ಕ್ಷಣಗಳನ್ನು ಮೊಗೆದುಕೊಂಡು ಹೋಗಬಹುದು. ಪಾರ್ಟಿ ಮಾಡಲು ಟೆರೆಸ್‌ ಲೌಂಜ್‌ ಇದೆ. ತಿನ್ನಲು ವಿಶ್ವದ ಎಲ್ಲ ತಿನಿಸುಗಳು ಅಪ್ಪಟ ಅದೇ ರುಚಿಯಲ್ಲಿ ದೊರಕುತ್ತದೆ. ಒಟ್ಟಾರೆಯಾಗಿ, ಗ್ರಾಹಕರೆಲ್ಲರಿಗೂ ಇಷ್ಟವಾಗುವ ರೀತಿಯಲ್ಲಿ ಮೆನು ಸಿದ್ಧಪಡಿಸಿದ್ದೇವೆ’ ಎನ್ನುತ್ತಾರೆ ಇಲ್ಲಿನ ಬ್ರ್ಯಾಂಡ್‌ ಶೆಫ್‌ ಪ್ರಿಯಾಂಕ್‌ ಸಿಂಗ್‌ ಚವಾಣ್‌.

ಸ್ಥಳ: ಬಿಗ್‌ ಕಹುನ, 775, ಮೊದಲನೇ ಮಹಡಿ, ಜಿಂಜರ್‌ ಟೈಗರ್‌ ರೆಸ್ಟೊರೆಂಟ್‌ ಮೇಲೆ, 100 ಅಡಿ ರಸ್ತೆ, ಎಚ್‌ಎಎಲ್‌ 2ನೇ ಹಂತ, ಇಂದಿರಾನಗರ. ಟೇಬಲ್‌ ಕಾಯ್ದಿರಿಸಲು: 080-6999 0180.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT