ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರುದ್ರ ರಮಣೀಯ ಝಡ್ ಪಾಯಿಂಟ್

Last Updated 23 ಮೇ 2016, 19:30 IST
ಅಕ್ಷರ ಗಾತ್ರ

ಪ್ರತಿ ಬಾರಿಯೂ ಹೊಸ ಪ್ರದೇಶಗಳನ್ನು ಹುಡುಕುತ್ತಾ ಪ್ರವಾಸ ಕೈಗೊಂಡು ಸ್ನೇಹಿತರೊಂದಿಗೆ ಸುತ್ತಾಡುವುದು ನನ್ನ ಹವ್ಯಾಸ. ಅದೇ ರೀತಿ ಕಳೆದ ಮಳೆಗಾಲದ ಅಂತ್ಯದ ವೇಳೆಗೆ ಚಿಕ್ಕಮಗಳೂರಿನ ಸೌಂದರ್ಯ ಸವಿಯುವ ಸಲುವಾಗಿ ಎಂಟು ಜನ ಗೆಳೆಯರೊಡಗೂಡಿ ಚಿಕ್ಕಮಗಳೂರಿನ ಕೆಮ್ಮಣ್ಣುಗುಂಡಿಯ ರುದ್ರರಮಣೀಯ ಪ್ರಕೃತಿ ಸೌಂದರ್ಯವನ್ನು ಹೊಂದಿರುವ ಝಡ್ ಪಾಯಿಂಟ್‌ಗೆ ಹೋಗಬೇಕೆಂದು ನಿರ್ಧರಿಸಿ ಪ್ರವಾಸ ಹೊರಟೆವು.

ತುಮಕೂರಿನಿಂದ ರಾತ್ರಿ 12ಕ್ಕೆ ಹೊರಟ ನಮ್ಮ ತಂಡ ಮುಂಜಾನೆ 4ಕ್ಕೆ ಕೆಮ್ಮಣ್ಣುಗುಂಡಿ ತಲುಪಿತು. ಇನ್ನೂ ಎಲ್ಲೆಡೆ ಕತ್ತಲು, ಜಿಟಿಜಿಟಿ ಮಳೆ, ಮೈ ಕೊರೆಯುವ ಚಳಿ, ತಂಪಾದ ಉಲ್ಲಾಸಭರಿತ ಗಾಳಿ. ಆದರೆ ಪ್ರಕೃತಿ ಸೌಂದರ್ಯ ಸವಿಯಲು ಬೆಳಕು ಹರಿಯುವವರೆಗೂ ಕಾಯಬೇಕು. ಎಲ್ಲರಲ್ಲೂ ಕಾತರ, ಎಷ್ಟೊತ್ತಿಗೆ ಬೆಳಕು ಹರಿಯುತ್ತದೆ ಎಂದು. ಅಂತೂ 5.30ರ ಸುಮಾರಿಗೆ ಬೆಳಕು ಕಾಣತೊಡಗಿತು.

ಎಲ್ಲೆಡೆ ಮಂಜು ಮುಸುಕಿದೆ. ಸಣ್ಣದಾಗಿ ಮಳೆ ಸುರಿಯುತ್ತಿದೆ. ಏನು ಮಾಡುವುದು ಎಂದು ಯೋಚಿಸುತ್ತಿರುವಾಗಲೇ ಮಳೆ ನಿಂತಿತು. ಆಹಾ..! ನಮ್ಮ ಸಂತೋಷಕ್ಕೆ ಪಾರವೇ ಇಲ್ಲದಂತಾಯಿತು.

ಮಳೆ ನಿಂತಿದ್ದೇ ತಡ, ಝಡ್ ಪಾಯಿಂಟ್‌ಗೆ ತಲುಪುವ ಮಾರ್ಗದವರೆಗೆ ಸುಮಾರು ಎರಡು ಕಿಲೋ ಮೀಟರ್‌ನಷ್ಟು ಕಾರಿನಲ್ಲಿ ಪ್ರಯಾಣ ಬೆಳೆಸಿದೆವು. ಅಲ್ಲಿಂದ ಶುರುವಾಯಿತು ನೋಡಿ ನಮ್ಮ ಕಾಲ್ನಡಿಗೆ ಪಯಣ. ಸುಂದರ ಪರಿಸರ, ತಂಪಾದ ವಾತಾವರಣ, ಆಗ ತಾನೆ ಮಳೆ ಬಂದು ನಿಂತಿದೆ. ಎಲ್ಲೆಲ್ಲೂ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಪರ್ವತ ಸಾಲುಗಳ ರುದ್ರರಮಣೀಯ ಪರಿಸರ.

ನೋಡುತ್ತಾ ಅಲ್ಲಿಯೇ ಇದ್ದು ಇಡಬೇಕೆನಿಸುವಷ್ಟು ಆನಂದ. ಇಂತಹ ವಾತಾವರಣಲ್ಲಿ ಓಡುತ್ತಾ, ಕುಪ್ಪಳಿಸುತ್ತಾ ಝಡ್ ಪಾಯಿಂಟ್ ಕಡೆ ಪ್ರಯಾಣ ಬೆಳೆಸಿದೆವು. ಸ್ವಲ್ಪ ಮುಂದೆ ಸಾಗುತ್ತಿರುವಾಗಲೇ ನೀರಿನ ಜುಳು ಜುಳು ನಿನಾದ ಕೇಳಿಸತೊಡಗಿತ್ತು. ಹತ್ತಿರ ಹೋಗಿ ನೋಡಿದರೆ ಸಣ್ಣದಾಗಿ ಝರಿಯಾಗಿ ನೀರು ಬೀಳುತ್ತಿದೆ. ಅದೇ ಶಾಂತಿ ಜಲಪಾತ. ಆ ನೀರಿನಲ್ಲಿ ಸ್ವಲ್ಪ ಹೊತ್ತು ಆಟವಾಡಿ ನಮ್ಮ ದಣಿವಾರಿಸಿಕೊಂಡು ಪ್ರಯಾಣ ಮುಂದುವರೆಸಿದೆವು.

ಮುಂದೆ ಸಾಗುತ್ತಿರುವಾಗಲೇ ನಮಗೆ ಕಾಣಿಸುತ್ತಿದ್ದುದು ಭುವಿಯೊಡಲಲ್ಲಿ ಹಚ್ಚ ಹಸಿರ ಸಂಭ್ರಮ. ಎಲ್ಲೆಲ್ಲೂ ಹಸಿರು ಸೀರೆಯನ್ನು ಉಟ್ಟ ಪರ್ವತ ಸಾಲುಗಳೇ. ಎಲ್ಲೆಡೆ ಹಸಿರು, ಹಸಿರು. ತಂಗಾಳಿ ತುಂಬಿದ ಆ ವಾತಾವರಣದಲ್ಲಿ ಹಕ್ಕಿಗಳ ಚಿಲಿಪಿಲಿ ನಾದವನ್ನು ಕೇಳುತ್ತಾ ಏರು ಹಾದಿಯಲ್ಲಿ ಕಡಿದಾದ ಮಣ್ಣಿನ ರಸ್ತೆಯ ಕವಲು ದಾರಿಯಲ್ಲಿ ಹೋಗಲು ಪ್ರಾರಂಭಿಸುತ್ತಿದ್ದಂತೆ ಬೆಟ್ಟ ಮತ್ತು ಅಲ್ಲಿನ ಸುತ್ತಮುತ್ತಲ ಸುಂದರ ಪ್ರಕೃತಿ ನೋಡುವ ಭಾಗ್ಯ ನಮ್ಮದಾಯಿತು.

ಸಣ್ಣ ಸಣ್ಣ ಬೆಟ್ಟಗುಡ್ಡಗಳನ್ನು ಏರಿಳಿಯುತ್ತಾ ಸಾಗುತ್ತಾ ದಣಿವಾದರೂ ತೋರ್ಪಡಿಸದೆ ನಾ ಮುಂದು, ತಾ ಮುಂದು ಎಂದು ಓಡುತ್ತಿದ್ದೆವು. ಅಂತೂ ಇಂತು ಕೊನೆಗೆ ಬಂದೇ ಬಿಟ್ಟೆವು ನೋಡಿ. ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುತ್ತಾ ಗುಡ್ಡದ ತುತ್ತತುದಿಯನ್ನು ತಲುಪಿದಾಗ ಸ್ವರ್ಗಕ್ಕೆ ಮೂರೇ ಗೇಣು. ಮೈಮನಗಳಲ್ಲಿ ನಿಜಾರ್ಥದಲ್ಲಿ ರೋಮಾಂಚನ ಉಂಟುಮಾಡುವಂಥ ಜಾಗ. ಚಳಿಗಾಲದಲ್ಲಂತೂ ಸುರಿವ ಇಬ್ಬನಿ ಧಾರೆ ಶೃಂಗಾರ ಕಾವ್ಯವನ್ನೇ ಕಡೆದಿಡುತ್ತದೆ. 

ತುತ್ತ ತುದಿಯ ಝಡ್ ಪಾಯಿಂಟ್‌ನಲ್ಲಿ ಹೋಗಿ ನಿಂತರೆ ಸಾಕು, ಹಾಗೇ ಎತ್ತಿಕೊಂಡು ಹೋಗಿ ಬಿಡುತ್ತೇನೋ ಅನ್ನುವಷ್ಟು ಸುಯ್ಯೆಂದು ಬೀಸುವ ಗಾಳಿ. ಆ ಚಳಿ ಗಾಳಿಗೆ ಗಡಗಡ ನಡುಗತ್ತಲೇ ಸುತ್ತಲೂ ಕಣ್ಣು ಹಾಯಿಸಿದರೆ ಕಾಣುವ ಪರ್ವತಶ್ರೇಣಿಗಳು ಕೈ ಬೀಸಿ ಕರೆಯುತ್ತವೆ.

ಚಾರಣಿಗರಿಗಂತೂ ಇದು ಸ್ವರ್ಗ ಸಮಾನ. ಇಂತಹ ತಾಣ ನಿಜಕ್ಕೂ ದಣಿದ ಮನಗಳಿಗೆ ತಂಪನ್ನೆರೆಯುವುದರಲ್ಲಿ ಸಂದೇಹವೇ ಇಲ್ಲ. ಪ್ರಕೃತಿ ಸೌಂದರ್ಯದ ಖನಿ ಇಲ್ಲೇ ಇದೆ ಎಂದರೆ ತಪ್ಪೇನಿಲ್ಲ. ಸ್ವಲ್ಪ ಸಮಯ ಅಲ್ಲೇ ಕಾಲ ಕಳೆದು ವಾಪಸ್ ಹೊರಟೆವು. ಹೋಗುವಾಗ ಇದ್ದ ಆಯಾಸ ಬರುವಾಗ ಸ್ವಲ್ಪವೂ ಕಾಣದೇ ಇರುವುದು ಆಶ್ಚರ್ಯವೇ ಸರಿ.

ಹಾಗೆಯೇ ವಾಪಸ್ ಬರುತ್ತಾ ಮತ್ತದೇ ಶಾಂತಿ ಜಲಪಾತದಲ್ಲಿ ತಣ್ಣನೆ ನೀರನ್ನು ಕುಡಿದು ದಣಿವಾರಿಸಿಕೊಂಡು ರಸ್ತೆಗೆ ಇಳಿದು ಕಾರಿನೆಡೆಗೆ ಹೆಜ್ಜೆ ಹಾಕಿದೆವು. ನನ್ನ ಸ್ನೇಹಿತ ಕಿರುಚಲು ಆರಂಭಿಸಿದ. ‘ಅಯ್ಯೋ... ಇಲ್ನೋಡಿ ನನ್ನ ಕಾಲಿಗೆ ಜಿಗಣೆ ಅಂಟಿವೆ’ ಎಂದು. ನೋಡಿದರೆ ಅವನ ಕಾಲಿಗೆ ಎಂಟ್ಹತ್ತು ಜಿಗಣೆಗಳು ಕಚ್ಚಿಕೊಂಡಿವೆ. ನಂತರ ಉಪ್ಪು ಹಚ್ಚಿ ಅವುಗಳನ್ನು ತೆಗೆದೆವು. ಆದರೂ ರಕ್ತ ಸುರಿಯುವುದು ನಿಲ್ಲಲಿಲ್ಲ. ಎಲ್ಲರೂ ತಮ್ಮ ತಮ್ಮ ಕೈಕಾಲು ಪರಿಶೀಲಿಸಿಕೊಂಡೆವು. ಆದರೆ ಯಾರಿಗೂ ಜಿಗಣೆ ಕಾಟ ಕೊಟ್ಟಿರಲಿಲ್ಲ.

ಅಲ್ಲಿಂದ ಹೊರಟು ಕೆಮ್ಮಣ್ಣುಗುಂಡಿಯ ಹೋಟೆಲ್‌ನಲ್ಲಿ ಬಿಸಿ ಬಿಸಿಯಾದ ತಿಂಡಿ ತಿಂದು ಸಮೀಪದ ಕಲ್ಹತ್ತಗಿರಿ ಫಾಲ್ಸ್ ನೋಡಿ ಅಲ್ಲಿಂದ ಊರ ಕಡೆ ಹೊರಟೆವು. ಝಡ್ ಪಾಯಿಂಟ್ ಪ್ರವಾಸದನುಭವ ನಮ್ಮ ಮನಸ್ಸಲ್ಲಿ ಅಚ್ಚಳಿಯದೆ, ಅಲ್ಲಿನ ಪ್ರಕೃತಿ ಸಂಪತ್ತು ನಮ್ಮ ಮನಸೂರೆಗೊಂಡಿದೆ. ಆದರೆ ಝಡ್ ಪಾಯಿಂಟ್‌ನ ತುದಿಯಲ್ಲಿಂದ ಸೂರ್ಯಾಸ್ತದ ಸುಂದರ ದೃಶ್ಯ ಕಣ್ತುಂಬಿಕೊಳ್ಳಲು ಸಾಧ್ಯವಾಗಲಿಲ್ಲ.

ಇನ್ನು ಕೆಮ್ಮಣ್ಣುಗುಂಡಿಯಲ್ಲಿ ಪ್ರವಾಸಿಗರು ಉಳಿದುಕೊಳ್ಳಲು ಲಾಡ್ಜ್, ಕಾಟೇಜ್‌ಗಳ ಸೌಕರ್ಯವಿದೆ. ಅರಣ್ಯ ಇಲಾಖೆ ಸಂಪರ್ಕಿಸಿ ಕ್ಯಾಂಪ್ ಮಾಡಿಯೂ ಉಳಿಯಬಹುದು.

ಊಟ ಉಪಾಹಾರಕ್ಕೆ ಅಷ್ಟೇನು ಹೋಟೆಲ್‌ಗಳಿಲ್ಲದಿದ್ದರೂ ಹಸಿವು ಮರೆಸುವುದರಲ್ಲಿ ಸಂಶಯವಿಲ್ಲ. ಜೊತೆಯಲ್ಲಿ ಒಯ್ದ ಉಪಾಹಾರ, ನೀರಿನ ಬಾಟಲ್‌ಗಳನ್ನು ಎಲ್ಲೆಂದರಲ್ಲಿ ಎಸೆದು ನಿಸರ್ಗ ಸೌಂದರ್ಯ ಹಾಳು ಮಾಡದಿದ್ದರೆ ಈ ಚೆಲುವು ಇನ್ನಷ್ಟು ಮೆರುಗು ಪಡೆಯುತ್ತದೆ.


ಇಂತಹ ಸೌಂದರ್ಯ ನೋಡಲು ಒಮ್ಮೆಯಾದರೂ ಕೆಮ್ಮಣ್ಣುಗುಂಡಿಯ ಝಡ್ ಪಾಯಿಂಟ್‌ಗೆ ಭೇಟಿ ನೀಡಲೇಬೇಕು. ಪ್ರಕೃತಿಯೇ ನಿರ್ಮಿಸಿರುವ ಚೆಲುವನ್ನು ಕಣ್ತುಂಬಿಕೊಂಡು ಮನೋಲ್ಲಾಸ ಪಡೆಯಲು ಈ ಬಾರಿಯ ಮಳೆಗಾಲದ ನಂತರ ಇಲ್ಲಿಗೆ ಒಮ್ಮೆ ಪ್ರವಾಸ ಕೈಗೊಳ್ಳಿ.

ಹೋಗುವುದು ಹೇಗೆ: ಬೆಂಗಳೂರಿನಿಂದ ಹೋಗುವುದಾದರೆ 275 ಕಿ.ಮೀ., ಮೈಸೂರಿನಿಂದ 218 ಕಿ.ಮೀ. ಕೆಮ್ಮಣ್ಣು ಗುಂಡಿಯಿಂದ 4 ಕಿ.ಮೀ ಸಾಗಿದರೆ ಸಿಗುತ್ತದೆ ಈ ಅದ್ಭುತ ಹಸಿರು ಪರ್ವತಗಳ ರುದ್ರ ರಮಣೀಯ ತಾಣ ಝಡ್ ಪಾಯಿಂಟ್. ಖಾಸಗಿ ವಾಹನವಿದ್ದರೆ ಅನುಕೂಲ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT