ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂ 300 ಕೋಟಿ ಮೌಲ್ಯದ ಆಸ್ತಿ ವಶ

ಒತ್ತುವರಿದಾರರ ವಿರುದ್ಧ ನಗರ ಜಿಲ್ಲಾಡಳಿತ ಚಾಟಿ
Last Updated 1 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿಯಲ್ಲಿ ಒತ್ತುವರಿದಾರರ ವಿರುದ್ಧ ನಗರ ಜಿಲ್ಲಾಡಳಿತ ಬುಧವಾರ ಚಾಟಿ ಬೀಸಿದ್ದು, ಒಂದೇ ದಿನ ರೂ300 ಕೋಟಿ ಮೌಲ್ಯದ ಆಸ್ತಿ ವಶಪಡಿಸಿಕೊಂಡಿದೆ.

ನಗರ ಜಿಲ್ಲಾಧಿಕಾರಿ ವಿ.ಶಂಕರ್‌ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳ ತಂಡ ವರ್ತೂರು ಹೋಬಳಿಯ ಜುನ್ನಸಂದ್ರ ಗ್ರಾಮದಲ್ಲಿ 24 ಎಕರೆ 33 ಗುಂಟೆ ಕೆರೆ ಅಂಗಳ ಹಾಗೂ ಜಿಗಣಿ ಕೈಗಾರಿಕಾ ಪ್ರದೇಶದ ಸಮೀಪದ ಮಹಲಿಂಗಪುರದಲ್ಲಿ 37 ಎಕರೆ ಗೋಮಾಳ ಜಾಗದ ಒತ್ತುವರಿಯನ್ನು ತೆರವುಗೊಳಿಸಿದೆ.

ಜುನ್ನಸಂದ್ರ ಪ್ರಕರಣ: ಜುನ್ನಸಂದ್ರ ಗ್ರಾಮದ ಸರ್ವೆ ನಂ.32ರಲ್ಲಿ 24.33 ಎಕರೆ ಒತ್ತುವರಿಯಾಗಿತ್ತು. ಎಚ್‌.ವಿ.­ವೆಂಕಟಪ್ಪ ರೆಡ್ಡಿ, ಕೃಷ್ಣಮೂರ್ತಿ, ನಾಗರಾಜ ರೆಡ್ಡಿ, ಕೋದಂಡರಾಮ ರೆಡ್ಡಿ ಹಾಗೂ ಮಕ್ಕಳು ‘1932ರಲ್ಲಿ ಜುನ್ನಸಂದ್ರ ಗ್ರಾಮವನ್ನು ಖರೀದಿ ಮಾಡಿದ್ದೇವೆ’ ಎಂದು ಕೆರೆ ಜಮೀನಿಗೆ ಸಂಬಂಧಿಸಿದಂತೆ ನಕಲಿ ದಾಖಲೆ ಸೃಷ್ಟಿಸಿದ್ದರು. 1932ರಿಂದ 1990ರ ವರೆಗೆ ಈ ಕೆರೆ ಅಂಗಳ ಈ ಕುಟುಂಬಗಳ ವಶದಲ್ಲಿ ಇತ್ತು. 1990ರಲ್ಲಿ ಭೂನ್ಯಾಯ ಮಂಡಳಿ ಈ ಕುಟುಂಬಗಳಿಗೆ ಜಮೀನು ಮಂಜೂರು ಮಾಡಿತ್ತು.

ಇದನ್ನು ಪ್ರಶ್ನಿಸಿ ಜಿಲ್ಲಾಡಳಿತ ನ್ಯಾಯಾಲಯದ ಮೊರೆ ಹೋಗಿತ್ತು. 2007ರಲ್ಲಿ ಜಿಲ್ಲಾಡಳಿತದ ಪರವಾಗಿ ತೀರ್ಪು ಬಂದಿತ್ತು. ಈ ಜಾಗವನ್ನು 2012ರಲ್ಲಿ ಜಿಲ್ಲಾಡಳಿತವು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಹಸ್ತಾಂತರ ಮಾಡಿತ್ತು. ಆದರೆ, ಈ ಜಾಗವನ್ನು ಬಿಡಿಎ ಹಾಗೆ ಬಿಟ್ಟಿತ್ತು ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

‘ಇದು ಬೆಂಗಳೂರು ನಗರ ಜಿಲ್ಲೆಯಲ್ಲೇ ನಡೆದ ಅತ್ಯಂತ ದೊಡ್ಡ ಪ್ರಮಾಣದ ಒತ್ತುವರಿ ತೆರವು ಕಾರ್ಯಾಚರಣೆ. ರೂ200 ಕೋಟಿ ಮೌಲ್ಯದ ಆಸ್ತಿ ವಶಪಡಿಸಿಕೊಳ್ಳಲಾಗಿದೆ.  ಕೆರೆ ಅಂಗಳಕ್ಕೆ 2,000 ಲೋಡ್‌ ಮಣ್ಣು ಸುರಿದು ಸಮತಟ್ಟು ಮಾಡಿ ಅಭಿವೃದ್ಧಿಪಡಿಸಲಾಗಿತ್ತು. ಗ್ರಾಮದ ಜೋಡಿದಾರರು 50 ವರ್ಷಗಳಿಂದ ಈ ಜಮೀನು ತಮ್ಮದೆಂದು ಹೇಳಿಕೊಳ್ಳುತ್ತಿದ್ದರು. ಈ ಜಾಗಕ್ಕೆ ಬೇಲಿ ಹಾಕಲಾಗುತ್ತಿದೆ’ ಎಂದು ಬೆಂಗಳೂರು ಪೂರ್ವ ತಾಲ್ಲೂಕು ತಹಶೀಲ್ದಾರ್‌ ಡಾ.ಬಿ.ಆರ್‌.ಹರೀಶ್‌ ನಾಯ್ಕ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಮಹಲಿಂಗಪುರ ಕಾರ್ಯಾಚರಣೆ: ‘ಮಹಲಿಂಗಪುರ­ದಲ್ಲಿ ಸರ್ವೆ ಸಂಖ್ಯೆ 47ರಲ್ಲಿ 438 ಎಕರೆ ಜಾಗ ಇದೆ. ಇದರಲ್ಲಿ 110 ಎಕರೆ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ಗೆ ಮಂಜೂರಾಗಿತ್ತು. ಈ ಜಾಗಕ್ಕೆ ಗಡಿ ಗುರುತಿಸಿ ಸರ್ವೆ ಮಾಡಲು ಹೋದಾಗ ಒತ್ತುವರಿ ಮಾಡಿರುವುದು ಬೆಳಕಿಗೆ ಬಂದಿದೆ. ಈ ಜಾಗವನ್ನು ಎಂಟು ಮಂದಿ  ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದ್ದರು. ಇದರಲ್ಲಿ 37 ಎಕರೆಯ ಒತ್ತುವರಿಯನ್ನು ತೆರವು ಮಾಡಲಾಗಿದೆ.  ಈ ಜಾಗದ ಮಾರುಕಟ್ಟೆ ಮೌಲ್ಯ ರೂ100 ಕೋಟಿ’ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT