ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂ 700 ಕೋಟಿಯ 197 ಎಕರೆ ವಶ

Last Updated 20 ಡಿಸೆಂಬರ್ 2014, 19:51 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ವಿವಿಧೆಡೆ ಸರ್ಕಾರಿ ಭೂಮಿ ಒತ್ತುವರಿದಾರರ ವಿರುದ್ಧ ಕಾರ್ಯಾಚರಣೆ ಮುಂದು­ವ­ರಿಸಿ­ರುವ ಜಿಲ್ಲಾಡಳಿತ, ಶನಿವಾರ 197 ಎಕರೆ ಒತ್ತುವರಿ ತೆರವು ಮಾಡಿ ಸುಮಾರು ರೂ 700 ಕೋಟಿ ಮೌಲ್ಯದ ಆಸ್ತಿ ವಶಪಡಿಸಿಕೊಂಡಿದೆ.

ನಾಲ್ಕು ತಾಲ್ಲೂಕುಗಳಿಗೆ ಸೇರಿದ 13 ಪ್ರದೇಶಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಗರ ಜಿಲ್ಲಾಧಿಕಾರಿ ವಿ.ಶಂಕರ್‌ ನೇತೃತ್ವದಲ್ಲಿ ನಡೆಯಿತು. ಬೆಂಗಳೂರು ಉತ್ತರ (ಹೆಚ್ಚುವರಿ), ದಕ್ಷಿಣ, ಪೂರ್ವ ಹಾಗೂ ಆನೇಕಲ್‌ ತಾಲ್ಲೂಕುಗಳಲ್ಲಿ ಕಾರ್ಯಾಚರಣೆ ನಡೆಯಿತು. 37 ಜೆಸಿಬಿ ಯಂತ್ರಗಳನ್ನು ಬಳಸಿಕೊಳ್ಳ­ಲಾಯಿತು.

‘ವಕೀಲ್‌ ಸ್ಯಾಟಲೈಟ್‌ ಟೌನ್‌ಷಿಪ್‌’ ಸಂಸ್ಥೆ ಆನೇಕಲ್‌ ತಾಲ್ಲೂಕು ಸರ್ಜಾ­ಪುರ ಹೋಬಳಿ ಗೋಪಸಂದ್ರ ಗ್ರಾಮದ ಸರ್ವೆ ನಂಬರ್‌ 38ರಲ್ಲಿ ಒತ್ತುವರಿ ಮಾಡಿಕೊಂಡಿದ್ದ 2 ಎಕರೆ 38 ಗುಂಟೆ ಜಮೀನನ್ನು ತೆರವುಗೊಳಿಸ­ಲಾಯಿತು. ಸುಮಾರು ರೂ 36 ಕೋಟಿ ಮೌಲ್ಯದ ಜಮೀನನ್ನು ವಶಪಡಿಸಿಕೊಳ್ಳ­ಲಾಯಿತು.

103 ಎಕರೆ ವಶ

ಬೆಂಗಳೂರು ಪೂರ್ವ ತಾಲ್ಲೂಕಿ­ನಲ್ಲಿ ಒಂದೇ ದಿನ ಸುಮಾರು ರೂ 206 ಕೋಟಿ ಮೌಲ್ಯದ 103 ಎಕರೆ 20 ಗುಂಟೆ ಒತ್ತುವರಿಯನ್ನು ತೆರವು ಗೊಳಿಸಲಾಯಿತು.

‘ಎಚ್‌ಎಎಲ್‌ ಸಮೀಪದ ವಿಭೂ­ತಿ­ಪುರ ಗ್ರಾಮದ ಸರ್ವೆ ನಂಬರ್‌ 124ರಲ್ಲಿ 12 ಮನೆ­ಗಳನ್ನು ಧ್ವಂಸ ಮಾಡಲಾಯಿತು. ಈ ಮನೆಗಳನ್ನು ಬಾಡಿಗೆಗೆ ನೀಡಲಾಗಿತ್ತು’ ಎಂದು ಬೆಂಗಳೂರು ಪೂರ್ವ ತಹಶೀಲ್ದಾರ್‌ ಹರೀಶ್‌ ನಾಯ್ಕ್‌ ತಿಳಿಸಿ­ದರು.

‘ವಕೀಲ್‌ ಡೆವಲಪರ್ಸ್‌ ಸಂಸ್ಥೆಯ­ವರು ಈ ಪ್ರದೇಶ­ದಲ್ಲಿ ರಾಜಕಾಲುವೆ ಒತ್ತು­ವರಿ ಮಾಡಿಕೊಂಡಿದ್ದಾರೆ. ರಸ್ತೆ, ಉದ್ಯಾನ ಹಾಗೂ ಕಟ್ಟೆ ನಿರ್ಮಿಸಿದ್ದಾರೆ. ಅಲ್ಲದೇ ನಿವೇಶನಗಳನ್ನು ಮಾರಿದ್ದಾರೆ. ಎರಡು ವರ್ಷಗಳ ಹಿಂದೆಯೇ ನಾವು ನೋಟಿಸ್‌ ನೀಡಿದ್ದೆವು. ಆದರೂ ತೆರವು­ಗೊಳಿಸಿಲ್ಲ’ ಎಂದು ಜಿಲ್ಲಾಧಿಕಾರಿ ವಿ.ಶಂಕರ್‌ ತಿಳಿಸಿದರು.

‘ಒತ್ತುವರಿ ನಿವೇಶನದಲ್ಲಿ 2 ವಿಲ್ಲಾಗಳನ್ನು ಕೂಡ ನಿರ್ಮಿಸಲಾಗಿದೆ. ಕುಟುಂಬ ವಾಸವಿರುವುದ­ರಿಂದ ಸದ್ಯ ಇವುಗಳನ್ನು ನಾವು ಧ್ವಂಸಗೊಳಿಸುವು­ದಿಲ್ಲ. ಬದಲಾಗಿ ಖಾಲಿ ಮಾಡುವಂತೆ ಮಾಲೀಕರಿಗೆ ನೋಟಿಸ್‌ ನೀಡಿದ್ದೇವೆ. ಅವರಿಗೆ ಬದಲಿ ವ್ಯವಸ್ಥೆ ಮಾಡುವ ವಿಚಾರ ವಕೀಲ್‌ ಸಂಸ್ಥೆಯವರಿಗೆ ಬಿಟ್ಟದ್ದು’ ಎಂದರು.

‘ಈ ಸಂಸ್ಥೆಯ ಬೇರೆ ಬಡಾವಣೆಗಳ ಬಗ್ಗೆಯೂ ಅನುಮಾನವಿದ್ದು ಸರ್ವೆ ಮಾಡಲಾಗುವುದು. ಅಲ್ಲದೇ, ಅನಧಿಕೃತವಾಗಿ ನಿರ್ಮಿಸಲಾಗಿರುವ ಇತರೆ ಬಡಾವಣೆ­ಗಳಲ್ಲಿಯೂ ಸರ್ವೆ ನಡೆಸಿ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಹೇಳಿದರು. ಕಾರ್ಯಾಚರಣೆ ಸಂದರ್ಭ­ಗಳಲ್ಲಿ ಸಹಾಯಕ ಆಯುಕ್ತ ಎಲ್‌.ಸಿ.­ನಾಗ­ರಾಜ್‌, ಒತ್ತುವರಿ ತೆರವು ಘಟಕದ ಸಹಾ­ಯಕ ಆಯುಕ್ತ ಜಿ.ವಿ.ನಾಗ­ರಾಜ್‌, ಬೆಂಗಳೂರು ದಕ್ಷಿಣ ತಹ­ಶೀಲ್ದಾರ್‌ ಬಿ.ಆರ್‌. ದಯಾನಂದ್‌, ಆನೇಕಲ್‌ ತಹಶೀಲ್ದಾರ್‌ ಅನಿಲ್‌ ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT