ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆನೊ ಡಸ್ಟರ್ ಏ ಡಬ್ಲ್ಯು ಡಿ: ನಾವೀನ್ಯ ಮೈಗೂಡಿಸಿಕೊಂಡು...

Last Updated 20 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಮಿ­ನಿ ಎಸ್‌ಯುವಿ ಎಂಬ ಕ್ಷೇತ್ರದ ಬಗ್ಗೆ ಭಾರತೀಯರಿಗೆ ಪರಿಚಯವೇ ಇಲ್ಲದಿದ್ದ ಕಾಲದಲ್ಲಿ ರೆನೊ ಡಸ್ಟರ್‌ ಪರಿಚಯಗೊಂಡಿದ್ದು, ಭಾರತದ ಮಾರುಕಟ್ಟೆ ಇತಿಹಾಸದಲ್ಲಿ ದೊಡ್ಡ ಸಂಚಲನ ಮೂಡಲು ಕಾರಣವಾಯಿತು ಎಂದೇ ಹೇಳಬಹುದು. ಮಿನಿ ಎಸ್‌ಯುವಿ ಕಿಸೆಯಲ್ಲಿ ತೀರಾ ಹೆಚ್ಚು ಹಣವಿಲ್ಲದವರಿಗೆಂದೇ ಹೇಳಿ ಮಾಡಿಸಿದ ವಾಹನ. ಎಸ್‌ಯುವಿಯಷ್ಟು ದುಬಾರಿಯೂ ಅಲ್ಲ, ದೊಡ್ಡದೂ ಅಲ್ಲ, ಹೆಚ್ಚು ಮೈಲೇಜ್‌ ಸಹ ಸಿಗುತ್ತದೆ. ನೋಡಲು ತುಂಬ ಚೆನ್ನಾಗೂ ಇರುತ್ತದೆ. ಹೀಗಿರುವಾಗ ಮಿನಿ ಎಸ್‌ಯುವಿ ಕೊಳ್ಳುವುದು ಜಾಣ್ಮೆ ಅನ್ನುವುದು ನಿಜ ತಾನೆ?
ವಾಸ್ತವದಲ್ಲಿ ಮಿನಿ ಎಸ್‌ಯುವಿ ಭಾರತದಲ್ಲಿ ಇರಲೇ ಇಲ್ಲ ಎಂದು ಹೇಳುವುದು ತಪ್ಪಾಗುತ್ತದೆ. ಮಾರುತಿ ಸುಜುಕಿಯ ಜಿಪ್ಸಿಯನ್ನು ಮಿನಿ ಎಸ್‌ಯುವಿ ಸಾಲಿಗೇ ಸೇರಿಸಬೇಕು.

ಮಾರುತಿ ಸುಜುಕಿ ಇದನ್ನು ಒಪ್ಪಿಕೊಳ್ಳುವುದಿಲ್ಲವಾದರೂ ಅದಕ್ಕೆ ಕೆಲವು ಸಮರ್ಥನೆಗಳಿವೆ. ಜಿಪ್ಸಿ ಪರಿಚಯಗೊಂಡ ಮೊದಲ ದಿನಗಳಲ್ಲಿ, ಅದಕ್ಕೆ ಕೇವಲ 800 ಸಿಸಿ ಎಂಜಿನ್‌ ಇತ್ತು. ಈಗ 1250 ಸಿಸಿ ಎಂಜಿನ್‌ಗೆ ಬಂದು ನಿಂತಿದೆ. ಜಿಪ್ಸಿಗೆ ಇರುವುದು ಶಾರ್ಟ್‌ ಚಾಸಿಸ್‌. ಇದು ಮಿನಿ ಎಸ್‌ಯುವಿಯ ಪ್ರಮುಖ ಲಕ್ಷಣ. ಆದರೆ, ಜಿಪ್ಸಿಯಲ್ಲಿ ಎಸ್‌ಯುವಿಯಲ್ಲಿ ಇರಬೇಕಾದ ಶ್ರೇಷ್ಠ ತಂತ್ರಜ್ಞಾನಗಳಾವುವೂ ಇರದಿದ್ದ ಕಾರಣ, ಅದು ಔಟ್‌ಡೇಟ್‌ ಆಯಿತು ಎನ್ನುವುದು ನಿಜವಷ್ಟೇ. ಇನ್ನು ಮಹೀಂದ್ರಾದ ಜೀಪ್‌ಗಳು ತೀರಾ ಪುರಾತನ ಎನ್ನುವ ಪ್ರಭೇದದವು. ಬೊಲೆರೊ ಅಥವಾ ಸ್ಕಾರ್ಪಿಯೊ ಎಲ್ಲರಿಗೂ ಇಷ್ಟವಾಗದ ವಾಹನಗಳು. ಅಲ್ಲದೆ, ಅವು ಎಸ್‌ಯುವಿ ಸಾಲಿನವು. ಟಾಟಾ ಸಫಾರಿ ಕೂಡ ಅಷ್ಟೇ.

ಹಾಗಾಗಿ ಡಸ್ಟರ್‌ ಯಶಸ್ಸು ಪಡೆಯಿತು ಎನ್ನಬಹುದು. ಮಿನಿ ಎಸ್‌ಯುವಿ ಎನ್ನುವುದು ಒಂದು ಅಂಶ, ಕಡಿಮೆ ಬೆಲೆ ಅನ್ನುವುದು ಮತ್ತೊಂದು ಅಂಶ. ಆದರೆ, ಬಹುಮುಖ್ಯ ಎಂಬಂತೆ, ಡಸ್ಟರ್‌ ಹೊತ್ತು ತಂದ ಹೊಸ ವಿನ್ಯಾಸ ಎಲ್ಲರನ್ನೂ ಮೋಡಿಗೊಳಿಸಿಬಿಟ್ಟಿತು. ವಾಸ್ತವದಲ್ಲಿ ಹೇಳಿಕೊಳ್ಳುವಂತಹಾ ಶ್ರೇಷ್ಠ ಎಂಜಿನ್‌ ಡಸ್ಟರ್‌ನಲ್ಲಿ ಏನೂ ಇಲ್ಲ. ಎಸ್‌ಯುವಿ ವಾಹನವೊಂದರಲ್ಲಿ ಇರಬೇಕಾದ ಎಸಿ, ಪವರ್‌ ಸ್ಟೀರಿಂಗ್‌, ಪವರ್‌ ವಿಂಡೋಸ್‌ ಇತ್ಯಾದಿ ಇವೆಯಷ್ಟೇ. ಇವೆಲ್ಲಾ ಈಗ ಯಾವ ಕಾರ್‌ನಲ್ಲಿ ತಾನೇ ಇಲ್ಲ? ಡಸ್ಟರ್‌ನಲ್ಲೂ ಇವೆ ಅಷ್ಟೇ.

ಡಸ್ಟರ್‌ನ ನೋಟವೇ ಅದರ ಯಶಸ್ಸನ್ನು ಬಹುಪಾಲು ಆವರಿಸಿದ್ದು. ಅಂತೆಯೇ ಅದನ್ನು ಅನುಸರಿಸಿ, ಅನುಕರಿಸಿ ಫೋರ್ಡ್‌ ಎಕೊಸ್ಪೋರ್ಟ್‌ ಮುಂತಾದ ಮಿನಿ ಎಸ್‌ಯುವಿಗಳು ಬಂದವಾದರೂ ಡಸ್ಟರ್‌ನಷ್ಟು ಯಶಸ್ಸು ಸಿಗಲಿಲ್ಲ. ಡಸ್ಟರ್‍ ಅನ್ನು ಕೂಡ ತೀರಾ ಹೆಚ್ಚಿನ ಸಂಖ್ಯೆಯಲ್ಲಿ ನೋಡುತ್ತಿದ್ದರೆ ಏಕತಾನತೆ ಮೂಡುವುದು ಸಹಜ. ಇದು ಹಿಂದೊಮ್ಮೆ ಸ್ಕಾರ್ಪಿಯೊ ವಿಚಾರದಲ್ಲೂ ಆಗಿತ್ತು. ಯಾವುದೇ ವಾಹನ ತೀರಾ ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಯ ಮೇಲೆ  ಬಂದರೆ, ಅದು ಬೇಸರ ಮೂಡಿಸಿಬಿಡುತ್ತದೆ. ಆಗಲೇ ಆಯಾ ವಾಹನದ ಕಂಪೆನಿಗಳು, ಅದೇ ವಾಹನದ ಅಪ್‌ಗ್ರೇಡೆಡ್‌ ವಾಹನಗಳನ್ನು ಹೊರಬಿಡುವುದು. ಈ ಸರದಿ ಇದೀಗ ರೆನೊ ಡಸ್ಟರ್‌ಗೂ ಬಂದಿದೆ. ‘ಏಡಬ್ಲ್ಯುಡಿ’ ಎಂಬ ಹೆಸರನ್ನು ಸೇರಿಸಿಕೊಂಡು ರಸ್ತೆಗಿಳಿಯಲು ಸಜ್ಜಾಗಿದೆ.

ನೂತನ ಎಂಜಿನ್‌
ಇದು ಕೇವಲ ಕಾಸ್ಮೆಟಿಕ್‌ ಬದಲಾವಣೆಯಲ್ಲ ಎನ್ನುವುದು ಸಮಾಧಾನದ ಸಂಗತಿ. ಕೇವಲ ಬಣ್ಣ, ಸ್ಟಿಕರ್‌ ಬದಲಿಸಿ, ಹೊಸ ಆವೃತ್ತಿ ಹೊರಬಿಟ್ಟೆವು ಎನ್ನುವುದಕ್ಕಿಂತ, ಹೊಸ ಆವೃತ್ತಿ ಎಂದರೆ, ಅದು ಎಂಜಿನ್‌ನಲ್ಲಿ ಸಹ ಬದಲಾವಣೆ ಇರಬೇಕು ಎನ್ನುವುದು. ಡಸ್ಟರ್‌ನ ಎಂಜಿನ್‌ ಬದಲಾಗಿದೆ. ಕೊಂಚ ಹೆಚ್ಚು ಶಕ್ತಿಯನ್ನು ಹೊತ್ತು ಬರಲಿದೆ. ಕಾರ್‌ನ ದೇಹ ಮತ್ತು ಆತ್ಮ ಈ ಎರಡರ ಬಗ್ಗೆಯೂ ಇಲ್ಲಿ ಕೊಂಚ ಗಮನ ಹರಿಸೋಣ.

ಬದಲಾದ ವಿನ್ಯಾಸ
ಡಸ್ಟರ್‌ನ ವಿನ್ಯಾಸದ ವಿಚಾರಕ್ಕೆ ಹೇಳುವುದಾದರೆ, ಬಾಡಿ ಲೈನಿಂಗ್‌ ಅನ್ನು ಹಾಗೇ ಉಳಿಸಿಕೊಳ್ಳಲಾಗಿದೆ. ಅಂದರೆ, ಮೇಲ್ನೋಟಕ್ಕೆ ಡಸ್ಟರ್‌ನ ಮೂಲ ಆಕಾರ ಬದಲಾಗಿಲ್ಲ. ಆದರೆ, ಎದುರಿನ ಹೆಡ್‌ಲೈಟ್‌ ಅಸೆಂಬ್ಲಿ ಹೊಸ ಆಕಾರ ಪಡೆದಿದ್ದು, ಹೆಚ್ಚು ಸ್ಪೋರ್ಟಿಯಾಗಿದೆ. ಅಲ್ಲದೇ, ಈಗಿನ ಟ್ರೆಂಡ್‌ನಂತೆ ಇದು ಸ್ಮೋಕ್ಡ್‌ ದೀಪ. ಅಂದರೆ, ಮಸಿಗಟ್ಟಿದಂತೆ ಕಾಣುವ ನೋಟ. ಇದು ವಾಹನಕ್ಕೆ ಕೊಂಚ ಆಕ್ರಮಣಕಾರಿ ನೋಟ ನೀಡುತ್ತದೆ. ಜತೆಗೆ, ರೆನೊ ಲೋಗೊ ಇರುವ ಎದುರಿನ ಗ್ರಿಲ್‌ ಹೊಸತಾಗಿದೆ. ಡಸ್ಟರ್‌ನ ಹಿಂಭಾಗದಲ್ಲಿ, ಏಡಬ್ಲ್ಯುಡಿ ಎನ್ನುವ ಹೊಸ ಲೋಗೊ ಹಾಗೂ 4x4 ಎನ್ನುವ ಸ್ಟಿಕರ್‌ ಸೇರಿದೆ. ಇವಿಷ್ಟನ್ನು ಬಿಟ್ಟರೆ ಅಂತಹ ಬದಲಾವಣೆಯೇನಿಲ್ಲ. ಕಾರ್‌ ಮೇಲಿನ ರೇಲ್‌ ಗಳು, ದಪ್ಪನೆ ಬಂಪರ್‌ ಒಟ್ಟಾರೆಯಾಗಿ ಉತ್ತಮ ನೋಟವನ್ನು ಕಾರ್‌ಗೆ ನೀಡುತ್ತವೆ.

ಇನ್ನು ಕಾರ್‌ನ ಒಳಾಂಗಣದ ವಿಚಾರಕ್ಕೆ ಬರುವುದಾದರೆ, ಕಾರ್‌ನ ಡ್ಯಾಶ್‌ ಬೋರ್ಡ್‌ನಲ್ಲಿ 3 ಭಾಗಗಳುಳ್ಳ ಮೀಟರ್‌ ಕನ್ಸೋಲ್‌ ಇದೆ. ಸ್ಪೀಡೊ, ಓಡೊ ಹಾಗೂ ಮೈಲೇಜ್‌ ಕ್ಲಸ್ಟರ್‌ಗಳು. ಮೂರು ಸ್ಪೋಕ್‌ಗಳ ಹೊಸ ಸ್ಟೀರಿಂಗ್‌ ವ್ಹೀಲ್‌ ಸೇರ್ಪಡೆಯಾಗಿದೆ. ಕೆಂಪು ಹಾಗೂ ಬೂದಿ ಬಣ್ಣದ ಅತ್ಯುತ್ತಮ ನೋಟದ ಸೀಟ್‌ಗಳಿವೆ. ಇದೇ ಬಣ್ಣ ಸಂಯೋಜನೆ ಡ್ಯಾಶ್‌ ಬೋರ್ಡ್‌ನಲ್ಲೂ ಇದೆ. ಹೊರಭಾಗಕ್ಕಿಂತ ಹೆಚ್ಚಾಗಿ ಹೊಸ ಡಸ್ಟರ್‌ ಒಳಭಾಗದಲ್ಲೇ ಹೆಚ್ಚು ಬದಲಾಗಿದ್ದು, ಹೊಸ ಕಾರ್‌ ಎನ್ನುವ ಅನುಭವ ನೀಡುತ್ತದೆ. ಇವೇನೇ ಇದ್ದರೂ, ಆರಾಮದ ವಿಚಾರದಲ್ಲಿ ರಾಜಿಯಾಗದೇ ಇರುವುದು ಒಳ್ಳೆಯ ಸಂಗತಿ. ಸುಖಾಸೀನರಾಗಿ, ಚಾಲನೆ ಮಾಡುವ ಅನುಭವ ಹೊಸ ಡಸ್ಟರ್‌ನಲ್ಲಂತೂ ಸಿಕ್ಕೇ ಸಿಗುತ್ತದೆ.

ಎಂಜಿನ್‌ ಕಮಾಲ್‌
ಇನ್ನು ಎಂಜಿನ್‌ನ ವಿಚಾರಕ್ಕೆ ಬರುವುದಾದರೆ, ಎಂಜಿನ್‌ನ ಡಿಸ್ಪ್ಲೇಸ್‌ಮೆಂಟ್‌ ಬದಲಾಗಿಲ್ಲ. ಅದೇ 1461 ಸಿಸಿ ಡೀಸೆಲ್‌ ಎಂಜಿನ್‌ ಇದೆ. ಆದರೆ, ಹೊಸ ಸೇರ್ಪಡೆ ಏನೆಂದರೆ, ಎಂಜಿನ್‌ ಅನ್ನು ಸಂಪೂರ್ಣ ಕಂಪ್ಯೂಟರೀಕರಣಗೊಳಿಸಿರುವುದು. ಎಂಜಿನ್‌ 2x4 ಇಂದ 4x4 ಗೆ ಸುಲಭವಾಗಿ ಬದಲಾಗುತ್ತದೆ. ಇದು ಬಟನ್‌ ಚಾಲಿತ ಆಗಿದೆ. ಬಟನ್‌ ಒತ್ತುವ ಮೂಲಕ ಬದಲಿಸಿಕೊಳ್ಳಬಹುದು. ಹಿಂದೆ ಅದಕ್ಕೊಂದು ಪ್ರತ್ಯೇಕ ನಾಬ್‌ ಅನ್ನೇ ನೀಡಲಾಗುತ್ತು. ಆ ಜಾಗವನ್ನು ಇದು ಉಳಿಸಿದೆ. ಅಲ್ಲದೇ, ಈ ಮಿನಿ ಎಸ್‌ಯುವಿಯನ್ನು ಬಳಕೆದಾರ ಸ್ನೇಹಿ ಎನ್ನುವಂತೆ ಮಾಡಿದೆ. ವಾಹನದ ಅತ್ಯುತ್ತಮ 205 ಎಂಎಂ ಗ್ರೌಂಡ್‌ ಕ್ಲಿಯರೆನ್ಸ್‌ ಎಂತಹ ಕೆಟ್ಟ ರಸ್ತೆಯಲ್ಲೂ ಸರಾಗವಾಗಿ ಸಂಚರಿಸುವ ಅವಕಾಶವನ್ನು ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT