ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಷ್ಮೆಗೂ ಬಂತು ಪರಿಸರಸ್ನೇಹಿ ಮನೆ

Last Updated 25 ಮೇ 2015, 19:30 IST
ಅಕ್ಷರ ಗಾತ್ರ

ರೇಷ್ಮೆ ಹುಳು ಸಾಕಣೆ ಈಗ ಬಲು ಜನಪ್ರಿಯ ವಾಗಿರುವ ಕೃಷಿ. ಇದಕ್ಕಾಗಿ ಇದರ ಸಾಕಣೆ ಯಲ್ಲಿಯೂ ಹೊಸ ಹೊಸ ಸಂಶೋಧನೆಗಳು ನಡೆಯುತ್ತಲೇ ಇವೆ.

ರೇಷ್ಮೆ ಹುಳುವಿನ ಸಾಕಣೆಯಲ್ಲಿ ಉತ್ತಮ ಇಳುವರಿ ಪಡೆಯಬೇಕೆಂದರೆ ನೆನಪಿಟ್ಟು ಕೊಳ್ಳಬೇಕಿರುವ ಅತಿ ಮುಖ್ಯ ಅಂಶಗಳಲ್ಲಿ ಪ್ರಮುಖವಾದದ್ದು ಹುಳು ಸಾಕಾಣಿಕೆ ಮಾಡುವ ಮನೆ ಹಾಗೂ ಮನೆಯಲ್ಲಿ ವಾತಾವರಣವನ್ನು ಸರಿಯಾಗಿ ನಿರ್ವಹಣೆ ಮಾಡುವುದು.  ಈ ಮನೆಗಳು ರೇಷ್ಮೆ ಹುಳುಗಳ ಸ್ನೇಹಿಯಾಗಿರುವ ಜೊತೆಗೆ ಪರಿಸರಕ್ಕೂ ಸ್ನೇಹಿಯಾಗಿರಬೇಕು.

ಇಂಥದ್ದೊಂದು ಪರಿಸರಸ್ನೇಹಿ ಮನೆ ನಿರ್ಮಾಣ ಮಾಡಿದ್ದಾರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಹೊನ್ನಾಘಟ್ಟ ಗ್ರಾಮದ ಯುವ ರೇಷ್ಮೆ ಬೆಳೆಗಾರ ಎಚ್‌.ಆರ್‌.ಸುರೇಶ್‌.

ಹೊನ್ನಾಘಟ್ಟವು ರೇಷ್ಮೆ ಹಾಗೂ ಗ್ರೀನ್‌ಹೌಸ್‌ ಗಳಲ್ಲಿ ಹೂವು ಬೆಳೆಯಲು ಹೆಸರಾಗಿರುವ ಗ್ರಾಮ. ರೇಷ್ಮೆ ಬೇಸಾಯ ಹಾಗು ಹುಳು ಸಾಕಾ ಣಿಕೆಯಲ್ಲಿ ಈ ಭಾಗದಲ್ಲಿ ಸಾಕಷ್ಟು ಸುಧಾರಣೆ ಗಳಾಗಿವೆ. ಆಧುನಿಕ ಪದ್ಧತಿಗಳಿಂದಾಗಿ ರೇಷ್ಮೆ ಬೆಳೆ ಇಲ್ಲಿ ಲಾಭದಾಯಕವಾಗಿರುವ ಜೊತೆಗೆ ಕಾರ್ಮಿಕ ಕೊರತೆಯನ್ನೂ ನೀಗಿಸುತ್ತಿವೆ. ಆದರೆ ಇಲ್ಲಿನ ಬಹುತೇಕ ರೈತರು ಕಾಂಕ್ರಿಟ್‌ ಮನೆಗಳಲ್ಲೇ ರೇಷ್ಮೆ ಹುಳು ಸಾಕಾಣಿಕೆ ಮಾಡುತ್ತಾರೆ.

ಭಿನ್ನ ರೀತಿಯ ಸಾಕಣೆ
ಇವುಗಳಿಗಿಂತ ಭಿನ್ನವಾಗಿ ಆಲೋಚನೆ ಮಾಡಿರುವ ಸುರೇಶ್‌ ಅವರು, ತೆಂಗಿನ ಗರಿ, ಅಡಿಕೆ ಮರದ ದೆಬ್ಬೆಗಳು, ಬಿದಿರು ಬೊಂಬು ಗಳಿಂದಲೇ ರೇಷ್ಮೆ ಹುಳು ಸಾಕಾಣಿಕೆ ಮನೆ ನಿರ್ಮಾಣ ಮಾಡಿದ್ದಾರೆ.

79 ಉದ್ದ, 25 ಅಡಿ ಅಗಲ ಇರುವ ಪರಿಸರ ಸ್ನೇಹಿ ಮನೆ ನಿರ್ಮಾಣಕ್ಕೆ ₨ 2 ಲಕ್ಷ ಖರ್ಚು ಮಾಡಲಾಗಿದೆ. ಈ ಮನೆಯಲ್ಲಿ 200 ರಿಂದ 350 ಮೊಟ್ಟೆಗಳನ್ನು ಸಾಕಾಣಿಕೆ ಮಾಡಲು ಅವಕಾಶ ಇದೆ. ಇಷ್ಟೇ ಅಳತೆಯಲ್ಲಿ ಇಟ್ಟಿಗೆ, ಸಿಮೆಂಟ್‌, ಕಬ್ಬಿಣ ಬಳಸಿ ಮನೆ ನಿರ್ಮಿಸಲು ₨ 8 ರಿಂದ ₨10 ಲಕ್ಷ ಖರ್ಚಾಗಲಿದೆ. ಆದರೆ ಹುಳು ಸಾಕಾಣಿಗೆ ಅಗತ್ಯ ಇರುವ ಉತ್ತಮ ಹವಾಗುಣ ವನ್ನು ಸಿಮೆಂಟ್‌ ಮನೆಯಲ್ಲಿ ಬೇಸಿಗೆ ಹಾಗೂ ಚಳಿಗಾಲದಲ್ಲಿ ಕೃತಕವಾಗಿ (ಎ.ಸಿ ಬಳಸಿ) ಸೃಷ್ಟಿಸಲಾಗುತ್ತದೆ.

‘ಈ ಹಿಂದೆ ಸಾಮಾನ್ಯ ವಿಧಾನದಂತೆ ನಾನೂ ಸಿಮೆಂಟ್‌ನಲ್ಲಿಯೇ ರೇಷ್ಮೆ ಹುಳು ಸಾಕಣೆ ಮಾಡುತ್ತಿದ್ದೆ. ವಾಸಕ್ಕಾಗಿ ನಿರ್ಮಿಸಲಾಗಿದ್ದ ಮನೆಯಲ್ಲಿಯೇ ಇದರ ಸಾಕಣೆ ನಡೆದಿತ್ತು. ಆದರೆ ಹವಾಮಾನ ಸರಿ ಇಲ್ಲದೆ ರೇಷ್ಮೆ ಬೆಳೆ ಸರಿಯಾಗಿ ಬರಲಿಲ್ಲ. ಇದರಿಂದಾಗಿ ಪರಿಸರ ಸ್ನೇಹಿ ಮನೆ ನಿರ್ಮಿಸುವ ಚಿಂತನೆ ಮಾಡಿದೆ. ಇದರ ಫಲವಾಗಿ ಇಂದು ಮನೆ ನಿರ್ಮಾಣವಾಗಿದ್ದು, ಲಾಭವನ್ನು ತಂದು ಕೊಡುತ್ತಿದೆ’ ಎನ್ನುತ್ತಾರೆ ಸುರೇಶ್‌.

ರೇಷ್ಮೆ ಮನೆ ನಿರ್ಮಾಣದಲ್ಲಿ, ಅದರಲ್ಲೂ ಪರಿಸರಸ್ನೇಹಿ ಮನೆ ನಿರ್ಮಾಣದಲ್ಲಿ  ಸ್ಥಳೀಯವಾಗಿ ಗಾಳಿ ಬೀಸುವ ದಿಕ್ಕು ಹಾಗೂ ಮನೆ ಕಿಟಕಿಗಳ ಮೂಲಕ ಬಿಸಿಲು ಒಳಗೆ ಬೀಳದಂತೆ ಮುನ್ನೆಚ್ಚರಿಕೆ ವಹಿಸುವುದು ಮುಖ್ಯ. ಇಲ್ಲವಾದರೆ ಮುಂಗಾರು ಸಮಯದಲ್ಲಿನ ಬಿರುಗಾಳಿಗೆ ಹಾಗೂ ಆಷಾಡ ಮಾಸದಲ್ಲಿ ಬೀಸುವ ಗಾಳಿಗೆ ಮೇಲ್ಛಾವಣಿಗೆ ಹೊದಿಸಿರುವ ತೆಂಗಿನ ಗರಿಗಳು ಹಾರಿಹೋಗುವ ಅಪಾಯಗಳೇ ಹೆಚ್ಚು. ಪೂರ್ವ, ಪಶ್ಚಿಮಾಭಿಮುಖವಾಗಿ ಮನೆ ನಿರ್ಮಿಸಿದರೆ ಒಳಿತು ಎನ್ನುವ ಅಭಿಪ್ರಾಯ ಸುರೇಶ್‌ ಅವರದ್ದು.

ರೇಷ್ಮೆ ಮನೆಯಲ್ಲಿ ಗಾಳಿ ಸರಾಗವಾಗಿ ಒಳಗೆ ಹೋಗಿ ಬರಲು ಮನೆಯ ಸುತ್ತಲೂ 2 ರಿಂದ 3 ಅಡಿ ಅಗಲದ ಕಿಟಕಿಗಳನ್ನು ಬಿಡಲಾಗಿದೆ. ಈ ಕಿಟಕಿಗಳಿಗೆ ಸೊಳ್ಳೆಪರದೆಗಳನ್ನು ಹಾಕಲಾಗಿದೆ. ಗಾಳಿ ಹೆಚ್ಚಾದಾಗ ಕಿಟಕಿಗಳನ್ನು ದಪ್ಪನೆಯ ಪಾಲಿಥಿನ್‌ ಪೇಪರ್‌ನಿಂದ ಮುಚ್ಚಲಾಗುತ್ತದೆ. ಚಳಿಗಾಲ, ಬೇಸಿಗೆ ಎರಡು ಹವಾಮಾನಗಳಲ್ಲೂ ಮನೆಯ ಒಳಗೆ ಒಂದೇ ರೀತಿಯಾದ ವಾತಾವರಣ  ಇರಲಿದೆ.

ಇದರಿಂದ ಹುಳು ಸಾಕಾಣಿಕೆಗೆ ಅನುಕೂಲವಾಗುತ್ತದೆ. ಹುಳು ಸಾಕಾಣಿಕೆಗೆ ಅನುಕೂಲವಾಗುವ ರೀತಿಯಲ್ಲಿ ಸೋಲಾರ್‌ ವಿದ್ಯುತ್‌ ಬಲ್ಬ್‌ಗಳನ್ನು ರೂಪಿಸಲಾಗಿದೆ. ರೇಷ್ಮೆ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಸೌರಶಕ್ತಿ ವಿದ್ಯುತ್‌ ಸೌಲಭ್ಯ ಕಲ್ಪಿಸಲಾಗಿದೆ. ಇದಕ್ಕಾಗಿ ರೇಷ್ಮೆ ಇಲಾಖೆಗೆ ಮೂರು ಸಾವಿರ ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಕೃಷಿ, ತೋಟಗಾರಿಕೆ, ರೇಷ್ಮೆ ಹುಳು ಸಾಕಾಣಿಕೆ ಜೊತೆಗೆ ಸುರೇಶ್‌ ಅವರು ಉತ್ತಮ ಛಾಯಾಚಿತ್ರಕಾರರೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT