ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ಬೇಕು ಆದಾಯ ಭದ್ರತೆ

ಚರ್ಚೆ
Last Updated 3 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಸಾಮಾಜಿಕ ಆರ್ಥಿಕ ಜಾತಿ ಗಣತಿಯು ಹಳ್ಳಿಗಳ ದಾರುಣ ಸ್ಥಿತಿಯನ್ನು ಬಿಚ್ಚಿಟ್ಟಿದೆ. 13 ಕೋಟಿ ಗ್ರಾಮೀಣ ಕುಟುಂಬಗಳ ತಿಂಗಳ ಆದಾಯ ಐದು ಸಾವಿರ ರೂಪಾಯಿಗೂ ಕಡಿಮೆ! ಹಳ್ಳಿಗಾಡಿನ ಶೇ 90ರಷ್ಟು ಜನರಿಗೆ ನಿಶ್ಚಿತ ಆದಾಯದ ಖಾತರಿಯೇ ಇಲ್ಲ. ಇದರಲ್ಲಿ ಅರ್ಧಕ್ಕೂ ಹೆಚ್ಚಿನ ಜನ ಮಾನವ ಶ್ರಮವನ್ನೇ ಆದಾಯದ ಮೂಲವಾಗಿ ನೆಚ್ಚಿಕೊಂಡಿದ್ದರೆ, ಶೇ 30ರಷ್ಟು ಮಂದಿ ಕೃಷಿಯನ್ನೇ ನಂಬಿದ್ದಾರೆ. ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿರುವ 67 ಕೋಟಿ ಜನರ ದಿನದ ಸರಾಸರಿ ಗಳಿಕೆ 33 ರೂಪಾಯಿ ಮಾತ್ರ! ಅಂದರೆ ಒಂದು ಪ್ಲೇಟ್ ಇಡ್ಲಿ– ವಡೆ ಬೆಲೆ!

ಕೃಷಿ ಕುರಿತಾದ ಸರ್ಕಾರದ ನೀತಿಗಳು ಮತ್ತು ಯೋಜನೆಗಳು ರೈತರ ಹಾಗೂ ಹಳ್ಳಿಗರ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಲ್ಲ. ಹೀಗಾಗಿ ‘ಸ್ವಾವಲಂಬಿ ಗ್ರಾಮ ಆರ್ಥಿಕತೆ’ ಇನ್ನೂ ಕನಸಾಗಿಯೇ ಉಳಿದಿದೆ. ಕೃಷಿ ವಲಯಕ್ಕೆ ಒದಗಿದ ದುರ್ಗತಿಯಿಂದಾಗಿ ಗ್ರಾಮೀಣ ಭಾಗದಲ್ಲಿ ದಿನೇ ದಿನೇ ಬಡವರ ಸಂಖ್ಯೆ ಹೆಚ್ಚುತ್ತಿದೆ. ಹದಿನಾಲ್ಕು ಕೋಟಿ ಕುಟುಂಬಗಳು ಒಂದು ಸೈಕಲ್ ಕೂಡ ಕೊಳ್ಳಲಾಗದ ಸ್ಥಿತಿಯಲ್ಲಿವೆ. ಕಡಿಮೆ ಆದಾಯ, ಆಹಾರ ಮತ್ತು ಪೌಷ್ಟಿಕಾಂಶ ಅಭದ್ರತೆಯ ದೆಸೆಯಿಂದ ಕೃಷಿ ಕಾರ್ಮಿಕರು ನಗರಗಳಿಗೆ ವಲಸೆ ಹೋಗುವುದು ಹೆಚ್ಚಾಗುತ್ತಿದೆ. ರೈತರೂ ಅವರನ್ನು ಹಿಂಬಾಲಿಸುತ್ತಿದ್ದಾರೆ.

ಕೃಷಿ ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡುವುದು ಮತ್ತು ಆಹಾರ ಭದ್ರತೆ ನೀತಿಗಳೂ ಸೇರಿದಂತೆ ಸರ್ಕಾರದ ವಿವಿಧ ಯೋಜನಾ ನೀತಿಗಳು ದೇಶದ ಆಹಾರ ಉತ್ಪಾದಿಸುವ ಬಹು ದೊಡ್ಡ ವರ್ಗದ ಹಿತಾಸಕ್ತಿ ನಿರ್ಲಕ್ಷಿಸಿವೆ. ಕೃಷಿ ವೆಚ್ಚ ಗಣನೀಯವಾಗಿ ಹೆಚ್ಚುತ್ತಿದೆ. ಅತ್ಯಧಿಕ ಒಳಸುರಿ ಬಯಸುವ ಆಧುನಿಕ ಕೃಷಿಗೇ ಹೆಚ್ಚು ಬೆಂಬಲ ಕೊಡುವ ನೀತಿ ಅಳವಡಿಸಲಾಗಿದೆ. ಇದರಿಂದಾಗಿ ಸಣ್ಣ ಹಾಗೂ ಅತಿಸಣ್ಣ ರೈತರು ಸಾಲದ ಹೊರೆಯಲ್ಲಿ ಸಿಲುಕುವ ಅನಿವಾರ್ಯ ಉಂಟಾಗಿದೆ. ಕಳೆದ 16 ವರ್ಷಗಳಲ್ಲಿ ಎರಡೂವರೆ ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಳ್ಳಲು ಇದೇ ಕಾರಣ.

‘ಕೃಷಿ ಕುಟುಂಬಗಳ ಒಟ್ಟು ಆದಾಯದ ಬೆಳವಣಿಗೆ ಆಧಾರದ ಮೇಲೆ ಕೃಷಿಯ ಪ್ರಗತಿಯನ್ನು ಅಳೆಯಬೇಕು. ಲಕ್ಷಾಂತರ ಟನ್ ಆಹಾರಧಾನ್ಯ ಉತ್ಪಾದನೆಯಾಗಲಿ, ಇನ್ನಿತರ ಕೃಷಿ ಉತ್ಪಾದನೆಯೊಂದನ್ನೇ ಮಾನದಂಡವನ್ನಾಗಿ ಮಾಡುವುದಾಗಲಿ ಪ್ರಗತಿಯ ವಾಸ್ತವಿಕ ಅಳತೆಯಿಂದ ದೂರ ಹೋದಂತೆ’ ಎಂದು ರಾಷ್ಟ್ರೀಯ ರೈತರ ಆಯೋಗ ಹೇಳಿದೆ. ಆದರೆ ಸರ್ಕಾರ ಮತ್ತು ಕೃಷಿ ವಿಶ್ವ ವಿದ್ಯಾಲಯಗಳು ಅನುಸರಿಸುತ್ತಿರುವ ನೀತಿಗಳು ‘ಹೆಚ್ಚು ಹೆಚ್ಚು ಉತ್ಪಾದನೆ’ ಸುತ್ತಲೇ ಗಿರಕಿ ಹೊಡೆಯುತ್ತಿವೆ.

ಬದಲಾವಣೆಯ ಸಮಯ ಈಗ ಬಂದಿದೆ. ಕೃಷಿ ಕುಟುಂಬಗಳ ಆದಾಯವನ್ನು ಹೆಚ್ಚಿಸಲು ಸರ್ಕಾರ ಹೊಣೆ ಹೊತ್ತುಕೊಳ್ಳಬೇಕಿದೆ. ಸರ್ಕಾರ ಮಾಡುವ ವೆಚ್ಚಕ್ಕಿಂತ ಅಥವಾ ಉತ್ಪಾದನೆ ಪ್ರಮಾಣಕ್ಕಿಂತ, ಪ್ರತಿ ಕುಟುಂಬದ ವರಮಾನವನ್ನು ಅಧಿಕಗೊಳಿಸುವತ್ತ ಗಮನ ಹರಿಸಬೇಕಾಗಿದೆ. ಕೃಷಿಕರ ಬದುಕಿನ ಮಟ್ಟ ಸುಧಾರಿಸಿದರೆ, ಕೃಷಿ ವಲಯದಲ್ಲಿ ಉತ್ಪಾದನೆಯೂ ಸಹಜವಾಗಿಯೇ ಅಧಿಕವಾಗುತ್ತದೆ. ಬದುಕಿಗೆ ಅಗತ್ಯವಾದ ಆದಾಯವನ್ನು ಎಲ್ಲ ಕೃಷಿ ಕುಟುಂಬಗಳಿಗೂ ಖಚಿತವಾಗಿ ಕಲ್ಪಿಸಿಕೊಡುವ ‘ಕೃಷಿಕರ ಆದಾಯ ಖಚಿತ ಕಾಯ್ದೆ’ಯನ್ನು ರೂಪಿಸಬೇಕಾದ ಅಗತ್ಯವಿದೆ.

ಬೇಸಾಯಗಾರರಿಗೆ ಉತ್ತಮ ಆದಾಯ ಖಚಿತಗೊಳಿಸಲು ಶಾಸನಾತ್ಮಕ ಅಧಿಕಾರ ಹೊಂದಿದ ‘ಶಾಶ್ವತ ರೈತರ ಆಯೋಗ’ವೊಂದನ್ನು ಸ್ಥಾಪಿಸಬೇಕು. ಕೃಷಿ ಕಾರ್ಮಿಕರು, ಗುತ್ತಿಗೆ ಆಧಾರದಲ್ಲಿ ಭೂಮಿ ಪಡೆದು ವ್ಯವಸಾಯ ಮಾಡುವ ರೈತರು ಸೇರಿದಂತೆ ಎಲ್ಲ ವರ್ಗದ ಕೃಷಿಕ ಕುಟುಂಬಗಳಿಗೂ ಖಚಿತ ಆದಾಯ ಕಲ್ಪಿಸಿಕೊಡಲು ಈ ಆಯೋಗ ಕಾರ್ಯ ನಿರ್ವಹಿಸಬೇಕು. ಆಹಾರ, ವಸತಿ, ಆರೋಗ್ಯ, ಶಿಕ್ಷಣ ಸೇರಿದಂತೆ ಜೀವನೋಪಾಯದ ಎಲ್ಲ ವೆಚ್ಚಗಳನ್ನೂ ಒಳಗೊಂಡ ಕನಿಷ್ಠ ಜೀವನಾದಾಯವನ್ನು ಗ್ರಾಮೀಣ ಕೃಷಿ ಕುಟುಂಬಗಳಿಗೆ ಕೊಡುವುದನ್ನು ಆಯೋಗವು ಕಡ್ಡಾಯ ಮಾಡಬೇಕು. ಈ ವೆಚ್ಚ ಹಣದುಬ್ಬರಕ್ಕೆ ಪೂರಕವಾಗಿ ಇರಬೇಕು ಮತ್ತು ಇದನ್ನು ಪ್ರತಿ ವರ್ಷವೂ ಪರಿಷ್ಕರಿಸುತ್ತಿರಬೇಕು. ಕನಿಷ್ಠ ಬೆಂಬಲ ಬೆಲೆ, ಶೇಖರಣೆ, ಬೆಳೆ ಪರಿಹಾರ, ಮಾರುಕಟ್ಟೆ, ಸಾಲದ ಬೆಂಬಲ, ಬೆಳೆ ವಿಮೆ, ಪ್ರಾಕೃತಿಕ ವಿಕೋಪ ಪರಿಹಾರ, ಮಳೆಯಾಶ್ರಿತ, ಪರಿಸರಪರ ಕೃಷಿಕರಿಗೆ ಬೋನಸ್ ಇನ್ನಿತರ ಅಂಶಗಳನ್ನೂ ಆಯೋಗದ ಶಿಫಾರಸುಗಳು ಒಳಗೊಳ್ಳಬೇಕು. ಕೃಷಿಕರಿಗೆಂದು ರೂಪಿಸಲಾಗುವ ಯೋಜನೆಗಳ ನಿಜವಾದ ಲಾಭವು ರೈತರಿಗೇ ದೊರೆಯುವಂತೆ ಆಯೋಗ ನೋಡಿಕೊಳ್ಳಬೇಕಾಗುತ್ತದೆ.

ಶೇಕಡ 60ರಷ್ಟು ಜನಸಂಖ್ಯೆಯು ಕೃಷಿಯನ್ನೇ ಅವಲಂಬಿಸಿದ್ದು, ದೇಶದ ಆಹಾರ ಭದ್ರತೆ ಹಾಗೂ ಕೈಗಾರಿಕೆಗಳ ಕಚ್ಚಾವಸ್ತು ಪೂರೈಕೆಯನ್ನು ಅಬಾಧಿತವಾಗಿ ನಡೆಸಿಕೊಂಡು ಬರುತ್ತಿದೆ. ಹೀಗಾಗಿ ನ್ಯಾಯಯುತ ಆದಾಯ ಪಡೆಯಲು ಅವರು ಅರ್ಹರು. ರೈತರಿಗೆ ಖಾತರಿ ಆದಾಯ ಕಲ್ಪಿಸುವುದು ಕೇವಲ ರೈತರಿಗೆ ನೀಡುವ ನೆರವು ಎಂದು ಭಾವಿಸಬೇಕಿಲ್ಲ; ಅದು ಅವರ ಹಕ್ಕು ಕೂಡ ಹೌದು!

**************
ತೋಚಿದಂತೆ ಬೇಸಾಯ
ಕೃಷಿಕ ಸೂಕ್ತ ಮಾರ್ಗದರ್ಶನ, ತಿಳಿವಳಿಕೆ ಇಲ್ಲದೆ ಯಾವುದೋ ಬೆಳೆಗೆ ಎಲ್ಲಿಯೋ ಬೆಲೆ ಬಂತೆಂದು ತಾನೂ ಅದನ್ನೇ ಬೆಳೆಯುತ್ತಾನೆ. ಇದರ ಪರಿಣಾಮವಾಗಿ ಉತ್ಪನ್ನ ಅಧಿಕವಾಗಿ, ಬೆಲೆ ಕುಸಿತವುಂಟಾಗಿ ಆತ ಆರ್ಥಿಕ ಸಂಕಷ್ಟಕ್ಕೊಳಗಾಗುವುದು ಅನಿವಾರ್ಯವಾಗಿದೆ.
ಆಹಾರಧಾನ್ಯ, ಎಣ್ಣೆ ಕಾಳುಗಳನ್ನು ಬೆಳೆಯಲೆಂದು ನೀರಾವರಿ ಸೌಲಭ್ಯವನ್ನು ಸರ್ಕಾರ  ಒದಗಿಸಿಕೊಡುತ್ತದೆ. ಆದರೆ ಅಲ್ಲಿನ ರೈತರು ಹೆಚ್ಚು ನೀರು, ಶ್ರಮ, ವೆಚ್ಚ ಬೇಡುವ ವಾಣಿಜ್ಯ ಬೆಳೆಗಳ ಕೃಷಿ ಮಾಡುತ್ತಾರೆ. ನೀರಾವರಿಗೊಳಪಡಿಸಿದ ಉದ್ದೇಶವೂ ಈಡೇರಲಿಲ್ಲ; ರೈತನ ಪರಿಸ್ಥಿತಿಯೂ ಸುಧಾರಿಸಲಿಲ್ಲ ಎಂಬಂತಾಗುತ್ತದೆ.

ಬೆಳೆದ ಬೆಳೆಯನ್ನು ತಕ್ಕ ಕಾಲ ಬರುವವರೆಗೂ ಸಂರಕ್ಷಿಸಿ ಇರಿಸಿಕೊಳ್ಳುವ ವ್ಯವಸ್ಥೆಯಾದರೂ ಇದೆಯೇ ಎಂದರೆ ‘ಇಲ್ಲ’ ಎನ್ನುವುದೇ ಉತ್ತರ. ನಮ್ಮಲ್ಲಿ ಉಗ್ರಾಣ ನಿಗಮ ಎನ್ನುವುದೊಂದಿದೆ. ರೈತr ಬೆಳೆಗಳನ್ನು ಕಾಪಿಡಲು ಅಗತ್ಯವಾದ ಶೀತಲಗೃಹಗಳನ್ನು ನಿರ್ಮಿಸಿಕೊಡುವುದು ಇದರ ಕರ್ತವ್ಯ. ಆದರೆ ರಾಜ್ಯದಲ್ಲಿ ವೈಜ್ಞಾನಿಕವಾಗಿ ನಿರ್ಮಿಸಿರುವ ಒಂದೇ ಒಂದು ಶೀತಲಗೃಹ ಎಲ್ಲೂ ಇಲ್ಲ.  ಒಂದಷ್ಟು ಗೋದಾಮುಗಳಿವೆ. ಈ ಗೋದಾಮುಗಳಲ್ಲಿ ಧಾನ್ಯ ಸಂರಕ್ಷಣೆಗಾಗಿ ಗಂಧಕದಂತಹ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಅವಕ್ಕೆ ವೇರ್‌ಹೌಸ್‌ ಎನ್ನುವ ಹೆಸರಿಡಲಾಗಿದೆ. ಅಲ್ಲಿ ಧಾನ್ಯ ಸಂರಕ್ಷಣೆಗೆ ಬಳಸುವುದು ರಾಸಾಯನಿಕಗಳನ್ನು. ಅವುಗಳ ಉಪಯೋಗ ಮಾಡಿಕೊಳ್ಳುತ್ತಿರುವವರು ಖಾಸಗಿ ವ್ಯಾಪಾರಸ್ಥರು.

ಕಾಲ ಕಾಲಕ್ಕೆ ಅಗತ್ಯ ಮಾರ್ಗದರ್ಶನದ ಮೂಲಕ ರೈತರ ಹಿತ ಕಾಯಬೇಕಾದ ಕೃಷಿ ಸಂಘಟನೆಗಳು ಹೋರಾಟಗಾರರ ದಿರಿಸು ಧರಿಸಿಬಿಟ್ಟಿವೆ. ಇವೆಲ್ಲದರ ಫಲಿತಾಂಶವಾಗಿ ತೋಚಿದಂತೆ ಬೇಸಾಯ ಕೈಗೊಳ್ಳುವ ರೈತ, ಪರಿಸ್ಥಿತಿ ಕೈಮೀರಿದಾಗ ಸಾವನ್ನು ಬರಮಾಡಿಕೊಳ್ಳುತ್ತಿದ್ದಾನೆ.
ಕೆ.ವಿ.ಮಂಜುನಾಥ್, ಸಾಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT