ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಆತ್ಮಹತ್ಯೆ: ಬಿಜೆಪಿಯಿಂದ ವರದಿ

Last Updated 29 ಜುಲೈ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ರೈತರ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ಪಕ್ಷದ ವತಿಯಿಂದ ನಡೆಸಲಾಗಿರುವ ಅಧ್ಯಯನದ ಸಮಗ್ರ ವರದಿಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಸಲ್ಲಿಸಲಾಗುವುದು ಎಂದು  ಬಿಜೆಪಿ ಶಾಸಕ ಸಿ.ಟಿ. ರವಿ ಬುಧವಾರ ಹೇಳಿದರು.

ಪಕ್ಷದ ಮುಖಂಡರು ವಿವಿಧ ಜಿಲ್ಲೆಗಳ ರೈತರ ಮನೆಗೆ ಭೇಟಿ ನೀಡಿದ ವಿವರಗಳನ್ನು ಸುದ್ದಿಗಾರರಿಗೆ ತಿಳಿಸಿದ ಅವರು, ‘ನಾಯಕರು ಆರು ತಂಡಗಳಾಗಿ 21 ಜಿಲ್ಲೆಗಳಿಗೆ ಭೇಟಿ ನೀಡಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ’ ಎಂದರು.

‘ರೈತರ ಆತ್ಮಹತ್ಯೆಗೆ ಏನು ಕಾರಣ ಎಂದು ಕಂಡುಕೊಳ್ಳುವುದರ ಜೊತೆಗೆ ಇದಕ್ಕೆ ಏನು ಪರಿಹಾರ ಎಂಬುದನ್ನೂ ವರದಿಯಲ್ಲಿ ಪಟ್ಟಿ ಮಾಡಿದ್ದೇವೆ. ಅಲ್ಪಾವಧಿ ಮತ್ತು ದೀರ್ಘಾವಧಿ ಪರಿಹಾರ ಎಂಬ ಎರಡು ವಿಭಾಗಗಳನ್ನೂ ಮಾಡಿದ್ದೇವೆ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ನಮ್ಮ ವರದಿ ಸಲ್ಲಿಸಲಿದ್ದೇವೆ’ ಎಂದರು.

‘ಸರ್ಕಾರ ಇದುವರೆಗೂ 63 ರೈತರ ಕುಟುಂಬಗಳಿಗೆ ಮಾತ್ರ ಪರಿಹಾರ ಕೊಟ್ಟಿದೆ. 128 ಕುಟುಂಬಗಳಿಗೆ ಇನ್ನೂ ಕೊಟ್ಟಿಲ್ಲ. ತಾಂತ್ರಿಕ ಕಾರಣದ ನೆಪ ಒಡ್ಡಿ ಪರಿಹಾರ ನೀಡಲು ನಿರಾಕರಿಸುವುದೂ ನಮ್ಮ ಗಮನಕ್ಕೆ ಬಂದಿದೆ. ಪರಿಹಾರ ಕೊಡುವಾಗ ರಾಜಕೀಯ ಪ್ರಭಾವವನ್ನು ದುರ್ಬಳಕೆ ಮಾಡಿದ ಘಟನೆಗಳೂ ನಡೆದಿವೆ’ ಎಂದು ರವಿ ವಿವರಿಸಿದರು.

ಆತ್ಮಹತ್ಯೆಗೆ ಕಾರಣಗಳೇನು?
* ಕೊಳವೆ ಬಾವಿ ವೈಫಲ್ಯದಿಂದ ಹೆಚ್ಚಾದ ಸಾಲದ ಹೊರೆ

* ನೀರಿನ ಕೊರತೆಯಿಂದ ಫಸಲು ಸರಿಯಾಗಿ ಬರದೇ  ಸಾಲದ ಹೊರೆ
* ವಾಣಿಜ್ಯ ಬೆಳೆಗಳನ್ನು (ಹೊಗೆಸೊಪ್ಪು, ಕಬ್ಬು, ಆಲೂಗಡ್ಡೆ, ದಾಳಿಂಬೆ, ರೇಷ್ಮೆ ಇತ್ಯಾದಿ) ನಿರಂತರವಾಗಿ ಬೆಳೆದು ಇಳುವರಿ ಕಡಿಮೆಯಾಗಿ ಉಂಟಾಗಿರುವ ನಷ್ಟ
* ನಕಲಿ ಬೀಜ, ಗೊಬ್ಬರ ಮತ್ತು ನಕಲಿ ಕ್ರಿಮಿನಾಶಕ ಕಂಪೆನಿಗಳ ಹಾವಳಿ
* ರಾಸಾಯನಿಕಗಳ ಬಳಕೆಯಿಂದ ಕೃಷಿ ಇಳುವರಿ ಕಡಿಮೆಯಾಗಿರುವುದು
* ಸಂಕಷ್ಟದಲ್ಲಿರುವ ಸಣ್ಣ ಹಿಡುವಳಿದಾರರು (10 ಎಕರೆಗಿಂತ ಕಡಿಮೆ ಜಮೀನು ಹೊಂದಿರುವವರು) ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲು ಸಾಧ್ಯವಾಗದೇ ಇರುವುದು ಮತ್ತು ಅವುಗಳ ಬಗ್ಗೆ ಮಾಹಿತಿ ಇಲ್ಲದೇ ಇರುವುದು
* ಅಸಾಂಪ್ರದಾಯಿಕ ಮತ್ತು ಅವೈಜ್ಞಾನಿಕ ಸಾಗುವಳಿ ಪದ್ಧತಿಯ ಅನುಸರಣೆ
* ಸಾಂಪ್ರದಾಯಿಕ ಬೆಳೆಗಳಿಂದ ವಾಣಿಜ್ಯ ಬೆಳೆಗಳತ್ತ ಮುಖ ಮಾಡಿದ್ದರಿಂದ ಹೆಚ್ಚಾದ ಉತ್ಪಾದನಾ ವೆಚ್ಚ
* ದುಬಾರಿ ಬೀಜ, ರಸಗೊಬ್ಬರಗಳು
* ಲಾಭ ತರದ ಬೆಲೆ
* ಖಾಸಗಿ ಲೇವಾದೇವಿಗಾರರಿಂದ ಹೆಚ್ಚಿನ ಬಡ್ಡಿಗೆ ಸಾಲ. ಪಾವತಿಸಲು ಸಾಧ್ಯವಾಗದೇ ಇದ್ದಾಗ ಸಾಲ ನೀಡಿದವರು ಮಾಡುವ ಅಪಮಾನ
* ಅವಿಭಕ್ತ ಕುಟುಂಬಗಳಲ್ಲಿ ಸಮಸ್ಯೆಯ ಹೊಣೆಗಾರಿಕೆ. ವ್ಯವಹಾರ ನಡೆಸುವ ಯಜಮಾನನ ಮೇಲೆ ಒತ್ತಡ
* ಶಿಕ್ಷಣದಲ್ಲಿನ ಬದಲಾವಣೆ. ಮೂಲ ಕಸುಬಿಗೆ ಪರ್ಯಾಯವಾಗಿ ಉದ್ಯೋಗ ಸಿಗದೇ ಇರುವುದು
* ನಾಲ್ಕು ತಿಂಗಳಿನಿಂದ ರಾಜ್ಯದಲ್ಲಿ ಹಾಲು ಸಬ್ಸಿಡಿ ವಿತರಣೆ ಮಾಡದೇ ಇರುವುದು (₨ 229 ಕೋಟಿ ಬಾಕಿ ಇದೆ)
* ಹಾಲು ಉತ್ಪಾದಕ ಸಂಘಗಳು ಹಾಲು ಸಂಗ್ರಹಿಸುವಾಗ ಸೂಕ್ತ ಕೊಬ್ಬಿನಾಂಶ ಇಲ್ಲವೆಂದು ಉತ್ಪಾದಕರಿಗೆ ಸೂಕ್ತ ಬೆಲೆ ನೀಡದೇ ಇರುವುದು
* ವೈಯಕ್ತಿಕ ಕಾರಣಗಳು

ಅಲ್ಪಾವಧಿ ಪರಿಹಾರಗಳು
* ತಕ್ಷಣ ಹಾಲಿನ ಬಾಕಿ ಹಣ, ಸಬ್ಸಿಡಿ ಹಣ ಪಾವತಿಸಿ ಹಾಲಿನ ಬೆಲೆ ಕಡಿತಗೊಳಿಸಿರುವುದನ್ನು ತಡೆಗಟ್ಟುವುದು

* ಬೆಳೆ ಪರಿಹಾರ ಘೋಷಿಸುವುದು
* ಸಾಲ ಮನ್ನಾ ಮತ್ತು ಬಡ್ಡಿ ಮನ್ನಾ
* ಕೊಳವೆಬಾವಿ ಕೊರೆಸಲು ಸಬ್ಸಿಡಿ ನೀಡುವುದು, ವಿಮೆ ನೀತಿ ತರುವುದು
* ಬೆಂಬಲ ಬೆಲೆ ಘೋಷಿಸಿ, ಪ್ರತಿ ತಾಲ್ಲೂಕಿನಲ್ಲಿ ಖರೀದಿ ಕೇಂದ್ರಗಳನ್ನು ಸ್ಥಾಪಿಸುವುದು
* ರೈತರಲ್ಲಿ ವಿಶ್ವಾಸ ಮೂಡಿಸುವ ಯಾತ್ರೆ, ಸಂವಾದ ಕಾರ್ಯಕ್ರಮ ಆಯೋಜಿಸುವುದು

ದೀರ್ಘಾವಧಿ ಪರಿಹಾರಗಳು
* ಸಮಗ್ರ ಸಾಲ ನೀತಿ ರೂಪಿಸುವುದು
* ಎಲ್ಲ ರೈತರಿಗೆ ಬಡ್ಡಿ ರಹಿತ ಸಾಲ ನೀಡುವುದು
* ಬೆಳೆ ನೀತಿ ರೂಪಿಸುವುದು
* ಖಾತರಿ ಬೆಂಬಲ ಬೆಲೆ ಘೋಷಣೆ
* ಕೃಷಿಯಲ್ಲಿ ಯಾಂತ್ರೀಕರಣ,ರೈತರಿಗೆ ಹೆಚ್ಚು ಪ್ರಯೋಜನ ತರುವ ಸಮಗ್ರ ವೆಚ್ಚ ಖಾತರಿ ಬೆಳೆ ವಿಮೆ ಯೋಜನೆ ಜಾರಿ
* ಸಾವಯವ ಸಹಜ ಕೃಷಿಗೆ ಪ್ರೋತ್ಸಾಹ
* ನಿಗದಿತ ಅವಧಿಯಲ್ಲಿ ನೀರಾವರಿ  ಯೋಜನೆಗಳನ್ನು ಪೂರ್ಣಗೊಳಿಸುವುದು
* ಮಾರುಕಟ್ಟೆ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವುದು
* ರೈತ ಮಕ್ಕಳಿಗೆ ಕೌಶಲ್ಯ ತರಬೇತಿ ನೀಡುವುದು
* 20 ಕಿ.ಮೀ ವ್ಯಾಪ್ತಿ ಸರ್ಕಾರಿ–ಖಾಸಗಿ ಸಹಭಾಗಿತ್ವದಲ್ಲಿ ಶೈತ್ಯಾಗಾರ ನಿರ್ಮಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT