ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಮಕ್ಕಳ ಕೊರಳಿಗೆ ‘ಚಿನ್ನದ ಪದಕಗಳ ಗೊಂಚಲು’!

Last Updated 5 ಮಾರ್ಚ್ 2015, 6:22 IST
ಅಕ್ಷರ ಗಾತ್ರ

ರಾಯಚೂರು:  ಇವರು ರೈತರ ಮಕ್ಕಳು. ಚಿನ್ನದ ಪದಕಗಳ ಗೊಂಚಲನ್ನು ಕೊರಳಿಗೇರಿಸಿಕೊಂಡ ಸಂಭ್ರಮ ಮುಖದಲ್ಲಿತ್ತು. ವೇದಿಕೆಯ ಮುಂದೆ ಕುಳಿತಿದ್ದ ಈ ‘ಚಿನ್ನದ ಮಕ್ಕಳ’ ತಂದೆ–ತಾಯಿ, ಸಂಬಂಧಿಕರೂ ಈ ಕ್ಷಣಕ್ಕೆ ಸಾಕ್ಷಿಯಾದರು.

ಹೊಲ, ತೋಟಗಳಲ್ಲಿ ಮಣ್ಣಿನ ಮಕ್ಕಳಾಗಿ ದುಡಿದು ತಮಗೆ ಶಿಕ್ಷಣ ಕೊಡಿಸಿದ ತಂದೆ–ತಾಯಂದಿರ ಕೈಗೆ ಚಿನ್ನದ ಪದಕಗಳ ಗೊಂಚಲನ್ನಿಟ್ಟ ಸುರೇಶ, ಅಮರೇಶ, ರಾಘವೇಂದ್ರ ಸಂಭ್ರಮಿಸಿದರು. ಪಾಲಕರ ಮುಖದಲ್ಲಿ ತಾವೇ ಚಿನ್ನದ ಪದಕ ಪಡೆದಷ್ಟು ಖುಷಿ ಇತ್ತು.

ಬುಧವಾರ ರಾಯಚೂರು ಕೃಷಿ ವಿಶ್ವವಿದ್ಯಾಲಯದ 5ನೇ ಘಟಿಕೋತ್ಸವದಲ್ಲಿ ಹೆಚ್ಚು ಚಿನ್ನದ ಪದಕ ಗಳಿಸಿದ ಮೂವರು ವಿದ್ಯಾರ್ಥಿಗಳ ಸಂಭ್ರಮದ ಪರಿ ಇದು. ಭೀಮರಾಯನಗುಡಿ ಕೃಷಿ ಕಾಲೇಜಿನ ಬಿ.ಎಸ್ಸಿ ಕೃಷಿ ವಿಭಾಗದ ವಿದ್ಯಾರ್ಥಿ ಸುರೇಶ ಐದು ಚಿನ್ನ, ರಾಯಚೂರು ಕೃಷಿ ತಾಂತ್ರಿಕ ಕಾಲೇಜಿನ ಬಿ.ಟೆಕ್ ವಿದ್ಯಾರ್ಥಿ ಅಮರೇಶ ಐದು ಚಿನ್ನ, ರಾಯಚೂರು ಕೃಷಿ ಕಾಲೇಜಿನ ಬಿ.ಎಸ್ಸಿ ವಿದ್ಯಾರ್ಥಿ ರಾಘವೇಂದ್ರ ಜೆ., ನಾಲ್ಕು ಚಿನ್ನದ ಪದಕಗಳಿಗೆ ಭಾಜನರಾದರು.

‘ನಮಗೆ ಸ್ವಲ್ಪ ಜಮೀನಿದೆ. ಅಪ್ಪ ಅಶೋಕ ಸುರಪುರದಲ್ಲಿ ಪಾನ್‌ಶಾಪ್‌ ನಡೆಸುತ್ತಾರೆ. ತಾಯಿ ಬಸಮ್ಮ ಮನೆಯಲ್ಲಿ  ನೇಕಾರಿಕೆ ಮಾಡುತ್ತಾರೆ. ನಾನು ಕೃಷಿ ಪದವಿ ವ್ಯಾಸಂಗ ಮಾಡಬೇಕು ಎಂದು ಬಯಸಿ ಬಂದವನಲ್ಲ. ಹೆಚ್ಚು ಓದಬೇಕು ಎಂಬ ಆಸೆ ಇತ್ತು. ಕೃಷಿ ಪದವಿಗೆ ಪ್ರವೇಶ ಲಭಿಸಿದ್ದರಿಂದ ಚೆನ್ನಾಗಿ ಓದಿದೆ.  ಇದೇ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಂಡು, ಈ ಕ್ಷೇತ್ರದಲ್ಲೇ ಸೇವೆ ಸಲ್ಲಿಸುತ್ತೇನೆ’ ಎಂದು ಐದು ಚಿನ್ನದ ಪದಕ ಗಳಿಸಿರುವ ಸುರಪುರ ತಾಲ್ಲೂಕು ರಕ್ಮಾಪುರದ ಸುರೇಶ ಹೇಳಿದರು.

‘ತಂದೆ ಬಸವರಾಜ ಕೃಷಿಕ. ನಾಲ್ಕು ಎಕರೆ ಒಣ ಭೂಮಿ ಇದೆ. ನಮ್ಮದು ಆರ್ಥಿಕವಾಗಿ ಸದೃಢವಾದ ಕುಟುಂಬವಲ್ಲ. ನಾನು ಕೃಷಿಕನ ಮಗನಾಗಿರುವುದರಿಂದ ಅದೇ ವಿಷಯದಲ್ಲಿ ಶಿಕ್ಷಣ ಪಡೆಯಲು ಬಯಸಿ ಬಂದೆ. ಸದ್ಯ ಪಶ್ಚಿಮ ಬಂಗಾಳದ ಖರಗಪುರದ ಐಐಟಿಯಲ್ಲಿ ಆಹಾರ ಸಂಸ್ಕರಣೆ ತಾಂತ್ರಿಕತೆ ಕುರಿತು ಅಧ್ಯಯನ ಮಾಡುತ್ತಿದ್ದೇನೆ’ ಎಂದು ಐದು ಚಿನ್ನದ ಪದಕ ಗಳಿಸಿರುವ ಲಿಂಗಸುಗೂರು ತಾಲ್ಲೂಕು ಫೂಲಭಾವಿಯ ಅಮರೇಶ ಸಂಭ್ರಮಿಸಿದರು.

‘ಎಂಟು ಎಕರೆ ಜಮೀನಿನಲ್ಲಿ ತಂದೆ ಕೃಷಿ ಮಾಡುತ್ತಾರೆ. ನಾವು ಕೃಷಿಯನ್ನೇ ನಂಬಿಕೊಂಡು ಬದುಕುತ್ತಿದ್ದೇವೆ. ರೈತರಿಗೆ ಕೃಷಿಯ ಬಗ್ಗೆ ತಿಳಿಸುವ ದಿಶೆಯಲ್ಲಿ ಪ್ರಯತ್ನಿಸುತ್ತೇನೆ’ ಎಂದು ನಾಲ್ಕು ಚಿನ್ನದ ಪದಕ ಪಡೆದ ಚಿತ್ರದುರ್ಗ ಜಿಲ್ಲೆಯ ಮಲ್ಲಸಮುದ್ರದ ಜೆ.ರಾಘವೇಂದ್ರ ನುಡಿದಿರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT