ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಸಹಕಾರ ಬ್ಯಾಂಕ್‌ಗೆ ₹2.85 ಕೋಟಿ ಲಾಭ

ರಾಜ್ಯದಲ್ಲಿ ಎರಡನೇ ಸ್ಥಾನದ ಪಡೆದ ಶ್ರೇಯಸ್ಸು: 42ನೇ ವಾರ್ಷಿಕ ಮಹಾಸಭೆಯಲ್ಲಿ ಪ್ರಕಟ
Last Updated 6 ಅಕ್ಟೋಬರ್ 2015, 9:23 IST
ಅಕ್ಷರ ಗಾತ್ರ

ಆನೇಕಲ್: ತಾಲ್ಲೂಕಿನ ಅತ್ತಿಬೆಲೆಯ ಸಿಂಡಿಕೇಟ್ ರೈತರ ಸಹಕಾರ ಸೇವಾ ಬ್ಯಾಂಕ್‌ ₹2.85 ಕೋಟಿ ಲಾಭ ಗಳಿಸಿದ್ದು ರಾಜ್ಯದಲ್ಲಿ ಎರಡನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ ಎಂದು ಬ್ಯಾಂಕ್‌ ಅಧ್ಯಕ್ಷ ಆರ್.ವೆಂಕಟೇಶ್ ನುಡಿದರು.

ಅವರು ತಾಲ್ಲೂಕಿನ ಅತ್ತಿಬೆಲೆಯಲ್ಲಿ ಸಿಂಡಿಕೇಟ್ ರೈತರ ಸೇವಾ ಸಹಕಾರ ಬ್ಯಾಂಕ್‌ನ 42ನೇ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೇವಲ 5 ಲಕ್ಷ ಠೇವಣಿ ಹಣದಿಂದ ಪ್ರಾರಂಭಿಸಿದ ಬ್ಯಾಂಕ್‌ ರೈತ ಸ್ನೇಹಿಯಾಗಿ 42 ವರ್ಷಗಳಲ್ಲಿ ರಾಜ್ಯದಲ್ಲಿಯೇ ಉನ್ನತ ಸ್ಥಾನ ಗಳಿಸುವಲ್ಲಿ ರೈತರು ಹಾಗೂ ಗ್ರಾಹಕರು ಉತ್ತಮ ಸಹಕಾರ ನೀಡಿದ್ದಾರೆ ಎಂದರು.

ಬ್ಯಾಂಕ್‌ ವತಿಯಿಂದ ರೈತರಿಗಾಗಿ ಶೇಕಡ 3 ರ ಬಡ್ಡಿ ದರದಲ್ಲಿ ರೇಷ್ಮೇ, ತೋಟಗಾರಿಕೆ, ಕೋಳಿ ಸಾಕಾಣಿಕೆ, ಗೃಹ ಸಾಲ, ಟ್ರ್ಯಾಕ್ಟರ್ ಸಾಲ ಸೇರಿದಂತೆ ವಿವಿಧ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಎಲ್ಲಾ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ರೈತರು ಅಭಿವೃದ್ಧಿಯಾಗಬೇಕು. ಸಮರ್ಪಕವಾಗಿ ಮರು ಪಾವತಿಸುವ ಮೂಲಕ ಬ್ಯಾಂಕ್‌ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದರು.

ಎಪಿಎಂಸಿ ಅಧ್ಯಕ್ಷ ಹಾಗೂ ಬ್ಯಾಂಕ್‌ನ ನಿರ್ದೇಶಕ ಬಿ.ಜಿ.ಆಂಜಿನಪ್ಪ ಮಾತನಾಡಿ ರೈತರ ಏಳಿಗೆಗಾಗಿ ಶ್ರಮಿಸುತ್ತಿರುವ ಸಿಂಡಿಕೇಟ್ ರೈತ ಸೇವಾ ಸಹಕಾರ ಬ್ಯಾಂಕ್‌ ಜಿಲ್ಲೆಯಲ್ಲಿ ಮೊದಲ ಸ್ಥಾನ ಹಾಗೂ ರಾಜ್ಯದಲ್ಲಿ ಎರಡನೇ ಸ್ಥಾನಗಳಿಸಿರುವುದು ಹೆಮ್ಮೆಯ ವಿಷಯವಾಗಿದೆ. ಬ್ಯಾಂಕ್‌ನ ಅಭಿವೃದ್ದಿಗೆ ಮಾತ್ರ ಸೀಮಿತಗೊಳಿಸದೇ ರೈತರ ಆರೋಗ್ಯ ಮತ್ತು ಅಭಿವೃದ್ದಿಗೆ ಸಹ ಕೊಡುಗೆ ನೀಡಿದೆ.

ನಿರಂತರವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಬ್ಯಾಂಕ್‌ ವತಿಯಿಂದ ಆಯೋಜಿಸಲಾಗುತ್ತಿದೆ. 600 ಕ್ಕೂ ಹೆಚ್ಚು ಮಂದಿ ರೈತರು ಕಣ್ಣು, ಹೃದಯ ಮತ್ತಿತರ ಶಸ್ತ್ರಚಿಕಿತ್ಸೆಗಳನ್ನು ಪಡೆದಿರುವುದು ಬ್ಯಾಂಕ್‌ನ ಸೇವೆಯ ಧ್ಯೋತಕವಾಗಿದೆ ಎಂದರು.

ಬ್ಯಾಂಕ್‌ನ ಮಾಜಿ ಅಧ್ಯಕ್ಷ ಎನ್. ಬಸವರಾಜು ಮಾತನಾಡಿ ಯಾವುದೇ ಸಂಸ್ಥೆ ಅಭಿವೃದ್ದಿಯಾಗಬೇಕಾದರೆ ಆಡಳಿತದಲ್ಲಿ ದಕ್ಷತೆ ಮತ್ತು ಪಾರದರ್ಶಕತೆ ಅತ್ಯಂತ ಮುಖ್ಯವಾದ ಅಂಶಗಳಾಗಿವೆ. ಇವೆರಡೂ ಸಹ ಬ್ಯಾಂಕ್‌ನ ಆಡಳಿತದಲ್ಲಿರುವುದರಿಂದ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದರು.

ಬ್ಯಾಂಕ್‌ನ ಮಾಜಿ ಅಧ್ಯಕ್ಷ ಬಿ.ರಾಜೇಶ್, ನಿರ್ದೇಶಕರಾದ ಸೂರಿ, ನಂಜುಂಡರೆಡ್ಡಿ, ಸಂಪಂಗಿರಾಮಯ್ಯ, ಎಂ. ನಾರಾಯಣಸ್ವಾಮಿ, ವಿ.ಪಿ.
ಸುವರ್ಣ, ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ರಾಮಭಟ್, ಡಿ.ಕುಮಾರ್, ಡಿ.ಎನ್.ಶೆಟ್ಟಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT