ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ದರ ಏರಿಕೆಗೆ ಖಂಡನೆ

Last Updated 21 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ/ಐಎಎನ್ಎಸ್‌): ರೈಲು ಪ್ರಯಾಣ ದರ ಮತ್ತು ಸರಕು ಸಾಗಣೆ ದರ ಹೆಚ್ಚಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ದೇಶದ ವಿವಿಧೆಡೆ ಶನಿವಾರ ಭಾರಿ ಪ್ರತಿಭಟನೆಗಳು ನಡೆದವು.

ಆದರೆ, ‘ದರ ಹೆಚ್ಚಳ ನಮ್ಮ ಸರ್ಕಾರ ರಚನೆ ನಂತರ ತೆಗೆದುಕೊಂಡಿರುವ ನಿರ್ಧಾರವೇನಲ್ಲ. ಹಿಂದಿನ ಯುಪಿಎ ಸರ್ಕಾರವೇ ಈ ನಿರ್ಧಾರ ತೆಗೆದುಕೊಂಡಿತ್ತು. ಅದನ್ನು ನಾವು ಜಾರಿಗೊಳಿಸಿದ್ದೇವೆ ಅಷ್ಟೆ’ ಎಂದು ಬಿಜೆಪಿ ಹೇಳಿದೆ.

ದೆಹಲಿಯಲ್ಲಿ ಕಾಂಗ್ರೆಸ್‌ ಮತ್ತು ಸಿಪಿಎಂ ಕಾರ್ಯಕರ್ತರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು. ಪ್ರಯಾಣ ದರ ಏರಿಕೆ ನಿರ್ಧಾರವನ್ನು ತಕ್ಷಣವೇ ಹಿಂಪಡೆ­ಯ­ದಿದ್ದರೆ ರೈಲು ತಡೆ ಚಳ­ವಳಿ ನಡೆಸಲಾಗುವುದು ಎಂದು ಎಚ್ಚರಿಸಿದರು. ಸರಕು ಸಾಗಣೆ ದರದಲ್ಲಿ ಏರಿಕೆ ಮಾಡಿರು­ವುದರಿಂದ ಅಗತ್ಯ ವಸ್ತು­ಗಳ ಬೆಲೆ ಹೆಚ್ಚಳವಾಗುವ ಆತಂಕ ಎದುರಾಗಿದೆ. ಹೀಗಾಗಿ ದರ ಏರಿಕೆ ನಿರ್ಧಾರವನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ಪಶ್ಚಿಮ ದೆಹಲಿಯ ಜನಕಪುರಿಯಲ್ಲಿ ದೆಹಲಿ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಅರವಿಂದರ್‌ ಸಿಂಗ್‌ ಲವ್ಲಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ರೈಲು ಭವನದ ಹೊರ ಭಾಗದಲ್ಲಿ ಸಿಪಿಎಂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರಿಂದ ದೆಹಲಿಯ ಕೇಂದ್ರ ಭಾಗದಲ್ಲಿ ಸಂಚಾರ ದಟ್ಟಣೆ ಹೆಚ್ಚಿ, ವಾಹನಗಳ ಸಂಚಾರಕ್ಕೆ ತೊಡಕುಂಟಾಯಿತು.

ಕೋಲ್ಕತ್ತದಲ್ಲೂ ಪ್ರತಿಭಟನೆ: ಕೋಲ್ಕತ್ತದಲ್ಲೂ ಪ್ರದೇಶ ಕಾಂಗ್ರೆಸ್ ಸಮಿತಿ ಮತ್ತು ಸಿಪಿಎಂ ರಾಜ್ಯ ಘಟಕಗಳು ಪ್ರತಿಭಟನೆ ನಡೆಸಿವೆ.
ರಾಜ್ಯದ ವಿರೋಧ ಪಕ್ಷದ ನಾಯಕ ಸೂರ್ಯಕಾಂತ್‌ ಮಿಶ್ರಾ ಅವರ ಮುಂದಾಳತ್ವದಲ್ಲಿ ಸಿಪಿಎಂ ಮತ್ತು ಪಶ್ಚಿಮ ಬಂಗಾಳ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಅಧೀರ್ ಚೌಧರಿ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ರಾಜಭವನದ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಎಸ್‌ಯುಸಿಐ ಸದಸ್ಯರು ಪೊಲೀಸರೊಂದಿಗೆ ಘರ್ಷಣೆಗೆ ಇಳಿದರು. ಆಗ ಅವರನ್ನು ಅಲ್ಲಿಂದ ಚದುರಿಸಲಾಯಿತು.

ಮೋದಿ ಪ್ರತಿಕೃತಿಗೆ ಬೆಂಕಿ (ಲಖನೌ ವರದಿ): ಉತ್ತರ ಪ್ರದೇಶದಲ್ಲಿ ಹಲವೆಡೆ  ಪ್ರತಿಭಟನೆಗಳು ನಡೆದವು. ಸಮಾಜವಾದಿ ಪಕ್ಷ ಮತ್ತು ಬಿಜೆಪಿ ಗುಂಪುಗಳ ಮಧ್ಯೆ ಶನಿವಾರ ಸಂಜೆ ಘಷರ್ಣೆ ನಡೆಯಿತು. ಇದೇ ಸಂದರ್ಭದಲ್ಲಿ ಸಮಾಜವಾದಿ ಪಕ್ಷದ ಕಾರ್ಯಕರ್ತರು ಪ್ರಧಾನಿ ಮೋದಿ ಪ್ರತಿಕೃತಿಗೆ ಬೆಂಕಿ ಹಚ್ಚಿದರು.

ಬಿಜೆಪಿ ಮಿತ್ರಪಕ್ಷಗಳ ವಿರೋಧ (ಚೆನ್ನೈ ವರದಿ):  ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಬಿಜೆಪಿ ಮಿತ್ರ ಪಕ್ಷಗಳಾದ ಡಿಎಂಡಿಕೆ,  ಎಂಡಿಎಂಕೆಗಳು ಸರಕು ಹಾಗೂ ಪ್ರಯಾಣ ದರ ಏರಿಕೆಯನ್ನು ವಿರೋಧಿಸಿವೆ. ‘ಯುಪಿಎ ಸರ್ಕಾರದ ತಪ್ಪುಗಳನ್ನು ಸರಿಪಡಿಸುವುದಾಗಿ ಭರವಸೆ ನೀಡಿದ್ದ ಬಿಜೆಪಿ, ಅಧಿಕಾರಕ್ಕೆ ಬಂದ ಮೇಲೆ ಕೆಲವು ವಿಷಯಗಳಲ್ಲಿ ಹಿಂದಿನ ಸರ್ಕಾರದ ಧೋರಣೆಯನ್ನೇ ಅನುಸ­ರಿಸುತ್ತಿದೆ’ ಎಂದು ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಟೀಕಿಸಿದ್ದಾರೆ.

ಸೂಕ್ತ ನಿರ್ಧಾರ: ಜೇಟ್ಲಿ

ರೈಲು ಪ್ರಯಾಣ ಹಾಗೂ ಸರಕು ಸಾಗಣೆ ದರಗಳನ್ನು ಹೆಚ್ಚಿಸಿ­ರುವ ಕೇಂದ್ರ ಸರ್ಕಾರದ ಕ್ರಮ­ವನ್ನು ಹಣಕಾಸು ಸಚಿವ ಅರುಣ್‌ ಜೇಟ್ಲಿ ಸಮರ್ಥಿಸಿ­ಕೊಂಡಿದ್ದು, ‘ಇದು ಕಠಿಣ ನಿರ್ಧಾರವಾದರೂ ರೈಲ್ವೆ ಸಚಿವರು ಸೂಕ್ತ ನಿರ್ಧಾರ­ವನ್ನೇ ತೆಗೆದುಕೊಂಡಿದ್ದಾರೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT