ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆಗೆ ಬೇಕು ಆಧುನಿಕತೆಯ ಸ್ಪರ್ಶ

Last Updated 26 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಸ್ವಾತಂತ್ರ್ಯಾನಂತರ ಕೇಂದ್ರ ಸರ್ಕಾರ­ದಲ್ಲಿ ಅತಿ ಹೆಚ್ಚು ಸಂಖ್ಯೆಯ ರೈಲ್ವೆ ಸಚಿವರನ್ನು ಹೊಂದಿದ ಹೆಗ್ಗಳಿಕೆ ಕರ್ನಾಟಕದ್ದು. ಎಚ್.ಸಿ. ದಾಸಪ್ಪ, ಸಿ. ಎಂ. ಪೂಣಚ್ಚ, ಕೆಂಗಲ್ ಹನು­ಮಂತಯ್ಯ, ಟಿ.ಎ. ಪೈ, ಜಾರ್ಜ್ ಫರ್ನಾಂಡಿಸ್, ಸಿ.ಕೆ. ಜಾಫರ್ ಷರೀಫ್ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ನಂತರ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ­ದಲ್ಲಿ ಅಧಿಕಾರ­ವಹಿಸಿ­ಕೊಂಡಿ­ರುವ ಡಿ.ವಿ. ಸದಾನಂದಗೌಡ ಅವರು 8ನೆಯವರಾಗಿದ್ದಾರೆ. ಈ ಹಿಂದಿನ ಏಳು ಸಚಿವರೆಲ್ಲ ಜವಾಹರಲಾಲ್ ನೆಹರೂ ಪ್ರಣೀತ ಸಮಾಜವಾದಿ ಸಿದ್ಧಾಂತದ ಚೌಕಟ್ಟಿನಲ್ಲಿಯೇ ಕರ್ತವ್ಯ ನಿರ್ವಹಿ­ಸಿದ್ದರು.

ಈಗ ಸದಾನಂದ ಗೌಡ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲದ ಮೂಲಕ ಕಾಲ ಅಪವ್ಯಯ ಮಾಡದೇ ಭಾರತೀಯ ರೈಲ್ವೆ­ಯಲ್ಲಿ ಸಂಪೂರ್ಣ ಸುಧಾರಣೆ ತರಲು ಹೊಸ ದಿಕ್ಕಿನಲ್ಲಿ ಆಲೋಚಿಸಿ ತುರ್ತಾಗಿ ಕಾರ್ಯೋ­ನ್ಮುಖ­­ವಾಗಬೇಕಾಗಿದೆ. ರೈಲ್ವೆಗೆ ಆಧುನಿಕತೆಯ ಸ್ಪರ್ಶ ನೀಡಿ, ಪ್ರಯಾಣಿಕ ಸ್ನೇಹಿಯಾದ, ಸ್ವಚ್ಛ, ದಕ್ಷ ಮತ್ತು ಲಾಭದಾಯಕವಾಗಿ ರೈಲ್ವೆ­ಯನ್ನು ಮುನ್ನಡೆಸಬೇಕಾಗಿದೆ.
‘ಪವಿತ್ರ ಹಸು’ವಿನಂತಿರುವ ಸರ್ಕಾರಿ ಸ್ವಾಮ್ಯದ ಇತರ ಉದ್ದಿಮೆಗಳಂತೆ ರೈಲ್ವೆ ಕೂಡ ನಷ್ಟದಲ್ಲಿದ್ದು, ಅದಕ್ಕೊಂದು ಹೊಸ ರೂಪ ನೀಡುವ ನಿಟ್ಟಿನಲ್ಲಿ ಸದಾನಂದಗೌಡರು  ದೃಢ ನಿಲುವು ತಳೆಯಬೇಕಾಗಿದೆ.

ರೈಲ್ವೆ ಬಜೆಟ್‌ನಲ್ಲಿ ಪ್ರಯಾಣ ದರ ಹೆಚ್ಚಿಸಿರು­ವುದನ್ನು ವಿರೋಧ ಪಕ್ಷಗಳು ರಾಜಕೀಯ ಕಾರಣಕ್ಕೆ  ಸಹಜವಾಗಿಯೇ ವಿರೋಧಿಸಿವೆ. ರೈಲ್ವೆ ಪ್ರಯಾಣ ದರ, ತೈಲೋತ್ಪನ್ನಗಳ ಬೆಲೆ ಏರಿಕೆ ಸಂದರ್ಭ­ಗಳಲ್ಲಿ ಈ ಹಿಂದೆ ವಿರೋಧ ಪಕ್ಷವಾ­ಗಿದ್ದ ಬಿಜೆಪಿಯೂ ಇದೇ ರೀತಿ ವರ್ತಿಸಿತ್ತು. ಪ್ರತಿಯೊಂದನ್ನೂ ವಿರೋಧಿಸುವುದೇ ಪ್ರತಿಪಕ್ಷ­ಗಳ ಕೆಲಸ  ಆಗಿರುತ್ತದೆ.

ಸ್ಪರ್ಧಾತ್ಮಕ ಆರ್ಥಿಕತೆಯಲ್ಲಿ ಯಾವುದೇ ಒಂದು ಉದ್ದಿಮೆ ಸಂಸ್ಥೆ ನಷ್ಟದಲ್ಲಿ ನಡೆಯು­ತ್ತಿ­ದ್ದರೆ, ಅದನ್ನು ಮರಳಿ ಲಾಭದ ಹಾದಿಗೆ ತರಲು

ವಹಿವಾಟಿನ ಸ್ವರೂಪವನ್ನೇ ಬದಲಿಸ­ಬೇಕಾಗು­ತ್ತದೆ. ಹೊಸ ತಂತ್ರಜ್ಞಾನ, ಆಲೋಚನೆ, ದಕ್ಷತೆ ಮುಂತಾದ­ವು­ಗಳನ್ನು ಅಳವಡಿಸಿಕೊಳ್ಳ­ಬೇಕಾ­ಗುತ್ತದೆ. ಈ ಮಾತು ಭಾರತೀಯ ರೈಲ್ವೆಗೂ ಅನ್ವಯಿಸುತ್ತದೆ. ನಷ್ಟ ಸರಿದೂಗಿಸಲು ಪ್ರಯಾಣದರ ಹೆಚ್ಚಿಸಬೇಕಾಗುತ್ತದೆ. ಸರ್ಕಾರದ ಬೊಕ್ಕಸದ ನೆರವನ್ನೇ ನೆಚ್ಚಿಕೊಂಡರೆ ವಿತ್ತೀಯ ಕೊರತೆ ಇನ್ನಷ್ಟು ಹೆಚ್ಚುತ್ತದೆಯಲ್ಲದೇ ಜತೆಗೆ ಹಣದುಬ್ಬರಕ್ಕೂ ಕಾರಣವಾಗುತ್ತದೆ. ರೈಲ್ವೆ ಕೂಡ ನಿಜವಾಗಿಯೂ ನಷ್ಟಪೀಡಿತ­ವಾಗಿದ್ದರೂ ಅದಕ್ಕೆ ಕೇಂದ್ರ  ಸರ್ಕಾರದ ನಿರಂತರ ಪೋಷಣೆ ಮತ್ತು ನೆರವು ಇದ್ದೇ ಇದೆ. ಹೀಗಾಗಿ ಅದು ನಷ್ಟದಿಂದ ಹೊರಬರಲು ಹೊಸ ದಿಕ್ಕಿನತ್ತ ಆಲೋಚನೆ­ಯನ್ನೇ ಮಾಡುತ್ತಿಲ್ಲ.

ಸಮಾನ ಆಸಕ್ತಿಗಳ ಉದ್ಯಮಿಗಳು ಅಧಿಕಾರ­ದಲ್ಲಿ ಇರುವ ಸರ್ಕಾರಿ ಪ್ರಭುತಿ­ಗಳ ಜತೆ ಸೇರಿ­ಕೊಂಡು ಅಮೂಲ್ಯ ಸಂಪನ್ಮೂಲಗಳನ್ನು ದುರ್ಬ­ಳಕೆ ಮಾಡಿ­ಕೊಂಡು ಗರಿಷ್ಠಲಾಭ ಬಾಚಿಕೊಳ್ಳು­ತ್ತಾರೆ. ಈ ಬಗೆಯಲ್ಲಿ ಅಕ್ರಮ ಮಾರ್ಗ­ಗಳ ಮೂಲಕ ಗಳಿಸಿದ ಅಪಾರ ಪ್ರಮಾ­ಣದ ಹಣ­ವನ್ನು ರಾಜಕಾರಣಿ­ಗಳು ಮತ್ತು ಅಧಿಕಾರಿಗಳನ್ನು ತಮ್ಮ ನಿಯಂತ್ರಣದಲ್ಲಿಯೇ ಇರಿಸಿಕೊಳ್ಳಲು ಬಳಸುತ್ತಾರೆ. ಈ ಮೂಲಕ ತೆರಿಗೆ ನೀತಿ ಮತ್ತು ಕೈಗಾರಿಕಾ ನಿಯಮಗಳನ್ನು ತಮಗೆ ಅನುಕೂಲ­ಕರ­ವಾಗುವ ಬಗೆ­ಯಲ್ಲಿ ತಿರುಚುವಂತೆ ಮಾಡಿ ಸಾರ್ವ­ಜನಿಕ ಹಿತಾಸಕ್ತಿಯನ್ನೇ ಬಲಿಕೊಡು­ತ್ತಾರೆ. ಕೆಲವೇ ಕೆಲವು ಪ್ರಭಾವಿಗಳು ಸೇರಿ­ಕೊಂಡು,  ಇಲ್ಲವೇ ಒಕ್ಕೂಟ ರಚಿಸಿ­ಕೊಂಡು ಇಂತಹ ಮಸಲತ್ತುಗಳನ್ನು ನಿರಂತರವಾಗಿ ಮಾಡು­ತ್ತಲೇ ಇರು­ತ್ತಾರೆ. ಹೊಸಬರು ತಮ್ಮ ಸಾಮ್ರಾಜ್ಯ­ದಲ್ಲಿ ಪ್ರವೇಶಿಸದಂತೆಯೂ ನೋಡಿ­ಕೊ­ಳ್ಳುತ್ತಾರೆ.

ಈ ಬಗೆಯ ಬಂಡವಾಳಶಾಹಿ ಒಕ್ಕೂಟದಂತೆ ಸಮಾಜ­ವಾದ ಕೂಟವೂ ಹಾನಿಕಾರಕವೇ. ಬಡವರಿಗೆ ನೆರ­ವಾಗುವ ಸಿದ್ಧಾಂತದ ಹೆಸರಿನಲ್ಲಿ ಇಲ್ಲಿ ಸಂಪನ್ಮೂಲಗಳನ್ನು ಸಬ್ಸಿಡಿ ಮೂಲಕ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಹಂಚಿಕೆ ಮಾಡ­ಲಾಗುತ್ತದೆ. ಅಧಿಕಾರದಲ್ಲಿ ಇರು­ವವರು ಈ ಸಂಪತ್ತನ್ನು ಸರ್ಕಾರಿ ಸ್ವಾಮ್ಯದ ನಿಗಮ- ಮಂಡಳಿ­ಗಳ ಮೂಲಕ ತಮ್ಮ ನಿಯಂತ್ರಣದಲ್ಲಿಯೇ ಇಟ್ಟುಕೊಳ್ಳುತ್ತಾರೆ. ಇಂತಹ ಸಂಘಟನೆ­ಗಳಿಗೆ ತಮ್ಮ ಭಟ್ಟಂಗಿಗಳನ್ನೇ ನೇಮಿ­ಸುತ್ತಾರೆ.

ಬಡವರ ಹೆಸರಿನಲ್ಲಿ ಪ್ರತಿ­ಯೊಂದನ್ನೂ ಸಮ­ರ್ಥಿಸಿಕೊಳ್ಳುತ್ತಲೇ ಸಮಾನತೆಯ ಸಮಾಜ ನಿರ್ಮಾಣದ ಖೊಟ್ಟಿ ಕನಸು ಬಿತ್ತುತ್ತಾರೆ.  ಸಬ್ಸಿಡಿ ವಿತರಣೆ ಮತ್ತು ಗುತ್ತಿಗೆ ಖರೀದಿ ಹೆಸರಿ­ನಲ್ಲಿ ಸರ್ಕಾರದ ಹಣವನ್ನು ನಿರಂತರ­ವಾಗಿ ಕಬಳಿಸುತ್ತಲೇ ಇರುತ್ತಾರೆ.
ಸರ್ಕಾರಿ ಸ್ವಾಮ್ಯದ ನಾಗರಿಕ ವಿಮಾನ ಯಾನ ಸಂಸ್ಥೆ ಏರ್ ಇಂಡಿಯಾ­ದಂತೆ ಭಾರ­ತೀಯ ರೈಲ್ವೆ­ಯಲ್ಲಿಯೂ ಕೆಲವೇ ಕೆಲ ಉದ್ಯೋ­ಗಿಗಳ ಹಿತಾಸಕ್ತಿ ರಕ್ಷಣೆಗಾಗಿ ನೂರು ಕೋಟಿ ಜನರ ಕಲ್ಯಾಣ ಮತ್ತು ದೇಶದ ಹಿತಾಸಕ್ತಿಯನ್ನೇ ಒತ್ತೆ ಇಡಲಾಗಿದೆ.
ರೈಲ್ವೆಯನ್ನು ನಿಜಕ್ಕೂ ದಕ್ಷ, ಲಾಭ­ದಾಯಕ ಮತ್ತು  ಜಾಗತಿಕ ಮಟ್ಟಕ್ಕೆ ಎತ್ತರಿಸುವ ಅನಿವಾ­ರ್ಯತೆ ಈಗ ಉದ್ಭವಿಸಿದೆ. ಸಚಿವರೇ ಹೇಳು­ವಂತೆ ಭಾರತೀಯ ರೈಲ್ವೆ ಸದ್ಯಕ್ಕೆ ಕುಂಟುತ್ತಲೇ ಸಾಗಿದೆ. 

ವಿಶ್ವದಲ್ಲಿನ ರೈಲ್ವೆ ಅಪಘಾತಗಳಿಗೆ ಹೋಲಿಸಿ­ದರೆ ನಮ್ಮಲ್ಲಿ ಅಪಘಾತಗಳ ಸಂಖ್ಯೆ ಗರಿಷ್ಠ ಮಟ್ಟದಲ್ಲಿಯೇ ಇದೆ.  ರೈಲುಗಳು ಮತ್ತು ರೈಲ್ವೆ ನಿಲ್ದಾಣಗಳು ಕಲ್ಪನೆಗೆ ನಿಲುಕಲಾರದಷ್ಟು ಗಬ್ಬೆದ್ದು ಹೋಗಿವೆ. ಲಕ್ಷಾಂತರ ಪ್ರಯಾಣಿಕ­ರನ್ನು ಸರಿಯಾಗಿ ನಿರ್ವಹಿಸಲಾರದೇ ಭಾರತೀಯ ರೈಲ್ವೆ ಬಸವಳಿದಿದೆ.

ಮೆಟ್ರೊ ರೈಲ್ವೆಯ ಶ್ರೀಧರನ್ ಅವರಂತಹ ದಕ್ಷ, ಪ್ರಾಮಾಣಿಕ ಅಧಿಕಾರಿಗಳು ಕೇಂದ್ರೋ­ದ್ಯಮಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಇದ್ದಾರೆ. ಸದ್ಯದ ಸ್ಪರ್ಧಾತ್ಮಕ ಜಗತ್ತಿನಲ್ಲಿ ರೈಲ್ವೆ­ಯ­ಲ್ಲಿಯೂ ದಕ್ಷತೆ, ವಿಶ್ವಾಸಾರ್ಹತೆ ಮತ್ತು ಲಾಭ­ದಾ­ಯಕತೆ ತರಬೇಕಾದರೆ ಇಂತಹ ದಕ್ಷ ಅಧಿ­ಕಾರಿಗಳ ಸೇವೆ ಪಡೆಯಲು ರೈಲ್ವೆ ಮನಸ್ಸು ಮಾಡ­ಬೇಕು.

ಚೀನಾ, 20 ವರ್ಷಗಳಲ್ಲಿ ದೇಶ­ದಾದ್ಯಂತ ದಕ್ಷ, ಅತ್ಯಾಧುನಿಕ  ಮತ್ತು ಗರಿಷ್ಠ ವೇಗದ ರೈಲ್ವೆ ಜಾಲವನ್ನು ನಿರ್ಮಾಣ ಮಾಡಿ ಜಪಾನ್ ಮತ್ತು ಕೊರಿಯಾಗಳನ್ನು ಹಿಂದಿಕ್ಕಿದೆ. ವಿಶ್ವ­ದಾದ್ಯಂತ ಇರುವ ಗರಿಷ್ಠ ವೇಗದ ಒಟ್ಟು ರೈಲ್ವೆ ಮಾರ್ಗ­ಕ್ಕಿಂತ ಚೀನಾದಲ್ಲಿನ ರೈಲ್ವೆ ಜಾಲದ ವ್ಯಾಪ್ತಿ ಹೆಚ್ಚಿಗೆ ಇದೆ. ರೈಲ್ವೆ ಮತ್ತು ನಿಲ್ದಾಣಗಳ ಸ್ವಚ್ಛತೆಯು ಯೂರೋಪ್ ಮತ್ತು ಪಶ್ಚಿಮದ ದೇಶ­ಗಳಿಗಿಂತ ಉನ್ನತ ಮಟ್ಟದಲ್ಲಿ ಇದೆ.

ಟೀಕೆ ಮತ್ತು ಪ್ರತಿಭಟನೆಯನ್ನು ದಿಟ್ಟ­ತನ­ದಿಂದ ಎದುರಿಸುತ್ತಲೇ ಪ್ರಯಾಣ ದರ ಹೆಚ್ಚಿಸು­ವುದೇ ಎನ್‌ಡಿಎ ಸರ್ಕಾರದ ಮುಖ್ಯ ಗುರಿಯಾಗಿ­ರಬಾರದು. ಒಟ್ಟಾರೆ ರೈಲ್ವೆಯ ಸಮಗ್ರ ಸ್ವರೂ­ಪ­­­ವನ್ನೇ ಬದಲಾಯಿಸಿ, ಖಾಸಗಿಯವರಿಗೆ ಅವ­ಕಾಶ ಮಾಡಿಕೊಟ್ಟು ಗರಿಷ್ಠ ಉತ್ಪಾದನೆ  ಮತ್ತು ಸ್ಪರ್ಧಾತ್ಮಕತೆ ಹೆಚ್ಚಿಸುವ ನಿಟ್ಟಿನಲ್ಲಿಯೂ ತುರ್ತಾಗಿ ಕಾರ್ಯಪ್ರವೃತ್ತವಾಗಬೇಕಾಗಿದೆ.
ಇಂತಹ ಪ್ರಯತ್ನಗಳನ್ನು ಅನೇಕ ಸ್ಥಾಪಿತ ಹಿತಾಸಕ್ತಿಗಳು ವಿರೋಧಿ­ಸುತ್ತಲೇ ಇರುತ್ತವೆ. ತೆರಿಗೆ­ದಾರರ ಹಣಕ್ಕೆ ನ್ಯಾಯ ಒದಗಿಸುವ ಪ್ರಯತ್ನ­­ಗಳಿಗೆ ಕಾರ್ಮಿಕ ಸಂಘಟನೆಗಳೇ ಅಡ್ಡ­ಗಾಲು ಹಾಕುತ್ತವೆ.

ಯೂರೋಪ್‌ನಲ್ಲಿ  ಅಗ್ಗದ ವಿಮಾನ ಯಾನ ಸೇವೆಯು ಈಗಾಗಲೇ ನಗರಗಳ ಮಧ್ಯೆ ಪರ್ಯಾಯ ಸಂಚಾರ ಮಾಧ್ಯ­ಮ­ವಾಗಿ ಜನಪ್ರಿ­ಯತೆ ಪಡೆದುಕೊಂಡು ರೈಲ್ವೆಗಳಿಗೆ ಸವಾಲೊ­ಡ್ಡಿದೆ. ಅಮೆರಿಕದ­ಲ್ಲಿ ಜನರು ರೈಲ್ವೆ ಮೂಲಕ ಪ್ರಯಾಣಿ­ಸುವುದನ್ನು ಗಮನಾರ್ಹವಾಗಿ ಕಡಿಮೆ ಮಾಡಿದ್ದಾರೆ. ಭಾರತೀಯ ರೈಲ್ವೆ ಕೂಡ ಕಾಲಕ್ಕೆ ತಕ್ಕಂತೆ ಬದಲಾವಣೆ ಅಳವಡಿ­ಸಿಕೊಳ್ಳದಿದ್ದರೆ ಜನರು ಅಗ್ಗದ ವಿಮಾನ­ಗಳತ್ತ ಇನ್ನಷ್ಟು ಮುಖ ಮಾಡು­ವಂತಾದರೆ ನಷ್ಟದ ಪ್ರಮಾಣ ಮತ್ತಷ್ಟು ಹೆಚ್ಚುವುದರಲ್ಲಿ ಸಂದೇಹವೇ ಇಲ್ಲ.

ಭಾರತೀಯ ರೈಲ್ವೆ  ತನ್ನ ಸ್ವಾಧೀನ­ದಲ್ಲಿ ಇರುವ ಭೂಮಿಯನ್ನು ಸದ್ಬಳಕೆ ಮಾಡಿ­ಕೊ­ಳ್ಳಲು ಸೂಕ್ತ ಯೋಜನೆ ಹಮ್ಮಿಕೊಳ್ಳಬೇಕಾಗಿದೆ. ಷಾಪಿಂಗ್ ಮಾಲ್ ಮತ್ತು ಮನರಂಜನೆ ಉದ್ದೇಶಕ್ಕೆ ಈ ಭೂಮಿ ಬಳಸಿಕೊಂಡು ವರಮಾನ ವೃದ್ಧಿಸಬೇಕಾಗಿದೆ.

ಉದಾಹರಣೆಗೆ ಬೆಂಗಳೂರನ್ನೇ ತೆಗೆ­ದು­­ಕೊಂಡರೆ ಮೆಜೆಸ್ಟಿಕ್, ಯಶವಂತ­ಪುರ, ಮಲ್ಲೇ­ಶ್ವರಂ, ಕಂಟೋನ್ಮೆಂಟ್, ಕೆ.ಆರ್. ಪುರ ನಿಲ್ದಾಣ­ಗಳನ್ನು ಖಾಸಗಿಯವರ ಸಹಭಾಗಿತ್ವದಲ್ಲಿ ಆಧುನೀ­ಕರಣಗೊಳಿಸಿ ವರಮಾನ ಹೆಚ್ಚಿ­ಸುವ ವೈವಿಧ್ಯಮಯ ಯೋಜನೆಗಳನ್ನು ಕಾರ್ಯಗತ­ಗೊಳಿಸಬೇಕಾಗಿದೆ.

ಸದಾನಂದಗೌಡ ಅವರು ಮುಂದಿನ 5 ವರ್ಷ­ಗಳ ಅವಧಿಯಲ್ಲಿ ಕನಿಷ್ಠ 100 ನಿಲ್ದಾಣ­ಗಳನ್ನು ಈ ರೀತಿ ಆಧುನೀಕರ­ಣಗೊಳಿಸಲು ಕಾರ್ಯತತ್ಪರರಾಗಬೇಕು.

ಖಾಸಗಿಯವರ ಪಾಲುದಾರಿಕೆಯ ನೆರವಿ­ನಿಂದ ರೈಲ್ವೆಯ ಆಧುನೀಕರಣ ಮತ್ತು ಸುಧಾ­ರಣಾ ಪ್ರಯತ್ನಗಳು ಸಮಾಜವಾದಿಗಳಂತೆ  ಸಂಘ ಪರಿ­ವಾರಕ್ಕೂ ಪಥ್ಯವಾಗುತ್ತಿಲ್ಲ.

ಕಾಂಗ್ರೆಸ್‌ನ ಜಡ್ಡುಗಟ್ಟಿದ ಧೋರಣೆ­ಗಳಿಗೆ ಬದ­ಲಾಗಿ ವ್ಯಾಪಕ ಬದಲಾವ­ಣೆಯ ಭರವಸೆ ನೀಡಿರುವ ನರೇಂದ್ರ ಮೋದಿ ಅವರ ವರ್ಚಸ್ಸಿ­ನಿಂದ ಪ್ರಭಾವಿ­ತರಾದ ಮತದಾರರು ಬಿಜೆಪಿ ಗೆಲ್ಲಿಸಿ­ದ್ದಾರೆ. ಹೀಗಾಗಿ ಮತದಾರರ ನಿರೀಕ್ಷೆ­ಗಳು ಅಪಾರವಾಗಿವೆ. ಕಾಲ ಮಿಂಚುವ ಮೊದಲೇ ಸಚಿವ ಸದಾ­ನಂದ­ಗೌಡರು ತ್ವರಿತವಾಗಿ ಕಾರ್ಯ­ಪ್ರವೃತ್ತ­ವಾಗಿ ರೈಲ್ವೆಗೆ ಜೀವ ತುಂಬಿ ದೇಶದ ಹೆಮ್ಮೆಯ ಜೀವನಾಡಿ­ಯಾಗುವಂತೆ ಮಾಡಬೇಕಾಗಿದೆ. ಇಲ್ಲ­ದಿದ್ದರೆ ಪ್ರಯಾಣ ದರ ಹೆಚ್ಚಳದಂತಹ ಕಹಿ ಗುಳಿಗೆಗಳು ಬರೀ ರೋಗದ ಲಕ್ಷಣ­ಗಳನ್ನಷ್ಟೇ ಗುಣಪಡಿಸಬಹುದೇ ಹೊರತು, ಕಾಯಿಲೆ ಗುಣಪಡಿಸಲು ನೆರವಾಗುವುದಿಲ್ಲ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT