ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋದನದ ಮಡುವಿನಲ್ಲಿ ಪ್ರೇಮದ ಚಿತ್ತಾರಗಳು

ಚಿತ್ರ: ಎಂದೆಂದೂ ನಿನಗಾಗಿ
Last Updated 11 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಕೆಲವು ತಿಂಗಳ ಹಿಂದೆ ಹೈದರಾಬಾದ್‌ ಮತ್ತು ಹಾವೇರಿಯಲ್ಲಿ ನಡೆದ ವೋಲ್ವೊ ಬಸ್‌ ದುರಂತ­ವನ್ನು ಕಣ್ಣಮುಂದೆ ತರುವ ಚಿತ್ರ ‘ಎಂದೆಂದೂ ನಿನಗಾಗಿ’. 

ಈ ದುರಂತಗಳು ಚಿತ್ರಕ್ಕೆ ಪ್ರೇರಣೆಯಾಗ­ದಿದ್ದರೂ ಸಾಂದರ್ಭಿ­ಕವೆನಿಸುತ್ತವೆ. ಎರಡು ಬಸ್‌ಗಳ ನಡುವೆ ಸಂಭವಿಸುವ ಅಪಘಾತದ ಹಿನ್ನೆಲೆ ಮತ್ತು ಮುನ್ನೆಲೆ­ಗಳಲ್ಲಿ ಬಿಚ್ಚಿಕೊಳ್ಳುವ ಕಥನ ಬದುಕಿನ ಹಲವು ಸ್ತರಗಳನ್ನು ಕಟ್ಟಿಕೊಡುತ್ತಲೇ, ಪ್ರೀತಿಯ ರಮ್ಯತೆ ಹಾಗೂ ಪರ್ಯವಸಾನದ ಗಾಢ ಚಿತ್ರಣದ ಮೂಲಕ ಸಹೃದಯನನ್ನು ಆರ್ದ್ರಗೊಳಿಸುತ್ತವೆ. ಸರಳ ಕಥೆ, ಆರಂಭದಲ್ಲಿಯೇ ಅಂತ್ಯವನ್ನು ತೋರಿಸುವ ವಿಭಿನ್ನ ನಿರೂಪಣೆ ಮತ್ತು ನೋವು ನಲಿವಿನ ಹದವಾದ ಮಿಶ್ರಣದ ‘ಎಂದೆಂದೂ...’ ಪ್ರೇಕ್ಷಕನ ಮನಸ್ಸಿಗೆ ತಟ್ಟಿ­ದರೆ ಅದರ ಶ್ರೇಯಸ್ಸು ಮೂಲ ಚಿತ್ರಕ್ಕೆ ಸಲ್ಲುತ್ತದೆ.

ರೀಮೇಕ್ ಸಿನಿಮಾಗಳನ್ನು ತರುವಲ್ಲಿ ಪಳಗಿರುವ ನಿರ್ದೇಶಕ ಮಹೇಶ್‌ ರಾವ್‌ ಕೈಗೆತ್ತಿಕೊಂಡಿದ್ದು ತಮಿಳಿನ ಯಶಸ್ವಿ ಚಿತ್ರ ‘ಎಂಗೆಯುಂ ಎಪ್ಪೊದುಂ’ ಅನ್ನು. ಮೂಲಚಿತ್ರಕ್ಕೆ ನಿಷ್ಠರಾಗಿರುವುದನ್ನು ಮರೆಯದ ಮಹೇಶ್‌ ರಾವ್‌ ಪ್ರತಿ ಸನ್ನಿವೇಶವನ್ನೂ ಅನುಸರಿಸಿ­ದ್ದಾರೆ. ರೀಮೇಕ್‌ ಅನ್ನು ನೆಚ್ಚಿಕೊಂಡಿದ್ದರೂ ಪರ­ಭಾಷೆಯ ಉತ್ತಮ ಕಥೆಗಳನ್ನೇ ಎರವಲು ತರುವ ಅವರು ಆಯ್ಕೆಯ ನಿಟ್ಟಿನಲ್ಲಿ ಮತ್ತೆ ಗಮನಸೆಳೆಯು­ತ್ತಾರೆ. ಆದರೆ ಮೂಲಚಿತ್ರ ನೀಡುವ ಪರಿಣಾಮವನ್ನು ಮರುಸೃಷ್ಟಿ ಕಾರ್ಯದಲ್ಲಿ ನೀಡುವಲ್ಲಿ ಸಫಲರಾಗಿಲ್ಲ. ‘ವಳಕ್ಕು ಎನ್‌ 18/9’ ಚಿತ್ರವನ್ನು ಕನ್ನಡೀಕರಣ­ಗೊಳಿ­ಸು­ವಾಗ ತೋರಿಸಿದ್ದ ಶ್ರದ್ಧೆ ಇಲ್ಲಿ ಮರೆಯಾಗಿದೆ.

ಸೂಕ್ಷ್ಮ ಅಂಶಗಳನ್ನು ಕಟ್ಟಿಕೊಡುವಲ್ಲಿನ ಅವರ ದಿವ್ಯ ನಿರ್ಲಕ್ಷ್ಯ ಆರಂಭದ ಸನ್ನಿವೇಶದಲ್ಲಿಯೇ ಪ್ರಕಟಗೊಳ್ಳುತ್ತದೆ. ತಮಿಳು ಚಿತ್ರದಲ್ಲಿನ ಅಪಘಾತದ ದೃಶ್ಯಾವಳಿಯನ್ನು ಕಾಪಿ–ಪೇಸ್ಟ್‌ ಮಾಡಿ ಜಾಣ್ಮೆ ಮೆರೆಯುವಾಗ ಎಡವಿದ್ದಾರೆ. ತಮಿಳುನಾಡು ಸರ್ಕಾರಿ ಬಸ್‌ಗೆ (ಎಸ್‌ಇಟಿಸಿ) ಕರ್ನಾಟಕದ ನೋಂದಣಿ ಸಂಖ್ಯೆ ಅಂಟಿಸಿ­ದ್ದಾರೆ. ಈ ಬಗೆಯ ಯಡವಟ್ಟುಗಳು ಆಗಾಗ್ಗೆ ಎದುರಾ­ಗುತ್ತವೆ. ಅಪಘಾತದ ನೋವು ಒಂದೆಡೆಯಾದರೆ, ಅದರ ನಡುವೆ ಫ್ಲ್ಯಾಶ್‌ಬ್ಯಾಕ್‌ಗೆ ಕೊಂಡೊಯ್ಯುವ ಎರಡು ಸುಂದರ ಪ್ರೇಮಕಥನಗಳ ನಲಿವು ಆಪ್ತವಾ­ಗುತ್ತಾ ಹೋಗುತ್ತದೆ. ಮೂಲ ಕಥೆಯ ಮೇಲಿರುವ ಬದ್ಧತೆಯನ್ನು ನಿರ್ದೇಶಕರು ಪ್ರೀತಿಯ ಕೊನರು, ಕನವರಿಕೆಗಳ ಚಿತ್ರಣದಲ್ಲಿ ತೋರಿಸಿಲ್ಲ. ಪ್ರೀತಿ ಹಿತವೆನಿಸಿ­ದರೂ ಭಾವನೆಗಳು ತೆಳುವಾಗಿ ಹರಡಿಹೋಗುತ್ತವೆ.

ಇಲ್ಲಿ ಎರಡು ಯುವ ಜೋಡಿಗಳಿವೆ. ಒಂದು ಜೋಡಿಯದು ಪ್ರಬುದ್ಧ ಮತ್ತು ಮುಗ್ಧ ಪ್ರೇಮಗಳ ಸಂಗಮ. ಇನ್ನೊಂದು ಅಲ್ಪಕಾಲದಲ್ಲಿ ಚಿಗುರಿದ ಅವ್ಯಕ್ತ ಪ್ರೀತಿಯ ಸಂಬಂಧ. ಒಂದು ಜೋಡಿಯದು ಗೆಲ್ಲುವ ತವಕ, ಇನ್ನೊಂದರದ್ದು ಸೇರುವ ಉತ್ಸಾಹ. ಈ ಎರಡೂ ಪ್ರೀತಿಗಳಲ್ಲಿ ಒಂದಕ್ಕೆ ಹೆದ್ದಾರಿಯ ದುರಂತ ಅಂತ್ಯ ನೀಡಿದರೆ, ಇನ್ನೊಂದರ ಆರಂಭಕ್ಕೆ ಕಾರಣವಾಗುತ್ತದೆ. ಇದರ ನಡುವೆ ಪತ್ನಿಯನ್ನು ಬಿಟ್ಟಿರಲಾರದೆ ಬಸ್‌ ಹತ್ತುವ ಪತಿ, ಐದು ವರ್ಷದಲ್ಲಿ ಮೊದಲ ಬಾರಿಗೆ ಮಗು­ವನ್ನು ನೋಡುವ ಕಾತರದಲ್ಲಿರುವ ತಂದೆ, ಅಕ್ಕ ಪಕ್ಕದ ಸೀಟುಗಳಲ್ಲಿ ಕುಳಿತು ಪ್ರೀತಿಯಲ್ಲಿ ಬೀಳುವ ಎಳೆ ಮನಸುಗಳು, ಹೀಗೆ ಹಲವು ಪುಟ್ಟ ಪಾತ್ರಗಳ ಅಂತ್ಯ ಗಾಢವಾಗಿ ತಟ್ಟುತ್ತವೆ.

ಮೊದಲ ಚಿತ್ರದಲ್ಲಿಯೇ ವಿವೇಕ್‌ ಗಮನಾರ್ಹ ಅಭಿನಯ ನೀಡಿದ್ದಾರೆ. ದೀಪಾ ಸನ್ನಿಧಿ ನೇರಮಾತಿನ ದಿಟ್ಟೆಯಾಗಿ ಗಮನ ಸೆಳೆಯುತ್ತಾರೆ. ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿರುವ ಜೋಡಿ ಅನೀಶ್‌ ಮತ್ತು ಸಿಂಧು ಲೋಕನಾಥ್‌ ಕಾಫಿಯ ಸ್ವಾದವನ್ನು ಮತ್ತೆ ನೀಡಿದೆ. ರಿಕೃಷ್ಣ ಸಂಗೀತದಲ್ಲಿ ಮಾಧುರ್ಯದ ಹದವಿದೆ. ಮೂಲಚಿತ್ರದ ಸೊಗಡು, ನೈಪುಣ್ಯವನ್ನು ಕಟ್ಟಿಕೊಡುವಲ್ಲಿ ಜೈ ಆನಂದ್‌ ಛಾಯಾಗ್ರಹಣ ವಿಫಲವಾಗಿದೆ.

ನಿರ್ಮಾಪಕರು: ಎ. ನರಸಿಂಹನ್‌ ಮತ್ತು ವಿಜಯಾ
ನಿರ್ದೇಶಕ:    ಮಹೇಶ್‌ ರಾವ್‌
ತಾರಾಗಣ:    ವಿವೇಕ್‌, ದೀಪಾ ಸನ್ನಿಧಿ, ಅನೀಶ್‌ ತೇಜೇಶ್ವರ್‌, ಸಿಂಧು ಲೋಕನಾಥ್‌ಅಭಯಸಿಂಹ, ರಶ್ಮಿ ಅಭಯಸಿಂಹ, ಕಾರ್ತಿಕ್‌ ಶರ್ಮಾ ಮತ್ತಿತರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT