ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಕಾ ನೆಲದಲ್ಲಿ ‘ಯುವಪಡೆ’ಯ ದರ್ಬಾರ್‌

ಕ್ರಿಕೆಟ್‌: ಕೊನೆಯ ದಿನ ಅಶ್ವಿನ್‌, ಇಶಾಂತ್‌ ಮೊನಚಿನ ದಾಳಿ, ಮ್ಯಾಥ್ಯೂಸ್‌ ಹೋರಾಟ ವ್ಯರ್ಥ
Last Updated 1 ಸೆಪ್ಟೆಂಬರ್ 2015, 19:35 IST
ಅಕ್ಷರ ಗಾತ್ರ

ಕೊಲಂಬೊ:  ಬಹುತೇಕ ಯುವ ಆಟಗಾರರನ್ನು ಒಳಗೊಂಡ ಭಾರತ ತಂಡದ ಶಕ್ತಿ ಏನೆಂಬುದು ಸಿಂಹಳೀಯ ನಾಡಿನಲ್ಲಿ ಸಾಬೀತಾಗಿದೆ. ಅನುಭವಿಗಳ ಬಲ ಕಡಿಮೆಯಿದ್ದರೂ ‘ನಾವು ಯಾರಿಗೂ ಕಡಿಮೆ ಯಿಲ್ಲ’ ಎನ್ನುವುದನ್ನು ವಿರಾಟ್‌ ಕೊಹ್ಲಿ ನಾಯಕತ್ವದ ಪ್ರವಾಸಿ ತಂಡ ತೋರಿಸಿಕೊಟ್ಟಿದೆ.

ಮಂಗಳವಾರ ಭಾರತದ ಕ್ರಿಕೆಟ್‌ ಪ್ರೇಮಿಗಳು ಭಾರಿ ಖುಷಿಯಲ್ಲಿದ್ದರು. ಏಕೆಂದರೆ, ತಂಡ 22 ವರ್ಷಗಳ ಬಳಿಕ ಶ್ರೀಲಂಕಾದಲ್ಲಿ ಟೆಸ್ಟ್‌ ಸರಣಿ ಜಯಿಸಿದೆ. ಅದರಲ್ಲೂ ವಿಶೇಷವಾಗಿ ಈ ಗೆಲುವು ವಿರಾಟ್‌ ಕೊಹ್ಲಿ ಅವರಲ್ಲಿ ಹೊಸ ಚೈತನ್ಯ ತುಂಬಿದೆ. ಕೊಹ್ಲಿ ಟೆಸ್ಟ್ ತಂಡದ ನಾಯಕರಾದ ಬಳಿಕ ಭಾರತ ಜಯಿಸಿದ ಚೊಚ್ಚಲ ಸರಣಿಯಿದು.

ಭಾರತ ತಂಡ 2011ರಲ್ಲೂ ಲಂಕಾ ಪ್ರವಾಸ ಕೈಗೊಂಡಿತ್ತು. ಟೆಸ್ಟ್‌ ಪರಿಣತ ಬ್ಯಾಟ್ಸ್‌ಮನ್‌ಗಳಾದ ರಾಹುಲ್ ದ್ರಾವಿಡ್‌, ವಿವಿಎಸ್‌ ಲಕ್ಷ್ಮಣ್‌ ತಂಡದಲ್ಲಿದ್ದರು. ಸ್ಫೋಟಕ ಆಟಕ್ಕೆ ಹೆಸರಾಗಿದ್ದ ವೀರೇಂದ್ರ ಸೆಹ್ವಾಗ್‌ ಕೂಡ ಇದ್ದರು. ಸಚಿನ್‌ ತೆಂಡೂಲ್ಕರ್‌, ಮಹೇಂದ್ರ ಸಿಂಗ್ ದೋನಿ ಅವರ ಬಲವೂ ತಂಡಕ್ಕಿತ್ತು. ಆದರೂ, ಭಾರ ತಕ್ಕೆ ಸರಣಿ ಜಯಿಸಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಈ ಬಾರಿಯ ‘ಯುವಪಡೆ’ಯ ಸಾಧನೆ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.  ಮೂರನೇ ಟೆಸ್ಟ್‌ನಲ್ಲಿ 117 ರನ್‌ ಗೆಲುವು ದಾಖಲಿಸಿದ ಭಾರತ ಸರಣಿಯನ್ನು 2–1ರಲ್ಲಿ ಗೆದ್ದುಕೊಂಡಿತು.

ಎಸ್‌ಎಸ್‌ಸಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ಆತಿಥೇಯರ ಗೆಲುವಿಗೆ 386 ರನ್‌ ಗುರಿ ನೀಡಿತ್ತು. ಸವಾಲಿನ ಗುರಿಯ ಎದುರು ಪ್ರಬಲ ಹೋರಾಟ ನಡೆಸಿದ ಲಂಕಾ ಕೊನೆಯ ದಿನದಾಟ ಮುಗಿಯಲು ಒಂದು ಗಂಟೆಯಷ್ಟೇ ಬಾಕಿ ಇರುವಾಗ ಸೋಲೊಪ್ಪಿಕೊಂಡಿತು. ಈ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ 85 ಓವರ್‌ಗಳಲ್ಲಿ 268 ರನ್ ಗಳಿಸಿತು.

ಸೋಮವಾರದ ದಿನದಾಟದ ಅಂತ್ಯಕ್ಕೆ ಮೂರು ವಿಕೆಟ್‌ ಕಳೆದುಕೊಂಡು 67 ರನ್ ಗಳಿಸಿದ್ದ ಲಂಕಾ ತಂಡ ಮಂಗಳವಾರದ ದಿನದಾಟದ ಮೊದಲ ಅವಧಿಯಲ್ಲಿ ರಕ್ಷಣಾತ್ಮಕವಾಗಿ ಆಡಲು ಯತ್ನಿಸಿತು. ಈ ತಂಡದ ನಾಯಕ ಏಂಜೆಲೊ ಮ್ಯಾಥ್ಯೂಸ್‌ ಭಾರತದ ಎಲ್ಲಾ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು.

ಗಾಲ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್‌ನಲ್ಲಿ ಲಂಕಾ ಗೆಲುವು ಪಡೆದಿತ್ತು. ಎರಡನೇ ಟೆಸ್ಟ್‌ನಲ್ಲಿ ಭಾರತ ಜಯ ಸಾಧಿಸಿತ್ತು. ಆದ್ದರಿಂದ ಮೂರನೇ ಟೆಸ್ಟ್‌ ಉಭಯ ತಂಡ ಗಳಿಗೂ ಮಹತ್ವದ್ದಾಗಿತ್ತು. ಗುರುವಾರವೇ   ಉಫುಲ್‌ ತರಂಗ, ದಿಮುತ್‌ ಕರುಣಾರತ್ನೆ ಮತ್ತು ಚಾಂಡಿಮಾಲ್‌ ಔಟಾಗಿದ್ದರಿಂದ ಲಂಕಾ ತಂಡ ಒತ್ತಡಕ್ಕೆ ಸಿಲುಕಿತ್ತು.  ಆದ್ದರಿಂದ ತವರಿನಲ್ಲಿ ಮುಖಭಂಗ ತಪ್ಪಿಸಿಕೊಳ್ಳಲು ಮ್ಯಾಥ್ಯೂಸ್‌ ರನ್‌ ಗಳಿಸುವುದಕ್ಕಿಂತ ಹೆಚ್ಚಾಗಿ ಪಂದ್ಯ ವನ್ನು ಡ್ರಾ ಮಾಡಿಕೊಳ್ಳಲು ಹೋರಾಟ ನಡೆಸಿದರು. ಅವರು ಒಟ್ಟು ಐದು ಗಂಟೆ 13 ನಿಮಿಷ ಕ್ರೀಸ್‌ನಲ್ಲಿ ಇದ್ದದ್ದು ಇದಕ್ಕೆ ಸಾಕ್ಷಿ.

ಲಂಕಾ ತಂಡ ಒಟ್ಟು 107 ರನ್ ಗಳಿಸುವಷ್ಟರಲ್ಲಿ ಐದು ವಿಕೆಟ್‌ ಕಳೆದುಕೊಂಡಿದ್ದರಿಂದ ಮ್ಯಾಥ್ಯೂಸ್ ಮತ್ತಷ್ಟು ಒತ್ತಡಕ್ಕೆ ಒಳಗಾದರು. ಕೌಶಲ್‌ ಸಿಲ್ವಾ ನೂರು ನಿಮಿಷ ಕ್ರೀಸ್‌ನಲ್ಲಿದ್ದರೂ ಗಳಿಸಿದ್ದು 27 ರನ್ ಮಾತ್ರ. 50 ಎಸೆತಗಳನ್ನು ಎದುರಿಸಿದ ಅವರು ನಾಲ್ಕು ಬೌಂಡರಿ ಬಾರಿಸಿದರು. ತಂಡದ ಇನ್ನೊಬ್ಬ ಪ್ರಮುಖ ಬ್ಯಾಟ್ಸ್‌ಮನ್‌ ಲಾಹಿರಿ ತಿರಿಮಾನ್ನೆ ಕೂಡ ಒಂದೂವರೆ ಗಂಟೆ ಕ್ರೀಸ್‌ನಲ್ಲಿದ್ದರೂ 12 ರನ್‌ಗಳನ್ನಷ್ಟೇ  ಬಾರಿಸಿದರು.  ಇವರು ಮ್ಯಾಥ್ಯೂಸ್‌ ಆಟಕ್ಕೆ ಬೆಂಬಲ ನೀಡಿದರು.

ಆತಂಕ ಮೂಡಿಸಿದ್ದ ಜೋಡಿ:    ಎರಡನೇ ಟೆಸ್ಟ್‌ನಲ್ಲಿ ಲಂಕಾ ತಂಡವನ್ನು 134 ರನ್‌ಗೆ ಕಟ್ಟಿ ಹಾಕಿದ್ದ ಭಾರತದ ಬೌಲರ್‌ಗಳು ಎಸ್‌ಎಸ್‌ ಸಿ ಕ್ಲಬ್‌ನಲ್ಲೂ ಚುರುಕಿನ ದಾಳಿ ನಡೆಸಿದರು.  ಆದರೆ, ಮ್ಯಾಥ್ಯೂಸ್‌ ಪ್ರತಿ ಎಸೆತವನ್ನು ಭಾರಿ ಎಚ್ಚರಿಕೆಯಿಂದ ಎದುರಿಸಿದರು. ಮ್ಯಾಥ್ಯೂಸ್‌ ಮತ್ತು ಕುಶಾಲ್‌ ಪೆರೇರಾ ಜೋಡಿ ಆರನೇ ವಿಕೆಟ್‌ಗೆ 135 ರನ್‌ಗಳನ್ನು ಕಲೆ ಹಾಕಿ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಇನ್ನಿಲ್ಲದ ಹೋರಾಟ ನಡೆಸಿತು. ಮ್ಯಾಥ್ಯೂಸ್‌ ಶತಕ ಬಾರಿಸಿ ಭಾರತದ ಬೌಲರ್‌ಗಳಿಗೆ ‘ತಡೆಗೋಡೆ’ ಎನಿಸಿದರು. 

240 ಎಸೆತಗಳನ್ನು ಎದುರಿಸಿದ ಅವರು 13 ಬೌಂಡರಿಗಳನ್ನು ಸಿಡಿಸಿದರು. ಆದ್ದರಿಂದ ಪ್ರವಾಸಿ ತಂಡದಲ್ಲಿ  ನಿರಾಸೆಯ ಕಾರ್ಮೋಡ ಕವಿದಿತ್ತು. ಆದರೆ, 81ನೇ ಓವರ್‌ನಲ್ಲಿ ಮ್ಯಾಥ್ಯೂಸ್‌ ಅವರನ್ನು ವೇಗಿ ಇಶಾಂತ್‌ ಶರ್ಮಾ  ಎಲ್‌ಬಿ ಬಲೆಯಲ್ಲಿ ಕೆಡವಿದರು. ಆಗಂತೂ ಭಾರತದ ಆಟಗಾ ರರು ಪಂದ್ಯ ಗೆದ್ದಷ್ಟೇ ಖುಷಿಯಿಂದ ಜಿಗಿ ದಾಡಿದರು. ಈ ವೇಳೆಗಾಗಲೇ ಆತಿಥೇಯರ ಸೋಲು ಖಚಿತವಾಗಿತ್ತು. ಮ್ಯಾಥ್ಯೂಸ್‌ ಔಟಾದ ನಂತರದ ನಾಲ್ಕು ಓವರ್‌ಗಳಲ್ಲಿಯೇ ಲಂಕಾ ತಂಡದ ಇನಿಂಗ್ಸ್‌ ಹೋರಾಟ ಅಂತ್ಯ ಕಂಡಿದ್ದು ಇದಕ್ಕೆ ಸಾಕ್ಷಿ.

ಲಂಕಾ ತಂಡ ಕೊನೆಯ 19 ರನ್‌ ಗಳಿಸುವ ಅಂತರದಲ್ಲಿ ಮೂರು ವಿಕೆಟ್‌ ಗಳನ್ನು ಕಳೆದುಕೊಂಡಿತು. ‘ಬಾಲಂ ಗೋಚಿ’ ಬ್ಯಾಟ್ಸ್‌ಮನ್‌ಗಳಾದ ರಂಗನಾ ಹೆರಾತ್‌ (11), ಧಮ್ಮಿಕಾ ಪ್ರಸಾದ್‌ (6) ಮತ್ತು ನುವಾನ್‌ ಪ್ರದೀಪ್‌ (0) ಅವರಿಗೆ ಆಫ್‌ ಸ್ಪಿನ್ನರ್‌ ಅಶ್ವಿನ್‌ ದಾಳಿ ಎದುರಿಸಲು ಸಾಧ್ಯವಾಗಲಿಲ್ಲ.

ಮತ್ತೆ ಮಿಂಚಿದ ಅಶ್ವಿನ್‌:   ಭಾರತ ತಂಡ ಎರಡನೇ ಟೆಸ್ಟ್‌ನಲ್ಲಿ ಗೆಲುವು ಪಡೆಯಲು ಪ್ರಮುಖ ಕಾರಣರಾಗಿದ್ದ ಅಶ್ವಿನ್‌ ಮೂರನೇ ಟೆಸ್ಟ್‌ನಲ್ಲೂ ಬಹುಮುಖ್ಯ ಪಾತ್ರ ವಹಿಸಿದರು. ಒಟ್ಟು ನಾಲ್ಕು ವಿಕೆಟ್‌ಗಳನ್ನು ಉರುಳಿಸಿದರು. ಸೋಮವಾರ ಎರಡು ವಿಕೆಟ್ ಪಡೆದಿದ್ದ ಬಲಗೈ ವೇಗಿ ಇಶಾಂತ್‌ ಕೊನೆಯ ದಿನ ಮ್ಯಾಥ್ಯೂಸ್ ವಿಕೆಟ್‌ ಪಡೆದು ಪಂದ್ಯದ ಮಹತ್ವದ ತಿರುವಿಗೆ ಕಾರಣರಾದರು.

ಅಶ್ವಿನ್‌ ಮೂರು ಪಂದ್ಯಗಳಿಂದ 21 ವಿಕೆಟ್‌ ಕಬಳಿಸಿದರು. ಇದರಿಂದ ಸರಣಿ ಶ್ರೇಷ್ಠ ಗೌರವಕ್ಕೂ ಪಾತ್ರರಾದರು.

1993ರ ಸರಣಿ ಜಯದ ನೆನಪು
ಕೊಲಂಬೊ: 22 ವರ್ಷಗಳ ಹಿಂದೆ ಭಾರತ ತಂಡ ಲಂಕಾ ನೆಲದಲ್ಲಿ ಸರಣಿ ಗೆದ್ದುಕೊಂಡಿತ್ತು. ಆ ಬಳಿಕ ಈಗ ಮತ್ತೆ ಅಂಥದ್ದೇ ಸಾಧನೆ ಮಾಡಿದೆ. ಆಗ ಮಹಮ್ಮದ್‌ ಅಜರುದ್ದೀನ್‌ ನಾಯಕರಾಗಿದ್ದರು. ಮೂರು ಪಂದ್ಯಗಳ ಸರಣಿಯಲ್ಲಿ ಎರಡು ಪಂದ್ಯಗಳು ಡ್ರಾ ಆಗಿದ್ದವು. ಒಂದು ಪಂದ್ಯದಲ್ಲಿ ಭಾರತ 235 ರನ್‌ಗಳ ಗೆಲುವು ಪಡೆದಿತ್ತು.

ಆ ಪಂದ್ಯದಲ್ಲಿ ಭಾರತ ಮೊದಲ ಇನಿಂಗ್ಸ್‌ನಲ್ಲಿ 366 ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 359 ರನ್‌ ಗಳಿಸಿತ್ತು. ಶ್ರೀಲಂಕಾ 254 ಹಾಗೂ ಎರಡನೇ ಇನಿಂಗ್ಸ್‌ 236 ರನ್‌ಗಳಷ್ಟೇ ಕಲೆ ಹಾಕಿತ್ತು. ಈ ಸರಣಿಯ ಬಳಿಕ ಭಾರತ ತಂಡ 1997, 2001, 2008, 2010ರಲ್ಲಿ ಸಿಂಹಳೀಯ ನಾಡಿನಲ್ಲಿ ಸರಣಿ ಆಡಿತ್ತು. ಆದರೆ ಒಮ್ಮೆಯೂ ಗೆದ್ದಿರಲಿಲ್ಲ.

ಸ್ಕೋರ್‌ಕಾರ್ಡ್‌
ಭಾರತ  ಪ್ರಥಮ ಇನಿಂಗ್ಸ್‌  312 (100.1 ಓವರ್‌ಗಳಲ್ಲಿ)
ಶ್ರೀಲಂಕಾ  ಮೊದಲ ಇನಿಂಗ್ಸ್‌    201 (52.2  ಓವರ್‌ಗಳಲ್ಲಿ)
ಭಾರತ  ಎರಡನೇ ಇನಿಂಗ್ಸ್‌  274  (76  ಓವರ್‌ಗಳಲ್ಲಿ)
ಶ್ರೀಲಂಕಾ ದ್ವಿತೀಯ ಇನಿಂಗ್ಸ್‌   268  (85  ಓವರ್‌ಗಳಲ್ಲಿ)

(ಸೋಮವಾರದ ಅಂತ್ಯಕ್ಕೆ 3ಕ್ಕೆ67, 18.1 ಓವರ್‌)
ಕೌಶಲ್‌ ಸಿಲ್ವಾ ಸಿ ಚೇತೇಶ್ವರ ಪೂಜಾರ ಬಿ ಉಮೇಶ್ ಯಾದವ್‌  27
ಏಂಜೆಲೊ ಮ್ಯಾಥ್ಯೂಸ್‌  ಎಲ್‌ಬಿಡಬ್ಲ್ಯು ಬಿ ಇಶಾಂತ್ ಶರ್ಮಾ  110
ಲಾಹಿರು ತಿರಿಮಾನ್ನೆ ಸಿ ಕೆ.ಎಲ್‌. ರಾಹುಲ್ ಬಿ ರವಿಚಂದ್ರನ್‌ ಅಶ್ವಿನ್  12
ಕುಶಾಲ್ ಪೆರೇರಾ ಸಿ ರೋಹಿತ್‌ ಶರ್ಮಾ ಬಿ ರವಿಚಂದ್ರನ್‌ ಅಶ್ವಿನ್  70
ರಂಗನಾ ಹೆರಾತ್‌ ಎಲ್‌ಬಿಡಬ್ಲ್ಯು ಬಿ ರವಿಚಂದ್ರನ್ ಅಶ್ವಿನ್‌  11
ತಿರಿಂದು ಕೌಶಲ್‌ ಔಟಾಗದೆ  01
ಧಮ್ಮಿಕಾ ಪ್ರಸಾದ್‌ ಸಿ ಸ್ಟುವರ್ಟ್‌ ಬಿನ್ನಿ ಬಿ ರವಿಚಂದ್ರನ್ ಅಶ್ವಿನ್‌  06
ನುವಾನ್‌ ಪ್ರದೀಪ್‌ ಎಲ್‌ಬಿಡಬ್ಲ್ಯು ಬಿ ಅಮಿತ್‌ ಮಿಶ್ರಾ  00
ಇತರೆ:  (ಬೈ–4, ಲೆಗ್‌ ಬೈ–2, ನೋ ಬಾಲ್‌–7)  13

ವಿಕೆಟ್ ಪತನ:  4–74 (ಸಿಲ್ವಾ; 21.1), 5–107  (ತಿರಿಮಾನ್ನೆ; 37.6), 6–242 (ಪೆರೇರಾ; 76.1), 7–249 (ಮ್ಯಾಥ್ಯೂಸ್‌; 80.3), 8–257 (ಹೆರಾತ್‌; 83.1), 9–263 (ಪ್ರಸಾದ್‌; 83.5), 10–268 (ಪ್ರದೀಪ್‌; 84.6)
ಬೌಲಿಂಗ್‌:  ಇಶಾಂತ್ ಶರ್ಮಾ 19–5–32–3, ಉಮೇಶ್ ಯಾದವ್‌ 15–3–65–2, ಸ್ಟುವರ್ಟ್‌ ಬಿನ್ನಿ 13–3–49–0, ಅಮಿತ್‌ ಮಿಶ್ರಾ 18–1–47–1, ರವಿಚಂದ್ರನ್‌ ಅಶ್ವಿನ್‌ 20–2–69–4.
ಫಲಿತಾಂಶ: ಭಾರತಕ್ಕೆ 117 ರನ್ ಗೆಲುವು ಹಾಗೂ ಮೂರು ಪಂದ್ಯಗಳ ಸರಣಿಯಲ್ಲಿ 2–1ರಲ್ಲಿ ಜಯ.
ಪಂದ್ಯ ಶ್ರೇಷ್ಠ: ಚೇತೇಶ್ವರ ಪೂಜಾರ
ಸರಣಿ ಶ್ರೇಷ್ಠ: ರವಿಚಂದ್ರನ್‌ ಅಶ್ವಿನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT